ನಿತೀಶ್ ಪುತ್ರ ರಾಜಕೀಯದಲ್ಲಿರಬೇಕು ಎಂಬ ಬಯಕೆ ಹಲವರದ್ದು: ಬಿಹಾರ ರಾಜಕೀಯವನ್ನು ಕಲಕಿದ ಜೆಡಿಯು ನಾಯಕನ ಹೇಳಿಕೆ
PC: x.com/indiatvnews
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪುತ್ರ ಸಕ್ರಿಯ ರಾಜಕಾರಣಕ್ಕೆ ಬರಬೇಕು ಎನ್ನುವುದು ಪ್ರತಿಯೊಬ್ಬರ ಬಯಕೆ ಎಂದು ಹೇಳುವ ಮೂಲಕ ಜೆಡಿಯು ಕಾರ್ಯಾಧ್ಯಕ್ಷ ಸಂಜಯ್ ಕುಮಾರ್ ಝಾ, ರಾಜ್ಯ ರಾಜಕೀಯವನ್ನು ಮತ್ತೆ ಕೆದಕಿದ್ದಾರೆ. ಆದರೆ ಅಂತಿಮ ನಿರ್ಧಾರ ಸಿಎಂ ಪುತ್ರ, 49 ವರ್ಷದ ಎಂಜಿನಿಯರ್ಗೆ ಬಿಟ್ಟದ್ದು ಎಂದು ಸ್ಪಷ್ಟನೆ ನೀಡಿದ್ದಾರೆ.
"ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಮತ್ತು ಬೆಂಬಲಿಗರು ನಿಶಾಂತ್ ಬರಬೇಕು ಮತ್ತು ಪಕ್ಷದ ಕೆಲಸ ಮುಂದುವರಿಸಬೇಕು ಎಂದು ಬಯಸಿದ್ದಾರೆ" ಎಂದು ನಿಶಾಂತ್ ಉಪಸ್ಥಿತಿಯಲ್ಲೇ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಝಾ ಹೇಳಿದರು. ಆದರೆ ಪಕ್ಷದ ಕೆಲಸವನ್ನು ಯಾವಾಗ ಆರಂಭಿಸಬೇಕು ಎಂಬ ನಿರ್ಧಾರ ಕೈಗೊಳ್ಳುವುದು ನಿಶಾಂತ್ ಗೆ ಬಿಟ್ಟದ್ದು ಎಂದು ಸ್ಪಷ್ಟಪಡಿಸಿದರು.
ದೇಶದಲ್ಲಿ ಅತಿಹೆಚ್ಚು ಅವಧಿಗೆ ಮುಖ್ಯಮಂತ್ರಿ ಪದವಿ ಅಲಂಕರಿಸಿದವರ ಪೈಕಿ ಒಬ್ಬರಾದ ನಿತೀಶ್, ತಮ್ಮ ವಯಸ್ಸು ಮತ್ತು ಆರೋಗ್ಯದ ಬಗೆಗಿನ ಆತಂಕದ ನಡುವೆಯೂ ತಮ್ಮ ರಾಜಕೀಯ ಉತ್ತರಾಧಿಕಾರಿಯ ಬಗ್ಗೆ ಮೌನ ವಹಿಸಿದ್ದಾರೆ. ಕುಟುಂಬ ರಾಜಕೀಯವನ್ನು ಟೀಕಿಸುತ್ತಾ ಬಂದಿರುವ ನಿತೀಶ್, ತಮ್ಮ ಬದ್ಧ ಎದುರಾಳಿ ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಅವರನ್ನು ಈ ವಿಚಾರದಲ್ಲಿ ಬೆಟ್ಟು ಮಾಡಿದ್ದಾರೆ.
ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಅದ್ಭುತ ಪ್ರದರ್ಶನ ನೀಡಿದ್ದು, 2020ರಲ್ಲಿ ಇದ್ದ 43 ಸ್ಥಾನಗಳನ್ನು ದುಪ್ಪಟ್ಟು ಪಡಿಸಿಕೊಂಡಿದೆ. 243 ಸದಸ್ಯಬಲದ ವಿಧಾನಸಭೆಯಲ್ಲಿ ಜೆಡಿಯು 85 ಸ್ಥಾನ ಗೆದ್ದಿತ್ತು.