ಆತ್ಮಹತ್ಯೆ-ಮಾನಸಿಕ ದುರಂತ !

Update: 2015-12-21 08:54 GMT

ಆತ್ಮಹತ್ಯೆಗೆ ಪ್ರಯತ್ನಿಸಿದ ರೋಗಿಯ ನಿರ್ವಹಣೆಯಲ್ಲಿ, ಆತನ ಕುಟುಂಬದವರ ಜವಾಬ್ದಾರಿಯನ್ನುಳಿಸುವಲ್ಲಿ ಮನಃಶಾಸ್ತ್ರಜ್ಞರ ಪಾತ್ರವು ಬಹಳ ದೊಡ್ಡದು. ಆತ್ಮಹತ್ಯೆಗೆ ಮರುಪ್ರಯತ್ನಿಸುವಂತಹ ಅಪಾಯಕಾರಿ ಅಂಶಗಳನ್ನು ತಪ್ಪಿಸುವುದು ಅತ್ಯವಶ್ಯಕ. 


ವರದಕ್ಷಿಣೆ, ವಿಚ್ಛೇದನ. ಪ್ರೇಮ ಪ್ರಕರಣ, ಅನೈತಿಕ ಗರ್ಭಧಾರಣೆ, ವಿವಾಹಬಾಹಿರ ಸಂಬಂಧಗಳು ಹಾಗೂ ವಿವಾಹಕ್ಕೆ ಸಂಬಂಧಿಸಿದ ತೊಡಕುಗಳು ಭಾರತದಲ್ಲಿ ಮಹಿಳೆಯರ ಆತ್ಮಹತ್ಯೆಯಲ್ಲಿ ಬಹಳ ಬಲವಾದ ಪಾತ್ರವನ್ನು ವಹಿಸುತ್ತವೆ. ಆದರೆ ಬಹಳ ಭಯಾನಕ ವಿಚಾರ ಎಂದರೆ, ಆಗಾಗ ಕೇಳಿ ಬರುತ್ತಿರುವ ಕೌಟುಂಬಿಕ ಆತ್ಮಹತ್ಯೆಗಳ ವಿಚಾರ. ಅದಕ್ಕೆ ಆರ್ಥಿಕ, ಕೌಟುಂಬಿಕ ಸಮಸ್ಯೆಗಳಲ್ಲದೆ ಬಲವಾದ ಸಾಮಾಜಿಕ ಕಾರಣಗಳೂ ಇರುವುದಿದೆ.


ಒಬ್ಬ ದೃಢ, ಉದ್ಯೋಗಸ್ಥ ಹಾಗೂ ಧಾರ್ಮಿಕ ವ್ಯಕ್ತಿಗಿಂತಲೂ ಸಾಮಾಜಿಕವಾಗಿ ಏಕಾಂಗಿಯಾಗಿರುವ, ಮದ್ಯ ವ್ಯಸನಿ, ಅವಿವಾಹಿತ ಪುರುಷರು ಆತ್ಮಹತ್ಯೆ ಮಾಡಿಕೊಳ್ಳುವ ಅಪಾಯ ಹೆಚ್ಚು. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನಿರೀಕ್ಷಿತವಾಗಿ ಫೇಲ್ ಆಗುವುದು, ಆತ್ಮೀಯರ ಅಕಾಲಿಕ ಅಗಲಿಕೆ, ಅನಿರೀಕ್ಷಿತವಾಗಿ ಆದ ಹಣಕಾಸಿನ ನಷ್ಟ ಇವೆಲ್ಲವೂ ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸುವ ಕಾರಣಗಳು.

ಈ ಸಮಯದಲ್ಲಿ ಕುಟುಂಬದವರು ಹಾಗೂ ಸ್ನೇಹಿತರು ಇಂತಹ ವ್ಯಕ್ತಿಗಳಿಗೆ ಪೂರ್ಣ ಬೆಂಬಲ ಹಾಗೂ ಸಮಯವನ್ನು ನೀಡಿ, ಅವರಿಗೆ ಸಹಾಯ ಮಾಡಬೇಕು. ಆತ್ಮಹತ್ಯೆ ಮಾಡಿಕೊಂಡ ಹೆಚ್ಚಿನ ವ್ಯಕ್ತಿಗಳು ಈ ಹಿಂದೆ ಅನೇಕ ಬಾರಿ ಇಂತಹ ಪ್ರಯತ್ನಗಳನ್ನು ಮಾಡಿರುತ್ತಾರೆ. ಕೆಲವು ಸಲ ಅನಿರೀಕ್ಷಿತ ಉಯಿಲು, ಬರಹ ಇತ್ಯಾದಿಗಳನ್ನು ತಮ್ಮ ಹತ್ತಿರದವರಿಗೆ ತಲುಪಿಸುತ್ತಾರೆ. ಇವೆಲ್ಲವೂ ನಗಣ್ಯ ಪ್ರಕ್ರಿಯೆಗಳಲ್ಲ. ಆದ್ದರಿಂದ ಇಂತಹ ಪ್ರಕ್ರಿಯೆಗಳನ್ನು ಗಂಭೀರವಾಗಿ ತೆಗೆದುಕೊಂಡು ಕೂಡಲೇ ವೃತ್ತಿಪರರ ಸಹಾಯವನ್ನು ಪಡೆದುಕೊಳ್ಳಬೇಕು.


