ಉತ್ತರ ಪ್ರದೇಶ | ಅರೆಬೆಂದ ಸ್ಥಿತಿಯಲ್ಲಿ ಸ್ಕೂಟರ್ ಚಲಾಯಿಸಿಕೊಂಡು ವೈದ್ಯರ ಬಳಿಗೆ ತೆರಳಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಮೃತ್ಯು
ಪ್ರೀತಿಸುವಂತೆ ಕಿರುಕುಳ ನೀಡಿ ವಿವಾಹಿತೆಗೆ ಬೆಂಕಿ ಹಚ್ಚಿದ್ದ ದುಷ್ಕರ್ಮಿ
PC : NDTV
ಲಕ್ನೋ : ಉತ್ತರ ಪ್ರದೇಶದಲ್ಲಿ ತನ್ನ ಜೊತೆ ಮಾತನಾಡಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೋರ್ವ ತನ್ನ ಸ್ನೇಹಿತರ ಜೊತೆ ಸೇರಿಕೊಂಡು ವಿವಾಹಿತೆ ಮಹಿಳೆಗೆ ಬೆಂಕಿ ಹಚ್ಚಿದ್ದು, ಆಕೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮಹಿಳೆಯನ್ನು ನಿಶಾ ಸಿಂಗ್(33) ಎಂದು ಗುರುತಿಸಲಾಗಿದೆ. ಆಗಸ್ಟ್ 6ರಂದು ಫರೂಕಾಬಾದ್‌ನಲ್ಲಿ ಈ ಘಟನೆ ನಡೆದಿದೆ.
ನಿಶಾ ವೈದ್ಯರ ಬಳಿಗೆ ಹೋಗುತ್ತಿದ್ದಾಗ ದೀಪಕ್ ಎಂಬ ವ್ಯಕ್ತಿ ಆಕೆಯನ್ನು ತಡೆದು ಮಾತನಾಡುವಂತೆ ಒತ್ತಾಯಿಸಿದ್ದಾನೆ. ದೀಪಕ್ ಮತ್ತು ನಿಶಾ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ದೀಪಕ್ ತನ್ನ ಸ್ನೇಹಿತರೊಂದಿಗೆ ಸೇರಿ ನಿಶಾಗೆ ಬೆಂಕಿ ಹಚ್ಚಿದ್ದಾನೆ. ನಿಶಾ ಕಿರುಚುತ್ತಾ ತನ್ನ ಸ್ಕೂಟರ್‌ನಲ್ಲೇ ವೈದ್ಯರ ಬಳಿಗೆ ತೆರಳಿದ್ದಾಳೆ. ನಿಶಾಗೆ ಕಳೆದ ಎರಡು ತಿಂಗಳಿನಿಂದ ದೀಪಕ್ ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗಿದೆ.
"ಆಗಸ್ಟ್ 6ರಂದು ನನ್ನ ಮಗಳನ್ನು ದೀಪಕ್ ಮತ್ತು ಆತನ ಸ್ನೇಹಿತರು ಜೀವಂತವಾಗಿ ಸುಟ್ಟುಹಾಕಿದ್ದಾರೆ. ನನಗೆ ಆಸ್ಪತ್ರೆಯಿಂದ ವೈದ್ಯರು ಕರೆ ಮಾಡಿದ್ದರು. ನಾನು ಆಸ್ಪತ್ರೆಗೆ ತೆರಳಿದಾಗ ಅವಳ ಸ್ಥಿತಿ ತುಂಬಾ ಗಂಭೀರವಾಗಿತ್ತು. ಅವಳು ಅಪ್ಪಾ ನನ್ನನ್ನು ಉಳಿಸಿ ಎಂದು ಕಿರುಚುತ್ತಿದ್ದಳು. ವೈದ್ಯರು ಅವಳನ್ನು ಲೋಹಿಯಾ ಬಳಿಗೆ ಕಳುಹಿಸಿದರು. ನಾನು ಕೇಳಿದಾಗ ದೀಪಕ್ ಬೆಂಕಿ ಹಚ್ಚಿರುವುದಾಗಿ ತಿಳಿಸಿದ್ದಾಳೆ” ಎಂದು ಸಂತ್ರಸ್ತೆಯ ತಂದೆ ಬಲರಾಮ್ ಸಿಂಗ್ ಹೇಳಿದರು.