×
Ad

ಉಪ ಮುಖ್ಯಮಂತ್ರಿಯಾಗಿ ಮುಂದುವರಿಯುವಲ್ಲಿ ತೃಪ್ತಿಯಿದೆ: CM ಬದಲಾವಣೆ ವದಂತಿ ನಡುವೆ ಡಿಕೆಶಿ

Update: 2025-12-24 21:10 IST

ಡಿ ಕೆ ಶಿವಕುಮಾರ್ | Photo Credit ; PTI 

ಹೊಸದಿಲ್ಲಿ,ಡಿ.24: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಊಹಾಪೋಹಗಳನ್ನು ಬುಧವಾರ ತಳ್ಳಿಹಾಕಿದ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಮುಖ್ಯಮಂತ್ರಿ ಹುದ್ದೆಯ ಕುರಿತು ಯಾವುದೇ ವಿವಾದವಿಲ್ಲ ಮತ್ತು ಡಿಸಿಎಂ ಆಗಿ ಮುಂದುವರಿಯುವಲ್ಲಿ ತನಗೆ ತೃಪ್ತಿಯಿದೆ ಎಂದು ಒತ್ತಿ ಹೇಳಿದರು.

ಇಲ್ಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್, ಆಂತರಿಕ ಭಿನ್ನಾಭಿಪ್ರಾಯಗಳು ಅಥವಾ ಕಾಂಗ್ರೆಸ್ ಹೈಕಮಾಂಡ್ ಜೊತೆ ಭೇಟಿಗಳ ವದಂತಿಗಳು ಕೇವಲ ಮಾಧ್ಯಮಗಳಲ್ಲಿ ಅಸ್ತಿತ್ವದಲ್ಲಿವೆ ಎಂದು ಹೇಳಿದರು.

‘ಕಾಂಗ್ರೆಸ್ ಹೈಕಮಾಂಡ್ ನಲ್ಲಿ ಯಾರನ್ನೂ ನಾನು ಭೇಟಿಯಾಗುತ್ತಿಲ್ಲ. ಉಪ ಮುಖ್ಯಮಂತ್ರಿಯಾಗಿ ಮುಂದುವರಿಯಲು ನನಗೆ ಖುಷಿಯಿದೆ. ಪಕ್ಷದ ಕಾರ್ಯಕರ್ತನಾಗಿರಲು ನಾನು ಇಷ್ಟ ಪಡುತ್ತೇನೆ’ ಎಂದರು.

ಮಾಧ್ಯಮಗಳ ಪುನರಾವರ್ತಿತ ವಿಚಾರಣೆಗಳಿಗೆ ಪ್ರತಿಕ್ರಿಯಿಸಿದ ಶಿವಕುಮಾರ್,ಯಾವುದೇ ಹೆಸರುಗಳನ್ನು ಊಹಾಪೋಹ ಮಾಡಬಾರದು,ನಾಯಕತ್ವಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರ ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷದ್ದಾಗಿದೆ. ಪಕ್ಷವು ಯಾವುದೇ ದಿನ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಹುದು. ನಾಯಕತ್ವ ಏನೇ ನಿರ್ಧರಿಸಿದರೂ ಅದಕ್ಕೆ ಬದ್ಧರಾಗಿರುತ್ತೇವೆ ಎಂದು ಹೇಳಿದರು.

ಪ್ರಿಯಾಂಕಾ ಗಾಂಧಿಯವರ ಪಾತ್ರ ಅಥವಾ ಅವರು ಪ್ರಧಾನಿ ಹುದ್ದೆಗೆ ಅಭ್ಯರ್ಥಿಯಾಗಲಿದ್ದಾರೆ ಎನ್ನುವ ಊಹಾಪೋಹಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಡಿಕೆಶಿ,‘ಈ ವಿಷಯಗಳ ಬಗ್ಗೆ ನನಗೆ ತಿಳಿದಿಲ್ಲ. ಎಐಸಿಸಿ ಅಧ್ಯಕ್ಷರು ಮತ್ತು ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ನನ್ನ ನಾಯಕರು ’ ಎಂದು ಉತ್ತರಿಸಿದರು.

ರಾಜ್ಯದಲ್ಲಿ ಸಂಪುಟ ಪುನರ್ರಚನೆ ಕುರಿತು ಪ್ರಶ್ನೆಗೆ ಆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿ ಎಂದು ವರದಿಗಾರರಿಗೆ ಕಿವಿಮಾತು ಹೇಳಿದ ಶಿವಕುಮಾರ್,ತನ್ನ ದಿಲ್ಲಿ ಭೇಟಿಯು ಸಂಪೂರ್ಣವಾಗಿ ಆಡಳಿತಾತ್ಮಕವಾಗಿದೆ,ರಾಜಕೀಯಕ್ಕೆ ಸಂಬಂಧಿಸಿಲ್ಲ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News