ಎಂಟು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಪತಿಯನ್ನು ಇನ್ಸ್ಟಾಗ್ರಾಮ್ ರೀಲ್ಸ್ ನಲ್ಲಿ ಪತ್ತೆ ಹಚ್ಚಿದ ಪತ್ನಿ!
ಪೊಲೀಸರಿಂದ ಆರೋಪಿಯ ಬಂಧನ
ಸಾಂದರ್ಭಿಕ ಚಿತ್ರ (Photo credit: freepik.com)
ಲಕ್ನೊ: ಎಂಟು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ತನ್ನ ಪತಿಯನ್ನು ಇನ್ಸ್ಟಾಗ್ರಾಮ್ ರೀಲ್ಸ್ ನಲ್ಲಿ ಪತ್ನಿ ಪತ್ತೆ ಹಚ್ಚಿರುವ ಘಟನೆ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯಲ್ಲಿ ನಡೆದಿದ್ದು, ಆರೋಪಿ ಜಿತೇಂದ್ರ ಅಲಿಯಾಸ್ ಬಬ್ಲು ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
2018ರಲ್ಲಿ ತನ್ನ ಗರ್ಭಿಣಿ ಪತ್ನಿ ಶೀಲು ಅನ್ನು ತೊರೆದಿದ್ದ ಆರೋಪಿ ಜಿತೇಂದ್ರ ಅಲಿಯಾಸ್ ಬಬ್ಲು, ಪಂಜಾಬ್ ನ ಲೂಧಿಯಾನದಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ. ಇಷ್ಟೇ ಅಲ್ಲದೆ, ಆತ ಅಲ್ಲಿ ಮರು ವಿವಾಹವನ್ನೂ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸಂದಿಲಾ ಪ್ರದೇಶದ ಮುರಾರ್ ನಗರ ನಿವಾಸಿಯಾದ ಶೀಲಾ, ಇತ್ತೀಚೆಗೆ ಇನ್ಸ್ಟಾಗ್ರಾಮ್ ರೀಲ್ಸ್ ನೋಡುವಾಗ, ಏಕಾಏಕಿ ಅವರಿಗೆ ವಿಡಿಯೊದಲ್ಲಿ ತನ್ನ ಪತಿ ಕಂಡು ಬಂದಿದ್ದಾರೆ. ಈ ಕುರಿತು ತಕ್ಷಣವೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿಯನ್ನು ಆಧರಿಸಿ ತನಿಖೆ ಕೈಗೊಂಡ ಪೊಲೀಸರು, ಆತನ ಗುರುತು ಮತ್ತು ಸ್ಥಳವನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಟಮೌ ನಿವಾಸಿಯಾದ ಆರೋಪಿ ಜಿತೇಂದ್ರ ಅಲಿಯಾಸ್ ಬಬ್ಲು 2018ರಲ್ಲಿ ಏಕಾಏಕಿ ಮನೆಯಿಂದ ನಾಪತ್ತೆಯಾಗಿದ್ದ. ಈ ಕುರಿತು ಆತನ ತಂದೆ ಪೊಲೀಸರಿಗೆ ದೂರನ್ನೂ ನೀಡಿದ್ದರು. ಜಿತೇಂದ್ರ ನಾಪತ್ತೆಯಾಗಲು ಶೀಲಾ ಸಂಬಂಧಿಕರು ಕಾರಣ ಎಂದೂ ಆತನ ಕುಟುಂಬಸ್ಥರು ಈ ವೇಳೆ ಗಂಭೀರ ಆರೋಪ ಮಾಡಿದ್ದರು.
ಸದ್ಯ ಆರೋಪಿ ಜಿತೇಂದ್ರ ಅಲಿಯಾಸ್ ಬಬ್ಲುನನ್ನು ಬಂಧಿಸಲಾಗಿದ್ದು, ಆತನ ವಿಚಾರಣೆ ನಡೆಸಲಾಗುತ್ತಿದೆ. ಆತನ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸ್ ವೃತ್ತಾಧಿಕಾರಿ ಸಂತೋಷ್ ಕುಮಾರ್ ಸಿಂಗ್ ಹೇಳಿದ್ದಾರೆ.