×
Ad

ಉತ್ತರಾಖಂಡ: ಸುರಂಗದಲ್ಲಿ 170 ಗಂಟೆ ಸಿಲುಕಿರುವ ಕಾರ್ಮಿಕರು, ಕುಟುಂಬಗಳಲ್ಲಿ ಆತಂಕ

Update: 2023-11-19 09:32 IST

Photo: twitter.com/htTweets

ಡೆಹ್ರಾಡೂನ್: ಉತ್ತರಾಖಂಡದ ಸುರಂಗದಲ್ಲಿ 170 ಗಂಟೆಗಳ ಕಾಲ ಸಿಲುಕಿ ಹಾಕಿಕೊಂಡಿರುವ ಕಾರ್ಮಿಕರ ರಕ್ಷಣೆಗೆ ನಡೆಯುತ್ತಿರುವ ಕಾರ್ಯಾಚರಣೆಗೆ ಕೊರೆಯುವ ಯಂತ್ರದಲ್ಲಿನ ದೋಷ ಮತ್ತೆ ತಡೆಯೊಡ್ಡಿದ್ದು, ಕಾರ್ಮಿಕರ ಕುಟುಂಬಗಳ ಆತಂಕ ಹೆಚ್ಚಿದೆ.

ಯಂತ್ರದಿಂದ ದಿಢೀರನೇ ದೊಡ್ಡ ಸದ್ದು ಕೇಳಿಬಂದ ಹಿನ್ನೆಲೆಯಲ್ಲಿ ಯಂತ್ರವನ್ನು ಸ್ಥಗಿತಗೊಳಿಸಲಾಗಿತ್ತು. ಎರಡನೇ ಅಧಿಕ ಸಾಮರ್ಥ್ಯದ ಕೊರೆಯುವ ಯಂತ್ರವನ್ನು ದುರಂತ ಸ್ಥಳಕ್ಕೆ ತರಲಾಗಿದ್ದು, ಕಾರ್ಯಾಚರಣೆ ಸದ್ಯದಲ್ಲೇ ಮರು ಆರಂಭವಾಗಲಿದೆ ಎಂದು ಉನ್ನತ ಮೂಲಗಳು ಹೇಳಿವೆ.

ಕಳೆದ ಭಾನುವಾರ ನಿರ್ಮಾಣ ಹಂತದ ಸುರಂಗ ಕುಸಿದು 41 ಮಂದಿ ಕಾರ್ಮಿಕರು ಸಿಕ್ಕಿಹಾಕಿಕೊಂಡಿದ್ದರು. ಕಾರ್ಮಿಕರು ಸುರಕ್ಷಿತವಾಗಿದ್ದು, ಉಕ್ಕಿನ ಕೊಳವೆಗಳ ಮೂಲಕ ಆಹಾರ ಮತ್ತು ನೀರು ಪೂರೈಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದುರಂತ ನಡೆದ ಸ್ಥಳಕ್ಕೆ ಆಗಮಿಸಿರುವ ಕಾರ್ಮಿಕರ ಕುಟುಂಬಗಳು ಆತಂಕದಲ್ಲಿವೆ. ಸಿಲುಕಿಕೊಂಡಿರುವ ಕಾರ್ಮಿಕರ ಆರೋಗ್ಯ ಸ್ಥಿತಿ ಹದಗೆಡುವ ಮುನ್ನ ರಕ್ಷಣಾ ಕಾರ್ಯಾಚರಣೆ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಸಿಲುಕಿಕೊಂಡಿರುವ ಕಾರ್ಮಿಕನ ಸಹೋದರರೊಬ್ಬರು ಹೇಳಿದ್ದಾರೆ.

ವೈದ್ಯರು ಕೂಡಾ ಸಿಲುಕಿ ಹಾಕಿಕೊಂಡಿರುವ ಕಾರ್ಮಿಕರ ಸಮಗ್ರ ಪುನಶ್ಚೇತನ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ಮಾಡಿದ್ದಾರೆ. ಸುಧೀರ್ಘ ಕಾಲ ಅವರು ಸಿಲುಕಿ ಹಾಕಿಕೊಂಡಿದ್ದಲ್ಲಿ ಮಾನಸಿಕ ಹಾಗೂ ಭೌತಿಕ ಪುನಶ್ಚೇತನಗೊಳ್ಳಲು ಸುಧೀರ್ಘ ಅವಧಿ ತಗುಲಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ನಿರ್ಮಾಣ ಹಂತದ ಸಿಲ್ಕ್ಯಾತ್ರಾ ಸುರಂಗ ನವೆಂಬರ್ 12ರಂದು ಕುಸಿದು 41 ಮಂದಿ ಸಿಲುಕಿಕೊಂಡಿದ್ದರು. ರಂಧ್ರಗಳನ್ನು ಕೊರೆದು ಅವರನ್ನು ಸುರಕ್ಷಿತವಾಗಿ ಹೊರತರುವ ಪ್ರಯತ್ನಗಳು ನಡೆಯುತ್ತಿರುವ ನಡುವೆಯೇ ಮತ್ತೆ ಮತ್ತೆ ಕುಸಿತಗಳು ಸಂಭವಿಸುತ್ತಿರುವುದು ಕಾರ್ಯಾಚರಣೆಗೆ ತಡೆಯಾಗಿದೆ. ಈ ಹಿನ್ನೆಲೆಯಲ್ಲಿ ರಂಧ್ರ ಕೊರೆದು ದೊಡ್ಡ ಪೈಪ್ ಗಳ ಮೂಲಕ ಕಾರ್ಮಿಕರನ್ನು ಹೊರತರುವ ಪ್ರಯತ್ನ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News