ಗಾಂಧೀಜಿ ಧಾರ್ಮಿಕ ವ್ಯಕ್ತಿಯಾಗಿದ್ದು ನಿಜ. ಆರಂಭದಲ್ಲಿ ವರ್ಣಾಶ್ರಮ ಪದ್ಧತಿಯಲ್ಲಿ ಅವರಿಗೆ ನಂಬಿಕೆಯಿತ್ತು. ಆದರೆ ಅವರು ಕೋಮುವಾದಿ ಆಗಿರಲಿಲ್ಲ. ಮನುವಾದಿಯೂ ಅಲ್ಲ. ಕೋಮುವಾದಿ ಆಗಿರಲಿಲ್ಲವೆಂದೇ ಅವರು ಗೋಡ್ಸೆಯ ಗುಂಡಿಗೆ ಬಲಿಯಾದರು. ಗಾಂಧೀಜಿ ಬಗ್ಗೆ ಹಗುರವಾಗಿ ಮಾತನಾಡುವ ಮುನ್ನ ಈ ಅಂಶಗಳನ್ನೆಲ್ಲ ನಾವು ಗಮನಿಸಬೇಕಾಗುತ್ತದೆ. ಎಷ್ಟೇ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ವ್ಯಕ್ತಪಡಿಸುವುದು, ವಿರೋಧಿಸುವುದು ಅಂಬೇಡ್ಕರ್ ಸೇರಿದಂತೆ ಪ್ರಜಾಪ್ರಭುತ್ವ ವಾದಿಗಳೆಲ್ಲರ ಭಾಷೆ. ಆದರೆ ಕೊಲ್ಲುವುದು ಗೋಡ್ಸೆ ಭಾಷೆ.ನಾವು ಒಪ್ಪಿಕೊಳ್ಳಬೇಕಾಗಿರುವುದು ಅಂಬೇಡ್ಕರ್ ಭಾಷೆಯನ್ನು.

ಕಳೆದ ಶುಕ್ರವಾರ ದೇಶವ್ಯಾಪಿ ಮಾತ್ರವಲ್ಲ ಜಾಗತಿಕ ವಾಗಿಯೂ ಅನೇಕ ಕಡೆ ಗಾಂಧಿ ಜಯಂತಿಯನ್ನು ಆಚರಿಸಲಾಯಿತು. ಬಾಪೂಜಿಯನ್ನು ಒಪ್ಪಿದವರು ಮತ್ತು ಒಪ್ಪದಿದ್ದವರು ಮಾತ್ರವಲ್ಲ ಅವರನ್ನು ನಖಶಿಖಾಂತವಾಗಿ ವಿರೋಧಿಸುವವರು ಕೂಡ ಆ ದಿನ ಕಾಟಾಚಾರದ ಭಾಷಣ ಮಾಡಿ, ಅವರ ಫೋಟೊಗೆ ಹಾರ ಹಾಕಿ ತೋರಿಕೆಯ ಗೌರವವನ್ನು ಸಲ್ಲಿಸುತ್ತಾರೆ. ಗಾಂಧೀಜಿಯನ್ನು ಹತ್ಯೆ ಮಾಡಿದ ಗೋಡ್ಸೆ ಈಗಿಲ್ಲವಾದರೂ ಆತನ ಅನುಯಾಯಿಗಳು ಈಗಲೂ ನಿತ್ಯವೂ ಬಾಪೂಜಿಯನ್ನು ಕೊಲ್ಲುತ್ತಲೇ ಇದ್ದಾರೆ. ರಾಜಧಾನಿ ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರೂ ಸೇರಿದಂತೆ ಅನೇಕ ರಾಜಕಾರಣಿಗಳು ರಾಜ ಘಾಟ್‌ನಲ್ಲಿ ಇರುವ ಅವರ ಸಮಾಧಿಗೆ ಬಂದು ಮನಸ್ಸಿಲ್ಲದ ಮನಸ್ಸಿನಿಂದ ಕೈ ಮುಗಿಯುತ್ತಾರೆ. ವಿದೇಶಕ್ಕೆ ಹೋದರೆ ಗಾಂಧಿ ಜನಿಸಿದ ನಾಡಿನಿಂದ ಬಂದಿದ್ದಾಗಿ ತಮ್ಮನ್ನು ಪರಿಚಯಿಸಿಕೊಳ್ಳುತ್ತಾರೆ. ಅಕ್ಟೋಬರ್ 2, ಇದೊಂದು ದಿನವನ್ನು ಮುಗಿಸಿ ಮರುದಿನದಿಂದ ಈ ದೇಶದಲ್ಲಿ ಗಾಂಧಿ ನಿಂದನಾ ಸ್ತುತಿ ನಿರಂತರವಾಗಿ ನಡೆಯುತ್ತದೆ. ಸಾಮಾಜಿಕ ಜಾಲ ತಾಣದಲ್ಲಿ ಮಹಾತ್ಮನ ಬಗ್ಗೆ ಅತ್ಯಂತ ಹೊಲಸು ಭಾಷೆಯಲ್ಲಿ ನಿಂದಿಸುವವರು ಯಾರೆಂದು ಎಲ್ಲರಿಗೂ ಗೊತ್ತಿದೆ. ಗಾಂಧೀಜಿ ಪ್ರತಿಪಾದಿಸುತ್ತಿದ್ದ ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯ ಇದ್ದರೆ ವಿಶ್ಲೇಷಣೆ ಮಾಡಲಿ.

