Telangana | ದಲಿತ ಯುವಕನ ಕಸ್ಟಡಿ ಸಾವು ಆರೋಪ; ವರದಿ ಕೇಳಿದ ತೆಲಂಗಾಣ ಮಾನವ ಹಕ್ಕುಗಳ ಆಯೋಗ
ಸಾಂದರ್ಭಿಕ ಚಿತ್ರ
ಹೈದರಾಬಾದ್, ಡಿ. 23: ಚಿಲ್ಕೂರು ಪೊಲೀಸರಿಂದ ಬಂಧತನಾದ ಸೂರ್ಯಪೇಟ್ ನ ದಲಿತ ಯುವಕ ಕಾರ್ಲ ರಾಜೇಶ್‌ನ ಕಸ್ಟಡಿ ಸಾವಿನ ಆರೋಪದ ಕುರಿತು ವಿಸ್ತೃತ ವರದಿ ಸಲ್ಲಿಸುವಂತೆ ತೆಲಂಗಾಣ ಮಾನವ ಹಕ್ಕುಗಳ ಆಯೋಗ (ಟಿಜಿಎಚ್‌ಆರ್‌ಸಿ) ರಾಜ್ಯ ಗೃಹ ಇಲಾಖೆಗೆ ಸೋಮವಾರ ನಿರ್ದೇಶಿಸಿದೆ.
ರಾಜೇಶ್‌ನ ತಾಯಿ ಕಾರ್ಲ ಲಲಿತಾ ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿ (ಎಂಆರ್‌ಪಿಎಸ್) ಅಧ್ಯಕ್ಷ ಮಂಡ ಕೃಷ್ಣ ಮಾದಿಗ ಡಿಸೆಂಬರ್ 22ರಂದು ದೂರು ಸಲ್ಲಿಸಿದ್ದರು. ಚಿಲ್ಕೂರು ಪೊಲೀಸರು ನವೆಂಬರ್ 4ರಿಂದ 9ರ ವರೆಗೆ 6 ದಿನಗಳ ಕಾಲ ರಾಜೇಶ್ ನನ್ನು ಕಾನೂನು ಬಾಹಿರವಾಗಿ ಕಸ್ಟಡಿಯಲ್ಲಿ ಇರಿಸಿಕೊಂಡಿದ್ದಾರೆ. ಆತನಿಗೆ ಚಿತ್ರ ಹಿಂಸೆ ನೀಡಿದ್ದಾರೆ ಹಾಗೂ ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸಿದ್ದಾರೆ ಎಂದು ಲಲಿತಾ ದೂರಿನಲ್ಲಿ ಆರೋಪಿಸಿದ್ದಾರೆ.
ಹಲವು ಬಾರಿ ಮನವಿ ಮಾಡಿದ ಹೊರತಾಗಿಯೂ ತನಗೆ ಪುತ್ರನನ್ನು ನೋಡಲು ಅವಕಾಶ ನೀಡಿಲ್ಲ. ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವ ಮುನ್ನ ಆತನಿಗೆ ಹೈಕೋರ್ಟ್ ಇಂಜೆಕ್ಷನ್ ನೀಡಲಾಗಿದೆ. ಮ್ಯಾಜಿಸ್ಟ್ರೇಟ್ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು ಎಂದು ದೂರಿನಲ್ಲಿ ಹೇಳಲಾಗಿದೆ.
ರಾಜೇಶ್‌ಗೆ ಆರೋಗ್ಯ ಸರಿ ಇಲ್ಲ ಎಂದು ನವೆಂಬರ್ 10ರಂದು ತಾನು ಹುಝುರ್ ನಗರ್ ಸಬ್ ಜೈಲಿನ ಕರೆ ಸ್ವೀಕರಿಸಿದ್ದೆ. ತಾನು ಜೈಲಿಗೆ ಭೇಟಿ ನೀಡಿದಾಗ ಆತನ ಸ್ಥಿತಿ ಚಿಂತಾಜನಕವಾಗಿತ್ತು. ಆತನನ್ನು ನವೆಂಬರ್ 14ರಂದು ಸೂರ್ಯಪೇಟ್ ಆಸ್ಪತ್ರೆಗೆ, ಅನಂತರ ಸಿಕಂದರಾಬಾದ್‌ನ ಗಾಂಧಿ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಅಲ್ಲಿ ಆತ ನವೆಂಬರ್ 16ರಂದು ಸಾವನ್ನಪ್ಪಿದ್ದಾನೆ ಎಂದು ಲಲಿತಾ ದೂರಿನಲ್ಲಿ ಆರೋಪಿಸಿದ್ದಾರೆ.
ರಾಜೇಶ್‌ನ ಅಕ್ರಮ ಬಂಧನ, ಕಸ್ಟಡಿಯಲ್ಲಿ ಚಿತ್ರಹಿಂಸೆ, ಕಸ್ಟಡಿಯಲ್ಲಿ ಸಾವಿನ ಕುರಿತ ತಾಯಿಯ ಆರೋಪವನ್ನು ತೆಲಂಗಾಣ ಮಾನವ ಹಕ್ಕುಗಳ ಆಯೋಗ ಗಂಭೀರವಾಗಿ ಪರಿಗಣಿಸಿದೆ ಹಾಗೂ ಈ ಸಂಬಂಧ ರಾಜ್ಯ ಗೃಹ ಇಲಾಖೆಗೆ ವರದಿ ನೀಡುವಂತೆ ಆದೇಶಿಸಿದೆ.