ನ್ಯಾಯಾಂಗ ನೇಮಕಾತಿಗಳಲ್ಲಿ ಹಿಂದುಳಿದ ವರ್ಗಗಳ ಕಡೆಗಣನೆ
ಎಂ.ಆರ್. ಶಂಶಾದ್
(ಲೇಖಕರು, ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ಹಿರಿಯ ವಕೀಲರು)
ಕನ್ನಡಕ್ಕೆ: ಕೆ.ಎನ್. ಲಿಂಗಪ್ಪ
ಭಾರತದ ಸಂವಿಧಾನವು ಜಾರಿಗೆ ಬಂದು ಮೂರು ದಶಕಗಳಿಗೂ ಹೆಚ್ಚು ಕಾಲ ಕಳೆದರೂ, ಉನ್ನತ ನ್ಯಾಯಾಂಗದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಪ್ರಾತಿನಿಧ್ಯವು ಆಶ್ಚರ್ಯಕರ ರೀತಿಯಲ್ಲಿ ಅತ್ಯಂತ ಕೆಳಮಟ್ಟದಲ್ಲಿ ಮುಂದುವರಿದಿದೆ.
1983ರಲ್ಲಿ, ಆಗಿನ ಕಾನೂನು ಸಚಿವರು ಸಂಸತ್ತಿಗೆ ತಿಳಿಸಿದಂತೆ ಸುಮಾರು 400 ಉಚ್ಚ ನ್ಯಾಯಾಲಯದ ನ್ಯಾಯಾಧೀಶರಲ್ಲಿ ಕೇವಲ ಆರು ಮಂದಿ ಮಾತ್ರ ಪರಿಶಿಷ್ಟ ಜಾತಿಗೆ ಸೇರಿದವರಿದ್ದರು. ಆದರೆ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಯಾರೊಬ್ಬರೂ ಇರಲಿಲ್ಲ. 1993ರಲ್ಲಿ 2ನೇ ನ್ಯಾಯಾಧೀಶರ ಪ್ರಕರಣ (second judges' case) ಇತ್ಯರ್ಥವಾಗುವವರೆಗೆ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆ ಹಾಗೂ ನೇಮಕಗೊಂಡವರ ಸಂಖ್ಯೆಯಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಈ ಸಮುದಾಯಗಳಿಂದ ಕಂಡು ಬರಲಿಲ್ಲ.
► ಎರಡನೇ ನ್ಯಾಯಾಧೀಶರ ಪ್ರಕರಣ (1993)
ಸಾಂವಿಧಾನಿಕ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರನ್ನು ನೇಮಿಸಲು ಸೂಕ್ತವಾದ ಕಾರ್ಯ ವಿಧಾನ ಯಾವುದಾಗಿರಬೇಕು ಎಂಬುದನ್ನು ಪರಿಶೀಲಿಸಲು ಸರ್ವೋಚ್ಚ ನ್ಯಾಯಾಲಯದ ಒಂಭತ್ತು ನ್ಯಾಯಾಧೀಶರ ಪೀಠವು ರಚನೆಯಾಗಿತ್ತು. ಇದರಲ್ಲಿ ಐದು ನ್ಯಾಯಾಧೀಶರು ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ವಿಭಿನ್ನ ಜಾತಿಗಳು, ಸಮುದಾಯಗಳು ಮತ್ತು ಧರ್ಮಗಳ ಪ್ರಾತಿನಿಧ್ಯವು ಈ ಸಾಂವಿಧಾನಿಕ ವಿಷಯವನ್ನು ಪರಿಶೀಲಿಸಿದ ಅಂಶಗಳಲ್ಲಿ ಒಂದಾಗಿತ್ತು. ಸಂಸತ್ತಿನಲ್ಲಿ ಸರಕಾರ ಒದಗಿಸಿದ ದತ್ತಾಂಶದ ಆಧಾರದ ಮೇಲೆ ಅವರ ಪ್ರಾತಿನಿಧ್ಯವನ್ನು ಎತ್ತಿ ತೋರಿಸಲು ನ್ಯಾಯಾಧೀಶರೊಬ್ಬರು ಕೋಷ್ಟಕವೊಂದನ್ನು (tabular chart) ಸಿದ್ಧಪಡಿಸಿದರು.
