ದಿಲ್ಲಿಯಲ್ಲಿ ನೀರಿನ ಕೊರತೆ | ಹೆಚ್ಚುವರಿ ನೀರು ಬಿಡುಗಡೆಗೆ ಆಗ್ರಹಿಸಿ ಹರ್ಯಾಣ, ಉತ್ತರ ಪ್ರದೇಶ ಸಿಎಂಗಳಿಗೆ ಸಚಿವೆ ಆತಿಶಿ ಪತ್ರ
ಆತಿಶಿ | PTI
ಹೊಸದಿಲ್ಲಿ : ದಿಲ್ಲಿಯಲ್ಲಿ ನೀರಿನ ತೀವ್ರ ಕೊರತೆ ಉಂಟಾಗಿರುವುದರಿಂದ ಹೆಚ್ಚುವರಿ ನೀರು ಬಿಡುಗಡೆ ಮಾಡುವಂತೆ ಆಗ್ರಹಿಸಿ ದಿಲ್ಲಿ ಸಚಿವೆ ಆತಿಶಿ ಅವರು ಉತ್ತರಪ್ರದೇಶ ಹಾಗೂ ಹರ್ಯಾಣದ ಮುಖ್ಯಮಂತ್ರಿಗಳಿಗೆ ರವಿವಾರ ಪತ್ರ ಬರೆದಿದ್ದಾರೆ.
ಮುಖ್ಯಮಂತ್ರಿಗಳಾದ ಆದಿತ್ಯನಾಥ ಹಾಗೂ ನಾಯಬ್ ಸಿಂಗ್ ಸೈನಿ ಅವರಿಗೆ ಬರೆದಿರುವ ಪತ್ರದಲ್ಲಿ ಆತಿಶಿ ಅವರು, ಮುಂದಿನ ತಿಂಗಳು ಮುಂಗಾರು ಆಗಮಿಸುವ ವರೆಗೆ ದಿಲ್ಲಿಯ ನಿವಾಸಿಗಳಿಗೆ ಸ್ವಚ್ಛ ಕುಡಿಯುವ ನೀರು ಲಭ್ಯತೆಯ ಖಾತರಿ ನೀಡಲು ಒಂದು ತಿಂಗಳ ಕಾಲ ಹೆಚ್ಚುವರಿ ನೀರು ಬಿಡುಗಡೆ ಮಾಡುವಂತೆ ಕೋರಿದ್ದಾರೆ.
‘‘ದಿಲ್ಲಿ ಸರಕಾರ ತನ್ನ ಜಲ ಸಂಸ್ಕರಣ ಘಟಕಗಳ ಉತ್ಪಾದನೆಯನ್ನು ಗರಿಷ್ಠ ಮಟ್ಟದಲ್ಲಿ ಹೆಚ್ಚಿಸುವ ಪ್ರಯತ್ನವನ್ನು ಮಾಡುತ್ತಿದೆ. ಆದರೆ, ಉಷ್ಣ ಗಾಳಿ ಬೀಸುತ್ತಿರುವ ಈ ಸಂದರ್ಭ ಜನರ ನೀರಿನ ಬೇಡಿಕೆ ಪೂರೈಸಲು ನಮಗೆ ಎಲ್ಲಾ ಕಡೆಯಿಂದ ಸಹಕಾರದ ಅಗತ್ಯತೆ ಇದೆ’’ ಎಂದು ಹೇಳಿದ್ದಾರೆ.
ವಝೀರ್‌ಬಾದ್ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅದು ಸಾಮಾನ್ಯ ಮಟ್ಟ 674.50 ಅಡಿಗಿಂತ ಈ ಬಾರಿ 670.3 ಅಡಿಗೆ ಇಳಿದಿದೆ. ಇದು ದಿಲ್ಲಿ ಜಲ ಸಂಸ್ಕರಣೆ ಘಟಕದ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ ಎಂದು ಆತಿಶಿ ಅವರು ಪತ್ರದಲ್ಲಿ ಗಮನ ಸೆಳೆದಿದ್ದಾರೆ.
‘‘ಈ ಬಿಕ್ಕಟ್ಟು ಪರಿಹರಿಸಲು, ಹರ್ಯಾಣ ಸರಕಾರ ಯಮುನಾ ನದಿಯಿಂದ ಹೆಚ್ಚುವರಿ ನೀರನ್ನು ಕೂಡಲೇ ಬಿಡುಗಡೆ ಮಾಡಬೇಕಾದ ಅಗತ್ಯತೆ ಇದೆ’’ ಎಂದು ಅವರು ನಾಯಬ್ ಸಿಂಗ್ ಸೈನಿ ಅವರನ್ನು ಆಗ್ರಹಿಸಿದ್ದಾರೆ.
ನೀರು ಪೂರೈಕೆಯನ್ನು ತರ್ಕಬದ್ಧಗೊಳಿಸುವುದು ಸೇರಿದಂತೆ ನೀರು ಪೋಲಾಗುವದನ್ನು ತಡೆಯಲು ದಿಲ್ಲಿ ಸರಕಾರ ಈಗಾಗಲೇ ಹಲವು ಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಆದರೆ, ಹೆಚ್ಚುತ್ತಿರುವ ಬೇಡಿಕೆಯನ್ನು ಈಡೇರಿಲು ಈಗ ಸಾಕಷ್ಟು ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆತಿಶಿ ಪತ್ರದಲ್ಲಿ ಹೇಳಿದ್ದಾರೆ.