ಆತ್ಮಹತ್ಯೆಯನ್ನು ಖಂಡಿತ ತಡೆಯಲು ಸಾಧ್ಯವಿದೆ. ಅದಕ್ಕಾಗಿ ಅನೇಕ ನೆಲೆಗಳಲ್ಲಿ, ಹಲವು ಜನರು ಕೆಲಸ ಮಾಡಬೇಕಾಗುತ್ತದೆ. ಕೆಲವು ರೋಗಿಗಳ ಸಂದರ್ಶನದ ವರದಿಗಳು ಅವರನ್ನು ಆತ್ಮಹತ್ಯೆಯ ಪ್ರಯತ್ನದಿಂದ ಹಿಂದೆ ಸರಿಸಿದಂತಹ ವಿಚಾರವನ್ನು ಹೇಳುತ್ತವೆ. ಅಂದರೆ ನಾನು ಆತ್ಮಹತ್ಯೆ ಮಾಡಿಕೊಂಡರೆ ನನ್ನ ತಂದೆ-ತಾಯಿ ಅಥವಾ ನನ್ನ ಮಕ್ಕಳ ಗತಿ ಏನು ಎಂಬಂತಹ ಭಾವನೆ ಹಾಗೂ ಯೋಚನೆಗಳು ಮನುಷ್ಯನ ಆತ್ಮಹತ್ಯೆಯ ಭಾವನೆಯನ್ನು ತಡೆಯಬಲ್ಲವು.

ಒಬ್ಬ ಒಳ್ಳೆಯ ಸ್ನೇಹಿತ ಅಥವಾ ಸಲಹೆಗಾರ ಇದರಲ್ಲಿ ಮಹತ್ವದ ಪಾತ್ರವನ್ನು ವಹಿಸಬಹುದು. ಒಬ್ಬ ವ್ಯಕ್ತಿ ತಾನೇ ಸ್ವತಃ ವ್ಯಕ್ತಪಡಿಸದಿದ್ದರೆ ಮಾನಸಿಕ ತಜ್ಞರಿಗೆ ಆತನಲ್ಲಿ ಅಂತಹ ಒಂದು ಪ್ರವೃತ್ತಿಯ ಹಿನ್ನೆಲೆಯನ್ನು ಹೊರಗೆಳೆಯುವುದು ಕಷ್ಟ ಸಾಧ್ಯ.

ತನಗೆ ತಾನು ಕೆಟ್ಟದ್ದನ್ನು ಮಾಡಿಕೊಳ್ಳುವುದಿಲ್ಲ ಎಂಬುದಾಗಿ ವ್ಯಕ್ತಿಯೊಬ್ಬ ವೈದ್ಯರಿಗೆ ಕೊಡುವ ಭರವಸೆಯೂ ಸಹ ಆ ವ್ಯಕ್ತಿಯನ್ನು ಆತ್ಮಹತ್ಯೆಯಿಂದ ತಪ್ಪಿಸಬಹುದು. ‘‘ಅದು ನಿನ್ನ ಬದುಕಿನ ಕಹಿ ಸಮಯ, ಹಾಗಂತ ಜೀವನ ಪೂರ್ತಿ ಭರವಸೆಯನ್ನು ಕಳೆದುಕೊಳ್ಳಬೇಕಾಗಿಲ್ಲ’’ ಎಂಬಂತಹ ಭರವಸೆಯನ್ನು ರೋಗಿಗೆ ವೈದ್ಯರು ನೀಡಬೇಕಾದುದು ಅತ್ಯವಶ್ಯಕ.

