“ನಾನು ಜೀವಂತವಾಗಿರುವವರೆಗೂ ನನ್ನ ಪುತ್ರನಿಗಾಗಿ ಹೋರಾಡುತ್ತೇನೆ”: ನಜೀಬ್ ತಾಯಿಯ ಶಪಥ
ನಾಪತ್ತೆಯಾಗಿರುವ ನಜೀಬ್ ಪ್ರಕರಣವನ್ನು ಮುಕ್ತಾಯಗೊಳಿಸಿದ ನ್ಯಾಯಾಲಯ
PC : thehindu.com \ SHIV KUMAR PUSHPAKAR
ಹೊಸದಿಲ್ಲಿ: ಜೆ ಎನ್ ಯು ವಿದ್ಯಾರ್ಥಿ ನಜೀಬ್ ಅಹ್ಮದ್ ಕಾಣೆಯಾದ ಎಂಟು ವರ್ಷಗಳ ನಂತರ ಸಿಬಿಐ ಜೂನ್ ತಿಂಗಳಲ್ಲಿ ಸಲ್ಲಿಸಿದ್ದ ಮುಕ್ತಾಯ ವರದಿಯನ್ನು ದಿಲ್ಲಿ ನ್ಯಾಯಾಲಯ ಅಂಗೀಕರಿಸಿದೆ. ಇದರ ಬೆನ್ನಿಗೇ, “ನಾನು ಜೀವಂತವಾಗಿರುವವರೆಗೂ ನನ್ನ ಪುತ್ರನಿಗಾಗಿ ಹೋರಾಡುತ್ತೇನೆ” ಎಂದು ನಾಪತ್ತೆಯಾಗಿರುವ ನಜೀಬ್ ಅಹ್ಮದ್ ತಾಯಿ ಫಾತಿಮಾ ನಫೀಸ್ ಶಪಥ ಮಾಡಿದ್ದಾರೆ.
ಬುಧವಾರ ಹೊಸ ದಿಲ್ಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ ನಲ್ಲಿ ಜವಾಹರಲಾಲ್ ನೆಹರೂ ಸ್ಟೂಡೆಂಟ್ಸ್ ಯೂನಿಯನ್ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಫಾತಿಮಾ, “ನಾನು ಜೀವಂತವಾಗಿರುವವರೆಗೂ ನನ್ನ ಪುತ್ರನಿಗೆ ಏನಾಯಿತು ಎಂದು ಪ್ರಶ್ನಿಸುತ್ತಲೇ ಇರುತ್ತೇನೆ. ನಜೀಬ್ ಸ್ಥಿತಿ ಮತ್ತೊಬ್ಬರಿಗೆ ಆಗುವುದು ನನಗೆ ಬೇಕಿಲ್ಲ. ವಿದ್ಯಾರ್ಥಿಗಳ ಬೆಂಬಲದೊಂದಿಗೆ ನಾನು ನನ್ನ ಪುತ್ರನನ್ನು ಮರೆಯುವುದಿಲ್ಲ ಅಥವಾ ಯಾರೂ ಆತನನ್ನು ಮರೆಯಲು ಬಿಡುವುದಿಲ್ಲ” ಎಂದು ಘೋಷಿಸಿದ್ದಾರೆ.
ವಿದ್ಯಾರ್ಥಿಗಳ ಒಗ್ಗಟ್ಟಿನ ಹೋರಾಟವನ್ನು ಸ್ಮರಿಸಿದ ಫಾತಿಮಾ, ಮುಕ್ತಾಯ ವರದಿಯನ್ನು ನಾನು ಹೈಕೋರ್ಟ್ ನಲ್ಲಿ ಪ್ರಶ್ನಿಸಲಿದ್ದೇನೆ ಎಂದು ಹೇಳಿದ್ದಾರೆ. “ನನಗೆ ಶಕ್ತಿ ಇರುವವರೆಗೂ ನನ್ನ ನಜೀಬ್ ಗಾಗಿ ಹೋರಾಡುವುದನ್ನು ಮುಂದುವರಿಸಲಿದ್ದೇನೆ. ನಾನು ಹಾಸಿಗೆ ಹಿಡಿದಿದ್ದರೂ, ನನ್ನ ಮಕ್ಕಳು ಸೈನಿಕರಂತೆ ಈ ಹೋರಾಟವನ್ನು ಮುಂದಕ್ಕೊಯ್ಯಲೇಬೇಕು” ಎಂದು ಅವರು ಮನವಿ ಮಾಡಿದರು.
ಅಕ್ಟೋಬರ್ 2016ರಂದು ಎಬಿವಿಪಿ ಸದಸ್ಯರು ಜೆ ಎನ್ ಯು ವಿದ್ಯಾರ್ಥಿ ನಿಲಯದ ಮೇಲೆ ದಾಳಿ ನಡೆಸಿದಾಗ, ಪ್ರಥಮ ವರ್ಷದ ಎಂಎಸ್ಸಿ ಬಯೋಟೆಕ್ನಾಲಜಿ ವಿದ್ಯಾರ್ಥಿಯಾದ ನಜೀಬ್ ಅಹ್ಮದ್ ವಿದ್ಯಾರ್ಥಿ ನಿಲಯದ ಹೊರಗಿನಿಂದ ಕಣ್ಮರೆಯಾಗಿದ್ದರು. ಈ ಸಂಬಂಧ ದಿಲ್ಲಿ ಪೊಲೀಸರು, ವಿಶೇಷ ತನಿಖಾ ತಂಡ, ಅಪರಾಧ ವಿಭಾಗ ಹಾಗೂ ಸಿಬಿಐ ನಡೆಸಿದ್ದ ಹಲವು ತನಿಖೆಗಳು ಆತನನ್ನು ಪತ್ತೆ ಹಚ್ಚುವಲ್ಲಿ ವಿಫಲಗೊಂಡಿದ್ದವು.