×
Ad

Rajasthan | ಸೊಸೆಯಂದಿರು, ಯುವತಿಯರು ಕ್ಯಾಮೆರಾ ಇರುವ ಮೊಬೈಲ್ ಫೋನ್ ಬಳಸುವಂತಿಲ್ಲ; ನಿಷೇಧ ಹೇರಿದ ಗ್ರಾ.ಪಂ.!

Update: 2025-12-23 20:30 IST

ಸಾಂದರ್ಭಿಕ ಚಿತ್ರ | Photo Credit : freepik

ಜೋಧಪುರ,ಡಿ.23: ರಾಜಸ್ಥಾನದ ಜಾಲೋರ್ ಜಿಲ್ಲೆಯ ಗ್ರಾಮ ಪಂಚಾಯತ್‌ ವೊಂದು 15 ಗ್ರಾಮಗಳ ಸೊಸೆಯಂದಿರು ಮತ್ತು ಯುವತಿಯರು ಕ್ಯಾಮೆರಾ ಹೊಂದಿರುವ ಮೊಬೈಲ್ ಫೋನ್‌ ಗಳನ್ನು ಬಳಸುವುದನ್ನು ನಿಷೇಧಿಸಿದ್ದು, ಇದು ಜನವರಿ 26ರಿಂದ ಜಾರಿಗೆ ಬರಲಿದೆ.

ಜೊತೆಗೆ ಸಾರ್ವಜನಿಕ ಸಮಾರಂಭಗಳು ಮತ್ತು ನೆರೆಕರೆಯವರ ಮನೆಗಳಿಗೆ ಫೋನ್ ಒಯ್ಯುವುದನ್ನೂ ನಿಷೇಧಿಸಲಾಗುವುದು. ಸ್ಮಾರ್ಟ್‌ಫೋನ್‌ಗಳ ಬದಲು ಕೀಪ್ಯಾಡ್ ಫೋನ್‌ಗಳನ್ನು ಮಾತ್ರ ಬಳಸಲು ಅವರಿಗೆ ಅವಕಾಶ ನೀಡಲಾಗುವುದು.

ಜಾಲೋರ್ ಜಿಲ್ಲೆಯ ಗಾಝಿಪುರ ಗ್ರಾಮದಲ್ಲಿ ರವಿವಾರ 14 ಪತ್ತಿಗಳ (ಉಪವಿಭಾಗಗಳು) ಅಧ್ಯಕ್ಷ ಸುಜ್ಞಾರಾಮ ಚೌಧರಿಯವರ ನೇತೃತ್ವದಲ್ಲಿ ನಡೆದ ಚೌಧರಿ ಸಮುದಾಯದ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ.

ಗ್ರಾಮ ಪಂಚಾಯತ್ ಮತ್ತು ಸಮುದಾಯದ ಸದಸ್ಯರು ಚರ್ಚೆ ನಡೆಸಿದ ಬಳಿಕ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಸೊಸೆಯಂದಿರು ಮತ್ತು ಯುವತಿಯರು ಕೀಪ್ಯಾಡ್ ಫೋನ್‌ ಗಳನ್ನು ಮಾತ್ರ ಬಳಸಬೇಕು, ತಮ್ಮ ವ್ಯಾಸಂಗಕ್ಕಾಗಿ ಮೊಬೈಲ್ ಫೋನ್‌ಗಳ ಅಗತ್ಯವಿರುವ ವಿದ್ಯಾರ್ಥಿನಿಯರು ಮನೆಗಳಲ್ಲಿ ಮಾತ್ರ ಬಳಸಬಹುದು. ಮದುವೆಗಳು, ಸಾಮಾಜಿಕ ಕಾರ್ಯಕ್ರಮಗಳು ಮತ್ತು ನೆರೆಕರೆಯವರ ಮನೆಗೂ ಸಹ ಫೋನ್ ಒಯ್ಯಲು ಅವಕಾಶವಿಲ್ಲ ಎಂದು ಚೌಧರಿ ಸುದ್ದಿಸಂಸ್ಥೆಗೆ ತಿಳಿಸಿದರು.

ಪಂಚಾಯತ್ ನಿರ್ಣಯಕ್ಕೆ ವ್ಯಕ್ತವಾಗಿರುವ ವಿರೋಧಕ್ಕೆ ಪ್ರತಿಕ್ರಿಯಿಸಿದ ಚೌಧರಿ, ಮಕ್ಕಳು ಹೆಚ್ಚಾಗಿ ತಮ್ಮ ಮನೆಗಳಲ್ಲಿಯ ಮಹಿಳೆಯರ ಮೊಬೈಲ್ ಫೋನ್‌ ಗಳನ್ನು ಬಳಸುತ್ತಾರೆ ಮತ್ತು ಇದು ಅವರ ಕಣ್ಣುಗಳಿಗೆ ಹಾನಿಯನ್ನುಂಟು ಮಾಡಬಹುದು ಎಂಬ ಕಾರಣದಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು. ಕೆಲವು ಮಹಿಳೆಯರು ತಮ್ಮ ದಿನನಿತ್ಯದ ಕೆಲಸಗಳಿಗೆ ಮಕ್ಕಳಿಂದ ಅಡ್ಡಿಯಾಗದಂತೆ ನೋಡಿಕೊಳ್ಳಲು ಮೊಬೈಲ್ ಫೋನ್‌ ಗಳನ್ನು ಅವರ ಕೈಗೆ ನೀಡುತ್ತಾರೆ ಎಂದು ಅವರು ಬೆಟ್ಟು ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News