7ನೇ ದಿನವೂ ಮುಂದುವರಿದ ಇಂಡಿಗೊ ಬಿಕ್ಕಟ್ಟು | ಸರಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ: ಕೇಂದ್ರ ವಾಯುಯಾನ ಸಚಿವ ನಾಯ್ಡು
ಕೆ.ರಾಮಮೋಹನ ನಾಯ್ಡು | Photo Credit : PTI
ಹೊಸದಿಲ್ಲಿ, ಡಿ.8: ಇಂಡಿಗೊ ಬಿಕ್ಕಟ್ಟು ಏಳನೇ ದಿನವಾದ ಸೋಮವಾರವೂ ಮುಂದುವರಿದಿದ್ದು, ವಿವಿಧ ವಿಮಾನ ನಿಲ್ದಾಣಗಳಿಂದ ಸುಮಾರು 500 ಇಂಡಿಗೊ ಯಾನಗಳನ್ನು ರದ್ದುಗೊಳಿಸಲಾಗಿದೆ. ವಿಮಾನಗಳ ಕಾರ್ಯಾಚರಣೆಯಲ್ಲಿ ಬಿಕ್ಕಟ್ಟಿಗೆ ಸಂಸ್ಥೆಯ ಸಿಬ್ಬಂದಿ ನಿಯೋಜನೆ ಮತ್ತು ಆಂತರಿಕ ಯೋಜನೆಯಲ್ಲಿನ ಸಮಸ್ಯೆ ಕಾರಣವಾಗಿದೆ ಎಂದು ಸೋಮವಾರ ಹೇಳಿದ ಕೇಂದ್ರ ನಾಗರಿಕ ವಾಯುಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಅವರು,ಯಾವುದೇ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಮತ್ತು ಸರಕಾರವು ಕಠಿಣ ಕ್ರಮವನ್ನು ಕೈಗೊಳ್ಳುತ್ತದೆ ಎಂದು ತಿಳಿಸಿದರು.
ರಾಜ್ಯಸಭೆಯಲ್ಲಿ ಹಾರಾಟ ಕರ್ತವ್ಯ ಸಮಯ ಮಿತಿಗಳ (ಎಫ್‌ಡಿಟಿಎಲ್) ಮಾರ್ಗಸೂಚಿಗಳ ಕುರಿತು ಪೂರಕ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ನಾಯ್ಡು,‘ಇಂಡಿಗೊ ಬಿಕ್ಕಟ್ಟು ಅದರ ಸಿಬ್ಬಂದಿ ನಿಯೋಜನೆ ಮತ್ತು ಆಂತರಿಕ ಯೋಜನಾ ವ್ಯವಸ್ಥೆಗಳಲ್ಲಿನ ಸಮಸ್ಯೆಯಿಂದಾಗಿ ಉದ್ಭವಿಸಿದೆ. ಇಂಡಿಗೊ ತನ್ನ ದೈನಂದಿನ ಕಾರ್ಯಾಚರಣೆಗಳ ಮೂಲಕ ಸಿಬ್ಬಂದಿ ನಿಯೋಜನೆಯನ್ನು ನಿರ್ವಹಿಸಬೇಕಿತ್ತು. ಎಫ್‌ಡಿಟಿಎಲ್ ಸಮರ್ಪಕವಾಗಿ ಜಾರಿಗೊಳ್ಳುವುದನ್ನು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ ಮತ್ತು ಆ ವಿಷಯದಲ್ಲಿ ಯಾವುದೇ ರಾಜಿಯಿಲ್ಲ’ ಎಂದು ಹೇಳಿದರು.
