ನಾಲ್ಕು ವರ್ಷದ ಹಿಂದೆ ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಯಾತ್ರೆ 1.0 ಕರ್ನಾಟಕವನ್ನು ಹಾದು ಮುಂದೆ ಸಾಗಿತ್ತು. ಅದು ಮೂರು ವರ್ಷ ತುಂಬಿದಾಗ ರಾಜ್ಯದ ನಾಯಕರಿಗೆ ನೆನಪಾಗಿರಲಿಲ್ಲ. 2027ಕ್ಕೆ ಐದು ವರ್ಷ ತುಂಬಿದಾಗ ನೆನಪಿಸಿಕೊಳ್ಳಬಹುದಿತ್ತು. ಐದನೇ ವರ್ಷಾಚರಣೆ ವೇಳೆ, ಅಂದರೆ 2028ರ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ನೆನಪು ಮಾಡಿ.ಕೊಂಡಿದ್ದರೆ ರಾಜಕೀಯವಾಗಿ ಹೆಚ್ಚು ಲಾಭವಾಗುವ ಸಾಧ್ಯತೆ ಇತ್ತು. ಆ ಎಲ್ಲಾ ಲೆಕ್ಕಾಚಾರ ಬಿಟ್ಟು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ನಾಲ್ಕನೇ ವರ್ಷದ ನೆನಪಿಗೆ ಭಾರತ್ ಜೋಡೊ ಯಾತ್ರೆ 2.0 (ಮುಂದೆ ಅದು ಭಾರತ್ ಜನತಾ ಜೋಡೊ ಜಾಗೃತಿ ಯಾತ್ರೆ ಆಗಲಿದೆ) ಹಮ್ಮಿಕೊಂಡಿರುವುದೇಕೆ?

ಈ ಪ್ರಶ್ನೆ ಕೇಳಿಕೊಳ್ಳುವ ಮೊದಲು ಬಿ.ಕೆ. ಹರಿಪ್ರಸಾದ್ ವ್ಯಕ್ತಿತ್ವದ ಕಡೆ ಕಣ್ಣುಹಾಯಿಸಬೇಕು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಬಿಟ್ಟರೆ ಬೇರೆ ಯಾರಿಗೂ ಜಪ್ಪಯ್ಯ ಎಂದರೂ ಜಗ್ಗದ ಜಟ್ಟಿ ಅವರು. ಅವರೊಂಥರ ಕಾಂಗ್ರೆಸ್ ಪಾಲಿನ ‘ಆಂಗ್ರಿ ಯಂಗ್ ಮ್ಯಾನ್’. ಶಾಶ್ವತ ವಿರೋಧ ಪಕ್ಷದ ನಾಯಕ. ಅವರ ಬಗಲಲ್ಲಿರುವ ಬಂಡಾಯದ ಬಾವುಟ ಪಟಪಟಿಸಲು ತವಕಿಸುತ್ತಲೇ ಇರುತ್ತದೆ. ಅವರು ಯಾವಾಗ? ಯಾರ ವಿರುದ್ಧ ಬಂಡಾಯದ ಕಹಳೆ ಮೊಳಗಿಸುತ್ತಾರೆ ಎನ್ನುವುದು ಪಕ್ಕದಲ್ಲಿರುವವರಿಗೂ ತಿಳಿದಿರುವುದಿಲ್ಲ. ಸಾಕ್ಷಿ ಬೇಕೆಂದರೆ ಅವರು ಕೆಪಿಸಿಸಿ ಅಧ್ಯಕ್ಷರಾದ ಮರುದಿನವೇ ‘ಅಧಿಕಾರ ಬೇಕಿರುವವರು ಅವರ (ಸಿಎಂ) ಬಳಿ ಹೋಗಿ, ಪಕ್ಷ-ಸಂಘಟನೆ ಬೇಕಿರುವವರು ನನ್ನ ಬಳಿ ಬನ್ನಿ’ ಎಂದು ಹೇಳಿದ್ದನ್ನು ನೆನಪಿಸಿಕೊಳ್ಳಿ.

