ಲಂಚ ಪ್ರಕರಣದಲ್ಲಿ ಸಮನ್ಸ್ ಅನ್ನು ಮೋದಿ ಸರಕಾರವು ಅದಾನಿ ಗ್ರೂಪ್‌ಗೆ ತಲುಪಿಸಿಲ್ಲ: ಯುಎಸ್ ಎಸ್‌ಇಸಿ
ಗೌತಮ್ ಅದಾನಿ (Photo: PTI)
ಹೊಸದಿಲ್ಲಿ: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಕೈಗಾರಿಕೋದ್ಯಮಿ ಗೌತಮ್ ಅದಾನಿ, ಅವರ ಸೋದರಪುತ್ರ ಸಾಗರ್ ಅದಾನಿ ಮತ್ತು ಅದಾನಿ ಗ್ರೂಪ್‌ಗೆ ಸಮನ್ಸ್ ಜಾರಿಗೊಳಿಸಲು ಅಮೆರಿಕದ ಸೆಕ್ಯೂರಿಟಿಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್(ಯುಎಸ್ ಎಸ್‌ಇಸಿ)ಗೆ ಸಾಧ್ಯವಾಗಿಲ್ಲ.
ಅಂತರರಾಷ್ಟ್ರೀಯ ಒಪ್ಪಂದದಲ್ಲಿ ನಿಗದಿಗೊಳಿಸಿದ ಕಾರ್ಯವಿಧಾನವನ್ನು ಬಳಸಿಕೊಂಡು ಭಾರತದಲ್ಲಿನ ಪ್ರತಿವಾದಿಗಳಿಗೆ ಸಮನ್ಸ್ ಮತ್ತು ದೂರನ್ನು ತಲುಪಿಸುವಲ್ಲಿ ಭಾರತದ ಕಾನೂನು ಮತ್ತು ನ್ಯಾಯ ಸಚಿವಾಲಯದ ಸಹಾಯವನ್ನು ಕೋರಲಾಗಿತ್ತು,ಆದರೆ ಅಲ್ಲಿಯ ಅಧಿಕಾರಿಗಳು ಈವರೆಗೆ ಅವುಗಳನ್ನು ಪ್ರತಿವಾದಿಗಳಿಗೆ ತಲುಪಿಸಿಲ್ಲ ಎಂದು ಯುಎಸ್ ಎಸ್‌ಇಸಿ ಆ.11ರಂದು ನ್ಯೂಯಾರ್ಕ್ ಪೂರ್ವ ಜಿಲ್ಲಾ ನ್ಯಾಯಾಲಯಕ್ಕೆ ತಿಳಿಸಿದೆ ಎಂದು thenewsminute.com ವರದಿ ಮಾಡಿದೆ.
ಕಳೆದ ವರ್ಷದ ನ.20ರಂದು ಅಮೆರಿಕದ ಪ್ರಾಸಿಕ್ಯೂಟರ್‌ಗಳು ಅದಾನಿ ಗ್ರೂಪ್‌ನ ಸ್ಥಾಪಕ ಹಾಗೂ ಅಧ್ಯಕ್ಷ ಗೌತಮ್ ಅದಾನಿ, ಸಾಗರ್ ಅದಾನಿ ಮತ್ತು ಇತರರ ವಿರುದ್ಧ ಲಂಚ, ಸೆಕ್ಯೂರಿಟಿಸ್ ವಂಚನೆ, ವಿದ್ಯುನ್ಮಾನ ಸಂವಹನ ವಂಚನೆ ಮತ್ತು ಸಂಬಂಧಿತ ಪಿತೂರಿಗಳ ಆರೋಪಗಳನ್ನು ಹೊರಿಸಿದ್ದರು. ಆರೋಪಿಗಳು ಭಾರತೀಯ ಸೌರಶಕ್ತಿ ನಿಗಮ (ಎಸ್‌ಇಸಿಐ)ದ ಮಧ್ಯಸ್ಥಿಕೆಯಲ್ಲಿ ಭಾರತದ ಹಲವು ರಾಜ್ಯಗಳೊಂದಿಗೆ ಸೌರ ವಿದ್ಯುತ್ ಮಾರಾಟ ಒಪ್ಪಂದಗಳನ್ನು ಮಾಡಿಕೊಳ್ಳಲು ಆಂಧ್ರಪ್ರದೇಶದ ಅಧಿಕಾರಿಗಳು ಮತ್ತು ರಾಜ್ಯದ ಆಗಿನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯವರಿಗೆ 1,750 ಕೋಟಿ ರೂ.ಸೇರಿದಂತೆ ಒಟ್ಟು 2,029 ಕೋಟಿ ರೂ.ಗಳ ಲಂಚವನ್ನು ನೀಡಿದ್ದರು ಎಂದು ಯುಎಸ್ ಎಸ್‌ಇಸಿ ಆರೋಪಿಸಿದೆ.