ಆ ಕೋಷ್ಟಕದಲ್ಲಿ ನೀಡಲಾದ ಅಂಕಿ ಅಂಶಗಳ ಪ್ರಕಾರ, ಮಾರ್ಚ್ 31, 1993ರ ವೇಳೆಗೆ, 543 ಮಂದಿ ನ್ಯಾಯಾಧೀಶರು ವಿವಿಧ ಉಚ್ಚ ನ್ಯಾಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರಲ್ಲಿ 12 (ಶೇ. 2.21) ಮಂದಿ ನ್ಯಾಯಾಧೀಶರು ಮಾತ್ರ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದರೆ, 42(ಶೇ. 7.73) ಮಂದಿ ಒಬಿಸಿ ಸಮುದಾಯದವರಾಗಿದ್ದರು. ಆಘಾತಕಾರಿ ಸಂಗತಿ ಎಂದರೆ ಅನೇಕ ಉಚ್ಚ ನ್ಯಾಯಾಲಯಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ಸಮುದಾಯಗಳಿಗೆ ಸೇರಿದವರಿಗೆ ಪ್ರಾತಿನಿಧ್ಯವೇ ಇರಲಿಲ್ಲ. ಪಂಜಾಬ್ ಮತ್ತು ಹರ್ಯಾಣ (ಆ ಸಮಯದಲ್ಲಿ 29 ಮಂದಿ ನ್ಯಾಯಾಧೀಶರಿದ್ದರು), ಮಧ್ಯಪ್ರದೇಶ ( 26), ಕೋಲ್ಕತಾ (27), ದಿಲ್ಲಿ (25), ರಾಜಸ್ಥಾನ (22), ಪಾಟ್ನಾ (33) ಮತ್ತು ಒಡಿಶಾ(13) ಉಚ್ಚ ನ್ಯಾಯಾಲಯಗಳಲ್ಲಿ ಈ ಎರಡೂ ಸಮುದಾಯಗಳಿಗೆ ಯಾವುದೇ ಪ್ರಾತಿನಿಧ್ಯವಿರಲಿಲ್ಲ. ಆಂಧ್ರದಲ್ಲಿ 24 ಮಂದಿ ನ್ಯಾಯಾಧೀಶರಲ್ಲಿ ಯಾರೊಬ್ಬರೂ ಪರಿಶಿಷ್ಟ ಜಾತಿಗೆ ಸೇರಿದವರು ಇರಲಿಲ್ಲ. ಆದರೆ ಹಿಂದುಳಿದ ವರ್ಗಗಳಿಗೆ ಸೇರಿದ ಮೂರು ಮಂದಿ ಮಾತ್ರ ನ್ಯಾಯಾಧೀಶರಿದ್ದರು. ಒಟ್ಟು 543 ನ್ಯಾಯಾಧೀಶರಲ್ಲಿ ಏಳು (ಶೇ. 1.29) ಮಂದಿ ಮಾತ್ರ ಪರಿಶಿಷ್ಟ ಪಂಗಡಗಳಿಗೆ ಸೇರಿದ ನ್ಯಾಯಾಧೀಶರು ಕಾರ್ಯನಿರ್ವಹಿಸುತ್ತಿದ್ದರು.