ಇಂಡಿಗೊ ತನ್ನ ಕಾರ್ಯಾಚರಣೆ ಬಿಕ್ಕಟ್ಟಿಗೆ ಪ್ರಮುಖ ಕಾರಣವೆಂದು ಹೇಳಿಕೊಂಡಿರುವ ನವಂಬರ್‌ನಲ್ಲಿ ಜಾರಿಗೆ ಬಂದಿದ್ದ ಎಫ್‌ಡಿಟಿಎಲ್ ನಿಯಮಗಳನ್ನು ಸಮರ್ಥಿಸಿಕೊಂಡ ನಾಯ್ಡು,ಪೈಲಟ್‌ಗಳ ಸುರಕ್ಷತೆ ಮತ್ತು ವಿಶ್ರಾಂತಿಯನ್ನು ಖಚಿತಪಡಿಸಿಕೊಳ್ಳಲು ಈ ನಿಯಮಗಳನ್ನು ತರಲಾಗಿದೆ ಎಂದು ಒತ್ತಿ ಹೇಳಿದರು.
ಡಿ.1ರಂದು ಎಫ್‌ಡಿಟಿಎಲ್ ಕುರಿತು ಇಂಡಿಗೊ ಜೊತೆ ಸಭೆಯನ್ನು ನಡೆಸಲಾಗಿತ್ತು. ಅದೇ ಸಭೆಯಲ್ಲಿ ಸ್ಪಷ್ಟೀಕರಣಗಳನ್ನು ನೀಡಲಾಗಿತ್ತು,ಆದರೆ ಇಂಡಿಗೊ ಆಗ ಯಾವುದೇ ಸಮಸ್ಯೆಗಳನ್ನು ಬೆಟ್ಟು ಮಾಡಿರಲಿಲ್ಲ ಎಂದ ನಾಯ್ಡು,‘ಡಿ.3ರಂದು ಈ ಸಮಸ್ಯೆಗಳನ್ನು ನಾವು ಗಮನಿಸಿದ್ದೆವು ಮತ್ತು ಸಚಿವಾಲಯವು ತಕ್ಷಣ ಮಧ್ಯ ಪ್ರವೇಶಿಸಿತ್ತು’ ಎಂದರು.
‘ನಾವು ವಿಮಾನ ನಿಲ್ದಾಣಗಳಲ್ಲಿನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದೇವೆ ಮತ್ತು ಸಂಬಂಧಿಸಿದ ಎಲ್ಲರೊಂದಿಗೆ ಸಮಾಲೋಚಿಸಿದ್ದೇವೆ. ಆ ಎರಡು ದಿನಗಳಲ್ಲಿ ಹೇಗೆ ಸಮಸ್ಯೆಗಳು ತೆರೆದುಕೊಂಡಿದ್ದವು ಎನ್ನುವುದನ್ನು ನೀವು ನೋಡಿದ್ದೀರಿ. ಪ್ರಯಾಣಿಕರು ಬಹಳಷ್ಟು ತೊಂದರೆಗಳನ್ನು ಎದುರಿಸಿದರು. ನಾವು ಈ ಸ್ಥಿತಿಯನ್ನು ಲಘುವಾಗಿ ಪರಿಗಣಿಸುವುದಿಲ್ಲ. ವಿಚಾರಣೆ ನಡೆಯುತ್ತಿದೆ. ಈ ಪ್ರಕರಣಕ್ಕೆ ಮಾತ್ರವಲ್ಲ,ಎಲ್ಲ ವಿಮಾನಯಾನ ಸಂಸ್ಥೆಗಳಿಗೆ ಎಚ್ಚರಿಕೆಯ ಪಾಠವಾಗುವಂತೆ ನಾವು ಅತ್ಯಂತ ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತೇವೆ’ ಎಂದು ಸಚಿವರು ಹೇಳಿದರು.
