ಝುಬೀನ್ ಗರ್ಗ್ ಸಾವು ಪ್ರಕರಣ: ತನಿಖೆಗೆ ನ್ಯಾಯಾಂಗ ಆಯೋಗ ರಚಿಸಲಿರುವ ಅಸ್ಸಾಂ ಸರಕಾರ
Update: 2025-10-03 21:36 IST
ಝುಬೀನ್ ಗರ್ಗ್ | Photo Credit : PTI
ಗುವಾಹಟಿ: ಸೆಪ್ಟೆಂಬರ್ 19ರಂದು ನಿಧನರಾದ ಖ್ಯಾತ ಗಾಯಕ ಝುಬೀನ್ ಗರ್ಗ್ ಸಾವಿನ ಕುರಿತು ತನಿಖೆ ನಡೆಸಲು ನ್ಯಾಯಾಂಗ ಆಯೋಗವನ್ನು ರಚಿಸಲಿದೆ ಎಂದು ಶುಕ್ರವಾರ ಅಸ್ಸಾಂ ಮುಖ್ಯಮಂತ್ರಿ ಹೇಮಂತ ಬಿಸ್ವ ಶರ್ಮ ಪ್ರಕಟಿಸಿದ್ದಾರೆ.
ಫೇಸ್‌ಬುಕ್ ಲೈವ್ ನಲ್ಲಿ ಪಾಲ್ಗೊಂಡು ಮಾತನಾಡಿದ ಹಿಮಂತ ಬಿಸ್ವ ಶರ್ಮ, ನ್ಯಾಯಾಂಗ ಆಯೋಗದ ನೇತೃತ್ವವನ್ನು ಗುವಾಹಟಿ ಹೈಕೋರ್ಟ್ ನ ನ್ಯಾಯಮೂರ್ತಿ ಸೌಮಿತ್ರ ಸಾಕಿಯಾ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
"ನಾಳೆ ನಾವು ಆಯೋಗವನ್ನು ರಚಿಸಲಿದ್ದೇವೆ. ಝುಬೀನ್ ಗರ್ಗ್ ಸಾವಿಗೆ ಸಂಬಂಧಿಸಿದ ಮಾಹಿತಿ ಅಥವಾ ವೀಡಿಯೊ ಇರುವವರು ಮುಂದೆ ಬಂದು, ಆಯೋಗಕ್ಕೆ ಸಲ್ಲಿಸಬೇಕು" ಎಂದು ಅವರು ಮನವಿ ಮಾಡಿದ್ದಾರೆ.
ಸಿಂಗಾಪುರದಲ್ಲಿ ಆಯೋಜನೆಗೊಂಡಿದ್ದ ಈಶಾನ್ಯ ಭಾರತ ಹಬ್ಬದಲ್ಲಿ ಗಾಯನ ಕಾರ್ಯಕ್ರಮ ಪ್ರಸ್ತುತಪಡಿಸುವುದಕ್ಕೂ ಹಿಂದಿನ ದಿನ ಸಮುದ್ರದ ನೀರಿನಲ್ಲಿ ಮುಳುಗಿ 52 ವರ್ಷದ ಅಸ್ಸಾಮಿ ಗಾಯಕ ಝುಬೀನ್ ಗರ್ಗ್ ಮೃತಪಟ್ಟಿದ್ದರು.