ಆತ್ಮಹತ್ಯೆಗೆ ಪ್ರಯತ್ನಿಸಿದ ರೋಗಿಯ ನಿರ್ವಹಣೆಯಲ್ಲಿ, ಆತನ ಕುಟುಂಬದವರ ಜವಾಬ್ದಾರಿಯನ್ನುಳಿಸುವಲ್ಲಿ ಮನಃಶಾಸ್ತ್ರಜ್ಞರ ಪಾತ್ರವು ಬಹಳ ದೊಡ್ಡದು. ಆತ್ಮಹತ್ಯೆಗೆ ಮರುಪ್ರಯತ್ನಿಸುವಂತಹ ಅಪಾಯಕಾರಿ ಅಂಶಗಳನ್ನು ತಪ್ಪಿಸುವುದು ಅತ್ಯವಶ್ಯಕ. ಅಂದರೆ, ಸರಳ ಉಪಾಯಗಳಾದ ವ್ಯಕ್ತಿಯನ್ನು ಒಂಟಿಯಾಗಿ ಬಿಡದಿರುವುದು, ಚೂಪಾದ ಸಾಧನಗಳನ್ನು ವ್ಯಕ್ತಿಗೆ ಸಿಗದಂತೆ ಇರಿಸುವುದು, ಔಷಧಿಗಳನ್ನು ಬೀಗ ಹಾಕಿ ಅಥವಾ ರೋಗಿಗೆ ಸಿಗದಂತೆ ಜೋಪಾನವಾಗಿ ಇರಿಸಿಕೊಳ್ಳುವುದು, ಆತ್ಮಹತ್ಯೆಗೆ ಉಪಯೋಗಿಸಬಹುದಾದ ಹಗ್ಗ, ಸೀರೆ ಇತ್ಯಾದಿಗಳನ್ನು ಕೈಗೆ ಸಿಗದಂತೆ ಇರಿಸುವುದು ಇತ್ಯಾದಿ.

ರೋಗಿಗಳು ಸಾಮಾನ್ಯವಾಗಿ ಯಾವುದೋ ಅಜ್ಞಾತ ಸ್ವರವೊಂದು ತಮಗೆ ಆತ್ಮಹತ್ಯೆ ಮಾಡಿಕೊಳ್ಳಲು ಆಜ್ಞಾಪಿಸುತ್ತಿರುವಂತೆ ಕೇಳುತ್ತಿವೆ ಎಂದು ಹೇಳುತ್ತಿರುತ್ತಾರೆ. ಇಂತಹ ವಿಚಿತ್ರ ಅನುಭವಗಳನ್ನು ಕಡಿಮೆ ಮಾಡಿಕೊಳ್ಳಲು ಔಷಧಿಗಳು ಸಹಾಯ ಮಾಡಬಹುದು. ಇದರಿಂದ ಆತ್ಮಹತ್ಯಾ ನಡವಳಿಕೆಯೂ ಸಹ ಕಡಿಮೆಯಾಗುತ್ತದೆ. ವ್ಯಕ್ತಿಯ ಖಿನ್ನತೆ ಅಥವಾ ಮಾನಸಿಕ ಅಸಹಜತೆಗಳ ಕಾರಣದಿಂದ ಆತ್ಮಹತ್ಯೆಯ ಪ್ರಯತ್ನ ಮಾಡಿದರೂ ನಮ್ಮ ಸಮಾಜದಲ್ಲಿ ಅದಕ್ಕ ಪೂಜೆ ಇತ್ಯಾದಿ ಧಾರ್ಮಿಕ ಚಿಕಿತ್ಸೆಗಳನ್ನು ನೀಡಲಾಗುತ್ತದೆ.

ಕೌಟುಂಬಿಕ ಬೆಂಬಲ ಪಡೆಯಲು ಹಾಗೂ ಒತ್ತಡ ಕಡಿಮೆ ಮಾಡಿಕೊಳ್ಳಲು ಇದರಿಂದ ಒಂದಿಷ್ಟು ಸಹಾಯವಾಗಬಹುದಾದರೂ ಅದೇ ಸಮಯಕ್ಕೆ ನಾವು ವೈದ್ಯಕೀಯ ಉಪಚಾರವನ್ನು ಪಡೆಯಲು ಮರೆಯಬಾರದು. ಖಿನ್ನತೆಗೆ ಸಕಾಲದಲ್ಲಿ ಔಧೋಪಚಾರ ಮಾಡಿ ಮತ್ತೆ ಆತ್ಮಹತ್ಯೆಗೆ ಪ್ರಯತ್ನಿಸುವ ಅಪಾಯವನ್ನು ತಪ್ಪಿಸಬಹುದು.
 

Similar News