2017ರಿಂದ ಹೆಚ್ಚುತ್ತಿವೆ ಸಾರ್ವಜನಿಕ ಸ್ಥಳಗಳಿಗೆ ಪರಿಶಿಷ್ಟ ಜಾತಿಗಳ ಪ್ರವೇಶ ನಿರಾಕರಣೆ ಪ್ರಕರಣಗಳು; ಉತ್ತರ ಪ್ರದೇಶ ಅಗ್ರಸ್ಥಾನದಲ್ಲಿ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕದ (ಎನ್‌ಸಿಆರ್‌ಬಿ) ಇತ್ತೀಚಿನ ದತ್ತಾಂಶಗಳಂತೆ 2023ರಲ್ಲಿ ದೇಶಾದ್ಯಂತ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಸಾರ್ವಜನಿಕ ಸ್ಥಳಗಳಲ್ಲಿ ಪರಿಶಿಷ್ಟ ಜಾತಿಗಳಿಗೆ ಪ್ರವೇಶ ನಿರಾಕರಣೆಯ ಪ್ರಕರಣಗಳು ಹೆಚ್ಚುತ್ತಲೇ ಇವೆ. 2023ರಲ್ಲಿ ಇಂತಹ 180 ಪ್ರಕರಣಗಳು ದಾಖಲಾಗಿದ್ದು,ಈ ಪೈಕಿ 173 ಪ್ರಕರಣಗಳು ಉತ್ತರ ಪ್ರದೇಶವೊಂದರಲ್ಲೇ ವರದಿಯಾಗಿವೆ. ಇತರ ಪ್ರಕರಣಗಳು ಹರ್ಯಾಣ,ಹಿಮಾಚಲ ಪ್ರದೇಶ,ಜಾರ್ಖಂಡ್, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ದಾಖಲಾಗಿವೆ. ಎನ್‌ಸಿಆರ್‌ಬಿ 2017ರಿಂದ ಸಾರ್ವಜನಿಕ ಸ್ಥಳಗಳಲ್ಲಿ ಪರಿಶಿಷ್ಟ ಜಾತಿಗಳಿಗೆ ಪ್ರವೇಶ ನಿರಾಕರಣೆಯನ್ನು ಅಪರಾಧ ವರ್ಗವನ್ನಾಗಿಸಿದೆ thehindu.com ವರದಿ ಮಾಡಿದೆ.
2022ರಲ್ಲಿ ದೇಶಾದ್ಯಂತ ಇಂತಹ 305 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 300 (ಶೇ.98.36) ಉತ್ತರ ಪ್ರದೇಶದಲ್ಲಿ ದಾಖಲಾಗಿದ್ದವು. ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿದ್ದ ದಲಿತ ಮಾನವ ಹಕ್ಕುಗಳ ರಾಷ್ಟ್ರೀಯ ಅಭಿಯಾನದ ವರದಿಯು,ಇಂತಹ ಪ್ರಕರಣಗಳ ಹೆಚ್ಚಳವು ಸಮಾಜದಲ್ಲಿ ಬೇರೂರಿರುವ ಜಾತಿ ಆಧಾರಿತ ಪ್ರತ್ಯೇಕತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿತ್ತು.
ಉತ್ತರ ಪ್ರದೇಶದಲ್ಲಿ ಇಂತಹ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಲೇ ಇವೆ. ರಾಜ್ಯದಲ್ಲಿ 2027ರಲ್ಲಿ ಮುಂದಿನ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು,ಕಳೆದ ಕೆಲವು ತಿಂಗಳುಗಳಲ್ಲಿ ಮುಂದುವರಿದ ಜಾತಿ ಸಮುದಾಯಗಳ ಗುಂಪುಗಳು ಹಲವಾರು ವಿಷಯಗಳಲ್ಲಿ ರಾಜ್ಯದಲ್ಲಿಯ ಬಿಜೆಪಿ ನೇತೃತ್ವದ ಸರಕಾರ ಮತ್ತು ಕೇಂದ್ರ ಸರಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿವೆ. ಇವುಗಳಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಸಮಾನತೆ ನಿಯಮಗಳ ಕುರಿತು ವಿವಾದವೂ ಸೇರಿದೆ. ಈ ನಿಯಮಗಳ ವಿರುದ್ಧ ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಭಾರೀ ಪ್ರತಿಭಟನೆಗಳು ನಡೆದಿದ್ದವು.
