×
Ad

ನಾಳೆ ಮತ್ತೊಮ್ಮೆ ಖ್ಯಾತ ಗಾಯಕ ಝುಬೀನ್ ಗರ್ಗ್ ಮರಣೋತ್ತರ ಪರೀಕ್ಷೆ

Update: 2025-09-22 22:07 IST

 ಝುಬೀನ್ ಗರ್ಗ್ | PC :  instagram.com

ಗುವಾಹಟಿ, ಸೆ.22 : ಖ್ಯಾತ ಗಾಯಕ ಝುಬೀನ್ ಗರ್ಗ್ ಅವರ ಅಕಾಲಿಕ ಸಾವಿನ ಕುರಿತು ನಡೆಯುತ್ತಿರುವ ತನಿಖೆಯ ನಡುವೆಯೇ ಮಂಗಳವಾರ ಎರಡನೇ ಮರಣೋತ್ತರ ಪರೀಕ್ಷೆಯೊಂದಿಗೆ ಅವರಿಗೆ ಅಂತಿಮ ವಿದಾಯವನ್ನು ಹೇಳಲು ಅಸ್ಸಾಂ ಸಜ್ಜಾಗಿದೆ.

ಗರ್ಗ್ ಅವರ ಸಾವಿನ ಕುರಿತು ಸ್ಪಷ್ಟತೆಗಾಗಿ ಸಾರ್ವಜನಿಕರ ಆಗ್ರಹದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆ 7:30ರ ಸುಮಾರಿಗೆ ಏಮ್ಸ್ ಗುವಾಹಟಿ ವೈದ್ಯರ ತಂಡದ ಮೇಲ್ವಿಚಾರಣೆಯಲ್ಲಿ ದಿವಂಗತ ಗಾಯಕನ ಪತ್ನಿಯ ಅನುಮತಿಯೊಂದಿಗೆ ಗುವಾಹಟಿ ಮೆಡಿಕಲ್ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೃಢಪಡಿಸಿದರು. ‘ಝುಬೀನ್ ಕುರಿತು ಯಾವುದೇ ವಿವಾದವನ್ನು ಸೃಷ್ಟಿಸಲು ನಾವು ಬಯಸುವುದಿಲ್ಲ, ಆದ್ದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ’ಎಂದರು.

ಎರಡನೇ ಮರಣೋತ್ತರ ಪರೀಕ್ಷೆಯ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸಿದ ಶರ್ಮಾ,‘ ವೈಯಕ್ತಿಕವಾಗಿ ತಾನು ಅದರ ಪರವಾಗಿಲ್ಲ, ಆದರೆ ಅಲ್ಪಸಂಖ್ಯಾತ ವರ್ಗವೊಂದು ಸಹ ಅದಕ್ಕಾಗಿ ಒತ್ತಾಯಿಸಿದಾಗ ನನ್ನ ವೈಯಕ್ತಿಕ ಆಶಯವು ಅಪ್ರಸ್ತುತವಾಗುತ್ತದೆ. ಇದು ಪ್ರಜಾಪ್ರಭುತ್ವ’ ಎಂದರು.

ಸಿಂಗಾಪುರದಲ್ಲಿ ವೈದ್ಯರು ನಡೆಸಿದ್ದ ಮರಣೋತ್ತರ ಪರೀಕ್ಷೆ ಸಂಪೂರ್ಣವಾಗಿ ಮತ್ತು ತಾಂತ್ರಿಕವಾಗಿ ಸಮರ್ಪಕವಾಗಿದ್ದರೂ ಗರ್ಗ್ ಸಾವಿನ ಸುತ್ತ ರಾಜಕೀಯ ವಿವಾದಗಳಿಗೆ ಅವಕಾಶ ನೀಡದಿರಲು ಎರಡನೇ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ಶರ್ಮಾ ಹೇಳಿದರು.

ಬೆಳಿಗ್ಗೆ ಮರಣೋತ್ತರ ಪರೀಕ್ಷೆಯು ಸುಮಾರು ಎರಡು ಗಂಟೆಗಳನ್ನು ತೆಗೆದುಕೊಳ್ಳಲಿದೆ. ಹೀಗಾಗಿ ಅವರ ಅಂತಿಮ ಯಾತ್ರೆಯು ನಿಗದಿತ 7:30ರ ಬದಲು 9:30ಕ್ಕೆ ಆರಂಭಗೊಳ್ಳಲಿದೆ ಎಂದರು.

ಕಾಮಕುರ್ಚಿ ಎನ್‌ಸಿ ಗ್ರಾಮದಲ್ಲಿ ಗರ್ಗ್ ಅವರ ಅಂತ್ಯಸಂಸ್ಕಾರ ನೆರವೇರಲಿದ್ದು, ಅಧಿಕಾರಿಗಳು ಕುಟುಂಬ ಸದಸ್ಯರ ಸಮನ್ವಯದೊಂದಿಗೆ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.

ಅಂತ್ಯಸಂಸ್ಕಾರದ ಸ್ಥಳದಲ್ಲಿ ಗರ್ಗ್ ಅವರ ಸ್ಮಾರಕ ನಿರ್ಮಾಣಕ್ಕಾಗಿ ರಾಜ್ಯ ಸರಕಾರವು 10 ಬಿಘಾ ಜಮೀನು ಮಂಜೂರು ಮಾಡಿದೆ ಎಂದು ಅಸ್ಸಾಂ ಸಚಿವ ಹಾಗೂ ಎಜಿಪಿ ಕಾರ್ಯಾಧ್ಯಕ್ಷ ಕೇಶವ ಮಹಂತ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News