×
Ad

ಉತ್ತರ ಪ್ರದೇಶ | ನೀಟ್ ಆಕಾಕ್ಷಿಯ ಹತ್ಯೆ ಪ್ರಕರಣ : ಓರ್ವ ಆರೋಪಿಯ ಬಂಧನ

Update: 2025-09-17 20:28 IST

 ಸಾಂದರ್ಭಿಕ ಚಿತ್ರ

ಗೋರಖ್‌ಪುರ, ಸೆ. 17: ನೀಟ್ ಆಕಾಂಕ್ಷಿ ದೀಪಕ್ ಗುಪ್ತಾ ಹತ್ಯೆಗೆ ಸಂಬಂಧಿಸಿ ಜಾನುವಾರು ಅಕ್ರಮ ಸಾಗಾಟಗಾರನೋರ್ವನ ಕಾಲಿಗೆ ಗುಂಡಿಕ್ಕಿ ಬಂಧಿಸಲಾಗಿದೆ ಎಂದು ಗೋರಖ್‌ಪುರ ಪೊಲೀಸ್ ಬುಧವಾರ ತಿಳಿಸಿದ್ದಾರೆ.

ಬಂಧಿತನನ್ನು ರಹೀಮ್ ಎಂದು ಗುರುತಿಸಲಾಗಿದೆ. ದೀಪಕ್ ಗುಪ್ತಾ ಹತ್ಯೆ ನಗರದಲ್ಲಿ ಆಕ್ರೋಶಕ್ಕೆ ಕಾರಣವಾದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.

ಘಟನೆಯ ವಿವರ: ಎರಡು ಪಿಕ್ ಅಪ್ ವ್ಯಾನ್‌ಗಳಲ್ಲಿ ಆಗಮಿಸಿದ 10 ರಿಂದ 12 ಮಂದಿ ಜಾನುವಾರು ಅಕ್ರಮ ಸಾಗಾಟಗಾರರು ಸ್ಥಳೀಯ ವ್ಯಾಪಾರಿಯ ಒಡೆತನದ ಪೀಠೋಪಕರಣದ ಅಂಗಡಿ ಒಡೆಯಲು ಪ್ರಯತ್ನಿಸಿರುವುದು ಗೋರಖ್‌ಪುರದಲ್ಲಿ ಸೋಮವಾರ ತಡರಾತ್ರಿ ಹಿಂಸಾಚಾರಕ್ಕೆ ಕಾರಣವಾಗಿತ್ತು.

ಅಂಗಡಿ ಒಡೆಯುವುದನ್ನು ನೋಡಿ ವ್ಯಾಪಾರಿಯ 20 ವರ್ಷದ ಪುತ್ರ ಹಾಗೂ ನೀಟ್ ಆಕಾಂಕ್ಷಿ ದೀಪಕ್ ಗುಪ್ತಾ ಬೊಬ್ಬೆ ಹಾಕಿದ್ದರು. ಕೂಡಲೇ ಇತರ ಗ್ರಾಮ ನಿವಾಸಿಗಳು ಆಗಮಿಸಿದ್ದರು. ಈ ಸಂದರ್ಭ ಜಾನುವಾರು ಅಕ್ರಮ ಸಾಗಾಟಗಾರರು ಗುಂಡು ಹಾರಿಸಿದ್ದರು. ಅಲ್ಲದೆ, ಅಲ್ಲಿಂದ ಪರಾರಿಯಾಗುವ ಸಂದರ್ಭ ಗುಂಡಿನಿಂದ ಗಾಯಗೊಂಡ ದೀಪಕ್ ಗುಪ್ತಾನನ್ನು ತಮ್ಮ ವಾಹನದಲ್ಲಿ ಹಾಕಿ ಕರೆದೊಯ್ದಿದ್ದರು. ಅನಂತರ ದೀಪಕ್ ಗುಪ್ತಾ ಅವರ ರಕ್ತ ಸಿಕ್ತ ಮೃತದೇಹ ನಾಲ್ಕು ಕಿಲೋ ಮೀಟರ್ ದೂರದಲ್ಲಿ ಪತ್ತೆಯಾಗಿತ್ತು.

ಆಕ್ರೋಶಿತರಾದ ಗ್ರಾಮ ನಿವಾಸಿಗಳು ಓರ್ವ ಶಂಕಿತನನ್ನು ಸೆರೆ ಹಿಡಿದಿದ್ದರು, ಆತನ ವಾಹನಕ್ಕೆ ಬೆಂಕಿ ಹಚ್ಚಿದ್ದರು ಹಾಗೂ ಥಳಿಸಿದ್ದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಗೊಂಡ ವ್ಯಕ್ತಿಯನ್ನು ರಕ್ಷಿಸಿದ್ದರು.

ಈ ಸಂದರ್ಭ ಜನರ ಗುಂಪು ಕಲ್ಲು ತೂರಾಟ ನಡೆಸಿತ್ತು. ಇದರಿಂದ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಶ್ರೀವಾಸ್ತವ ಹಾಗೂ ಪ್ರಿಪ್ರೈಕ್ ಠಾಣಾಧಿಕಾರಿ ಗಾಯಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News