ಅರಾವಳಿ ವಿವಾದ | ಮೋದಿ ಸರಕಾರಕ್ಕೆ ಕಾಂಗ್ರೆಸ್ ತರಾಟೆ
ಜೈರಾಮ್ ರಮೇಶ್ |Photo Credit : PTI
ಹೊಸದಿಲ್ಲಿ, ಡಿ. 23: ಅರಾವಳಿ ಪರ್ವತ ಶ್ರೇಣಿಯ ಪರಿಸರದ ಸಮಗ್ರತೆಯನ್ನು ಮೋದಿ ಸರಕಾರ ದುರ್ಬಲಗೊಳಿಸುತ್ತಿದೆ ಎಂದು ಕಾಂಗ್ರೆಸ್ ಮಂಗಳವಾರ ಆರೋಪಿಸಿದೆ.
ಪ್ರಾಚೀನ ಅರಾವಳಿ ಬೆಟ್ಟಗಳ ಅಧಿಕೃತ ಸ್ಥಾನಮಾನವನ್ನು ಮರು ವ್ಯಾಖ್ಯಾನಿಸಲು ಸರಕಾರ ದೃಢ ನಿಶ್ಚಯ ತಳೆದಿರುವುದು ಏಕೆ ? ಇದರಿಂದ ಯಾರಿಗೆ ಲಾಭವಾಗುತ್ತದೆ ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
‘ಎಕ್ಸ್’ನ ಪೋಸ್ಟ್ ನಲ್ಲಿ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಅರಾವಳಿ ಭಾರತದ ನೈಸರ್ಗಿಕ ಪರಂಪರೆಯ ಭಾಗ. ಅದರ ಪುನರುಜ್ಜೀವನ ಹಾಗೂ ರಕ್ಷಣೆಯ ಅಗತ್ಯತೆ ಇದೆ. ತಾಂತ್ರಿಕ ಮರು ವ್ಯಾಖ್ಯಾನದ ಮೂಲಕ ದುರ್ಬಲಗೊಳಿಸಬಾರದು ಎಂದಿದ್ದಾರೆ.
‘‘ಅರಾವಳಿ ಪರ್ವತ ಶ್ರೇಣಿಗಳಿಗೆ ಶ್ರೇಷ್ಠ ಮೌಲ್ಯವಿದೆ. ಮೋದಿ ಸರಕಾರ ಅವುಗಳನ್ನು ಬದಲಾಯಿಸಲು ಯಾಕೆ ನಿರ್ಧರಿಸಿದೆ? ಯಾವ ಉದ್ದೇಶಕ್ಕಾಗಿ ಮತ್ತು ಯಾರ ಪ್ರಯೋಜನಕ್ಕಾಗಿ?’’ ಎಂದು ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಕೇಂದ್ರ ಪರಿಸರ ಸಚಿವ ಭೂಪೇಂದ್ರ್ ಯಾದವ್ ಅವರು ಇತ್ತೀಚೆಗೆ ನೀಡಿದ ಸ್ಪಷ್ಟನೆಯನ್ನು ಉಲ್ಲೇಖಿಸಿದ ಜೈರಾಮ್ ರಮೇಶ್, ಇದು ಹೆಚ್ಚು ಅನುಮಾನಕ್ಕೆ ಕಾರಣವಾಗಿದೆ ಎಂದಿದ್ದಾರೆ. 1.44 ಲಕ್ಷದ ಚದರ ಕಿ.ಮೀ. ಅರಾವಳಿ ಪ್ರದೇಶದಲ್ಲಿ ಕೇವಲ ಶೇ. 0.19 ಪ್ರದೇಶದಲ್ಲಿ ಮಾತ್ರ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಈ ಅಂಕಿ-ಅಂಶ ದಾರಿ ತಪ್ಪಿಸುವಂತಿದೆ ಎಂದು ಅವರು ತಿಳಿಸಿದ್ದಾರೆ.
ಪರಸ್ಪರ ಸಂಬಂಧ ಹೊಂದಿರುವ ಪರಿಸರ ವ್ಯವಸ್ಥೆಯಾಗಿರುವ ಅರಾವಳಿ ಪರ್ವತ ಶ್ರೇಣಿಯನ್ನು ಮರು ವ್ಯಾಖ್ಯಾನಿಸುವ ಮತ್ತು ಛಿದ್ರಗೊಳಿಸುವ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು. ಇದು ಅದರ ಪರಿಸರ ಮೌಲ್ಯಕ್ಕೆ ಹಾನಿ ಉಂಟು ಮಾಡುತ್ತದೆ ಎಂದು ಅವರು ಹೇಳಿದರು.