ಅದನ್ನು ಬಿಟ್ಟು ಗಾಂಧೀಜಿ ಬಗ್ಗೆ ಅತ್ಯಂತ ಅಸಭ್ಯವಾದ ,ಅಸಹ್ಯವಾದ ಬರಹಗಳನ್ನು,ಕೆಟ್ಟ ಚಿತ್ರಗಳನ್ನು ಹಾಕುತ್ತಾರೆ. ಗಾಂಧಿ ಹಂತಕ ಗೋಡ್ಸೆಯನ್ನು ರಾಷ್ಟ್ರ ಭಕ್ತ ಎಂಬಂತೆ ಬಿಂಬಿಸುತ್ತಾರೆ.

ಇದರ ಜೊತೆ ಜೊತೆಗೆ ಗಾಂಧಿ, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್,ಅಂಬೇಡ್ಕರ್, ನೆಹರೂ , ವಲ್ಲಭಭಾಯಿ ಪಟೇಲ್ ಅವರನ್ನು ಪರಸ್ಪರ ಶತ್ರುಗಳಂತೆ ಬಿಂಬಿಸಿ ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿಕಟ್ಟಿ ಅಪಪ್ರಚಾರ ಮಾಡುವ ಚಟುವಟಿಕೆಗಳು ನಿರಂತರವಾಗಿ ನಡೆದಿವೆ. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸದಿದ್ದವರು, ಅದನ್ನು ವಿರೋಧಿಸಿದ ಸಂಘಟನೆ ಮತ್ತು ಸಿದ್ಧಾಂತಕ್ಕೆ ಸೇರಿದವರು ಇಂಥ ಅಪಪ್ರಚಾರದ ಹಿಂದೆ ಇದ್ದಾರೆ.

ಗಾಂಧಿ, ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್, ನೆಹರೂ, ಭಗತ್ ಸಿಂಗ್, ಮೌಲಾನ ಅಬುಲ್ ಕಲಾಂ ಅಝಾದ್ ಇವರೆಲ್ಲ ತಮ್ಮನ್ನು ತಾವು ಸುಟ್ಟುಕೊಂಡು ಬಹುತ್ವ ಭಾರತ ಕಟ್ಟಿದವರು. ನಿಜ, ಅವರ ನಡುವೆ ಭಿನ್ನಾಭಿಪ್ರಾಗಳಿದ್ದವು.ಆದರೆ ಅವರು ಪರಸ್ಪರ ತೇಜೋವಧೆ ಮಾಡಲಿಲ್ಲ.

ಅವರ ನಡುವಿನ ಭಿನ್ನಾಭಿಪ್ರಾಯ ಅವರ ಕಾಲಘಟ್ಟಕ್ಕೆ ಸೀಮಿತವಾದ ತಾತ್ವಿಕವಾದ ಭಿನ್ನಾಭಿಪ್ರಾಯವಾಗಿತ್ತು. ಹಾಗೆಂದು ಅವರು ಪರಸ್ಪರ ಶತ್ರುಗಳಾಗಿರಲಿಲ್ಲ. ಪರಸ್ಪರ ಗೌರವ ಹೊಂದಿದ್ದರು.ಅವರ ಬಗ್ಗೆ ಯಾರೇ ಹಗುರುವಾಗಿ ಮಾತಾಡಿದರೂ ತಪ್ಪು. ಎಷ್ಟೇ ಭಿನ್ನಾಭಿಪ್ರಾಯವಿರಲಿ ಅವರು ಮನುಷ್ಯರ ನಡುವೆ ಭೇದ ಮಾಡಲಿಲ್ಲ. ಗಾಂಧೀಜಿ ಬಗ್ಗೆ ಹೇಳಬೇಕೆಂದರೆ ಆತ ನಿರಂತರ ಬದಲಾವಣೆಗೆ ತನ್ನನ್ನು ಒಡ್ಡಿಕೊಂಡ ಮನುಷ್ಯ. ತನ್ನ ವಾದವೇ ಶ್ರೇಷ್ಠ ಎಂಬ ಹಟಮಾರಿತನ ಗಾಂಧೀಜಿಗೆ ಇರಲಿಲ್ಲ. ಅಂತಲೆ ಬಾಬಾಸಾಹೇಬರು ಮತ್ತು ಗಾಂಧಿ ನಡುವೆ ಸಂವಾದ ಸಾಧ್ಯವಾಗುತ್ತಿತ್ತು. ಇಬ್ಬರ ನಡುವೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಪರಸ್ಪರ ಮಾತುಕತೆಗೆ ಅಡ್ಡಿಯಾಗಲಿಲ್ಲ. ಸಂವಾದಗಳೇ ಮಾಯವಾಗುತ್ತಿರುವ ಇಂದಿನ ಕಾಲ ಘಟ್ಟದಲ್ಲಿ ನಿಂತು, ಭ್ರಷ್ಟ ವ್ಯವಸ್ಥೆಯ ಜೊತೆ ರಾಜಿ ಮಾಡಿಕೊಂಡು ಬದುಕುತ್ತ ಅಂಥ ಮಹಾ ಚೇತನರ ಬಗ್ಗೆ ಸಣ್ಣ ಮಾತು ಆಡುವುದು ನಮ್ಮ ಸಣ್ಣತನ. ಗಾಂಧಿ, ಅಂಬೇಡ್ಕರ್ ಇಂದು ಬದುಕಿದ್ದರೆ ಬಹುಶಃ ಅವರ ನಡುವಿನ ಸಂಬಂಧ ಹಿಂದಿನಂತಿರುತ್ತಿರಲಿಲ್ಲ.ಸ್ವಾತಂತ್ರ್ಯ ಹೋರಾಟದ ಕಾಲ ಘಟ್ಟದಲ್ಲಿ ಗಾಂಧೀಜಿಗೆ ಅವರದೇ ಆದ ಅಭಿಪ್ರಾಯ ಇತ್ತು.

