ಕೇರಳ: ಐವರ ಹತ್ಯೆ ಪ್ರಕರಣದ ಆರೋಪಿ ಅಫಾನ್ ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನ
Update: 2025-05-25 15:09 IST
ಅಫಾನ್
ತಿರುವನಂತಪುರಂ: ವೆಂಜರಮೂಡು ಸಾಮೂಹಿಕ ಕೊಲೆ ಪ್ರಕರಣದ ಪ್ರಮುಖ ಆರೋಪಿ ಅಫಾನ್ ರವಿವಾರ ಪೂಜಾಪುರ ಕೇಂದ್ರ ಕಾರಾಗೃಹದೊಳಗೆ ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ವರದಿಯಾಗಿದೆ.
ಅಫಾನ್ ಜೈಲಿನ ಸ್ನಾನಗೃಹದಲ್ಲಿ ಧೋತಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಹೇಳಲಾಗಿದೆ. ತಕ್ಷಣ ಆತನನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ತಿರುವನಂತಪುರಂ ಜಿಲ್ಲೆಯ ವೆಂಜರಮೂಡು ಎಂಬಲ್ಲಿ ಫೆಬ್ರವರಿ 24 ರಂದು ಅಫಾನ್ ತನ್ನ ಕಿರಿಯ ಸಹೋದರ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಗೆಳತಿ ಫರ್ಸಾನಾ ಅವರನ್ನು ಕೊಲೆ ಮಾಡಿ ಬಳಿಕ ಪೊಲೀಸರಿಗೆ ಶರಣಾಗಿದ್ದ. ಘಟನೆ ರಾಜ್ಯದಲ್ಲಿ ಭಾರೀ ಸುದ್ದಿಯಾಗಿತ್ತು.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.