ಜರಾಂಗೆಯ ಬಹುತೇಕ ಬೇಡಿಕೆಗಳನ್ನು ಅಂಗೀಕರಿಸಿದ ಮಹಾರಾಷ್ಟ್ರ ಸರಕಾರ: ಬೆಂಬಲಿಗರ ಸಂಭ್ರಮಾಚರಣೆ
ನಾವು ಗೆದ್ದೆವು ಎಂದು ಘೋಷಿಸಿದ ಮರಾಠಿ ಮೀಸಲಾತಿ ಹೋರಾಟಗಾರ
ಮನೋಜ್ ಜರಾಂ | PC : PTI
ಮುಂಬೈ: ಅರ್ಹ ಮರಾಠರಿಗೆ ಕುಣಬಿ ಜಾತಿ ಪ್ರಮಾಣ ಪತ್ರ ನೀಡುವುದೂ ಸೇರಿದಂತೆ, ಬಹುತೇಕ ಬೇಡಿಕೆಗಳನ್ನು ಈಡೇರಿಸಲು ಮಹಾರಾಷ್ಟ್ರ ಸರಕಾರದ ಸಚಿವ ಸಂಪುಟ ಉಪ ಸಮಿತಿ ಸಮ್ಮತಿಸಿದ್ದು, ನಾವು ಈ ಹೋರಾಟದಲ್ಲಿ ಗೆಲುವು ಸಾಧಿಸಿದ್ದೇವೆ ಎಂದು ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ಪಾಟೀಲ್ ಘೋಷಿಸಿದರು. ಇದರ ಬೆನ್ನಿಗೇ ಅವರ ಬೆಂಬಲಿಗರ ಸಂಭ್ರಮಾಚರಣೆ ಮುಗಿಲು ಮುಟ್ಟಿತು.
ಅರ್ಹ ಮರಾಠರಿಗೆ ಇತರೆ ಹಿಂದುಳಿದ ವರ್ಗಗಳ ಜಾತಿ ಪ್ರಮಾಣ ಪತ್ರ ವಿತರಿಸಬೇಕು ಎಂದು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಮರಾಠಿ ಮೀಸಲಾತಿ ಹೋರಾಟಗಾರ ಮನೋಜ್ ಜರಾಂಗೆ ಪಾಟೀಲ್ ಹಾಗೂ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ನೇತೃತ್ವದ ಸಚಿವ ಸಂಪುಟ ಉಪ ಸಮಿತಿ ನಡುವಿನ ಸಭೆ ಅಂತ್ಯಗೊಂಡ ನಂತರ, “ನಾವು ಗೆದ್ದಿದ್ದೇವೆ” ಎಂದು ಮರಾಠ ಮೀಸಲಾತಿ ಪ್ರತಿಭಟನಾಕಾರರಿಗೆ ಅವರು ತಿಳಿಸಿದರು.
ಸಚಿವ ಸಂಪುಟ ಉಪ ಸಮಿತಿಯ ಇನ್ನಿತರ ಸದಸ್ಯರಾದ ಶಿವೇಂದ್ರ ಸಿನ್ಹಾ ಭೋಸ್ಲೆ, ಉದಯ್ ಸಮಂತ್ ಹಾಗೂ ಮಾಣಿಕ್ ರಾವ್ ಕೋಕಟೆಯೊಂದಿಗೆ ಸಚಿವ ವಿಖೆ ಪಾಟೀಲ್ ಅವರು ಸತ್ಯಾಗ್ರಹ ನಿರತ ಮನೋಜ್ ಜರಾಂಗೆ ಪಾಟೀಲ್ ರನ್ನು ಮಂಗಳವಾರ ಮಧ್ಯಾಹ್ನ ದಕ್ಷಿಣ ಮುಂಬೈನ ಆಝಾದ್ ಮೈದಾನದಲ್ಲಿ ಭೇಟಿಯಾದರು.
ಈ ವೇಳೆ ಅವರು ಉಪ ಸಮಿತಿ ಅಂತಿಮಗೊಳಿಸಿರುವ ಕರಡಿನ ಕುರಿತು ಅವರೊಂದಿಗೆ ಮಾತುಕತೆ ನಡೆಸಿದರು.
ನಂತರ ಮಾತನಾಡಿದ ಜರಾಂಗೆ, “ಒಂದು ವೇಳೆ ಮರಾಠ ಮೀಸಲಾತಿ ಬೇಡಿಕೆಯ ಕುರಿತು ಮಹಾರಾಷ್ಟ್ರ ಸರಕಾರ ಸರಕಾರಿ ನಿರ್ಣಯವನ್ನು ಬಿಡುಗಡೆಗೊಳಿಸಿದರೆ, ನಾವು ಇಂದು ರಾತ್ರಿ 9 ಗಂಟೆಗೆ ಮುಂಬೈ ಅನ್ನು ತೊರೆಯಲಿದ್ದೇವೆ” ಎಂದು ಹೇಳಿದರು.
ಹೈದರಾಬಾದ್ ರಾಜ್ಯಪತ್ರವನ್ನು ಜಾರಿಗೊಳಿಸಬೇಕು ಹಾಗೂ ಕುಣಬಿ ದಾಖಲೆಯನ್ನು ಹೊಂದಿರುವ ಮರಾಠರಿಗೆ ಸಮರ್ಪಕ ವಿಚಾರಣೆಯ ನಂತರ ಜಾತಿ ಪ್ರಮಾಣ ಪತ್ರ ವಿತರಿಸಬೇಕು ಎಂಬ ಜರಾಂಗೆಯ ಬೇಡಿಕೆಯನ್ನು ಸಚಿವ ಸಂಪುಟ ಉಪ ಸಮಿತಿ ಅಂಗೀಕರಿಸಿದೆ.
ಹೈದರಾಬಾದ್ ರಾಜ್ಯಪತ್ರವನ್ನು ಜಾರಿಗೊಳಿಸಲಾಗುವುದು ಹಾಗೂ ಈ ಸಂಬಂಧ ಸರಕಾರಿ ನಿರ್ಣಯವನ್ನು ತಕ್ಷಣವೇ ಬಿಡುಗಡೆ ಮಾಡಲಾಗುವುದು ಎಂಬ ಸಚಿವ ಸಂಪುಟ ಉಪ ಸಮಿತಿಯ ಕರಡು ಅಂಶವನ್ನು ಜರಾಂಗೆ ತಮ್ಮ ಬೆಂಬಲಿಗರಿಗೆ ಓದಿ ಹೇಳಿದರು. ಅಲ್ಲದೆ, ಇನ್ನೊಂದು ತಿಂಗಳಲ್ಲಿ ಸತಾರಾ ರಾಜ್ಯಪತ್ರವನ್ನೂ ಜಾರಿಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಸಚಿವ ಸಂಪುಟ ಉಪ ಸಮಿತಿ ನೀಡಿರುವ ಭರವಸೆಯನ್ವಯ ಈ ಹಿಂದೆ ಮರಾಠ ಪ್ರತಿಭಟನಾಕಾರರ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣಗಳನ್ನು ಸೆಪ್ಟೆಂಬರ್ ಅಂತ್ಯದ ವೇಳೆಗೆ ಹಿಂಪಡೆಯಲಾಗುತ್ತದೆ ಎಂದೂ ಅವರು ಹೇಳಿದರು.