Uttar Pradesh | ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಂದು, ಮೃತದೇಹವನ್ನು ತುಂಡರಿಸಿ ಚರಂಡಿಗೆಸೆದ ಮಹಿಳೆ!
ಸಾಂದರ್ಭಿಕ ಚಿತ್ರ
ಸಂಭಲ್ (ಉ.ಪ್ರದೇಶ),ಡಿ.23: ಮಹಿಳೆಯೋರ್ವಳು ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಪತಿಯನ್ನು ಕೊಂದು ಬಳಿಕ ವುಡ್ ಗ್ರೈಂಡರ್ ನಿಂದ ಮೃತದೇಹವನ್ನು ಕತ್ತರಿಸಿ ಚರಂಡಿಯಲ್ಲೆಸೆದ ಘಟನೆ ಸಂಭಲ್ ಜಿಲ್ಲೆಯ ಚಂದೌಸಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.
ರೂಬಿ ಮತ್ತು ಗೌರವ್ ಆರೋಪಿಗಳಾಗಿದ್ದು,ಡಿ.20ರಂದು ಅವರನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಕೆ.ಕೆ.ಬಿಷ್ಣೋಯಿ ತಿಳಿಸಿದರು.
ಪೋಲಿಸರ ಪ್ರಕಾರ ಚಂದೌಸಿಯ ಮೊಹಲ್ಲಾ ಚುನ್ನಿ ನಿವಾಸಿ ರೂಬಿ ತನ್ನ ಪತಿ ರಾಹುಲ್ (38) ನಾಪತ್ತೆಯಾಗಿದ್ದಾನೆ ಎಂದು ನ.18ರಂದು ಪೋಲಿಸ್ ದೂರು ಸಲ್ಲಿಸಿದ್ದಳು. ಡಿ.15ರಂದು ಪೋಲಿಸರು ಈದ್ಗಾ ಪ್ರದೇಶದ ಚರಂಡಿಯಲ್ಲಿ ಛಿದ್ರವಿಚ್ಛಿದ್ರಗೊಂಡಿದ್ದ ಶವವೊಂದನ್ನು ಪತ್ತೆ ಹಚ್ಚಿದ್ದರು. ಮೃತದೇಹದ ತಲೆ ಮತ್ತು ಕೈಕಾಲುಗಳು ಇರಲಿಲ್ಲ.
ಮರಣೋತ್ತರ ಪರೀಕ್ಷೆಯ ಬಳಿಕ ವಿಧಿವಿಜ್ಞಾನ ತಂಡವು ವಿವರವಾದ ಪರೀಕ್ಷೆಯನ್ನು ನಡೆಸಿದ್ದು, ಡಿಎನ್‌ಎ ಸ್ಯಾಂಪಲ್ ಗಳನ್ನು ಸಂಗ್ರಹಿಸಲಾಗಿತ್ತು. ತನಿಖೆ ಸಂದರ್ಭದಲ್ಲಿ ಮೃತದೇಹದಲ್ಲಿ ‘ರಾಹುಲ್’ ಎಂಬ ಬರಹ ಪತ್ತೆಯಾಗಿತ್ತು. ಸಮೀಪದ ಪೋಲಿಸ್ ಠಾಣೆಗಳಲ್ಲಿ ದಾಖಲಾಗಿದ್ದ ನಾಪತ್ತೆ ದೂರುಗಳ ಪರಿಶೀಲನೆ ಮತ್ತು ತಾಂತ್ರಿಕ ವಿಶ್ಲೇಷಣೆಯಿಂದ ರಾಹುಲ್ ಮೊಬೈಲ್ ಫೋನ್ ನ.18ರಿಂದ ಸ್ವಿಚ್ ಆಫ್ ಆಗಿದ್ದು ಬೆಳಕಿಗೆ ಬಂದಿತ್ತು ಎಂದು ಬಿಷ್ಣೋಯಿ ತಿಳಿಸಿದರು.
ಹೆಚ್ಚಿನ ತನಿಖೆಯ ವೇಳೆ ಪೋಲಿಸರು ಅಪರಾಧದಲ್ಲಿ ರೂಬಿ ಭಾಗಿಯಾಗಿರುವ ಬಗ್ಗೆ ಶಂಕಿಸಿದ್ದರು. ವಿಚಾರಣೆ ವೇಳೆ ತಾನು ಮತ್ತು ಗೌರವ ಅನೈತಿಕ ಸಂಬಂಧವನ್ನು ಹೊಂದಿದ್ದು ರಾಹುಲ್ ಗೆ ಗೊತ್ತಾದಾಗ ತಾವಿಬ್ಬರು ಸೇರಿ ಆತನನ್ನು ಕೊಲೆ ಮಾಡಿದ್ದನ್ನು ರೂಬಿ ಒಪ್ಪಿಕೊಂಡಿದ್ದಳು. ಕಬ್ಬಿಣದ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ ಬಳಿಕ ವುಡ್ ಗ್ರೈಂಡರ್ ತಂದು ಮೃತದೇಹವನ್ನು ತುಂಡುಗಳಾಗಿ ಕತ್ತರಿಸಿದ್ದರು ಎಂದರು.
ಮೃತದೇಹದ ಒಂದು ಭಾಗವನ್ನು ಚರಂಡಿಗೆ ಮತ್ತು ಇತರ ಭಾಗಗಳನ್ನು ರಾಜಘಾಟ್‌ಗೆ ಒಯ್ದು ಗಂಗಾನದಿಯಲ್ಲಿ ಎಸೆದಿದ್ದರು ಎಂದು ಅವರು ತಿಳಿಸಿದರು.
ಗ್ರೈಂಡರ್, ಕೊಲೆಗೆ ಬಳಸಿದ್ದ ಕಬ್ಬಿಣದ ಸುತ್ತಿಗೆ ಇತ್ಯಾದಿಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ.
ಮೃತ ವ್ಯಕ್ತಿಯ ಡಿಎನ್‌ಎ ಸ್ಯಾಂಪಲ್ ಗಳನ್ನು ಸಂರಕ್ಷಿಸಲಾಗಿದ್ದು, ಗುರುತನ್ನು ನಿಖರವಾಗಿ ನಿರ್ಧರಿಸಲು ಅವುಗಳನ್ನು ಆತನ ಮಕ್ಕಳ ಡಿಎನ್‌ಎ ಸ್ಯಾಂಪಲ್‌ಗಳೊಂದಿಗೆ ತಾಳೆ ಹಾಕಲಾಗುವುದು ಎಂದು ಬಿಷ್ಣೋಯಿ ತಿಳಿಸಿದರು.