ಸುಮಾರು 500 ಯಾನಗಳು ರದ್ದು
ಇಂಡಿಗೋ ಸೋಮವಾರ 138 ನಗರಗಳ ಪೈಕಿ 137 ನಗರಗಳಿಗೆ ತನ್ನ 2,300 ದೈನಂದಿನ ಯಾನಗಳ ಪೈಕಿ 1,802 ಯಾನಗಳನ್ನು ನಿರ್ವಹಿಸಲಿದ್ದು,ಇಂದಿನ ಮಟ್ಟಿಗೆ ಸುಮಾರು 500 ಯಾನಗಳನ್ನು ಅದು ರದ್ದುಗೊಳಿಸಿದೆ ಎಂದು ನಾಗರಿಕ ವಾಯುಯಾನ ಸಚಿವಾಲಯವು ತಿಳಿಸಿದೆ.
ಇಂಡಿಗೊ ಸುಮಾರು 9,000 ಬ್ಯಾಗ್‌ಗಳ ಪೈಕಿ 4,500ನ್ನು ಪ್ರಯಾಣಿಕರಿಗೆ ತಲುಪಿಸಿದೆ ಮತ್ತು ಉಳಿದ ಬ್ಯಾಗ್‌ಗಳನ್ನು ಮುಂದಿನ 36 ಗಂಟೆಗಳಲ್ಲಿ ಅವರಿಗೆ ಹಸ್ತಾಂತರಿಸಲಿದೆ ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.
ಸಂಸ್ಥೆಯು ಡಿ.1ರಿಂದ ಡಿ.7ರವರೆಗಿನ 5,86,705 ಟಿಕೆಟ್‌ಗಳನ್ನು ರದ್ದುಗೊಳಿಸಿದ್ದು,ಒಟ್ಟು 569.65 ಕೋ.ರೂ.ಗಳನ್ನು ಮರುಪಾವತಿಸಿದೆ. ನ.21ರಿಂದ ಡಿ.7ರ ಅವಧಿಗೆ ಒಟ್ಟು 9,55,591 ಟಿಕೆಟ್‌ಗಳನ್ನು ರದ್ದುಗೊಳಿಸಿದ್ದು, 827 ಕೋ.ರೂ.ಗಳನ್ನು ಮರುಪಾವತಿಸಿದೆ ಎಂದೂ ಸಚಿವಾಲಯವು ತಿಳಿಸಿದೆ.
ಸರಕಾರದಿಂದ ಹೇಳಿಕೆಗೆ ಪ್ರತಿಪಕ್ಷಗಳ ಆಗ್ರಹ
ಇಂಡಿಗೊ ವಿಮಾನಯಾನಗಳಲ್ಲಿ ಉಂಟಾಗಿರುವ ಅಡಚಣೆಗಳು ಮತ್ತು ದೇಶಾದ್ಯಂತ ವಿವಿಧ ವಿಮಾನ ನಿಲ್ದಾಣಗಳಲ್ಲಿ ಜನರು ಎದುರಿಸುತ್ತಿರುವ ಅನಾನುಕೂಲಗಳ ಹಿನ್ನೆಲೆಯಲ್ಲಿ ತಾನು ಏನು ಮಾಡುತ್ತಿದ್ದೇನೆ ಎನ್ನುವುದನ್ನು ಸರಕಾರವು ದೇಶಕ್ಕೆ ತಿಳಿಸಬೇಕು ಎಂದು ಪ್ರತಿಪಕ್ಷಗಳು ಸೋಮವಾರ ಲೋಕಸಭೆಯಲ್ಲಿ ಆಗ್ರಹಿಸಿದವು.
ನಾಗರಿಕ ವಾಯುಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಅವರು ಇಂದು ಅಥವಾ ನಾಳೆ ರಾಜ್ಯಸಭೆಯಲ್ಲಿ ಈ ವಿಷಯ ಕುರಿತು ವಿವರವಾದ ಹೇಳಿಕೆಯನ್ನು ನೀಡಲಿದ್ದಾರೆ ಎಂದು ಸ್ಪೀಕರ್ ಓಂ ಬಿರ್ಲಾ ತಿಳಿಸಿದರು.
