×
Ad

ಗಾಯಕ ಜುಬೀನ್ ಸಾವಿನ ಪ್ರಕರಣ : ಸಿಟ್ ತನಿಖೆ ಅತೃಪ್ತಿಕರವಾಗಿದ್ದರೆ ಸಿಬಿಐ ವಿಚಾರಣೆಗೆ ಶಿಫಾರಸು ; ಅಸ್ಸಾಂ ಸಿಎಂ

Update: 2025-09-25 22:02 IST

Photo Credit - indiatoday

ಗುವಾಹಟಿ, ಸೆ.25: ಸಿಂಗಾಪುರದಲ್ಲಿ ಗಾಯಕ ಜುಬೀನ್ ಗರ್ಗ್ ಅವರ ಸಾವಿನ ಕುರಿತು ವಿಶೇಷ ತನಿಖಾ ತಂಡ(ಸಿಟ್)ವು ನಡೆಸುತ್ತಿರುವ ತನಿಖೆಯು ಅತೃಪ್ತಿಕರ ಎಂದು ಯಾವುದೇ ಹಂತದಲ್ಲಿ ಕಂಡುಬಂದರೆ ರಾಜ್ಯ ಸರಕಾರವು ಸಿಬಿಐ ವಿಚಾರಣೆಗೆ ಶಿಫಾರಸು ಮಾಡಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಗುರುವಾರ ತಿಳಿಸಿದರು.

ಸಿಟ್ ತನಿಖೆಯಲ್ಲಿ ವಿಶ್ವಾಸವಿರಿಸುವಂತೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿಗಳನ್ನು ಹರಡದಂತೆ ಜನರನ್ನು ಆಗ್ರಹಿಸಿದ ಅವರು, ಹಾಗೆ ಮಾಡುವುದರಿಂದ ತನಿಖೆಗೆ ಅಡ್ಡಿಯುಂಟಾಗುತ್ತದೆ ಎಂದು ಹೇಳಿದರು.

ಸಿಂಗಾಪುರದ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಸಂಭವಿಸಿದ ಅವಘಡದಿಂದಾಗಿ ಗರ್ಗ್ ಅವರ ಸಾವಿನ ಕುರಿತು ತನಿಖೆಗಾಗಿ ಸಿಐಡಿಯ ವಿಶೇಷ ಡಿಜಿಪಿ ಮುನ್ನಾ ಪ್ರಸಾದ ಗುಪ್ತಾ ನೇತೃತ್ವದಲ್ಲಿ 10 ಸದಸ್ಯರ ಸಿಟ್ ರಚಿಸಲಾಗಿದೆ.

“ಅಂದು ಏನು ಸಂಭವಿಸಿತ್ತು ಎನ್ನುವುದರ ಸತ್ಯವನ್ನು ನಾವು ಬಯಲಿಗೆಳೆಯುತ್ತೇವೆ ಮತ್ತು ಈ ವಿಷಯದಲ್ಲಿ ಯಾವುದೇ ರಾಜಿಯನ್ನು ಮಾಡಿಕೊಳ್ಳುವುದಿಲ್ಲ’ ಎಂದು ಹೇಳಿದ ಶರ್ಮಾ, ಜುಬೀನ್ ಜೊತೆ ತೆರಳಿದ್ದವರು, ಸಿಂಗಾಪುರದಲ್ಲಿಯ ಅಸ್ಸಾಂ ಅಸೋಸಿಯೇಷನ್ ಸದಸ್ಯರು ಮತ್ತು ಈಶಾನ್ಯ ಭಾರತ ಉತ್ಸವದ ಸಂಘಟಕರನ್ನು ಸಿಟ್ ಪ್ರಶ್ನಿಸಲಿದೆ. ಇದಕ್ಕೆ ಸ್ವಲ್ಪ ಕಾಲಾವಕಾಶ ಅಗತ್ಯವಿದೆ ಎಂದರು.

“ಯಾರಾದರೂ ತಕ್ಷಣ ನ್ಯಾಯವನ್ನು ಬಯಸಿದರೆ ನಾವು ನ್ಯಾಯಾಲಯದಲ್ಲಿ ವಿಫಲಗೊಳ್ಳುತ್ತೇವೆ, ಅದು ಭಾವನೆಗಳನ್ನು ಪರಿಗಣಿಸುವುದಿಲ್ಲ, ಅದು ಸತ್ಯಾಂಶಗಳು ಮತ್ತು ಸಾಕ್ಷ್ಯಗಳನ್ನು ಕೇಳುತ್ತದೆ. ಹೀಗಾಗಿ ನ್ಯಾಯಾಲಯಕ್ಕೆ ಅಗತ್ಯವಾಗಿರುವ ಪ್ರತಿಯೊಂದೂ ಸಾಕ್ಷ್ಯವನ್ನು ಸಂಗ್ರಹಿಸುವುದು ಸಿಟ್ ಜವಾಬ್ದಾರಿಯಾಗಿದೆ ’ ಎಂದ ಶರ್ಮಾ,ತನಿಖೆಗೆ ಸಹಕರಿಸುವಂತೆ ಜನರನ್ನು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News