ಉತ್ತರ ಪ್ರದೇಶ: ಐದನೇ ಹಂತದ ಮತದಾನ ಸಂದರ್ಭದಲ್ಲಿ 250 ದೂರು ದಾಖಲು
ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ಲೋಕಸಭಾ ಚುನಾವಣೆಯ ಐದನೇ ಹಂತದಲ್ಲಿ ಮತದಾನಕ್ಕೆ ಸಂಬಂಧಿಸಿದಂತೆ ಸುಮಾರು 250 ದೂರುಗಳು ದಾಖಲಾಗಿವೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಐದನೇ ಹಂತದಲ್ಲಿ ಅಮೇಥಿ, ರಾಯಬರೇಲಿ ಸೇರಿದಂತೆ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿದೆ.
250 ದೂರುಗಳ ಪೈಕಿ 100ಕ್ಕೂ ಅಧಿಕ ದೂರುಗಳು ಇವಿಎಮ್ ದೋಷಗಳಿಗೆ ಹಾಗೂ 50 ದೂರುಗಳು ಮತಗಟ್ಟೆಗಳಲ್ಲಿ ಜನಸಂದಣಿ ಮತ್ತು ಮತದಾರರ ಗುರುತಿನ ಚೀಟಿಗಳ ಅಸಮರ್ಪಕ ಪರಿಶೀಲನೆಗೆ ಸಂಬಂಧಿಸಿವೆ ಎಂದು ಉತ್ತರ ಪ್ರದೇಶ ಮುಖ್ಯ ಚುನಾವಣಾಧಿಕಾರಿ ನವದೀಪ ರಿನ್ವಾ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇತರ ದೂರುಗಳು ನಿರ್ದಿಷ್ಟ ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಮತದಾರರ ಮೇಲೆ ಚುನಾವಣಾ ಸಿಬ್ಬಂದಿಗಳ ಒತ್ತಡ, ಮಂದಗತಿಯ ಮತದಾನ, ಪರ್ಯಾಯ ಗುರುತಿನ ಚೀಟಿಗಳನ್ನು ಹೊಂದಿದ್ದ ಮತದಾರರಿಗೆ ಮತದಾನದ ಅವಕಾಶ ನಿರಾಕರಣೆ, ಉದ್ದನೆಯ ಸರದಿ ಸಾಲುಗಳು, ನಕಲಿ ಮತದಾನ ಮತ್ತು ಜನರಿಗೆ ಮತದಾರರ ಚೀಟಿ ಸಿಗದಿರುವುದಕ್ಕೆ ಸಂಬಂಧಿಸಿವೆ ಎಂದು ಅವರು ಹೇಳಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಎರಡು ವೀಡಿಯೊಗಳಲ್ಲಿ ಪೋಲಿಸರು ತಮ್ಮನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದ್ದರು ಎಂದು ಕೆಲವು ಮತದಾರರು ಆರೋಪಿಸಿದ್ದರೂ ರಿನ್ವಾ,ರಾಜ್ಯದಲ್ಲಿ ಎಲ್ಲಿಯೂ ಹಿಂಸಾಚಾರ ವರದಿಯಾಗಿಲ್ಲ. ಮತದಾನ ಶಾಂತಿಯುತವಾಗಿ ಅಂತ್ಯಗೊಂಡಿದೆ ಎಂದು ತಿಳಿಸಿದರು.