2017ರಲ್ಲಿ ಎನ್‌ಸಿಆರ್‌ಬಿ ಸಾರ್ವಜನಿಕ ಸ್ಥಳಗಳಲ್ಲಿ ಎಸ್‌ಸಿ/ಎಸ್‌ಟಿಗಳಿಗೆ ಪ್ರವೇಶ ನಿರಾಕರಣೆಯನ್ನು ಹೊಸ ಅಪರಾಧ ವರ್ಗವನ್ನಾಗಿಸಿದ ಬಳಿಕ ಆ ವರ್ಷ ದೇಶಾದ್ಯಂತ ಇಂತಹ 12 ಪ್ರಕರಣಗಳು ವರದಿಯಾಗಿದ್ದವು. ಪಂಜಾಬ್, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ಬಹುತೇಕ ಸಮಸಂಖ್ಯೆಯ ಪ್ರಕರಣಗಳು ದಾಖಲಾಗಿದ್ದರೆ, ಉತ್ತರ ಪ್ರದೇಶದಲ್ಲಿ ಒಂದೂ ಪ್ರಕರಣ ದಾಖಲಾಗಿರಲಿಲ್ಲ. ಆದಾಗ್ಯೂ 2017ರಲ್ಲಿ ಪರಿಚಯಿಸಲಾಗಿದ್ದ ಇನ್ನೊಂದು ವರ್ಗದಡಿ ಎಸ್‌ಸಿ ವ್ಯಕ್ತಿಗಳು ತಮ್ಮ ವಾಸಸ್ಥಳಗಳನ್ನು ತೊರೆಯಲು ಒತ್ತಾಯಿಸಲ್ಪಟ್ಟ ಆಥವಾ ಸಾಮಾಜಿಕ ಬಹಿಷ್ಕಾರಕ್ಕೊಳಗಾದ 57 ಪ್ರಕರಣಗಳು ಆ ವರ್ಷ ಉತ್ತರ ಪ್ರದೇಶದಲ್ಲಿ ದಾಖಲಾಗಿದ್ದವು.
2018ರಿಂದ ಎಸ್‌ಸಿಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶ ನಿರಾಕರಿಸಲ್ಪಟ್ಟ ಪ್ರಕರಣಗಳು ಹೆಚ್ಚತೊಡಗಿದ್ದು,2018ರಲ್ಲಿ ದೇಶಾದ್ಯಂತ ಇಂತಹ ಪ್ರಕರಣಗಳಲ್ಲಿ ಶೇ.68ರಷ್ಟಿದ್ದ ಉತ್ತರ ಪ್ರದೇಶದ ಪಾಲು 2019ರಲ್ಲಿ ಶೇ.80ಕ್ಕೆ ಜಿಗಿದಿತ್ತು. 2022ರಲ್ಲಿ ರಾಜ್ಯದಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಉತ್ತುಂಗಕ್ಕೇರಿದ್ದು, ಆ ವರ್ಷ ದೇಶಾದ್ಯಂತ ವರದಿಯಾಗಿದ್ದ ಇಂತಹ ಪ್ರಕರಣಗಳಲ್ಲಿ ಉತ್ತರ ಪ್ರದೇಶದ ಪಾಲು ಶೇ.98ಕ್ಕೂ ಅಧಿಕವಾಗಿತ್ತು.
ಕುತೂಹಲಕಾರಿಯಾಗಿ ಎನ್‌ಸಿಆರ್‌ಬಿ ವರದಿಯಲ್ಲಿ ಈ ಅಪರಾಧ ವರ್ಗದಡಿ ದತ್ತಾಂಶಗಳ ಪರಿಶೀಲನೆಯು ದೇಶಾದ್ಯಂತ ಪರಿಶಿಷ್ಟ ಪಂಗಡ ಸಮುದಾಯಗಳ ಜನರಿಗೆ ಸಂಬಂಧಿಸಿದಂತೆ ವರದಿಯಾದ ಪ್ರಕರಣಗಳ ಸಂಖ್ಯೆ ತುಲನಾತ್ಮಕವಾಗಿ ಕಡಿಮೆಯಿರುವುದನ್ನು ತೋರಿಸಿದೆ. ಇದಲ್ಲದೆ ಜನರು ತಮ್ಮ ವಾಸಸ್ಥಳಗಳನ್ನು ತೊರೆಯಲು ಒತ್ತಾಯಿಸಲ್ಪಟ್ಟ ಅಥವಾ ಸಾಮಾಜಿಕ ಬಹಿಷ್ಕಾರಕ್ಕೊಳಗಾದ ಪ್ರಕರಣಗಳ ಸಂಖ್ಯೆ 2017ರಿಂದೀಚಿಗೆ ಸುಮಾರು ಒಂದು ಡಝನ್‌ನಲ್ಲಿ ಸ್ಥಿರವಾಗಿದೆ.