ಝುಬೀನ್ ಗರ್ಗ್ ಪ್ರಕರಣ: ಗಾಯಕನ ಇಬ್ಬರು ಭದ್ರತಾ ಸಿಬ್ಬಂದಿಯ ಬಂಧನ
ಒಂದು ಕೋಟಿ ರೂ. ವಹಿವಾಟಿನ ಪರಿಶೀಲನೆ
ಝುಬೀನ್ ಗರ್ಗ್ (Photo: PTI)
ಗುವಾಹಟಿ: ಗಾಯಕ ಝುಬೀನ್ ಗರ್ಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಇಬ್ಬರು ಖಾಸಗಿ ಭದ್ರತಾ ಸಿಬ್ಬಂದಿಯನ್ನು ಶುಕ್ರವಾರ ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. ಸುದೀರ್ಘ ಕಾಲದಿಂದ ಝುಬೀನ್ ಗರ್ಗ್ ರ ಭದ್ರತಾ ಸಿಬ್ಬಂದಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ನಂದೇಶ್ವಸರ್ ಬೋರಾ ಹಾಗೂ ಪರೇಶ್ ಬೈಶ್ಯರನ್ನು ವಶಕ್ಕೆ ಪಡೆದ ಪೊಲೀಸರು, ಅವರಿಬ್ಬರನ್ನೂ ಗುವಾಹಟಿಯ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದೆದುರು ಹಾಜರುಪಡಿಸಿದರು. ಹಣಕಾಸು ಅವ್ಯವಹಾರಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಅವರಿಬ್ಬರನ್ನೂ ಈ ವಾರದ ಆರಂಭದಲ್ಲಿ ಸೇವೆಯಿಂದ ಅಮಾನತುಗೊಳಿಸಲಾಗಿತ್ತು.
ಕಳೆದ ಐದು ವರ್ಷಗಳಲ್ಲಿ ಇಬ್ಬರೂ ಸುಮಾರು 1 ಕೋಟಿ ರೂ.ಗೂ ಹೆಚ್ಚು ಬ್ಯಾಂಕ್ ವಹಿವಾಟುಗಳನ್ನು ನಡೆಸಿದ್ದು, ಬೋರಾ ಖಾತೆಯಲ್ಲಿ 70 ಲಕ್ಷ ರೂ. ಹಾಗೂ ಬೈಶ್ಯ ಖಾತೆಯಲ್ಲಿ 40 ಲಕ್ಷ ರೂ. ಇರುವುದು ಪತ್ತೆಯಾಗಿದೆ. ಬಡವರು ಹಾಗೂ ಅಗತ್ಯವಿರುವ ಜನರಿಗೆ ನೆರವು ಒದಗಿಸಲು ಝುಬೀನ್ ಗರ್ಗ್ ಈ ಇಬ್ಬರ ಖಾತೆಗಳನ್ನು ಹಣ ಉಳಿತಾಯ ಮಾಡಲು ಬಳಸುತ್ತಿದ್ದರು ಎನ್ನಲಾಗಿದೆ. ಸದ್ಯ ಪ್ರಗತಿಯಲ್ಲಿರುವ ತನಿಖೆಯ ಭಾಗವಾಗಿ, ಈ ವಹಿವಾಟುಗಳ ಕುರಿತು ತನಿಖೆ ಪ್ರಾರಂಭಗೊಂಡಿದೆ.
ಇದಕ್ಕೂ ಮುನ್ನ, ಈ ಹಣ ಸಾಮಾಜಿಕ ಕೆಲಸಕ್ಕಾಗಿ ಮೀಸಲಾಗಿತ್ತು ಹಾಗೂ ಈ ಅಧಿಕಾರಿಗಳು ತಮ್ಮ ವಹಿವಾಟುಗಳನ್ನು ದಾಖಲಿಸಲು ಡೈರಿಗಳು ಹಾಗೂ ಬ್ಯಾಂಕ್ ಸ್ಟೇಟ್ ಮೆಂಟ್ ಗಳನ್ನು ನಿರ್ವಹಿಸುತ್ತಿದ್ದರು ಎಂದು ಝುಬೀನ್ ಗರ್ಗ್ ಅವರ ಪತ್ನಿ ಗರೀಮಾ ಹೇಳಿಕೆ ನೀಡಿದ್ದರು. ನನಗೆ ಹಣಕಾಸು ವ್ಯವಹಾರಗಳ ಬಗ್ಗೆ ಏನೂ ತಿಳಿದಿಲ್ಲ ಹಾಗೂ ಇದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಬೇರೆಯವರಲ್ಲಿ ಕೇಳಿ ಎಂದೂ ಅವರು ಮನವಿ ಮಾಡಿದ್ದರು.