ಮುಖ್ಯಮಂತ್ರಿ ಬಳಿ ಅಧಿಕಾರವಿರಬಹುದು, ಆದರೆ ಪಕ್ಷದ ಅಧ್ಯಕ್ಷರ ಬಳಿ ಸಂಘಟನೆಯಿದೆ. ಈ ಎರಡೂ ಒಂದೇ ವ್ಯಕ್ತಿಯ ಬಳಿ ಇರಬೇಕೆಂದೇನಿಲ್ಲ ಎಂಬುದನ್ನು ನೆನಪಿಸಲು ಹರಿಪ್ರಸಾದ್ ಹಾಗೆ ಹೇಳಿದ್ದಿರಬಹುದು. ಈಗ ಭಾರತ್ ಜೋಡೊ ಯಾತ್ರೆ 2.0ರ ಸಂದರ್ಭದಲ್ಲೂ ಇದೇ ಅಧಿಕಾರ ಮತ್ತು ಸಂಘಟನೆಯ ನಡುವೆ ಸಂಘರ್ಷ ಶುರುವಾದಂತೆ ಕಾಣುತ್ತಿದೆ.

ಡಿ.ಕೆ. ಶಿವಕುಮಾರ್ ತಮ್ಮ ಸರಕಾರ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಬಿ.ಕೆ. ಹರಿಪ್ರಸಾದ್ ಅವರನ್ನು ಆಹ್ವಾನಿಸಿರಲಿಲ್ಲ. ಹಾಗಂತ ಅದು ನೂರಕ್ಕೆ ನೂರರಷ್ಟು ಸರಕಾರದ ಕಾರ್ಯಕ್ರಮವಾಗಿರಲಿಲ್ಲ. ಸಂಪೂರ್ಣವಾಗಿ ಶಿಷ್ಟಾಚಾರದ ಪ್ರಕಾರ ನಡೆದ ಕಾರ್ಯಕ್ರಮವಾಗಿರಲಿಲ್ಲ. ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿತ್ತು. ಡಿ.ಕೆ. ಶಿವಕುಮಾರ್ ಅವರಿಗೆ ಇದು ‘ಕಾಂಗ್ರೆಸ್ ಸರಕಾರವಲ್ಲ, ತಮ್ಮ ಸರಕಾರ’ ಎನಿಸಿರಬಹುದು. ಆದರೆ ‘ತಮ್ಮ ಪಕ್ಷದ ಸರಕಾರದ ಕಾರ್ಯಕ್ರಮಕ್ಕೆ ತಮಗೇ ಆಹ್ವಾನ ಇಲ್ಲ’ ಎಂದರೆ ಪಕ್ಷದ ಕಟ್ಟಾಳು ಹರಿಪ್ರಸಾದ್ ಸಹಿಸಿಕೊಳ್ಳುವರೇ?

‘ಸರಕಾರ ನಿಮ್ಮದಾದರೇ ಪಕ್ಷ ನಮ್ಮದು’ ಎಂದು ಡಿ.ಕೆ. ಶಿವಕುಮಾರ್ ಅವರನ್ನು ಪಕ್ಷದ ವತಿಯಿಂದ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆ 2.0 ಬಳಿ ಬರಲು ಬಿಟ್ಟಿಲ್ಲ. ಎಷ್ಟೇ ಆದರೂ ಬಿ.ಕೆ. ಹರಿಪ್ರಸಾದ್ ಹೈಕಮಾಂಡ್ ಮಟ್ಟದಲ್ಲಿ ಪಳಗಿರುವ ಪಟು. ಭಾರತ್ ಜೋಡೊ ಯಾತ್ರೆ ಬಗ್ಗೆ ರಾಹುಲ್ ಗಾಂಧಿಗೆ ವಿಶೇಷ ಪ್ರೀತಿ. ಅಂಥ ಯಾತ್ರೆ ಮೂಲಕ ಜನರ ಬಳಿ ಹೋಗುತ್ತೇನೆ ಎಂದರೆ ರಾಹುಲ್ ಗಾಂಧಿ ಮರುಮಾತನಾಡದೆ ಒಪ್ಪಿಗೆ ಸೂಚಿಸುತ್ತಾರೆ ಎನ್ನುವುದು ಚೆನ್ನಾಗಿ ಗೊತ್ತು. ಮೇಲಾಗಿ ಯಾತ್ರೆ ಬಗ್ಗೆ ಯಾರು ಏನೇ ದೂರು ಹೇಳಿದರೂ ರಾಹುಲ್ ಗಾಂಧಿ ಪುರಸ್ಕರಿಸುವುದಿಲ್ಲ ಎನ್ನುವುದು ಗೊತ್ತು. ಹಾಗಾಗಿ ಮಳೆ ನೋಡಿ.ಕೆ.ೂಂಡು ಬೀಜ ಬಿತ್ತಿದ್ದಾರೆ.