ಈ ಎರಡನೇ ನ್ಯಾಯಾಧೀಶರ ಪ್ರಕರಣಕ್ಕೂ ಮುನ್ನ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯು ನಾವು ಇಂದು ಹೊಂದಿರುವ ರೀತಿಯಲ್ಲಿರಲಿಲ್ಲ. ಈ ತೀರ್ಪು ಇಂದು ಚಾಲ್ತಿಯಲ್ಲಿರುವ ಕೊಲಿಜಿಯಂ ವ್ಯವಸ್ಥೆಗೆ (collegium system) ಔಪಚಾರಿಕ ರೂಪವನ್ನು ನೀಡಿತು. ತೀರ್ಪಿನಲ್ಲಿ ಅರ್ಹತೆಯ ಬಗ್ಗೆ ಮತ್ತು ಸಮಾಜದ ಎಲ್ಲಾ ವರ್ಗದ ಜನರಿಗೆ ಸೂಕ್ತ ಪ್ರಾತಿನಿಧ್ಯವನ್ನು ಖಾತ್ರಿಪಡಿಸುವ ಕುರಿತು ಸಾಕಷ್ಟು ಚರ್ಚೆ ನಡೆಯಿತು. ಬಹುಮತದ ತೀರ್ಪನ್ನು ನ್ಯಾಯಮೂರ್ತಿ ಜೆ.ಎಸ್. ವರ್ಮಾ ಅವರು ನೀಡಿದ್ದರು, ಅವರು ಪರಿಗಣಿಸಿದ ಅಂಶಗಳಲ್ಲಿ ದೇಶದ ಎಲ್ಲಾ ಭಾಗಗಳಿಂದ ಬರುವ ಎಲ್ಲಾ ವರ್ಗದ ಜನರ ಸರಿಯಾದ ಪ್ರಾತಿನಿಧ್ಯ ಕೂಡ ಒಂದಾಗಿತ್ತು. ನ್ಯಾಯಾಧೀಶರ ಅರ್ಹತೆಯ ಜೊತೆಗೆ ಅವರ ಸೂಕ್ತತೆಯ ಕಾನೂನುಬದ್ಧ ನಿರೀಕ್ಷೆಯನ್ನು ಸಹ ಸಂಬಂಧಿತ ಅಂಶಗಳೆಂದು ಪರಿಗಣಿಸಲಾಗಿದೆ. ಸಮಾಜದ ಎಲ್ಲಾ ವರ್ಗದ ಜನರ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳುವುದು ಈ ತೀರ್ಪಿನ ಮೂಲಕ ಸೃಷ್ಟಿಯಾದ ಕಾನೂನುಬದ್ಧ ನಿರೀಕ್ಷೆಗಳಲ್ಲಿ ಒಂದಾಗಿತ್ತು.
► ಎರಡನೇ ನ್ಯಾಯಾಧೀಶರ ಪ್ರಕರಣದ ನಂತರದ ವ್ಯವಸ್ಥೆ
ಎರಡನೇ ನ್ಯಾಯಾಧೀಶರ ಪ್ರಕರಣದ ಕೆಲವು ವರ್ಷಗಳ ನಂತರ, 2000- 2001ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿಯ 13ನೇ ವರದಿಯು ಈ ರೀತಿ ಉಲ್ಲೇಖಿಸಿದೆ. ಮೇ 1, 1998 ರ ವೇಳೆಗೆ 481 ಮಂದಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಲ್ಲಿ ಕೇವಲ 15 ಮಂದಿ ಪರಿಶಿಷ್ಟ ಜಾತಿ ಮತ್ತು 5 ಮಂದಿ ಪರಿಶಿಷ್ಟ ಪಂಗಡದವರಿದ್ದರು. ಪರಿಗಣನಾ ವಲಯದಲ್ಲಿ ಸೂಕ್ತ, ಅರ್ಹ ಮತ್ತು ಉನ್ನತ ಶಿಕ್ಷಣ ಪಡೆದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ನ್ಯಾಯಾಧೀಶರು ಲಭ್ಯವಿದ್ದರೂ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಹುದ್ದೆಯಲ್ಲಿ ಇವರಾರು ಇಲ್ಲದಿರುವುದನ್ನು ಕಂಡ ಸಮಿತಿಗೆ ಆಶ್ಚರ್ಯವಾಯಿತು. ಬದಲಾದ ಸನ್ನಿವೇಶಗಳ ದೃಷ್ಟಿಯಿಂದ, ಅಗತ್ಯವಿದ್ದರೆ ಸಂವಿಧಾನವನ್ನು ತಿದ್ದುಪಡಿ ಮಾಡುವ ಮೂಲಕ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯಗಳ ನ್ಯಾಯಾಧೀಶರನ್ನು ನೇಮಿಸುವ ವಿಷಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಒದಗಿಸುವುದನ್ನು ಸರಕಾರ ಪರಿಗಣಿಸಬೇಕು ಎಂದು ಸಮಿತಿಯು ಒತ್ತಿ ಹೇಳಿತು. ನ್ಯಾಯಾಧೀಶರ ನೇಮಕಾತಿಯಲ್ಲಿ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯದಲ್ಲಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಗಳು ಸೇರಿದಂತೆ ಯಾವುದೇ ಸಮುದಾಯಕ್ಕೆ ಯಾವುದೇ ಶಾಸನಬದ್ಧ ಮೀಸಲಾತಿ ಇಲ್ಲ, ಅಂತಹ ಮೀಸಲಾತಿ ಅಗತ್ಯವೂ ಇಲ್ಲ ಎಂಬುದನ್ನು ನಾನು ಇಲ್ಲಿ ಸ್ಪಷ್ಟಪಡಿಸಬೇಕು.
