AI ಬಳಸಿ ಸೋದರಿಯರ ಅಶ್ಲೀಲ ವಿಡಿಯೊ: ಯುವಕ ಆತ್ಮಹತ್ಯೆ
ಫರೀದಾಬಾದ್ (ಹರ್ಯಾಣ), ಅ. 27: ಹರ್ಯಾಣದ ಫರೀದಾಬಾದ್ ನಲ್ಲಿ, ಕೃತಕ ಬುದ್ಧಿಮತ್ತೆ (AI) ಸಾಫ್ಟ್ ವೇರ್ ಮೂಲಕ ಸೃಷ್ಟಿಸಲಾದ ತನ್ನ ಮೂವರು ಸಹೋದರಿಯರ ಅಶ್ಲೀಲ ಚಿತ್ರಗಳು ಮತ್ತು ವೀಡಿಯೊಗಳ ಮೂಲಕ ಬ್ಲ್ಯಾಕ್ ಮೇಲ್ ಗೊಳಗಾದ 19 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಾತಕಿಗಳು ಈ ಚಿತ್ರಗಳು ಮತ್ತು ವೀಡಿಯೊಗಳನ್ನು ಇಟ್ಟುಕೊಂಡು ಲಕ್ಷಾಂತರ ರೂಪಾಯಿ ಕೊಡುವಂತೆ ಯುವಕನನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎನ್ನಲಾಗಿದೆ.
ಎರಡನೇ ವರ್ಷದ ಪದವಿ ವಿದ್ಯಾರ್ಥಿ ರಾಹುಲ್ ಭಾರ್ತಿಯ ಫೋನ್ ಹ್ಯಾಕ್ ಮಾಡಿದ ದುಷ್ಕರ್ಮಿಗಳು, ಅದರಲ್ಲಿದ್ದ ಅವರ ಮತ್ತು ಅವರ ಸಹೋದರಿಯರು ಮತ್ತು ತಂದೆ ಮನೋಜ್ ಭಾರ್ತಿಯ ಚಿತ್ರಗಳನ್ನು ತೆಗೆದಿದ್ದರು. ದುಷ್ಕರ್ಮಿಗಳು ಕೃತಕ ಬುದ್ಧಿಮತ್ತೆ ಸಾಫ್ಟ್ ವೇರ್ ಮೂಲಕ ಆ ಚಿತ್ರಗಳನ್ನು ಬಳಸಿ ಅಶ್ಲೀಲ ಚಿತ್ರಗಳು ಮತ್ತು ವೀಡಿಯೊಗಳನ್ನು ಸೃಷ್ಟಿಸಿದ್ದರು. ಇದರಿಂದಾಗಿ ಎರಡು ವಾರಗಳಿಂದ ಅವರು ಚಿಂತಾಕ್ರಾಂತರಾಗಿದ್ದರು.
‘ಸಾಹಿಲ್’ ಎಂಬುದಾಗಿ ಹೇಳಿಕೊಂಡಿರುವ ವ್ಯಕ್ತಿಯು ಈ ಚಿತ್ರಗಳನ್ನು ರಾಹುಲ್ ಭಾರ್ತಿಗೆ ಕಳುಹಿಸಿ ಲಕ್ಷಾಂತರ ರೂಪಾಯಿ ಹಣ ಕೊಡುವಂತೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದನು. ಹಣ ಕೊಡದಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ಆ ಚಿತ್ರಗಳನ್ನು ಹಾಕುವುದಾಗಿ ಬೆದರಿಕೆ ಹಾಕಿದ್ದನು ಎಂದು ಆರೋಪಿಸಲಾಗಿದೆ.
ಕುಟುಂಬ ಸದಸ್ಯರು ನೀಡಿರುವ ದೂರಿನಂತೆ, ಪೊಲೀಸರು ಓರ್ವ ಮಹಿಳೆ ಸೇರಿದಂತೆ ಇಬ್ಬರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.