ಗಾಂಧೀಜಿಗೆ ಭಾರತ ಮೊದಲು ಸ್ವತಂತ್ರ ವಾಗಬೇಕಾಗಿತ್ತು. ಇದು ಅವರ ಮೊದಲ ಆದ್ಯತೆಯಾಗಿತ್ತು. ಅದನ್ನು ಸಾಧಿಸಲು ಜಾತಿ, ಮತವೆನ್ನದೆ ಎಲ್ಲ ಜನ ಸಮುದಾಯಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುವುದು ಅವರ ಮೊದಲ ಪ್ರಾಶಸ್ತ್ಯ ಆಗಿತ್ತು. ತಮ್ಮ ನಿಲುವಿನ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದವರನ್ನು ಗಾಂಧಿ ದ್ವೇಷಿಸುತ್ತಿರಲಿಲ್ಲ. ಹೆಸರಾಂತ ನಾಸ್ತಿಕ ವಾದಿ ಗೋರಾ ಹೆಚ್ಚಾಗಿ ಗಾಂಧೀಜಿ ಆಶ್ರಮ ದಲ್ಲಿ ಇರುತ್ತಿದ್ದರು. ಅವರನ್ನು ಪ್ರಾರ್ಥನೆ, ಪೂಜೆ ಇತ್ಯಾದಿಗಳಿಗೆ ಗಾಂಧೀಜಿ ಎಂದೂ ಕರೆಯುತ್ತಿರಲಿಲ್ಲ. ನಿತ್ಯ ವಾಯು ವಿಹಾರಕ್ಕೆ ಹೋಗುವಾಗ ಗೋರಾ ಅವರನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದ ಗಾಂಧೀಜಿ ಅವರೊಂದಿಗೆ ಚರ್ಚೆ ಮಾಡುತ್ತಿದ್ದರು.

ಆದರೆ, ಬಾಬಾಸಾಹೇಬರ ಗುರಿ ಬೇರೆ ಆಗಿತ್ತು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೆ ಅದೊಂದರಿಂದಲೇ ದುಡಿಯುವ ದಲಿತ ಸಮುದಾಯಗಳಿಗೆ ಬಿಡುಗಡೆ ಸಿಗುವುದಿಲ್ಲ. ಸ್ವತಂತ್ರ ಭಾರತದಲ್ಲೂ ಅವರು ಶ್ರೇಣೀಕೃತ ಜಾತಿ ವ್ಯವಸ್ಥೆಯ ಗುಲಾಮಗಿರಿಯಲ್ಲೇ ನರಳಬೇಕಾಗುತ್ತದೆ. ಅದಕ್ಕಾಗಿ ಸ್ವತಂತ್ರ ಭಾರತದಲ್ಲಿ ನನ್ನ ಜನರಿಗೇನು? ಎಂಬ ಪ್ರಶ್ನೆ ಎತ್ತಿದರು. ಬ್ರಿಟಿಷರು ಮತ್ತು ಮೊಗಲರು ಬರುವುದಕ್ಕಿಂತ ಮೊದಲಿನಿಂದಲೂ ಯಾತನೆ ಪಡುತ್ತಿದ್ದ ಕರ್ಮ ಸಿದ್ಧಾಂತದಲ್ಲಿ ಅಗೋಚರ ಬೇಡಿಗಳಿಂದ ಬಂಧಿತರಾಗಿದ್ದ ನನ್ನ ಜನರಿಗೆ ಸ್ವಾತಂತ್ರ್ಯ ಯಾವಾಗ ಎಂದು ಪ್ರಶ್ನಿಸಿದ ಅವರು ಪಟ್ಟು ಹಿಡಿದರು. ಪುಣೆ ಒಪ್ಪಂದದ ಸಂದರ್ಭದಲ್ಲಿ ಉಪವಾಸ ಕುಳಿತಿದ್ದ ಗಾಂಧೀಜಿಯವರನ್ನು ಬದುಕಿಸಲು ಒಂದಿಷ್ಟು ರಾಜಿ ಮಾಡಿಕೊಂಡು ಅಂಬೇಡ್ಕರ್ ತಮ್ಮ ಗುರಿ ಸಾಧಿಸಿದರು. ಇವರಿಬ್ಬರ ನಡುವೆ ವೈಯಕ್ತಿಕ ಹಗೆತನ ಇರಲಿಲ್ಲ. ಶತಮಾನಗಳ ನೋವಿನಿಂದ ಅಂಬೇಡ್ಕರ್ ಗಾಂಧೀಜಿಯನ್ನು ಒರಟಾದ ಭಾಷೆಯಲ್ಲಿ ಬೈದರು ಅದರಲ್ಲಿ ನಂಜಿರಲಿಲ್ಲ. ಇದು ಗಾಂಧೀಜಿಗೂ ಗೊತ್ತಿತ್ತು. ಅಂತಲೇ ಅಂಬೇಡ್ಕರ್ ಅವರನ್ನು ಅವರು ಎಂದೂ ಅಗೌರವಿಸಲಿಲ್ಲ. ಅಂತಲೇ ಸಂವಿಧಾನ ರಚನಾ ಸಮಿತಿ ಅಧ್ಯಕ್ಷತೆ ಪ್ರಶ್ನೆ ಎದುರಾದಾಗ ಗಾಂಧೀಜಿ ಬಾಬಾಸಾಹೇಬರ ಹೆಸರನ್ನು ಸೂಚಿಸಿದರು.

