×
Ad

ʼಸಂಸತ್ ನಲ್ಲಿ ಪಕ್ಷ ಬದ್ಧತೆ ಬಿಟ್ಟು ಮತದಾನಕ್ಕೆ ಅವಕಾಶʼ: ಖಾಸಗಿ ಸದಸ್ಯರ ಮಸೂದೆ ಮಂಡಿಸಲಿರುವ ಮನೀಶ್ ತಿವಾರಿ

ಮಸೂದೆಗಳಿಗೆ ಮತ ಹಾಕುವಾಗ ಸಂಸತ್ ಸದಸ್ಯರು ಪಕ್ಷ ಬದ್ಧತೆಯಿಂದ ಮುಕ್ತರಾಗಿರಬೇಕು ಎಂದ ಕಾಂಗ್ರೆಸ್ ಸಂಸದ

Update: 2025-12-07 21:48 IST

ANI File Image

ಹೊಸದಿಲ್ಲಿ,: ಮಸೂದೆಗಳು ಮತ್ತು ನಿರ್ಣಯಗಳಿಗೆ ಮತ ಹಾಕುವಾಗ ಸಂಸತ್ ಸದಸ್ಯರು ಪಕ್ಷ ಬದ್ಧತೆಯಿಂದ ಮುಕ್ತರಾಗಿರಬೇಕು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಲೋಕಸಭಾ ಸದಸ್ಯ ಮನೀಶ್ ತಿವಾರಿ ಹೇಳಿದ್ದಾರೆ. ಪ್ರಸಕ್ತ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ, ಅವರು ಈ ವಿಷಯಕ್ಕೆ ಸಂಬಂಧಿಸಿದ ಖಾಸಗಿ ಸದಸ್ಯರ ಮಸೂದೆಯೊಂದನ್ನು ಮಂಡಿಸಿದ್ದಾರೆ.

ಪ್ರಸಕ್ತ ಕಾನೂನಿನ ಪ್ರಕಾರ, ಸಂಸದರು ತಮ್ಮ ಪಕ್ಷ ಹೊರಡಿಸುವ ಅಧಿಕೃತ ಸೂಚನೆಗೆ ಅನುಸಾರವಾಗಿ ಮತ ಚಲಾಯಿಸಬೇಕಾಗಿದೆ. ಈ ಅಧಿಕೃತ ಸೂಚನೆಯನ್ನು ‘ಸಚೇತಕಾಜ್ಞೆ’ ಎಂಬುದಾಗಿ ಸಂಸದೀಯ ಭಾಷೆಯಲ್ಲಿ ಕರೆಯಲಾಗುತ್ತದೆ.

ಈ ಪಕ್ಷ ಬದ್ಧತೆಯನ್ನು ತೆಗೆದುಹಾಕಲು ಪಕ್ಷಾಂತರ ನಿಷೇಧ ಕಾನೂನಿಗೆ ತಿದ್ದುಪಡಿ ತರಬೇಕೆಂದು ತಿವಾರಿ ಮಂಡಿಸಿರುವ ಮಸೂದೆ ಬಯಸುತ್ತದೆ.

‘‘ಮಸೂದೆಯು, ಸಚೇತಕಾಜ್ಞೆ ಆಧಾರಿತ ನಿರಂಕುಶತೆಯಿಂದ ಸಂಸದರನ್ನು ಮುಕ್ತಗೊಳಿಸಲು ಮತ್ತು ಉತ್ತಮ ಕಾನೂನು ನಿರ್ಮಾಣವನ್ನು ಉತ್ತೇಜಿಸಲು ನಾನು ಮಾಡುತ್ತಿರುವ ಪ್ರಯತ್ನವಾಗಿದೆ. ಅದೇ ವೇಳೆ, ವಿಶ್ವಾಸ ಮತಗಳು, ನಿಲುವಳಿ ಸೂಚನೆಗಳು, ಹಣಕಾಸು ಮಸೂದೆಗಳು ಮತ್ತು ಸರಕಾರದ ಸ್ಥಿರತೆಯ ಮೇಲೆ ಪರಿಣಾಮ ಬೀರುವ ಇತರ ವಿಷಯಗಳು ಈ ಮಸೂದೆಯ ವ್ಯಾಪ್ತಿಯಿಂದ ಹೊರಗಿರುತ್ತವೆ’’ ಎಂದು ಅವರು ಹೇಳಿದರು.

ಈ ಕುರಿತಂತೆ ಮನೀಶ್ ತಿವಾರಿ ಸದನಕ್ಕೆ ಸಲ್ಲಿಸಿರುವ ತಮ್ಮ ಮಸೂದೆಯನ್ನು 2010 ಮತ್ತು 2021ರಲ್ಲಿ ಎರಡು ಬಾರಿ ಸದನದ ಮುಂದಿಟ್ಟಿದ್ದರು. ಇದೀಗ ಮೂರನೇ ಬಾರಿ ಸದನದಲ್ಲಿ ಇಡುತ್ತಿದ್ದಾರೆ.

“ಅನೇಕ ಬಾರಿ ಕಾನೂನುಗಳನ್ನು ಚರ್ಚೆಗಳಿಲ್ಲದೆಯೇ ಅಂಗೀಕರಿಸಲಾಗುತ್ತಿದೆ. ಸಂಸದರು ಕಾನೂನು ನಿರ್ಮಾಣದಲ್ಲಿ ಪಾತ್ರ ವಹಿಸದೆ ಇರುವುದು ಇದಕ್ಕೆ ಮುಖ್ಯ ಕಾರಣ. ಹೀಗಾಗಿ ಯಾವುದೋ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿ ಕಾನೂನು ತಯಾರಿಸಿ ಅದನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಗುತ್ತಿದೆ. ಅಲ್ಲಿ ಸಚಿವರು ಸಿದ್ಧ ಹೇಳಿಕೆಯನ್ನು ಓದುತ್ತಾರೆ ಮತ್ತು ಅಧಿಕೃತ ಮಾನದಂಡಗಳಿಗೆ ಅನುಸಾರವಾಗಿ ಚರ್ಚೆ ನಡೆಸಲಾಗುತ್ತದೆ. ನಂತರ ವಿಪ್ ಹೆಸರಿನಲ್ಲಿ ಸರ್ಕಾರದ ಪರವಾಗಿರುವ ಸಂಸದರು ಪರವಾಗಿ ಮತ್ತು ವಿಪಕ್ಷಗಳು ವಿರುದ್ಧವಾಗಿ ಮತ ಹಾಕುತ್ತವೆ” ಎಂದು ಅವರು ವ್ಯವಸ್ಥೆಯನ್ನು ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News