ಅಸ್ಸಾಂ | ಹಿಂಸಾಚಾರ ಪೀಡಿತ ಕರ್ಬಿ ಆನ್ಲಾಂಗ್ ನಲ್ಲಿ ಸೇನೆಯ ನಿಯೋಜನೆ
Photo Credit : PTI
ಗುವಾಹಟಿ: ಅಸ್ಸಾಂನ ಹಿಂಸಾಚಾರ ಪೀಡಿತ ಪಶ್ಚಿಮ ಕರ್ಬಿ ಆನ್ಲಾಂಗ್ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸೇನೆಯನ್ನು ನಿಯೋಜಿಸಲಾಗಿದೆ ಎಂದು ಬುಧವಾರ ಅಸ್ಸಾಂ ಪೊಲೀಸ್ ಮಹಾ ನಿರ್ದೇಶಕ ಹರ್ಮೀತ್ ಸಿಂಗ್ ತಿಳಿಸಿದ್ದಾರೆ.
ತೀವ್ರ ಹಿಂಸಾಚಾರ ಪೀಡಿತ ಖೆರೋನಿ ಪ್ರದೇಶದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹರ್ಮೀತ್ ಸಿಂಗ್, ಹಿಂಸಾಚಾರದಲ್ಲಿ ತೊಡಗಬೇಡಿ ಎಂದು ಜನರಿಗೆ ಮನವಿ ಮಾಡಿದ್ದು, ಮಾತುಕತೆಯ ಮೂಲಕ ಈ ಸಮಸ್ಯೆಗೆ ಪರಿಹಾರ ಹುಡುಕಬಹುದು ಎಂದು ದಾರಿ ತಪ್ಪಿರುವ ಯುವಕರಿಗೆ ಹಿರಿಯರು ಮಾರ್ಗದರ್ಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.
"ಸೇನೆಯ ತುಕಡಿಗಳು ಇಲ್ಲಿಗೆ ಆಗಮಿಸಿದ್ದು, ಈ ಪ್ರದೇಶಗಳಲ್ಲಿ ಪಥ ಸಂಚಲನ ನಡೆಸಿವೆ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ" ಎಂದು ಅವರು ತಿಳಿಸಿದ್ದಾರೆ. ಕಳೆದ ಎರಡು ದಿನಗಳಲ್ಲಿ ನಡೆದಿರುವ ಹಿಂಸಾಚಾರದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.
"ಮೊದಲು ಪರಿಸ್ಥಿತಿ ಸ್ಥಿರವಾಗಲಿ. ನಂತರ ನಾವು ದುಷ್ಕರ್ಮಿಗಳನ್ನು ಬಂಧಿಸಲಿದ್ದೇವೆ" ಎಂದೂ ಅವರು ಭರವಸೆ ನೀಡಿದ್ದಾರೆ. ಆದಿವಾಸಿಯೇತರ ಪರಕೀಯರನ್ನು ತೆರವುಗೊಳಿಸಬೇಕು ಎಂದು ಪಶ್ಚಿಮ ಕರ್ಬಿ ಆನ್ಲಾಂಗ್ ಜಿಲ್ಲೆಯಲ್ಲಿ ಭುಗಿಲೆದ್ದಿರುವ ಹಿಂಸಾಚಾರದಲ್ಲಿ ಈವರೆಗೆ ಇಬ್ಬರು ಮೃತಪಟ್ಟು, 38 ಮಂದಿ ಪೊಲೀಸ್ ಸಿಬ್ಬಂದಿಗಳೂ ಸೇರಿದಂತೆ 45 ಮಂದಿ ಗಾಯಗೊಂಡಿದ್ದಾರೆ.