ಸಮಾನತೆಯನ್ನು ಬಯಸುವ ಯಾರೇ ಆಗಿರಲಿ ತಮ್ಮ ಮುಂದಿರುವ ಸವಾಲುಗಳು ಮತ್ತು ಆದ್ಯತೆಗಳು ಯಾವುವು ಎಂಬುದನ್ನು ಮೊದಲು ಗುರುತಿಸಬೇಕು. ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಬಹುತ್ವದ ಬದುಕು ಬಿಕ್ಕಟ್ಟಿನ ಸುಳಿಗೆ ಸಿಲುಕಿದೆ.ಸಂವಿಧಾನವನ್ನು ಬುಡಮೇಲು ಮಾಡುವ ಹುನ್ನಾರ ನಡೆದಿದೆ. ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ಅಲ್ಪಸಂಖ್ಯಾತ, ದಲಿತ, ಹಿಂದುಳಿದ ವರ್ಗಳ ಮತಗಳನ್ನು ಕದಿಯುವ ಹಗಲು ದರೋಡೆ ನಡೆದಿದೆ. ಅದನ್ನು ವಿಫಲಗೊಳಿಸಿ ಬಹುತ್ವ ಭಾರತವನ್ನು ಕಾಪಾಡುವುದು ನಮ್ಮ ಮೊದಲ ಆದ್ಯತೆಯಾಗಿರಬೇಕು.

ಆಗ ಅಂದರೆ ಭಾರತ ಬ್ರಿಟಿಷ್ ವಸಾಹತುಶಾಹಿಯ ದಾಸ್ಯಕ್ಕೆ ಸಿಲುಕಿದ ಆ ದಿನಗಳಲ್ಲಿ ವಿದೇಶಿ ಆಳ್ವಿಕೆಯಿಂದ ಮೊದಲು ವಿಮೋಚನೆ ಎಂಬ ಗಾಂಧಿ ಮಾರ್ಗ ಅವರ ದೃಷ್ಟಿಯಿಂದ ಸರಿಯಾಗಿತ್ತು. ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬರುವ ಮುನ್ನವೇ ಇಲ್ಲಿ ಸ್ವಾತಂತ್ರ್ಯ ಹೋರಾಟದ ಸಂಚಲನ ಆರಂಭವಾಗಿತ್ತು. ಮಹಾರಾಷ್ಟ್ರದ ಬಾಲ ಗಂಗಾಧರ ತಿಲಕ್, ಗೋಪಾಲಕೃಷ್ಣ ಗೋಖಲೆ ಮೊದಲಾದವರು ಪ್ರತಿರೋಧದ ಧ್ವನಿ ಎತ್ತಿದ್ದರು. ಆದರೆ, ಅದು ಎಲ್ಲರನ್ನೂ ಒಳಗೊಂಡಿರಲಿಲ್ಲ. ವ್ಯಾಪಕ ಸ್ವರೂಪ ಪಡೆದಿರಲಿಲ್ಲ. ತಿಲಕರು ಗಣೇಶೋತ್ಸವದಂಥ ಕಾರ್ಯಕ್ರಮಗಳನ್ನು ಸಂಘಟಿಸಿದರೂ ಕೂಡ ಅದು ಎಲ್ಲ ಭಾರತೀಯ ಸಮುದಾಯಗಳನ್ನು ಒಳಗೊಂಡಿರಲಿಲ್ಲ. ಎಲ್ಲರನ್ನು ಒಳಗೊಳ್ಳುವ ವಿಶಾಲ ಮನೋಭಾವ ತಿಲಕರಿಗಿರಲಿಲ್ಲ. ಯಾವುದೇ ಒಂದು ಸಮುದಾಯದ ಜನರು ದನಿಯೆತ್ತಿದರೆ ಬ್ರಿಟಿಷರು ಈ ದೇಶ ಬಿಟ್ಟು ಹೋಗುತ್ತಾರೆ ಎಂಬುದು ಸುಳ್ಳಾಯಿತು. ಅಂತಲೇ ಮಹಾತ್ಮ್ಮಾ ಗಾಂಧಿಯವರು ಭಾರತಕ್ಕೆ ಬಂದ ನಂತರ ಮೊದಲು ದೇಶ ಪರ್ಯಟನೆ ಮಾಡಿದರು. ಭಾರತ ಎಂಬುದು ಆಗ ಇನ್ನೂ ಒಂದು ರಾಷ್ಟ್ರದ ಸ್ವರೂಪವನ್ನು ಪಡೆದಿರಲಿಲ್ಲ. ಊರಿಗೊಬ್ಬ ಪಟೇಲರು, ಗೌಡರು, ನಿರ್ದಿಷ್ಟ ಪ್ರದೇಶಕ್ಕೆ ಒಬ್ಬ ಪಾಳೆಯಗಾರ, ಅವನ ಮೇಲೊಬ್ಬ ರಾಜ. ಇದು ಅಂದಿನ ಭಾರತ.