ಈಗ ಕೊಲಿಜಿಯಂ ವ್ಯವಸ್ಥೆಯು ಸುಮಾರು 30 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ನಂತರದ ದತ್ತಾಂಶವನ್ನು ನೋಡೋಣ. ಮಾರ್ಚ್ 2025ರಲ್ಲಿ (ಲೇಖನದಲ್ಲಿ ಉಲ್ಲೇಖಿಸಿದಂತೆ), ಉನ್ನತ ನ್ಯಾಯಾಂಗದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಪ್ರಾತಿನಿಧ್ಯದ ಕುರಿತು ಸಂಸದರೊಬ್ಬರು ಎತ್ತಿದ ಪ್ರಶ್ನೆಗೆ ಕಾನೂನು ಸಚಿವರು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇಮಕಾತಿಯ ಪ್ರಸ್ತಾವಗಳನ್ನು ಪ್ರಾರಂಭಿಸುವ ಜವಾಬ್ದಾರಿಯು ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಸೇರಿದೆ ಎಂದು ಉತ್ತರಿಸಿದರು. ಆದರೆ, ಉಚ್ಚ ನ್ಯಾಯಾಲಯಗಳಿಗೆ ನೇಮಕಾತಿಗಾಗಿ ಪ್ರಸ್ತಾವಗಳನ್ನು ಪ್ರಾರಂಭಿಸುವ ಜವಾಬ್ದಾರಿಯು ಸಂಬಂಧ ಪಟ್ಟ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಸೇರಿದೆ ಎಂದು ಹೇಳಿದ್ದಾರೆ. ಅದೇ ಉತ್ತರದಲ್ಲಿ, 2018ರಿಂದ ನೇಮಕಗೊಂಡ 715 ಉಚ್ಚ ನ್ಯಾಯಾಲಯದ ನ್ಯಾಯಾಧೀಶರಲ್ಲಿ 22(ಶೇ. 3.08) ಪರಿಶಿಷ್ಟ ಜಾತಿ, 16(ಶೇ. 2.24) ಪರಿಶಿಷ್ಟ ಪಂಗಡ, 89(ಶೇ. 12.45) ಹಿಂದುಳಿದ ವರ್ಗಗಳಿಗೆ ಮತ್ತು 37 (ಶೇ. 5.17) ಮಂದಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರಾಗಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. ಇದು ಉಚ್ಚ ನ್ಯಾಯಾಲಯಗಳಿಗೆ ಮಾಡಿದ ನೇಮಕಾತಿಗಳ ಕುರಿತು ಒದಗಿಸಲಾದ ಒಟ್ಟು ದತ್ತಾಂಶ ಎಂದು