ಮುಂದಿನ ವಾರದೊಳಗೆ ಇತ್ಯರ್ಥವಾಗದಿದ್ದರೆ ನಾವೇ ಬಗೆಹರಿಸುತ್ತೇವೆ: ತಮಿಳುನಾಡು ಸರಕಾರ, ರಾಜ್ಯಪಾಲರ ನಡುವಿನ ಜಟಾಪಟಿ ಬಗ್ಗೆ ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: ಮಸೂದೆಗಳ ಅಂಗೀಕಾರ ಮತ್ತು ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ಉಪಕುಲಪತಿಗಳ ನೇಮಕಾತಿ ಕುರಿತು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಮತ್ತು ಡಿಎಂಕೆ ಸರಕಾರದ ನಡುವಿನ ಜಟಾಪಟಿಯನ್ನು ಕೊನೆಗೊಳಿಸುವಂತೆ ಸುಪ್ರೀಂ ಕೋರ್ಟ್ ಹೇಳಿದ್ದು, ಮುಂದಿನ ವಿಚಾರಣೆಯ ದಿನಾಂಕದೊಳಗೆ(ಮುಂದಿನ ವಾರದೊಳಗೆ) ಈ ಸಮಸ್ಯೆ ಬಗೆಹರಿದರೆ ಉತ್ತಮ, ಇಲ್ಲದಿದ್ದರೆ, ನಾವು ಅದನ್ನು ಬಗೆಹರಿಸುತ್ತೇವೆ ಎಂದು ಹೇಳಿದೆ.
ವಿಶ್ವವಿದ್ಯಾಲಯಗಳಲ್ಲಿ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ, ರಾಜ್ಯದ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಯಲ್ಲಿ ವಿನಾಯಿತಿ, ಆನ್ಲೈನ್ ಗೇಮ್ ನಿಷೇಧ ಸೇರಿ 10 ಮಸೂದೆಗಳನ್ನು ಅಂಗೀಕಾರಕ್ಕಾಗಿ ರಾಜ್ಯಪಾಲರ ಬಳಿ ಕಳುಹಿಸಲಾಗಿತ್ತು. ಆದರೆ ವಿಧೇಯಕಕ್ಕೆ ಅಂಕಿತ ಹಾಕದೆ ಅವರು ಮಸೂದೆಯನ್ನು ಮತ್ತೆ ವಾಪಾಸ್ಸು ಕಳುಹಿಸಿದ್ದಾರೆ.
ಉಪಕುಲಪತಿಗಳನ್ನು ನೇಮಕ ಮಾಡುವ ಅಧಿಕಾರವು ಸರ್ಕಾರದ ಹೊಣೆಯಾಗಿರುತ್ತದೆ ಎಂದು ತಮಿಳುನಾಡು ಸರ್ಕಾರವು ವಿಧಾನಸಭೆಯಲ್ಲಿ ಎರಡು ಮಹತ್ವದ ವಿಧೇಯಕಗಳನ್ನು ಅಂಗೀಕರಿಸಿದೆ. ಕುಲಪತಿಗಳನ್ನು ನೇಮಕ ಮಾಡುವ ಕುರಿತು ವಿಶ್ವವಿದ್ಯಾಲಯಗಳ ಕುಲಾಧಿಪತಿಯೂ ಆಗಿರುವ ರಾಜ್ಯಪಾಲರಿಗೆ ಇದ್ದ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ. ಈ ಕುರಿತು ಮಸೂದೆ ಇನ್ನೂ ರಾಜ್ಯಪಾಲರಿಂದ ಒಪ್ಪಿಗೆ ಪಡೆಯದೆ ಬಾಕಿ ಉಳಿದಿದೆ. ಇದಲ್ಲದೆ ಕಳೆದ ಕೆಲ ವರ್ಷಗಳಿಂದ ರಾಜ್ಯಪಾಲರು ಮತ್ತು ಸರಕಾರದ ನಡುವಿನ ಜಟಾಪಟಿ ಹಿನ್ನೆಲೆ ನ್ಯಾಯಮೂರ್ತಿ ಎಸ್.ಬಿ. ಪಾರ್ದಿವಾಲಾ ನೇತೃತ್ವದ ಪೀಠವು ಈ ಹೇಳಿಕೆ ನೀಡಿದೆ.
10 ಮಸೂದೆಗಳಲ್ಲಿ, ರಾಜ್ಯಪಾಲರು ಒಂದನ್ನು ಮಾತ್ರ ಅನುಮೋದಿಸಿದ್ದಾರೆ. ಏಳು ಮಸೂದೆಗಳಿಗೆ ಒಪ್ಪಿಗೆ ನೀಡಿಲ್ಲ. ಉಳಿದ ಎರಡು ಮಸೂದೆಗಳ ಬಗ್ಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಕುಲಪತಿ ನೇಮಕಕ್ಕೆ ರಚಿಸುವ ಶೋಧ ಸಮಿತಿಯಲ್ಲಿ ವಿಶ್ವವಿದ್ಯಾಲಯಗಳ ಅನುದಾನ ಆಯೋಗದಿಂದ ನಾಮನಿರ್ದೇಶಿತರಾಗುವ ಓರ್ವರು ಸೇರಿದಂತೆ ಒಟ್ಟು ನಾಲ್ಕು ಮಂದಿ ಸದಸ್ಯರಿರಬೇಕು ಎಂಬುದು ರಾಜ್ಯಪಾಲರ ನಿಲುವು. ಆದರೆ, ನಾಲ್ಕು ಸದಸ್ಯರ ಅಗತ್ಯ ಇಲ್ಲ, ಮೂವರು ಸದಸ್ಯರು ಸಾಕು ಎಂದು ಸರ್ಕಾರ ಪ್ರತಿಪಾದಿಸುತ್ತಿದೆ.
ಅಣ್ಣಾಮಲೈ ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕಕ್ಕೆ ಯುಜಿಸಿಯಿಂದ ನಾಮನಿರ್ದೇಶಿತರಾದ ಸದಸ್ಯರಿಲ್ಲದೆ ರಚಿಸಿರುವ ಶೋಧ ಸಮಿತಿಯನ್ನು ರದ್ದುಪಡಿಸಬೇಕು ಎಂದು ರಾಜ್ಯಪಾಲರು ಇತ್ತೀಚೆಗೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಅಣ್ಣಾ ವಿಶ್ವವಿದ್ಯಾಲಯ, ಭಾರತಿದಾಸನ್ ವಿಶ್ವವಿದ್ಯಾಲಯ ಮತ್ತು ಪೆರಿಯಾರ್ ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕಕ್ಕೆ ಶೋಧ ಸಮಿತಿಯನ್ನು ಅಧಿಸೂಚನೆಯಲ್ಲಿ ಪ್ರಕಟಿಸಬೇಕು ಎಂದು ರಾಜ್ಯಪಾಲರು ಸರ್ಕಾರಕ್ಕೆ ಹೇಳಿದ್ದರು.