ಹಿಂದೆ ಸಚಿವ ಸಂಪುಟ ರಚನೆ ವಿಚಾರ ಬಂದಾಗ ಆಡಳಿತಾರೂಢ ಪಕ್ಷದ ಅಧ್ಯಕ್ಷರಾಗಿ ಹರಿಪ್ರಸಾದ್ ಒಂದೆರಡು ಹೆಸರುಗಳನ್ನು ಸೂಚಿಸಬಹುದಿತ್ತು. ಸರಕಾರದಲ್ಲಿ, ಸಂಪುಟ ರಚನೆಯಲ್ಲಿ ಮೂಗು ತೂರಿಸಬಾರದು ಎನ್ನುವ ನಿರ್ಧಾರಕ್ಕೆ ಬಂದು ಯಾವುದೇ ಹೆಸರು ಹೇಳಿರಲಿಲ್ಲ. ಸಂಪುಟದ ವಿಷಯದಿಂದ ದೂರ ಇದ್ದು ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ನಿಗಮ-ಮಂಡಳಿಗಳಲ್ಲಿ ಹೆಚ್ಚಿನ ಸ್ಥಾನ ಕೊಡಿಸುವುದು ಅವರ ಉದ್ದೇಶವಾಗಿತ್ತು. ಆದರೆ ಡಿ.ಕೆ. ಶಿವಕುಮಾರ್ ಸರಕಾರ ನಾಲ್ಕು ತಿಂಗಳಾದರೂ ನಿಗಮ ಮಂಡಳಿಗಳಿಗೆ ನೇಮಕ ಮಾಡಲು ಗುಣಾಕಾರ ಭಾಗಾಕಾರ ಹಾಕಲಾಗುತ್ತಿದೆ.

ಸಂಪುಟದಲ್ಲಿ ಯಾವುದೇ ಮಹತ್ವದ ವಿಷಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಮುನ್ನ ಪಕ್ಷದ ಸಲಹೆ ಕೇಳಲು ಒಂದು ರೀತಿಯ ‘ಸಮನ್ವಯ ಸಮಿತಿ’ ರಚಿಸುವ (ಮೈತ್ರಿ ಸರಕಾರ ಇದ್ದಾಗ ಮಾತ್ರ ಸಮನ್ವಯ ಸಮಿತಿ ರಚಿಸಲಾಗುತ್ತದೆ) ಬಗ್ಗೆ ಸ್ವತಃ ಡಿ.ಕೆ. ಶಿವಕುಮಾರ್ ಹೇಳಿದ್ದರು. ಆದರೆ ಇಲ್ಲಿಯವರೆಗೆ ಅದು ಕಾರ್ಯರೂಪಕ್ಕೆ ಬಂದಿಲ್ಲ. ಮೊನ್ನೆ ದಿಲ್ಲಿಗೆ ಹೋಗಿ ರಾಹುಲ್ ಗಾಂಧಿ ಭೇಟಿ ಮಾಡಿ ಬಂದಿರುವ ಸಿದ್ದರಾಮಯ್ಯ ಕೂಡ ಸಮನ್ವಯ ಸಮಿತಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇವೆಲ್ಲವುಗಳ ಜೊತೆಗೆ ಕೆಲ ಸಚಿವರು ಮತ್ತು ಶಾಸಕರು ‘ಸಿಎಂ ನಮ್ಮ ಮಾತು ಕೇಳುತ್ತಿಲ್ಲ, ಏಕಮುಖವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ನೀವಾದರೂ ಹೇಳಿ’ ಎಂದು ಹರಿಪ್ರಸಾದ್ ಬಳಿ ಅಳಲು ತೋಡಿಕೊಂಡಿದ್ದಾರೆ. ಇದೆಲ್ಲದರ ಪರಿಣಾಮ ಡಿ.ಕೆ. ಶಿವಕುಮಾರ್ ವಿರುದ್ಧ ಹರಿಪ್ರಸಾದ್ ಭಾರತ್ ಜೋಡೊ ಯಾತ್ರೆಯ ಬಾಣ ಬಿಟ್ಟಿದ್ದಾರೆ.