ತೋರುತ್ತದೆ. ನವೆಂಬರ್ 2022ರಿಂದ ನವೆಂಬರ್ 2024 ರವರೆಗಿನ ಅಂಕಿ ಅಂಶಗಳ ಆಧಾರದ ಮೇಲೆ, ಕೇಂದ್ರ ಸರಕಾರದಿಂದ ಒಟ್ಟು 170 ಮಂದಿ ನ್ಯಾಯಾಧೀಶರು ನೇಮಕಗೊಂಡಿದ್ದು, ಅವರಲ್ಲಿ 94 ಮಂದಿ ನ್ಯಾಯಾಧೀಶರನ್ನು ವಕೀಲರ ವಲಯದಿಂದ ನೇಮಿಸಲಾಗಿದೆ ಎಂದು ತಿಳಿದು ಬಂದಿದೆ. ಈ 94 ನೇರ ನೇಮಕಾತಿಯ ನ್ಯಾಯಾಧೀಶರಲ್ಲಿ 5 (ಶೇ.5.32) ಪರಿಶಿಷ್ಟ ಜಾತಿ, 2(ಶೇ.2.13) ಪರಿಶಿಷ್ಟ ಪಂಗಡ, 4(ಶೇ.4.26) ಮುಸ್ಲಿಮರು, 4(ಶೇ.4.26) ಸಿಖ್ಖರು ಮತ್ತು 1(ಶೇ.1.06) ಪಾರ್ಸಿ ಸಮುದಾಯದವರಾಗಿದ್ದಾರೆ. ಈ 94 ಮಂದಿಯಲ್ಲಿ ಒಟ್ಟು 10(ಶೇ.10.64) ಮಂದಿ ಹಿಂದುಳಿದ ವರ್ಗಗಳಿಗೆ ಸೇರಿದ ನ್ಯಾಯಾಧೀಶರಿದ್ದಾರೆ.
1993ಕ್ಕೂ ಮುಂಚಿನ (ಕೊಲಿಜಿಯಂ ಪೂರ್ವ) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಪ್ರಾತಿನಿಧ್ಯವನ್ನು ತೋರಿಸುವ ಸಂಖ್ಯೆಗಳು 1993ರ ನಂತರದ ಅವಧಿಗೆ ಹೋಲಿಸಿದರೆ ಹೆಚ್ಚು ಭಿನ್ನವಾಗಿಲ್ಲ. ಸಮರ್ಪಕ ಪ್ರಾತಿನಿಧ್ಯವನ್ನು ಒದಗಿಸಲು ಈ ವರ್ಗಗಳಲ್ಲಿ ಸಾಕಷ್ಟು ಅರ್ಹ ಮತ್ತು ಯೋಗ್ಯ ಅಭ್ಯರ್ಥಿಗಳಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಸಾಮಾನ್ಯ ವರ್ಗದ ಎಲ್ಲಾ ಅಭ್ಯರ್ಥಿಗಳೂ ಎಲ್ಲದರಲ್ಲೂ ಮಾದರಿಯಾಗಿ ಅಥವಾ ಸಮಾನವಾಗಿ ಸಮರ್ಥರಾಗಿರುವುದಿಲ್ಲ ಎಂಬುದು ವಕೀಲರ ಸಂಘ(Bar) ಮತ್ತು ನ್ಯಾಯಪೀಠ (Bench)ಎರಡಕ್ಕೂ ತಿಳಿದಿದೆ. ಹಾಗಾಗಿ ಈ ವರ್ಗಗಳಲ್ಲಿ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲ ಎಂಬ ಕೊರಗು ಇರಬಾರದು.
