ಉತ್ತರ ಪ್ರದೇಶ: ಗುಡಿಸಲಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ಪತ್ತೆ; ಬೀಗ ಜಡಿದ ಅಧಿಕಾರಿಗಳು
PC: timesofindia.indiatimes.com
ಲಖ್ನೋ: ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯ ಸಂಡಿಲಾ ಜಿಲ್ಲೆಯ ಕಟಿಯಾಮಾವು ಗ್ರಾಮದಲ್ಲಿ ಹೋಟೆಲ್‌ವೊಂದರ ಹಿಂಭಾಗದಲ್ಲಿ ಹುಲ್ಲಿನ ಗುಡಿಸಲಿನಲ್ಲಿ ಕಾರ್ಯಾಚರಿಸುತ್ತಿದ್ದ ಹತ್ತು ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆ ಪತ್ತೆಯಾಗಿದ್ದು, ಅದಕ್ಕೀಗ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಈ ಆಸ್ಪತ್ರೆಯನ್ನು ಗೂಗಲ್ ಮ್ಯಾಪ್ಸ್‌ನಲ್ಲಿ ತ್ರಿತಾರಾ ರೇಟಿಂಗ್‌ನೊಂದಿಗೆ ‘ಫೌಝಿ ಕ್ಯಾನ್ಸರ್ ಹಾಸ್ಪಿಟಲ್’ಎಂದು ಪಟ್ಟಿ ಮಾಡಲಾಗಿದ್ದು, ಓರ್ವ ಬಳಕೆದಾರರಂತೂ ಅದನ್ನು ‘ಅತ್ಯುತ್ತಮ ಕ್ಯಾನ್ಸರ್ ಆಸ್ಪತ್ರೆ’ ಎಂದು ಬಣ್ಣಿಸಿದ್ದಾರೆ. ಅಂದ ಹಾಗೆ ಈ ಆಸ್ಪತ್ರೆ ರಾಜ್ಯ ರಾಜಧಾನಿಯಿಂದ ಕೇವಲ 75 ಕಿ.ಮೀ.ಅಂತರದಲ್ಲಿದೆ.
ಆದರೆ ಆಸ್ಪತ್ರೆಯ ಕುರಿತು ಹೆಚ್ಚಿನ ಆಘಾತಕಾರಿ ವಿಷಯವೆಂದರೆ ಅದು ಜಿಲ್ಲಾ ಮುಖ್ಯ ವೈದ್ಯಾಧಿಕಾರಿ (ಸಿಎಂಒ)ಗಳ ಕಚೇರಿಯಲ್ಲಿ ನೋಂದಣಿಗೊಂಡಿತ್ತು,ಆದರೆ 2024,ಎ.30ರಂದು ನೋಂದಣಿ ಅವಧಿ ಮುಗಿದಿದೆ.
ಆನಂದ ಮಿಶ್ರಾ ಎನ್ನುವವರು ಅಧಿಕೃತ ಕೆಲಸಕ್ಕಾಗಿ ಸಂಡಿಲಾಕ್ಕೆ ಪ್ರಯಾಣಿಸುತ್ತಿದ್ದಾಗ ಜಲಬಾಧೆಯನ್ನು ನೀಗಿಸಿಕೊಳ್ಳಲು ಹೋಟೆಲ್ ಬಳಿ ವಾಹನವನ್ನು ನಿಲ್ಲಿಸಿದ್ದರು. ಹೋಟೆಲ್‌ನ ಹಿಂದೆ ಗುಡಿಸಲೊಂದರಲ್ಲಿ ಎರಡು ಆಸ್ಪತ್ರೆ ಹಾಸಿಗೆಗಳು ಅವರ ಕಣ್ಣಿಗೆ ಬಿದ್ದಿದ್ದವು. ಅಲ್ಲಿ ರೋಗಿಗಳೂ ಇದ್ದರು. ವಿಚಾರಿಸಿದ ಬಳಿಕ ಅದೊಂದು ಕ್ಯಾನ್ಸರ್ ಆಸ್ಪತ್ರೆಯಾಗಿದೆ ಮತ್ತು ಗರ್ಭಾಶಯದ ಕ್ಯಾನ್ಸರ್‌ಗಾಗಿ 70ರ ಹರೆಯದ ಮಹಿಳೆಯೋರ್ವಳಿಗೆ ಅಲ್ಲಿ ಒಂದು ತಿಂಗಳಿನಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿತ್ತು. ಮಿಶ್ರಾ ತಕ್ಷಣ ಈ ವಿಷಯವನ್ನು ಜಿಲ್ಲಾಡಳಿತಕ್ಕೆ ವರದಿ ಮಾಡಿದ್ದರು.
ಮಿಶ್ರಾರ ವರದಿಯ ಬಳಿಕ ಸಿಎಂಒ ತಂಡವೊಂದನ್ನು ಅಲ್ಲಿಗೆ ರವಾನಿಸಿದ್ದರು. ನಿಜಕ್ಕೂ ಅಲ್ಲಿಯ ಹುಲ್ಲಿನ ಛಾವಣಿಯ ತಗಡಿನ ಶೆಡ್‌ನಲ್ಲಿ ಆಸ್ಪತ್ರೆಯು ಕಾರ್ಯಾಚರಿಸುತ್ತಿತ್ತು. ಆಸ್ಪತ್ರೆಯು ಕ್ಯಾನ್ಸರ್ ಚಿಕಿತ್ಸೆಗೆ ಪ್ರತಿ ತಿಂಗಳು 30,000 ರೂ.ಶುಲ್ಕ ವಿಧಿಸುತ್ತಿತ್ತು.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಹರ್ದೋಯಿ ಸಿಎಂಒ ಡಾ.ರೋಹ್ತಾಶ ಕುಮಾರ ಅವರು, ದಾಳಿಯ ವೇಳೆ ತೀವ್ರ ತಾಪಮಾನದ ನಡುವೆ ಗುಡಿಸಲಿನಲ್ಲಿ ಕ್ಯಾನ್ಸರ್ ರೋಗಿಯೋರ್ವರು ಪತ್ತೆಯಾಗಿದ್ದು, ಬಳಿಕ ಅವರನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ತಿಳಿಸಿದರು.
10 ಹಾಸಿಗೆಗಳನ್ನು ಹೊಂದಿದ್ದ ಆಸ್ಪತ್ರೆಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಎ.ಕೆ.ಪಾಸ್ವಾನ್ ಎಂಬ ನಕಲಿ ವೈದ್ಯನೋರ್ವ ಅದನ್ನು ನಡೆಸುತ್ತಿದ್ದು,ತಲೆಮರೆಸಿಕೊಂಡಿದ್ದಾನೆ. ಈ ಬಗ್ಗೆ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದಾರೆ.
ಆಸ್ಪತ್ರೆಯ ಕಾರ್ಯಾಚರಣೆಗೆ ಹೇಗೆ ಅನುಮತಿ ನೀಡಲಾಗಿತ್ತು ಎನ್ನುವುದರ ಬಗ್ಗೆಯೂ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಸಿಎಂಒ ತಿಳಿಸಿದರು.