ಅಮೆರಿಕದ ದೋಷಾರೋಪಣೆಯು ‘ಸಂಕೀರ್ಣ ಮತ್ತು ಹೆಚ್ಚಿನ ಲಂಚ ಪಾವತಿಯಲ್ಲಿ ತಾನು ಸ್ವತಃ ಭಾಗಿಯಾಗಿರುವ ಬಗ್ಗೆ ಅದಾನಿ ಗ್ರೂಪ್ ಅಮೆರಿಕದ ಹೂಡಿಕೆದಾರರಿಗೆ ಬಹಿರಂಗಗೊಳಿಸಿರಲಿಲ್ಲ’ ಎಂಬ ಆರೋಪವನ್ನು ಆಧರಿಸಿತ್ತು ಎಂದು ಯುಎಸ್ ಎಸ್‌ಇಸಿ ತನ್ನ ಮೂಲದೂರಿನಲ್ಲಿ ತಿಳಿಸಿದೆ. ಅದು ಈ ವರ್ಷದ ಫೆಬ್ರವರಿಯಿಂದ ಭಾರತದಲ್ಲಿ ಅದಾನಿ ಗ್ರೂಪ್‌ಗೆ ನೋಟಿಸ್‌ಗಳನ್ನು ಜಾರಿಗೊಳಿಸಲು ಭಾರತದ ಕಾನೂನು ಮತ್ತು ನ್ಯಾಯ ಸಚಿವಾಲಯದೊಂದಿಗೆ ಪತ್ರ ವ್ಯವಹಾರವನ್ನು ನಡೆಸುತ್ತಿದೆ.
ಸಮನ್ಸ್ ಜಾರಿಗೊಳಿಸಲು ನೆರವಾಗುವಂತೆ ತಾನು ಭಾರತದ ಕಾನೂನು ಸಚಿವಾಲಯವನ್ನು ಕೋರಿಕೊಂಡಿದ್ದೇನೆ ಎಂದು ಫೆಬ್ರವರಿಯಲ್ಲಿ ಮೊದಲ ಬಾರಿಗೆ ಯುಎಸ್ ಎಸ್‌ಇಸಿ ನ್ಯಾಯಾಲಯಕ್ಕೆ ತಿಳಿಸಿತ್ತು.
ಮಾರ್ಚ್ ವರದಿಯೊಂದರ ಪ್ರಕಾರ,ಕಾನೂನು ಸಚಿವಾಲಯವು ಗೌತಮ್ ಅದಾನಿ ಮತ್ತು ಇತರರಿಗೆ ಸಮನ್ಸ್ ನೋಟಿಸ್‌ಗಳನ್ನು ಅಹ್ಮದಾಬಾದ್ ನ್ಯಾಯಾಲಯಕ್ಕೆ ಕಳುಹಿಸಿತ್ತು ಮತ್ತು ಅದು ಅಹ್ಮದಾಬಾದನ ವಿಳಾಸದಲ್ಲಿ ಅದಾನಿಗೆ ಈ ನೋಟಿಸ್ ಜಾರಿಗೊಳಿಸಬೇಕಿತ್ತು. ಆದರೆ ಆರು ತಿಂಗಳುಗಳು ಕಳೆದಿದ್ದರೂ ಈ ನೋಟಿಸ್‌ಗಳನ್ನು ಜಾರಿಗೊಳಿಸಲಾಗಿಲ್ಲ ಎನ್ನುವುದು ಈಗ ಸ್ಪಷ್ಟವಾಗಿದೆ.
ಆ.11ರಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಹೇಳಿಕೆಯಲ್ಲಿ ಯುಎಸ್ ಎಸ್‌ಇಸಿ, ಭಾರತದಲ್ಲಿ ಅದಾನಿ ಗ್ರೂಪ್‌ಗೆ ಸಮನ್ಸ್ ಜಾರಿಗೊಳಿಸಲು ತಾನು ಈಗಲೂ ಪ್ರಯತ್ನಿಸುತ್ತಿದ್ದೇನೆ ಎಂದು ಪುನರುಚ್ಚರಿಸಿದೆ.