1993ರ ನಂತರ ವಕೀಲರ ವಲಯದಿಂದ ನೇರವಾಗಿ ನೇಮಕಗೊಂಡ ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಅಂಕಿ ಅಂಶಗಳನ್ನು ಗಮನಿಸಿದರೆ ವಿಭಿನ್ನ ವರ್ಗಗಳು, ಜಾತಿಗಳು ಮತ್ತು ಧರ್ಮಗಳ ಸರಿಯಾದ ಪ್ರಾತಿನಿಧ್ಯವನ್ನು ಖಚಿತ ಪಡಿಸುವ ‘ಎರಡನೇ ನ್ಯಾಯಾಧೀಶರ ತೀರ್ಪಿನ’ ಆಶಯವನ್ನು ಕೊಲಿಜಿಯಂನ ಕಾರ್ಯನಿರ್ವಣೆಯು ಎತ್ತಿ ಹಿಡಿದಿದೆ ಎಂದು ಅನ್ನಿಸುವುದಿಲ್ಲ. ಇದು ತಮ್ಮ ಜವಾಬ್ದಾರಿಯಲ್ಲ ಎಂದು ಸರಕಾರ ಈಗಾಗಲೇ ಹೇಳಿದೆ; ಇಡೀ ರಾಷ್ಟ್ರದ ಕಾನೂನುಬದ್ಧ ನಿರೀಕ್ಷೆಗೆ ತಾವು ಹೊಣೆಗಾರರಲ್ಲ ಎಂಬುದು ಕೊಲಿಜಿಯಂನ ಕ್ರಮದಲ್ಲಿ ಪ್ರತಿಫಲಿಸಬಾರದು. ಪ್ರತೀ 10 ನೇರ ನೇಮಕಾತಿಗಳಲ್ಲಿ ಕೊಲಿಜಿಯಂ ಕನಿಷ್ಠ 1 ಪರಿಶಿಷ್ಟ ಜಾತಿ, 1 ಅಥವಾ 2 ಹಿಂದುಳಿದ ವರ್ಗ, 1 ಮುಸ್ಲಿಮ್, 1 ಸಿಖ್ ಅಥವಾ ಕ್ರೈಸ್ತರ ಪ್ರಾತಿನಿಧ್ಯವನ್ನು ಖಾತ್ರಿಪಡಿಸುವುದು ಕಷ್ಟವೇನಲ್ಲ. ಮಹಿಳೆಯರ ಪ್ರಾತಿನಿಧ್ಯವನ್ನೂ ಕೂಡ ಖಾತ್ರಿಪಡಿಸಬಹುದು.
ಕೊಲಿಜಿಯಂ ಅನ್ನು ಬದಲಾಯಿಸಿ ಮತ್ತೊಂದು ಪ್ರಯೋಗವನ್ನು ಪ್ರಾರಂಭಿಸುವುದರಿಂದ ಮಾತ್ರವೇ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ನಾನು ಹೇಳುತ್ತಿಲ್ಲ. ನಮ್ಮ ವ್ಯವಸ್ಥೆಯಲ್ಲಿ ಯಾವುದೇ ಒಂದು ವ್ಯವಸ್ಥೆಯ ಕಾರ್ಯನಿರ್ವಹಣೆಯಲ್ಲಿನ ಸಮಸ್ಯೆಗಳನ್ನು ಎತ್ತಿ ತೋರಿಸಿದಾಗಲೆಲ್ಲಾ, ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸುವ ಸಹಜ ಪ್ರತಿಕ್ರಿಯೆ ವ್ಯಕ್ತವಾಗುವುದು ಸಾಮಾನ್ಯ. ಕೊಲಿಜಿಯಂ ತನ್ನದೇ ಆದ ಕಾರ್ಯನಿರ್ವಹಣೆಯ ಬಗ್ಗೆ ಆತ್ಮಾವಲೋಕನ ಮಾಡಿ.ಕೆ.ೂಳ್ಳುವ ಅಗತ್ಯವಿದೆ ಮತ್ತು ಆಯ್ಕೆ ಮತ್ತು ನೇಮಕಾತಿ ಪ್ರಕ್ರಿಯೆಯು ನ್ಯಾಯ ಸಮ್ಮತ ಪ್ರಾತಿನಿಧಿಕ ಮತ್ತು ಪಾರದರ್ಶಕ ವಾಗಿರಲು ಸುಧಾರಣೆಗಳನ್ನು ತರಬೇಕಾಗಿದೆ.
ಕೃಪೆ: ಇಂಡಿಯನ್ ಲೀಗಲ್ ನ್ಯೂಸ್ ವೆಬ್ಸೈಟ್