×
Ad

ಮಹಿಳೆಯರು ಭಾರತದ ‘ಅತಿದೊಡ್ಡ ಅಲ್ಪಸಂಖ್ಯಾತರು’, ಮೀಸಲಾತಿಯಿಲ್ಲದೆ ಅವರಿಗೇಕೆ ಪ್ರಾತಿನಿಧ್ಯ ನೀಡುತ್ತಿಲ್ಲ?: ಸುಪ್ರೀಂ ಕೋರ್ಟ್ ಪ್ರಶ್ನೆ

Update: 2025-11-10 15:59 IST

Photo credit: PTI

ಹೊಸದಿಲ್ಲಿ: ಮಹಿಳೆಯರನ್ನು ಭಾರತದ ‘ಅತ್ಯಂತ ದೊಡ್ಡ ಅಲ್ಪಸಂಖ್ಯಾತ ವರ್ಗ’ ಎಂದು ಸೋಮವಾರ ಬಣ್ಣಿಸಿರುವ ಸರ್ವೋಚ್ಚ ನ್ಯಾಯಾಲಯವು, ಸಂಸತ್ತಿನಲ್ಲಿ ಅವರ ಉಪಸ್ಥಿತಿಯು ಸ್ಥಿರವಾಗಿ ಕಡಿಮೆಯಾಗುತ್ತಿದೆ ಎಂದು ಬೆಟ್ಟು ಮಾಡಿದೆ.

ಮೀಸಲಾತಿ ಇಲ್ಲದಿದ್ದರೂ ಮಹಿಳೆಯರಿಗೆ ಪ್ರಾತಿನಿಧ್ಯವನ್ನು ಏಕೆ ನೀಡಬಾರದು ಎಂದು ದ್ವಿಸದಸ್ಯ ಪೀಠದ ನೇತೃತ್ವ ವಹಿಸಿದ್ದ ಸರ್ವೋಚ್ಚ ನ್ಯಾಯಾಲಯದ ಏಕೈಕ ಮಹಿಳಾ ನ್ಯಾಯಾಧೀಶರಾದ ನ್ಯಾ.ಬಿ.ವಿ.ನಾಗರತ್ನಾ ಅವರು ಪ್ರಶ್ನಿಸಿದರು.

ನ್ಯಾ.ಆರ್.ಮಹಾದೇವನ್ ಅವರನ್ನೂ ಒಳಗೊಂಡಿದ್ದ ಪೀಠವು,ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ಒದಗಿಸುವ ‘ನಾರಿ ಶಕ್ತಿ ವಂದನ್ ಅಧಿನಿಯಮ’ ಅಥವಾ ಸಂವಿಧಾನ (106ನೇ ತಿದ್ದುಪಡಿ) ಕಾಯ್ದೆಯ ನಿಬಂಧನೆಗಳನ್ನು ಪ್ರಶ್ನಿಸಿ ಡಾ.ಜಯಾ ಠಾಕೂರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 2023ರಲ್ಲಿ ಕಾನೂನಿಗೆ ಅಂಕಿತ ಹಾಕಿದ್ದರೂ ಅದಿನ್ನೂ ಜಾರಿಗೊಂಡಿಲ್ಲ ಎಂದು ಹಿರಿಯ ವಕೀಲರಾದ ಶೋಭಾ ಗುಪ್ತಾ ಮತ್ತು ವರುಣ ಠಾಕೂರ್ ಅವರು ನ್ಯಾಯಾಲಯಕ್ಕೆ ತಿಳಿಸಿದರು.

‘ವಂದನ್’ ಅನ್ನು ಏಕೆ ವಿಳಂಬಿಸಬೇಕು ಎಂದು ಗುಪ್ತಾ ಪ್ರಶ್ನಿಸಿದರು.

ಇದು (ಸಾಂವಿಧಾನಿಕ ತಿದ್ದುಪಡಿ) ಮಹಿಳೆಯರಿಗೆ ರಾಜಕೀಯ ನ್ಯಾಯ ಒದಗಿಸುವ ಒಂದು ಸಂದರ್ಭವಾಗಿದೆ. ರಾಜಕೀಯ ನ್ಯಾಯವು ಸಾಮಾಜಿಕ ಮತ್ತು ಆರ್ಥಿಕ ನ್ಯಾಯಕ್ಕೆ ಸಮನಾಗಿದೆ. ಮಹಿಳೆಯರು ದೇಶದ ಅತ್ಯಂತ ದೊಡ್ಡ ಅಲ್ಪಸಂಖ್ಯಾತ ವರ್ಗವಾಗಿದ್ದಾರೆ. ಅವರು ಒಟ್ಟು ಜನಸಂಖ್ಯೆಯಲ್ಲಿ ಶೇ.48.44ರಷ್ಟಿದ್ದಾರೆ ಎಂದು ಹೇಳಿದ ನ್ಯಾ.ನಾಗರತ್ನಾ, ಮಹಿಳಾ ಸಬಲೀಕರಣಕ್ಕಾಗಿ ದೃಢವಾದ ಕ್ರಮಗಳನ್ನು ಕೈಗೊಳ್ಳಲು ಮತ್ತು ವಿಶೇಷ ನಿಬಂಧನೆಗಳನ್ನು ರೂಪಿಸಲು ಸರಕಾರಕ್ಕೆ ಆದೇಶಿಸುವ ಸಂವಿಧಾನದ 15 (3)ನೇ ವಿಧಿಯನ್ನೂ ಬೆಟ್ಟು ಮಾಡಿದರು.