ಇಂದಿನ ಭಾರತವೂ ಮತ್ತೆ ಅತ್ತ ಹೊರಟಿದೆ. ಈ ನೆಲದಲ್ಲಿ ಒಂದೇ ಭಾಷೆಯನ್ನಾಡುವ ,ಇಲ್ಲವೇ ಒಂದೇ ಆಹಾರ ಪದ್ಧತಿಯನ್ನು ಹೊಂದಿದ,ಒಂದೇ ಧರ್ಮದ, ಒಂದೇ ಜಾತಿಯ ಜನರಿಲ್ಲ. ಇಲ್ಲಿ ವಿಭಿನ್ನ ಭಾಷೆಗಳನ್ನಾಡುವ, ವಿಭಿನ್ನ ನಂಬಿಕೆಗಳ, ವಿಭಿನ್ನ ಧರ್ಮಗಳ, ಭಿನ್ನ ಆಹಾರ ಪದ್ಧ್ದತಿ ಹೊಂದಿದ ಜನರಿದ್ದಾರೆ ಎಂಬುದನ್ನು ಭಾರತ ಪರ್ಯಟನೆ ಮೂಲಕ ಅರಿತುಕೊಂಡ ಗಾಂಧೀಜಿ ಈ ನೆಲದ ಎಲ್ಲರನ್ನೂ ಬೆಸೆದು ಒಂದುಗೂಡಿಸುವ ಪ್ರಯತ್ನಕ್ಕೆ ಕೈ ಹಾಕಿದರು. ಭಾರತ ಎಂಬುದು ಇಲ್ಲಿ ನೆಲೆಸಿರುವ ಎಲ್ಲಾ ಸಮುದಾಯಗಳಿಗೆ ಸೇರಿದ್ದು ಎಂದು ಪ್ರತಿಪಾದಿಸಿದರು.

ಸ್ವಾತಂತ್ರ್ಯ ಹೋರಾಟಕ್ಕೆ ಬಲ ತಂದು ಕೊಡಲು ಹಿಂದೂ-ಮುಸ್ಲಿಮ್ ಏಕತೆ ಅಗತ್ಯವಾಗಿದೆ ಎಂದು ಮನಗಂಡು ಆ ನಿಟ್ಟಿನಲ್ಲಿ ಸಾಕಷ್ಟು ಪರಿಶ್ರಮ ಪಟ್ಟರು. ಆದರೆ, ಭಾರತದಲ್ಲಿ ಶತಮಾನಗಳಿಂದ ನಾಯಿ ನರಿಗಳಿಗಿಂತ ಕಡೆಯಾಗಿ ಅತ್ಯಂತ ಹೀನಾಯ ಸ್ಥಿತಿಯಲ್ಲಿ ಇದ್ದ ಅಸ್ಪಶ್ಯ ದಲಿತ ಸಮುದಾಯದ ನೋವು ಆರಂಭದಲ್ಲಿ ಗಾಂಧೀಜಿ ಗಮನಕ್ಕೆ ಬರಲಿಲ್ಲ. ಇದನ್ನು ಅವರ ಗಮನಕ್ಕೆ ಬರುವಂತೆ ಮಾಡಿದವರು ಮೇಧಾವಿ ಡಾ.ಬಾಬಾಸಾಹೇಬ ಅಂಬೇಡ್ಕರ್. ಲಂಡನ್‌ನಲ್ಲಿ ದುಂಡು ಮೇಜಿನ ಸಭೆಗೆ ಗಾಂಧೀಜಿ ಮತ್ತು ಜಿನ್ನಾ ಅವರಂತೆ ಡಾ. ಅಂಬೇಡ್ಕರ್ ಅವರೂ ಹೋಗಿದ್ದರು. ಭಾರತದ ವಂಚಿತ ದಲಿತ ಸಮುದಾಯದ ಪರವಾಗಿ ಅಲ್ಲಿ ಮಾತನಾಡಿದ ಅಂಬೇಡ್ಕರ್, ‘ಭಾರತಕ್ಕೆ ಸ್ವಾತಂತ್ರ್ಯ ಕೊಡುವ ಮೊದಲು ನನ್ನ ಜನರ ಬದುಕಿನ ಪ್ರಶ್ನೆ ಇತ್ಯರ್ಥವಾಗಬೇಕು ಎಂದು ಪಟ್ಟು ಹಿಡಿದರು. ಉಳಿದವರು ಬ್ರಿಟಿಷರು ಬಂದ ನಂತರ ಸ್ವಾತಂತ್ರ್ಯವನ್ನು ಕಳೆದುಕೊಂಡರೆ ನನ್ನ ಜನ ಬ್ರಿಟಿಷರು ಬರುವುದಕ್ಕಿಂತ ಮೊದಲಿನಿಂದಲೂ ಅಂದರೆ ಸಾವಿರಾರು ವರ್ಷಗಳಿಂದಲೂ ಸ್ವಾತಂತ್ರ್ಯ ಕಳೆದುಕೊಂಡಿದ್ದಾರೆ. ಭಾರತದಿಂದ ಬ್ರಿಟಿಷರು ಹೋದ ನಂತರವೂ ನಮಗೆ ಸ್ವಾತಂತ್ರ್ಯ ಸಿಗುವುದಿಲ್ಲ. ಜಾತಿ ಪದ್ಧ್ದತಿಯ ಪಾಶದಲ್ಲಿ ನಲುಗಿದ ದಲಿತರ ವಿಮೋಚನೆ ಆಗುವುದಿಲ್ಲ. ಕಾರಣ ಸ್ವಾತಂತ್ರ್ಯಾ ನಂತರ ನನ್ನ ಜನರ ಸುರಕ್ಷತೆ, ಸಮಾನತೆಯ ಪ್ರಶ್ನೆ ಮೊದಲು ಇತ್ಯರ್ಥ ಆಗಬೇಕೆಂದು ಬಲವಾಗಿ ಪ್ರತಿಪಾದಿಸಿದರು.

