ಝುಬೀನ್ ಗರ್ಗ್ ಮೃತ್ಯು ಪ್ರಕರಣ: ಗಾಯಕನ ಸೋದರ ಸಂಬಂಧಿ ಪೊಲೀಸ್ ಅಧಿಕಾರಿಯ ಬಂಧನ
ಝುಬೀನ್ ಗರ್ಗ್ ಹಾಗೂ ಸಂದೀಪನ್ ಗರ್ಗ್ (Photo source: instagram)
ಗುವಾಹಟಿ: ಕಳೆದ ತಿಂಗಳು ಸಿಂಗಾಪುರದಲ್ಲಿ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದ ಅಸ್ಸಾಂ ಗಾಯಕ ಝುಬೀನ್ ಗರ್ಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಸಂಬಂಧಿಯಾದ ಓರ್ವ ಪೊಲೀಸ್ ಅಧಿಕಾರಿಯನ್ನು ಅಸ್ಸಾಂನ ವಿಶೇಷ ತನಿಖಾ ತಂಡ ಹಾಗೂ ಅಪರಾಧ ತನಿಖಾ ವಿಭಾಗದ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬಂಧಿತ ಪೊಲೀಸ್ ಅಧಿಕಾರಿಯನ್ನು ಸಂದೀಪನ್ ಗರ್ಗ್ ಎಂದು ಗುರುತಿಸಲಾಗಿದ್ದು, ಝುಬೀನ್ ಗರ್ಗ್ ಅವರ ಸಂಬಂಧಿಯಾದ ಅವರು ಸದ್ಯ ಕಾಮ್ರೂಪ್ ಜಿಲ್ಲೆಯ ಉಪ ಪೊಲೀಸ್ ವರಿಷ್ಠಾಧಿಕಾರಿ (ಕಾನೂನು ಮತ್ತು ಸುವ್ಯವಸ್ಥೆ) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾಮ್ರೂಪ್‌ನ ಜಿಲ್ಲಾ ನ್ಯಾಯಾಲಯವೊಂದು ಅವರನ್ನು 14 ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಿದೆ.
52 ವರ್ಷದ ಝುಬೀನ್ ಗರ್ಗ್ ಅವರೊಂದಿಗೆ ಸಿಂಗಾಪುರಕ್ಕೆ ತೆರಳಿದ್ದ ಸಂದೀಪನ್ ಗರ್ಗ್, ಸೆಪ್ಟೆಂಬರ್ 19ರಂದು ಝುಬೀನ್ ಗರ್ಗ್ ಸಮುದ್ರದ ನೀರಿನಲ್ಲಿ ಮುಳುಗುವಾಗ, ಸ್ಥಳದಲ್ಲಿ ಇದ್ದರು ಎಂದು ಎನ್ನಲಾಗಿದೆ.
ಝುಬೀನ್ ಗರ್ಗ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ನಡೆದಿರುವ ಐದನೆ ಬಂಧನ ಇದಾಗಿದೆ.