×
Ad

ಮಹಿಳೆಯರ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆ : ಭಾರತದ ಹೊಸ ಮುಖ ಕಾಶ್ವೀ ಗೌತಮ್ 2 ಕೋಟಿ ರೂ.ಗೆ ಗುಜರಾತ್ ಜೈಂಟ್ಸ್ ತೆಕ್ಕೆಗೆ

Update: 2023-12-09 22:50 IST

ಕಾಶ್ವೀ ಗೌತಮ್ |Photo: X

ಮುಂಬೈ: ಮಹಿಳೆಯರ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)-2024ಕ್ಕಾಗಿ ಶನಿವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಪಂಜಾಬ್‌ನ ಆಲ್‌ರೌಂಡರ್ ಕಾಶ್ವೀ ಗೌತಮ್ ಗುಜರಾತ್ ಜೈಂಟ್ಸ್‌ಗೆ 2 ಕೋಟಿ ರೂ.ಗೆ ಹರಾಜಾಗಿ ಅಚ್ಚರಿ ಮೂಡಿಸಿದ್ದಾರೆ.

ಇನ್ನೋರ್ವ ಹೊಸ ಮುಖ, ಕರ್ನಾಟಕದ 22ರ ಹರೆಯದ ವೃಂದಾ ದಿನೇಶ್ 1.30 ಕೋಟಿ ರೂ.ಗೆ ಯುಪಿ ವಾರಿಯರ್ಸ್ ಪಾಲಾಗಿ ಗಮನ ಸೆಳೆದರು. ಹರಾಜಿನ ಆರಂಭಿಕ ಹಂತದಲ್ಲಿ ಆಸ್ಟ್ರೇಲಿಯ ಕ್ರಿಕೆಟಿಗರು ಹೆಚ್ಚು ಬಿಡ್ ಪಡೆದರು. ಆಸ್ಟ್ರೇಲಿಯದ ಆಲ್‌ರೌಂಡರ್ ಅನ್ನಾಬೆಲ್ ಸದರ್‌ಲ್ಯಾಂಡ್ ಅತ್ಯಂತ ದುಬಾರಿ ವಿದೇಶಿ ಆಟಗಾರ್ತಿ ಎನಿಸಿಕೊಂಡರು. ಡೆಲ್ಲಿ ಕ್ಯಾಪಿಟಲ್ಸ್ 2 ಕೋಟಿ ರೂ.ಗೆ ಅನ್ನಾಬೆಲ್‌ರನ್ನು ತನ್ನದಾಗಿಸಿಕೊಂಡಿತು.

ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಶಬ್‌ನಿಮ್ ಇಸ್ಮಾಯಿಲ್ ಮುಂಬೈ ಇಂಡಿಯನ್ಸ್ ತಂಡಕ್ಕೆ ತನ್ನ ಮೂಲಬೆಲೆಗಿಂತ ಮೂರು ಪಟ್ಟು ಅಧಿಕ 1.20 ಕೋಟಿ ರೂ.ಗೆ ಹರಾಜಾದರು.

20ರ ಹರೆಯದ ಕಾಶ್ವೀ ಗೌತಮ್ ಮೂಲ ಬೆಲೆ 10 ಲಕ್ಷ ರೂ. ಆಗಿತ್ತು. ಕಾಶ್ವೀಗಾಗಿ ಯುಪಿ ವಾರಿಯರ್ಸ್ ಹಾಗೂ ಗುಜರಾತ್ ಜೈಂಟ್ಸ್ ನಡುವೆ ತೀವ್ರ ಬಿಡ್ಡಿಂಗ್ ವಾರ್ ನಡೆದಿದ್ದು, ಅಂತಿಮವಾಗಿ ಗುಜರಾತ್ ತಂಡವು 2 ಕೋಟಿ ರೂ. ವ್ಯಯಿಸಿ ಭಾರತದ ಹೊಸ ಆಟಗಾರ್ತಿಯನ್ನು ತನ್ನ ಮಡಿಲಿಗೆ ಸೇರಿಸಿಕೊಂಡಿತು.

ವೃಂದಾ ಹಾಗೂ ಕಾಶ್ವೀ ಇತ್ತೀಚೆಗೆ ಇಂಗ್ಲೆಂಡ್ ಎ ವಿರುದ್ಧ 3 ಪಂದ್ಯಗಳ ಸರಣಿಯಲ್ಲಿ ಭಾರತ ಎ ತಂಡವನ್ನು ಪ್ರತಿನಿಧಿಸಿದ್ದರು.

ಕಾಶ್ವಿ ಭಾರತದ ಕ್ರಿಕೆಟ್ ವಲಯದಲ್ಲಿ ಹೊಸ ಹೆಸರೇನಲ್ಲ. ಈಕೆ ದೇಶಿಯ ಕ್ರಿಕೆಟ್‌ನಲ್ಲಿ ತನ್ನ ಉತ್ತಮ ಪ್ರದರ್ಶನದಿಂದ ಗಮನ ಸೆಳೆದಿದ್ದಾರೆ. ಚಂಡೀಗಡದ ಕಾಶ್ವೀ 2020ರ ಫೆಬ್ರವರಿಯಲ್ಲಿ ದೇಶೀಯ ಅಂಡರ್-19 ಏಕದಿನ ಪಂದ್ಯದಲ್ಲಿ ಎಲ್ಲ 10 ವಿಕೆಟ್‌ಗಳನ್ನು ಕಬಳಿಸಿ ಸುದ್ದಿಯಾಗಿದ್ದರು. ಈ ಸಾಧನೆಯ ನಂತರ ಕಾಶ್ವೀ ಅವರನ್ನು ಭಾರತದ ಮಹಿಳಾ ಕ್ರಿಕೆಟ್‌ನ ಭವಿಷ್ಯದ ಸೂಪರ್‌ಸ್ಟಾರ್ ಎಂದು ಬಿಂಬಿಸಲಾಗಿತ್ತು.