ಇವರಿಬ್ಬರ ಮಾರ್ಗ ಸ್ಪಷ್ಟವಾಗಿತ್ತು. ತಮ್ಮ ಗುರಿ ಸಾಧನೆಗಾಗಿ ಹೊಂದಾಣಿಕೆ ಮಾಡಿಕೊಳ್ಳುವ , ಇನ್ನೊಬ್ಬರ ಅಭಿಪ್ರಾಯವನ್ನು ಗೌರವಿಸುವ ಮನೋಭಾವ ಮತ್ತು ಅನಿವಾರ್ಯತೆ ಮಹಾತ್ಮ್ಮಾ ಗಾಂಧೀಜಿಯವರಿಗಿತ್ತು. ಅಂತಲೇ ಅಂಬೇಡ್ಕರ್ ಅವರು ಎತ್ತಿದ ಪ್ರಶ್ನೆಗಳಿಗೆ ಸ್ಪಂದಿಸಿದರು. ಮೀಸಲು ವ್ಯವಸ್ಥೆ ಗೆ ಸಂಬಂಧಿಸಿದಂತೆ ಪುಣೆಯಲ್ಲಿ ಹಲವಾರು ಸುತ್ತಿನ ಮಾತುಕತೆ ನಡೆದು ಕೊನೆಗೆ ಒಪ್ಪಂದಕ್ಕೆ ಸಮ್ಮತಿ ನೀಡಿದರು. ಈ ಒಪ್ಪಂದದ ಬಗ್ಗೆ ಭಿನ್ನಾಭಿಪ್ರಾಯ ಇದ್ದರೂ ಉಪವಾಸ ಸತ್ಯಾಗ್ರಹವನ್ನು ನಡೆಸಿದ್ದ ಬಾಪೂಜಿ ಅವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಒಪ್ಪಂದಕ್ಕೆ ಒಪ್ಪಿಗೆ ನೀಡುವ ದೊಡ್ಡತನ ತೋರಿಸಿದರು. ಇದು ಯಾರೊಬ್ಬರ ಸೋಲು ಗೆಲುವಿನ ಪ್ರಶ್ನೆಯಲ್ಲ. ದೇಶದ ಹಿತದೃಷ್ಟಿಯಿಂದ ಇಬ್ಬರೂ ಕೈಗೊಂಡ ದಿಟ್ಟ ನಿರ್ಧಾರ. ನಮ್ಮ ಹಿಂದಿನ ರಾಷ್ಟ್ರ ನಾಯಕರಿಗೆ ಇಂಥ ಒಂದು ಪರಸ್ಪರ ತಿಳಿವಳಿಕೆ ಇತ್ತು. ಆದರೆ, ಇದೇ ಹೊಂದಾಣಿಕೆ ಸಾವರ್ಕರ್ ಜೊತೆ ಮೇಲ್ಕಂಡ ಇಬ್ಬರಿಗೂ ಇರಲಿಲ್ಲ. ಸಾವರ್ಕರ್ ಹಿಂದೂ ರಾಷ್ಟ್ರದ ಕಲ್ಪನೆಯನ್ನು ಇವರಿಬ್ಬರೂ ಒಪ್ಪಿಕೊಳ್ಳುತ್ತಿರಲಿಲ್ಲ.