ಪ್ರಶ್ನೆವೇಳೆಯ ಬಳಿಕ ಮಾತನಾಡಿದ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಉಪನಾಯಕ ಗೌರವ್ ಗೊಗೊಯಿ ಅವರು, ಕಳೆದ ಹಲವಾರು ದಿನಗಳಿಂದ ದೇಶದ ವಿಮಾನ ನಿಲ್ದಾಣಗಳಲ್ಲಿ ಜನರು ತೊಂದರೆಗಳನ್ನೇಕೆ ಎದುರಿಸುತ್ತಿದ್ದಾರೆ ಎನ್ನುವುದನ್ನು ಈ ಸದನಕ್ಕೆ ಸರಕಾರವು ತಿಳಿಸಬೇಕು. ಅವರಲ್ಲಿ ಡಯಾಲಿಸಿಸ್ ರೋಗಿಗಳಿದ್ದಾರೆ,ತಮ್ಮ ಮನೆಗಳಲ್ಲಿ ಮದುವೆ ಕಾರ್ಯಕ್ರಮಗಳಿರುವವರು ಇದ್ದಾರೆ, ತಮ್ಮ ಹಿರಿಯರನ್ನು ಕಾಣುವ ತವಕದಲ್ಲಿರುವ ಜನರು ಇದ್ದಾರೆ. ವಿಮಾನ ನಿಲ್ದಾಣಗಳಲ್ಲಿ ಅವ್ಯವಸ್ಥೆ ಸೃಷ್ಟಿಯಾಗಿದೆ ಎಂದು ಹೇಳಿದರು.
ಹವಾಯಿ ಚಪ್ಪಲಿಗಳನ್ನು ಧರಿಸಿದವರು ಕೂಡ ವಿಮಾನಗಳಲ್ಲಿ ಪ್ರಯಾಣಿಸುತ್ತಾರೆ ಎಂದು ನಮಗೆ ತಿಳಿಸಲಾಗಿತ್ತು. ಆದರೆ ಪ್ರಯಾಣ ಶುಲ್ಕಗಳು 20,000 ರೂ.ಗೆ ಏರಿಕೆಯಾಗಿವೆ. ವಿಮಾನ ನಿಲ್ದಾಣಗಳಲ್ಲಿ ಕಾಫಿಯನ್ನು 250 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ ಮತ್ತು ವಿಮಾನಗಳು ವಿಳಂಬಗೊಂಡಿವೆ. ಹೀಗಾಗಿ ತಾನೇನು ಮಾಡುತ್ತಿದ್ದೇನೆ ಎನ್ನುವುದನ್ನು ಸರಕಾರವು ನಮಗೆ ತಿಳಿಸಬೇಕು’ ಎಂದರು.
ಇಂಡಿಗೊ ಅವ್ಯವಸ್ಥೆ ಕುರಿತು ಸರಕಾರದ ವಿರುದ್ಧ ದಾಳಿ ನಡೆಸುತ್ತಿರುವ ಪ್ರತಿಪಕ್ಷಗಳು, ಈ ಅಭೂತಪೂರ್ವ ಬಿಕ್ಕಟ್ಟಿಗೆ ಅದನ್ನು ದೂಷಿಸುತ್ತಿವೆ.
ಈ ನಡುವೆ ಇಂಡಿಗೊ ಬಿಕ್ಕಟ್ಟು ಸದ್ಯಕ್ಕೆ ಅಂತ್ಯಗೊಳ್ಳುವ ಲಕ್ಷಣಗಳು ಕಂಡು ಬರುತ್ತಿಲ್ಲ. ಸೋಮವಾರ ಒಂದೇ ದಿನ ದಿಲ್ಲಿ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಿಂದ 250ಕ್ಕೂ ಅಧಿಕ ಇಂಡಿಗೊ ಯಾನಗಳನ್ನು ರದ್ದುಗೊಳಿಸಲಾಗಿತ್ತು.