ಇದೇ ವೇಳೆ ನ್ಯಾಯಾಲಯವು ಗೃಹ ಮತ್ತು ಕಾನೂನು ಸಚಿವಾಲಯಗಳ ಮೂಲಕ ಕೇಂದ್ರಕ್ಕೆ ನೋಟಿಸನ್ನು ಹೊರಡಿಸಿತು.

2023ರ ಕಾನೂನಿನ ನಿಬಂಧನೆಗಳು ಮಹಿಳೆಯರಿಗೆ ಮೀಸಲಿಡಬೇಕಾದ ಸ್ಥಾನಗಳನ್ನು ನಿರ್ಧರಿಸಲು ಮುಂದಿನ ಜನಗಣತಿ ಮತ್ತು ನಂತರದ ಕ್ಷೇತ್ರ ಪುನರ್ವಿಂಗಡಣೆಯ ಬಳಿಕವಷ್ಟೇ ಜಾರಿಗೊಳ್ಳಲಿವೆ.

ಸಾಂವಿಧಾನಿಕ ತಿದ್ದುಪಡಿಯನ್ನು ಅನಿರ್ದಿಷ್ಟಾವಧಿಗೆ ತಡೆಹಿಡಿಯಲು ಸಾಧ್ಯವಿಲ್ಲ. ಕಳೆದ 75 ವರ್ಷಗಳಿಂದಲೂ ಸಂಸತ್ತಿನಲ್ಲಿ ಮತ್ತು ರಾಜ್ಯ ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ದೊರಕಿಲ್ಲ. ಇದು ದಶಕಗಳಿಂದಲೂ ಬಾಕಿಯಿರುವ ಬೇಡಿಕೆಯಾಗಿದೆ ಎಂದು ಜಯಾ ಠಾಕೂರ್ ತನ್ನ ಅರ್ಜಿಯಲ್ಲಿ ಹೇಳಿದ್ದಾರೆ.

ಮುಂದಿನ ಜನಗಣತಿ ಯಾವಾಗ ನಡೆಯಲಿದೆ? ಅದಕ್ಕಾಗಿ ದಿನಾಂಕವನ್ನು ನಿಗದಿ ಮಾಡಲಾಗಿದೆಯೇ ಎಂದು ನ್ಯಾ.ನಾಗರತ್ನಾ ಪ್ರಶ್ನಿಸಿದರು.

ಕಾಯ್ದೆಯು ಜನಗಣತಿ ಅಥವಾ ಕ್ಷೇತ್ರ ಪುನರ್ವಿಂಗಡಣೆ ಕುರಿತು ಯಾವುದೇ ನಿರ್ದಿಷ್ಟ ಸಮಯವನ್ನು ವಿಧಿಸಿಲ್ಲ ಎಂದು ಹೇಳಿದ ಗುಪ್ತಾ,ಮಹಿಳೆಯರಿಗೆ ಸ್ಥಾನಗಳನ್ನು ಮೀಸಲಿರಿಸಲು ಪೂರ್ವ ಷರತ್ತಾಗಿ ಜನಗಣತಿಯ ಅಗತ್ಯದ ಕುರಿತು ನ್ಯಾಯಾಲಯದ ಮೌಖಿಕ ಅಭಿಪ್ರಾಯವನ್ನು ಪ್ರತಿಧ್ವನಿಸಿದರು.

ಜನಗಣತಿಯು ಜನಸಂಖ್ಯೆಯನ್ನು ನಿರ್ಧರಿಸುತ್ತದೆ ಮತ್ತು ಅದರ ಆಧಾರದ ಮೇಲೆ ವೈಜ್ಞಾನಿಕವಾಗಿ ಮಹಿಳೆಯರಿಗೆ ಸ್ಥಾನಗಳನ್ನು ಮೀಸಲಿರಿಸಲಾಗುತ್ತದೆ ಎಂದು ನ್ಯಾ.ನಾಗರತ್ನಾ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಗುಪ್ತಾ, ಸ್ಥಾನಗಳನ್ನು ಗುರುತಿಸುವ ಈ ಕೆಲಸವನ್ನು ಕಾಯ್ದೆಯ ಜಾರಿಗೆ ಮುನ್ನವೇ ಮಾಡಬೇಕಿತ್ತು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News