ಗಾಂಧಿ ಮತ್ತು ಅಂಬೇಡ್ಕರ್ ನಡುವಿನ ಭಿನ್ನಾಭಿ ಪ್ರಾಯಗಳನ್ನು ಅವರು ಬದುಕಿದ ಕಾಲ ಘಟ್ಟದಲ್ಲಿ ಇಟ್ಟು ಅಧ್ಯಯನ ಮಾಡಬೇಕು. ಅಂದಿನ ಅವರ ನಡುವಿನ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡು ಗಾಂಧೀಜಿ ಬಗ್ಗೆ ನಾವು ಇಂದಿನ ಬದಲಾದ ಸನ್ನಿವೇಶದಲ್ಲಿ ತಪ್ಪುಕಲ್ಪನೆ ಹೊಂದುವುದು ಎಷ್ಟು ಸಮರ್ಪಕ? ಈಗ ನಮ್ಮ ಮುಂದಿರುವ ಸವಾಲು ಯಾವುದು? ಈಗ ನಮ್ಮ ನಡುವೆ ಬದುಕಿಲ್ಲದ ಮತ್ತು ಮೆದುಳಿಗೆ ವಿಷ ತುಂಬಿದ ಹೊಸ ಪೀಳಿಗೆಯ ದಾರಿ ತಪ್ಪಿದ ವಾಟ್ಸ್‌ಆ್ಯಪ್ ಪ್ರಚಾರದ ಇಂದಿನ ದಿನಗಳಲ್ಲಿ ಗಾಂಧೀಜಿ ಮತ್ತು ಬಾಬಾಸಾಹೇಬರ ನೈಜ ಅನುಯಾಯಿಗಳು ತಮ್ಮ ನಿಜವಾದ ಸೈದ್ಧಾಂತಿಕ ಶತ್ರು ಯಾರೆಂದು ಗುರುತಿಸಿಕೊಳ್ಳಬೇಕಾಗಿದೆ.

ಗಾಂಧಿಯವರಿಗಂತೂ ಈಗ ಅನುಯಾಯಿಗಳೇ ಇಲ್ಲ. ಆದರೂ ನಮ್ಮ ಪ್ರಧಾನಿ ಮತ್ತು ಇತರ ಅತಿ ಗಣ್ಯರು ವಿದೇಶಕ್ಕೆ ಹೋದರೆ ಗಾಂಧಿ ದೇಶದಿಂದ ಬಂದಿದ್ದೇವೆ ಎಂದು ಹೇಳುತ್ತಾರೆಯೇ ವಿನಃ ಗೋಡ್ಸೆ ದೇಶದಿಂದ ಬಂದಿದ್ದೇವೆ ಎಂದು ಹೇಳುವುದಿಲ್ಲ.

ಆದರೆ, ಇದೇ ಪರಿಸ್ಥಿತಿ ಎಷ್ಟು ದಿನ ಇರುತ್ತದೆ.ಭಾರತದ ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕ ಗಾಂಧೀಜಿಯವರಾದರೆ ಸ್ವತಂತ್ರ ಭಾರತಕ್ಕೆ ಒಂದು ಸಂವಿಧಾನವನ್ನು ನೀಡಿದವರು ಅಂಬೇಡ್ಕರ್. ಈಗ ಅವರ ನೇತೃತ್ವದಲ್ಲಿ ರೂಪುಗೊಂಡ ಸಂವಿಧಾನವೇ ಅಪಾಯದಲ್ಲಿ ಇದೆ. ಇಂಥ ಸಂಕಷ್ಟದ ಸನ್ನಿವೇಶದಲ್ಲಿ ಸಂವಿಧಾನವನ್ನು ಮತ್ತು ಸ್ವಾತಂತ್ರ್ಯ ವನ್ನು ಕಾಪಾಡಿಕೊಳ್ಳಲು ಗಾಂಧಿ ಮತ್ತು ಅಂಬೇಡ್ಕರ್ ವಿಚಾರಗಳನ್ನು ಒಪ್ಪಿಕೊಳ್ಳುವವರು ಒಂದಾಗಬೇಕಾಗಿದೆ.

ಮೊದಲು ಅಂತರ್ಜಾತಿ ಮತ್ತು ಅಂತರ್‌ಧರ್ಮೀಯ ಮದುವೆಗಳನ್ನು ವಿರೋಧಿಸುತ್ತಿದ್ದ ಗಾಂಧೀಜಿ ಕ್ರಮೇಣ ತಮ್ಮ ಅಭಿಪ್ರಾಯವನ್ನು ಬದಲಿಸಿಕೊಂಡರು.