ಒಂದೆಡೆ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷವನ್ನು 2028ಕ್ಕೂ ಮತ್ತೆ ಅಧಿಕಾರಕ್ಕೆ ತರುತ್ತೇನೆ ಎಂದು ಪದೇ ಪದೇ ಹೇಳುತ್ತಿದ್ದಾರೆ. ಕಾಂಗ್ರೆಸ್ ಗೆದ್ದರೆ ಅದು ನನ್ನಿಂದಲೇ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಅವರದು. ಈಗಿನಿಂದಲೇ ಆ ಕೆಲಸವನ್ನು ಕೈಗೆತ್ತಿಕೊಂಡಿದ್ದಾರೆ. ಇನ್ನೊಂದೆಡೆ ಭಾರತ್ ಜೋಡೊ ಎಂಬ ಜನಪ್ರಿಯ ರಾಜಕೀಯ ಬ್ರಾಂಡ್ ಬಳಸಿಕೊಂಡು ರಾಜ್ಯ ಕಾಂಗ್ರೆಸ್ ಒಳಗಿನ ಅಧಿಕಾರದ ಸಮೀಕರಣದಲ್ಲಿ ತಮ್ಮ ಸ್ಥಾನ ಬಲಪಡಿಸಿಕೊಳ್ಳುವ ಪ್ರಯತ್ನ ಹರಿಪ್ರಸಾದ್ ಅವರದು. ಇದೆಲ್ಲದರಿಂದ ಬಿ.ಕೆ. ಹರಿಪ್ರಸಾದ್ ಶಿಕಾರಿಪುರದಿಂದ ಆರಂಭಿಸಿರುವ ಭಾರತ್ ಜೋಡೊ ಯಾತ್ರೆಯ ತಕ್ಷಣದ ಶಿಕಾರಿ ಬಿಜೆಪಿಯವರಲ್ಲ, ಡಿ.ಕೆ. ಶಿವಕುಮಾರ್ ಎನ್ನುವುದು ಖಾತರಿಯಾಗಿದೆ.

► ಸಚಿವರಿಗೆ ಡಿ.ಕೆ. ತರಾಟೆ

ಮಂತ್ರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಪ್ರತಿಪಕ್ಷಗಳು ದೂರುವುದು ಹೊಸತಲ್ಲ. ಸ್ವಪಕ್ಷದಲ್ಲೂ ಅಧಿಕಾರ ಸಿಕ್ಕಿಲ್ಲದವರು ಮಾತನಾಡಿ.ಕೆ.ೂಂಡರೆ ಆಶ್ಚರ್ಯ ಪಡುವಂಥದ್ದಲ್ಲ. ಸ್ವತಃ ಮುಖ್ಯಮಂತ್ರಿಯೇ ಹಾಗೆ ಹೇಳಿದರೆ?. ಇತ್ತೀಚೆಗೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಂಥ ಬೆಳವಣಿಗೆ ಆಗಿದೆ. ಮಂತ್ರಿಗಳ ಕಾರ್ಯವೈಖರಿ ಬಗ್ಗೆ ಡಿ.ಕೆ. ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂತ್ರಿಗಳು ಕೆಲಸ ಮಾಡುತ್ತಿರುವ ವೇಗ ಸಾಲದು ಎಂದಿದ್ದಾರೆ. ಶತಾಯಗತಾಯ 2028ರ ವಿಧಾನಸಭಾ ಚುನಾವಣೆಯನ್ನು ಗೆಲ್ಲಬೇಕು. ಅದಕ್ಕಾಗಿ ಗ್ರಾಮ ಪಂಚಾಯತ್ಗಳಿಗೆ ತಲಾ 1 ಕೋಟಿ ರೂಪಾಯಿ ಅನುದಾನ ಕೊಡುತ್ತೇನೆ. ನೀವು 24/7 ಕೆಲಸ ಮಾಡಬೇಕಷ್ಟೆ. ಮಂತ್ರಿಗಳು ಕೆಲಸ ಮಾಡದಿದ್ದರೆ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದರಿಂದ ಶಾಸಕರಿಗೆ ಒಂದೆಡೆ ದುಡ್ಡು ಸಿಗುತ್ತದೆ ಎನ್ನುವ ಖುಷಿ. ಇನ್ನೊಂದೆಡೆ ಸಿಎಂ ಹೀಗೆ ಹೇಳಿದ್ದೇಕೆ ಎನ್ನುವ ಗೊಂದಲ.

► ಎಚ್ಡಿಕೆಯಿಂದ ಡಿಕೆಗೆ ಲಾಭ!