ಆಂಧ್ರಪ್ರದೇಶದ ಕೆಎಸ್‌ಆರ್‌ಎಂ ಕಾಲೇಜು ಮೈದಾನದಲಿ ಅರುಣಾಚಲ ಪ್ರದೇಶ ವಿರುದ್ಧ ಪಂದ್ಯದಲ್ಲಿ ಚಂಡೀಗಡ ಪರವಾಗಿ ಗೌತಮ್ ಈ ಸಾಧನೆ ಮಾಡಿದ್ದರು.

ಕಾಶ್ವೀ 14ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಆರಂಭಿಸಿದ್ದು, ಆ ನಂತರ ಹಿಂತಿರುಗಿ ನೋಡಿಲ್ಲ.ಡಬ್ಲ್ಯುಪಿಎಲ್‌ಗಿಂತ ಮೊದಲು ಕೆಲವು ವರ್ಷಗಳ ಕಾಲ ಐಪಿಎಲ್‌ನೊಂದಿಗೆ ಬಿಸಿಸಿಐ ನಡೆಸುತ್ತಿದ್ದ ಮಹಿಳೆಯರ ಟಿ-20 ಚಾಲೆಂಜ್‌ನಲ್ಲಿ ಕಾಶ್ವೀ ಭಾಗವಹಿಸಿದ್ದರು.

ಭಾರತದ ವೇಗದ ಬೌಲರ್ ಭುವನೇಶ್ವರ ಕುಮಾರ್ ತನ್ನ ಆದರ್ಶ ವ್ಯಕ್ತಿಯಾಗಿದ್ದಾರೆ ಎಂದು ವೇಗದ ಬೌಲಿಂಗ್ ಆಲ್‌ರೌಂಡರ್ ಕಾಶ್ವೀ ಗೌತಮ್ ಹೇಳಿದ್ದಾರೆ.

ವಿಂಡೀಸ್‌ನ ಮಾಜಿ ನಾಯಕಿ ಡಿಯಾಂಡ್ರಾ ಡಾಟ್ಟಿನ್, ಆಸ್ಟ್ರೇಲಿಯದ ಆಲ್‌ರೌಂಡರ್ ಕಿಮ್ ಗರ್ತ್ ಗರಿಷ್ಠ ಮೂಲ ಬೆಲೆ(50ಲಕ್ಷ ರೂ.)ಹೊಂದಿದ್ದು, ಇವರನ್ನು ಯಾವ ತಂಡಗಳು ಖರೀದಿಸಲಿಲ್ಲ. ಸ್ಕಾಟ್‌ಲ್ಯಾಂಡ್‌ನ ಕ್ಯಾಥರಿನ್ ಬ್ರೈಸ್ ಹರಾಜಿನಲ್ಲಿ ಗುಜರಾತ್ ಜೈಂಟ್ಸ್‌ನಿಂದ ಖರೀದಿಸಲ್ಪಟ್ಟ ಏಕೈಕ ಅಸೋಸಿಯೇಟ್ ಆಟಗಾರ್ತಿಯಾಗಿದ್ದರು. ಬ್ರೈಸ್ ಮೂಲ ಬೆಲೆ 10 ಲಕ್ಷ ರೂ.ಗೆ ಗುಜರಾತ್ ಪಾಲಾದರು.

ಎಕ್ತಾ ಬಿಶ್ತ್(ಆರ್‌ಸಿಬಿ, 60 ಲಕ್ಷ ರೂ.), ವೇದಾ ಕೃಷ್ಣ ಮೂರ್ತಿ(ಗುಜರಾತ್, 30 ಲಕ್ಷ ರೂ.), ಎಸ್. ಮೇಘನಾ(ಆರ್‌ಸಿಬಿ, 30 ಲಕ್ಷ ರೂ.), ಸಿಮ್ರಾನ್ ಬಹದ್ದೂರ್(ಆರ್‌ಸಿಬಿ, 30 ಲಕ್ಷ ರೂ.), ತರನಮ್ ಪಠಾಣ್(ಗುಜರಾತ್, 10 ಲಕ್ಷ ರೂ.)ವಿವಿಧ ತಂಡಗಳಿಗೆ ಹರಾಜಾದ ಆಟಗಾರ್ತಿಯರಾಗಿದ್ದಾರೆ.

ಹರಾಜು ಕಣದಲ್ಲಿ 104 ಭಾರತೀಯರು ಹಾಗೂ 61 ವಿದೇಶಿಯರು ಸೇರಿದಂತೆ 165 ಆಟಗಾರ್ತಿಯರು ಕಣದಲ್ಲಿದ್ದರು. ಐದು ಫ್ರಾಂಚೈಸಿಗಳಾದ-ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಯುಪಿ ವಾರಿಯರ್ಸ್ ಲಭ್ಯವಿರುವ 30 ಸ್ಥಾನಗಳನ್ನು ಭರ್ತಿ ಮಾಡಲು ಬಿಡ್ ಸಲ್ಲಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News