×
Ad

ಉತ್ತರಾಖಂಡ: ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು!

Update: 2026-01-31 08:30 IST

PC: freepik

ಡೆಹ್ರಾಡೂನ್: ಕಟ್ಟುನಿಟ್ಟಿನ ದಂಡನಾ ಕ್ರಮಗಳನ್ನು ಒಳಗೊಂಡ ಉತ್ತರಾಖಂಡ ಸಮಾನ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮವಾಗಿ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ ಸಂಬಂಧಿಸಿದ ಅಪರಾಧ ಪ್ರಕರಣಗಳಲ್ಲಿ ಗರಿಷ್ಠ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶ ಕಲ್ಪಿಸಲಾಗಿದೆ.

ತಿದ್ದುಪಡಿ ಕಾನೂನಿನ ಅನ್ವಯ, ಬಲವಂತ, ಒತ್ತಡ ಅಥವಾ ವಂಚನೆಯ ಮೂಲಕ ವಿವಾಹ ಅಥವಾ ಲಿವ್‌ಇನ್ ಸಂಬಂಧಕ್ಕೆ ದಬ್ಬಾಳಿಕೆ ಮಾಡಿದರೆ, ಅಂಥ ವ್ಯಕ್ತಿಗೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ವಿವಾಹಿತ ವ್ಯಕ್ತಿಯೊಬ್ಬನು ಕಾನೂನಾತ್ಮಕ ವಿಚ್ಛೇದನ ಪಡೆಯದೇ ಎರಡನೇ ವಿವಾಹ ಮಾಡಿಕೊಂಡರೆ ಅಥವಾ ಲಿವ್‌ಇನ್ ಸಂಬಂಧ ಬೆಳೆಸಿದರೆ, ಅದನ್ನು ಅಪರಾಧ ಕೃತ್ಯವೆಂದು ಪರಿಗಣಿಸಿ ಗರಿಷ್ಠ ಶಿಕ್ಷೆ ವಿಧಿಸಲಾಗುತ್ತದೆ.

ಅಂತೆಯೇ, ಈಗಾಗಲೇ ಒಂದು ಲಿವ್‌ಇನ್ ಸಂಬಂಧ ಹೊಂದಿರುವ ವ್ಯಕ್ತಿ ಮತ್ತೊಂದು ಲಿವ್‌ಇನ್ ಸಂಬಂಧ ಹೊಂದಿರುವುದು ಸಾಬೀತಾದಲ್ಲಿ, ಅವನಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅಪ್ರಾಪ್ತ ವಯಸ್ಸಿನವರೊಂದಿಗೆ ಲಿವ್‌ಇನ್ ಸಂಬಂಧ ಹೊಂದಿದರೆ, ಆರು ತಿಂಗಳ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ಅಥವಾ ಎರಡನ್ನೂ ವಿಧಿಸುವ ಅವಕಾಶವಿದೆ. ದಂಡ ಪಾವತಿಸಲು ವಿಫಲವಾದಲ್ಲಿ, ಶಿಕ್ಷೆಯನ್ನು ಇನ್ನೊಂದು ತಿಂಗಳು ವಿಸ್ತರಿಸಬಹುದು.

ವಿವಾಹ ಅಥವಾ ಲಿವ್‌ಇನ್ ಸಂಬಂಧಕ್ಕಾಗಿ ಸುಳ್ಳು ಮಾಹಿತಿ ನೀಡಿದರೆ ಅಥವಾ ವಾಸ್ತವಾಂಶಗಳನ್ನು ಮುಚ್ಚಿಟ್ಟರೆ, ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಶಿಕ್ಷೆ ವಿಧಿಸಬಹುದಾಗಿದೆ.

ಇದಲ್ಲದೆ, ತಿದ್ದುಪಡಿ ಕಾನೂನಿನ ಪ್ರಕಾರ ಅಕ್ರಮ ವಿಧಾನದಲ್ಲಿ ವಿಚ್ಛೇದನ ಪಡೆದರೆ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ವ್ಯವಸ್ಥೆಯಿದೆ. ಬಾಲ್ಯವಿವಾಹಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಬಾಲ್ಯವಿವಾಹ ನಿರ್ಬಂಧ ಕಾಯ್ದೆ–2006ರ ಅಡಿಯಲ್ಲಿ ಪರಿಗಣಿಸಲಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News