ಪಂಜಾಬ್ ನಲ್ಲಿ ಝಿಂಬಾಬ್ವೆಯ ವಿದ್ಯಾರ್ಥಿ ಗುಂಪು ಥಳಿತಕ್ಕೆ ಬಲಿ; 8 ಮಂದಿ ಬಂಧನ
ಸಾಂದರ್ಭಿಕ ಚಿತ್ರ
ಭಟಿಂಡಾ,ಎ.22: ನಗರದಲ್ಲಿ ಆಗಸ್ಟ್ 13ರಂದು ಗುಂಪೊಂದು ನಡೆಸಿದ ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ 22 ವರ್ಷ ವಯಸ್ಸಿನ ಝಿಂಬಾಬ್ವೆಯ ವಿದ್ಯಾರ್ಥಿ ಸಾವನ್ನಪ್ಪಿರುವುದಾಗಿ ಪಂಜಾಬ್ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಝಿವೆಯಾ ಲಿರೊಯ್ ಮೃತಪಟ್ಟ ವಿದ್ಯಾರ್ಥಿಯಾಗಿದ್ದು, ಅವರ ಮೇಲೆ ಭಟಿಂಡಾದ ಗುರುಕಾಶಿ ವಿಶ್ವವಿದ್ಯಾನಿಲಯದ ಭದ್ರತಾಕಾವಲುಗಾರ ದಿಲ್ಪ್ರೀತ್ ಸಿಂಗ್ ಹಾಗೂ ಇತರ ಎಂಟು ಮಂದಿ ಥಳಿಸಿದ್ದರೆಂದು ಆರೋಪಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಲಿರೋಯ್ ಅವರನ್ನು ಭಟಿಂಡಾದ ಏಮ್ಸ್ ಆಸ್ಪತ್ರೆಗ ದಾಖಲಿಸಲಾಗಿತ್ತು. ಅಲ್ಲಿ ಅವರು ಗುರುವಾರ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.
ವಿವಿ ಆವರಣದಲ್ಲಿರುವ ಬೇಸ್ಬಾಲ್ ಕ್ಲಬ್ ನಲ್ಲಿ ಲೀರೋಯ್ ಅವರ ಕಾರು ನಿಂತಿರುವುನ್ನು ಕಂಡು ದಿಲ್ಪ್ರೀತ್ ಸಿಂಗ್ ಆಕ್ಷೇಪವೆತ್ತಿದ್ದಾಗ ಇಬ್ಬರ ನಡುವೆ ವಾಗ್ವಾದವುಂಟಾಗಿತ್ತು. ಮರುದಿನ ದಿಲ್ಪ್ರೀತ್ ಸಿಂಗ್ ಹಾಗೂ ಆತನ ಇತರ ಎಂಟು ಮಂದಿ ಸಹಚರರು ಲಿರೋಯ್ ಮೇಲೆ ದೊಣ್ಣೆಗಳಿಂದ ದಾಳಿ ನಡೆಸಿ, ಅವರನ್ನು ಗಂಭೀರ ಗಾಯಗೊಳಿಸಿದ್ದರು.
ಎಲ್ಲಾ 9 ಮಂದಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಅವರಲ್ಲಿ ಎಂಟು ಮಂದಿಯನ್ನು ಬಂಧಿಸಲಾಗಿದೆ. ಇನ್ನೋರ್ವನ ಬಂಧನಕ್ಕಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.