ತಮ್ಮ ಆಶ್ರಮದಲ್ಲೇ ಜಾತಿ ರಹಿತ ಮದುವೆಗಳನ್ನು ಮಾಡಿಸಿದರು. ನಮ್ಮ ಹಾವೇರಿ ಜಿಲ್ಲೆಯ ಸಂಗೂರಿನ ಸ್ವಾತಂತ್ರ್ಯ ಹೋರಾಟಗಾರ ಕರಿಯಪ್ಪಯರೆಸೀಮಿ ಅವರು ಗಾಂಧಿ ಆಶ್ರಮದಲ್ಲೇ ಆ ಕಾಲದಲ್ಲಿ ದಲಿತ ಯುವತಿಯೊಂದಿಗೆ ವಿವಾಹವಾದರು. ಕೊನೆಗೆ ಗಾಂಧೀಜಿ ಎಲ್ಲಿಯವರೆಗೆ ಹೋದರೆಂದರೆ ಸ್ವಜಾತಿಯ ಮದುವೆಗಳಿಗೆ ಅವರು ಹೋಗುತ್ತಿರಲಿಲ್ಲ. ಬಾಬಾಸಾಹೇಬರಂತೂ ತುಂಬಾ ಎತ್ತರದ ಶ್ರೇಷ್ಠ ಮಾನವ. ಅವಮಾನಗಳನ್ನು ನುಂಗಿಕೊಂಡೇ ಬೆಳೆದ ಅವರು ಸಾವಿರಾರು ಅಡ್ಡಿ ಆತಂಕಗಳನ್ನು ದಾಟಿ ವಿದೇಶಕ್ಕೆ ಹೋಗಿ ಉನ್ನತ ವ್ಯಾಸಂಗ ಮಾಡಿಬಂದರು. ವಕೀಲಿ ವೃತ್ತಿಗೆ ಅಂಟಿಕೊಂಡಿದ್ದರೆ ಕೋಟ್ಯಂತರ ರೂಪಾಯಿಗಳಿಸಬಹುದಾಗಿದ್ದ ಅವರು ದೇಶಕ್ಕಾಗಿ , ಜನರಿಗಾಗಿ ತಮ್ಮನ್ನು ತಾವು ದೀಪದಂತೆ ಸುಟ್ಟುಕೊಂಡು ಬೆಳಕು ನೀಡಿದರು. ಇದು ಗೊತ್ತಿದ್ದ ಗಾಂಧೀಜಿ ಅಂಬೇಡ್ಕರ್ ಅವರನ್ನು ತುಂಬಾ ಗೌರವಿಸುತ್ತಿದ್ದರು. ಅಂಬೇಡ್ಕರ್ ರೂಪಿಸಿದ ಸಂವಿಧಾನದಲ್ಲಿ ಭಾರತದ ಎಲ್ಲಾ ಸಮುದಾಯಗಳ ಉನ್ನತಿಗೆ ಅಗತ್ಯವಾದ ಅಂಶಗಳಿವೆ. ತನ್ನನ್ನು, ತನ್ನ ಸಮುದಾಯವನ್ನು ಶತಮಾನಗಳಿಂದ ತುಳಿದ ಜಾತಿ, ಸಮುದಾಯಗಳ ಬಗೆಗೂ ಅವರಿಗೆ ದ್ವೇಷ ವಿರಲಿಲ್ಲ. ಆದರೆ, ಈ ಸಮುದಾಯಗಳ ಜಾತಿವಾದಿ ಮನೋಭಾವ ಇಂದಿಗೂ ಬದಲಾಗಿಲ್ಲ.

ಗಾಂಧೀಜಿ ಧಾರ್ಮಿಕ ವ್ಯಕ್ತಿಯಾಗಿದ್ದು ನಿಜ. ಆರಂಭದಲ್ಲಿ ವರ್ಣಾಶ್ರಮ ಪದ್ಧತಿಯಲ್ಲಿ ಅವರಿಗೆ ನಂಬಿಕೆಯಿತ್ತು. ಆದರೆ ಅವರು ಕೋಮುವಾದಿ ಆಗಿರಲಿಲ್ಲ. ಮನುವಾದಿಯೂ ಅಲ್ಲ. ಕೋಮುವಾದಿ ಆಗಿರಲಿಲ್ಲವೆಂದೇ ಅವರು ಗೋಡ್ಸೆಯ ಗುಂಡಿಗೆ ಬಲಿಯಾದರು. ಗಾಂಧೀಜಿ ಬಗ್ಗೆ ಹಗುರವಾಗಿ ಮಾತನಾಡುವ ಮುನ್ನ ಈ ಅಂಶಗಳನ್ನೆಲ್ಲ ನಾವು ಗಮನಿಸಬೇಕಾಗುತ್ತದೆ. ಎಷ್ಟೇ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ವ್ಯಕ್ತಪಡಿಸುವುದು, ವಿರೋಧಿಸುವುದು ಅಂಬೇಡ್ಕರ್ ಸೇರಿದಂತೆ ಪ್ರಜಾಪ್ರಭುತ್ವ ವಾದಿಗಳೆಲ್ಲರ ಭಾಷೆ. ಆದರೆ ಕೊಲ್ಲುವುದು ಗೋಡ್ಸೆ ಭಾಷೆ.ನಾವು ಒಪ್ಪಿಕೊಳ್ಳಬೇಕಾಗಿರುವುದು ಅಂಬೇಡ್ಕರ್ ಭಾಷೆಯನ್ನು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಸನತ್ ಕುಮಾರ ಬೆಳಗಲಿ

contributor