ರಾಜ್ಯದ ಅಧಿಕೃತ ಪ್ರತಿಪಕ್ಷ ಬಿಜೆಪಿ, ಅದರ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ಮತ್ತಿತರರೆಲ್ಲಾ ಆಟಕ್ಕುಂಟು ಲೆಕ್ಕಕ್ಕಿಲ್ಲ. ಡಿ.ಕೆ. ಶಿವಕುಮಾರ್ ಪಾಲಿಗೆ ಪ್ರತಿಪಕ್ಷಗಳ ಪೈಕಿ ತಲೆನೋವಾಗಿರುವುದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾತ್ರ. ಅವರು ದಿಲ್ಲಿಯಿಂದ ಬೆಂಗಳೂರಿಗೆ ಬರುವುದೇ ಡಿ.ಕೆ. ಶಿವಕುಮಾರ್ ಮೇಲೆ ಆರೋಪ ಮಾಡಲು. ಅದರಿಂದಾಗಿ ಅವರು ಕರ್ನಾಟಕಕ್ಕಷ್ಟೇ ಕೇಂದ್ರ ಸಚಿವರು ಎನ್ನುವ ಅನುಮಾನ ಬರುತ್ತಿದೆ. ಜೊತೆಗೆ ಅವರು ಇಲ್ಲೇ ವಿರೋಧ ಪಕ್ಷದ ನಾಯಕ ಆಗಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವ ಅಭಿಪ್ರಾಯವೂ ಇದೆ.

ಇದೆಲ್ಲದರ ನಡುವೆ ಎಚ್.ಡಿ. ಕುಮಾರಸ್ವಾಮಿ ಅವರಿಂದ ಡಿ.ಕೆ. ಶಿವಕುಮಾರ್ ಅವರಿಗೆ ಲಾಭವಾಗುವ ಸಾಧ್ಯತೆಯೂ ಇದೆ ಎನ್ನುವುದು ಕುತೂಹಲಕಾರಿ ಸಂಗತಿ. ಇದೇ ಕಾರಣಕ್ಕೆ ಕುಮಾರಸ್ವಾಮಿ ಅಳೆದು-ತೂಗಿ ದಾಳ ಉರುಳಿಸುತ್ತಿದ್ದಾರೆ. ಮೊದಲು ವಿದೇಶದಿಂದ ಬಂದ ಕೂಡಲೇ ದೇಶವೇ ಅಲ್ಲೋಲ ಕಲ್ಲೋಲ ಆಗುವಂತಹ ಸ್ಫೋಟಕ ಸುದ್ದಿ ಕೊಡುತ್ತೇನೆ ಎಂದು ಹೇಳಿದ್ದರು. ನಂತರ ಯುದ್ಧ ಆರಂಭಿಸಲು ವಿಜಯದಶಮಿಯೇ ಶುಭದಿನ ಎಂದು ವರಸೆ ಬದಲಿಸಿದ್ದರು. ಇದಾದ ಮೇಲೆ ತಾವೇ ನಿಗದಿ ಮಾಡಿದ್ದ ಅವಧಿಗೂ ಮುನ್ನವೇ ಕದನ ವಿರಾಮ ಉಲ್ಲಂಘಿಸಿ ಸೆಪ್ಟಂಬರ್ 29ರಂದೇ 'ಬಾಂಬ್' ಹಾಕಿದರು.

ಕುಮಾರಸ್ವಾಮಿ ಹಾಕಿರುವ ಬಾಂಬ್ ನಿರೀಕ್ಷಿತ ಪ್ರಮಾಣದಲ್ಲಿ ಹಾನಿ ಮಾಡಿಲ್ಲ. ಅವರ ಬತ್ತಳಿಕೆಯಲ್ಲಿ ಇನ್ನೂ ಪ್ರಖರವಾದ ಅಸ್ತ್ರಗಳಿದ್ದರೂ ಪ್ರಯೋಗ ಮಾಡಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಡಿ.ಕೆ. ಶಿವಕುಮಾರ್ 'ನನ್ನನ್ನು ಬಲಿಪಶು ಮಾಡಲಾಗುತ್ತಿದೆ' ಎನ್ನುವ ನಿರೂಪಣೆ ಸೃಷ್ಟಿಸುತ್ತಾರೆ. ಅನುಕಂಪ ಗಿಟ್ಟಿಸಲು ಪ್ರಯತ್ನಿಸುತ್ತಾರೆ. ಕಾಂಗ್ರೆಸ್ ಹೈಕಮಾಂಡ್ ಅನಿವಾರ್ಯವಾಗಿ ಡಿ.ಕೆ. ಶಿವಕುಮಾರ್ ಪರ ನಿಲ್ಲುತ್ತದೆ. ರಾಜ್ಯ ಬಿಜೆಪಿ ನಾಯಕರಂತೂ ಕವಡೆ ಕಾಸಿನಷ್ಟು ನೆರವು ನೀಡುವುದಿಲ್ಲ. ಕುಮಾರಸ್ವಾಮಿ ಈ ಎಲ್ಲಾ ವಿಷಯಗಳನ್ನು ಅರಿಯಲಾರದಷ್ಟು ದಡ್ಡರಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಧರಣೀಶ್ ಬೂಕನಕೆರೆ

contributor