ಹೆಸರಿನಲ್ಲೇನಿಲ್ಲ?

Update: 2015-12-25 12:19 GMT

‘ನಾವು ಹುಟ್ಟುವ ಮೊದಲೇ ನಮ್ಮ ಹೆಸರು ನಮ್ಮವಾಗಿವೆ’: ‘ಒಂದು ಸ್ಥಳದ ಹೆಸರನ್ನು ಅರ್ಥಮಾಡಿಕೊಳ್ಳದಿದ್ದರೆ ಚರಿತ್ರೆಯೇ ನಿಮಗೆ ಅರ್ಥವಾಗುವುದಿಲ್ಲ’ ಮುಂತಾದ ಮಾತುಗಳು ಸ್ಥಳನಾಮದ ಮಹತ್ವವನ್ನು ಸಾಬೀತುಮಾಡುತ್ತವೆ.

ಏಕೆಂದರೆ, ಸ್ಥಳನಾಮಗಳಲ್ಲಿ ಕಲ್ಪನೆಯಿಲ್ಲ; ಅಲಂಕಾರವಿಲ್ಲ; ರಂಜನೆ ಇಲ್ಲ. ಅವು ಒಂದು ನಿರ್ದಿಷ್ಟ ಸ್ಥಳದ ಗುರುತುಪಟ್ಟಿಕೆಯೆನ್ನಲಾಗುತ್ತದೆ. ಈಗಿನ ಭಾಷಿಕ ಮಾನದಂಡದಲ್ಲಿ ಅರ್ಥಹೀನವಾಗಿರಬಹುದಾದ ಸ್ಥಳನಾಮ ಆ ಸ್ಥಳದ ಗುರುತುಪಟ್ಟಿಕೆಯಾಗಿ ಕೆಲಸ ಮಾಡುತ್ತಿರುತ್ತದೆ. ಇಡಿಯ ಪ್ರಪಂಚದಲ್ಲಿ ಹೆಚ್ಚು ಸಂಖ್ಯೆಯಲ್ಲಿರುವವು ಮತ್ತು ಪ್ರಾಚೀನವಾಗಿರುವವು ಭೌಗೋಳಿಕ ಸ್ಥಳನಾಮಗಳು. ಸಾಂಸ್ಕೃತಿಕ ಸ್ಥಳನಾಮಗಳು ಏನಿದ್ದರೂ ಅರ್ವಾಚೀನವಾದುವು ಮತ್ತು ಕಡಿಮೆ ಸಂಖ್ಯೆಯಲ್ಲಿರುವವು. ಹಾಗಾಗಿ, ಸ್ಥಳನಾಮಗಳನ್ನು ಶಾಸನಗಳಷ್ಟೇ ಅಥವಾ ಅವುಗಳಿಗಿಂತ ಹೆಚ್ಚು ಅಧಿಕೃತ ದಾಖಲೆಯೆಂದು ಪರಿಗಣಿಸಲಾಗಿದೆ.

ಮೂಲದ್ರಾವಿಡವೆಂದು ಗುರುತಿಸಲಾಗುವ ಭಾಷೆಯಡಿ 26 ಭಾಷೆಗಳು ಅಳವಡುತ್ತವೆ. ಉದ್ಯಾವರದ ‘ಬೊಳ್ಜೆ’ ಮತ್ತು ‘ಬೆಲ್ಜಿಯಂ’ ಸಮನಾರ್ಥಕವಾದುವು; ಸೆಲ್ವಿಕ್ ಭಾಷಾಪದವಾಗಿರುವ ‘ಬೆಲ್ಜಿಯಂ’ ‘ಬೊಳ್ಜೆ’ ಯಂತೆ ‘ಜವುಗು ಪ್ರದೇಶ’ ವನ್ನೇ ಸೂಚಿಸುತ್ತದೆ. ಏಕೆಂದರೆ ‘ಬೆಳ್’ ‘ಬೊಳ್’ ಮತ್ತಿತರ ಸಾಧಿತಪದಗಳು ‘ಜಲಾಧಿಕ್ಯ’ ಇಲ್ಲವೇ ‘ನೆರೆ’ಯನ್ನು ಸೂಚಿಸುತ್ತವೆ.

ಪ್ರಾಕೃತಿಕ ವೈಶಿಷ್ಟಗಳು ಯಾವ ಕಾಲಕ್ಕೂ ಬದಲಾಗುವುದಿಲ್ಲ ಎಂಬ ಕಾರಣಕ್ಕೆ ಸ್ಥಳಕ್ಕೆ ಹೆಸರಿಟ್ಟವರು ಊರಿನ ಏರುಪೇರು, ಕಾಡು ಗುಡ್ಡ, ಬಂಡೆ ನೀರು ಮುಂತಾದ ಭೂಲಕ್ಷಣವನ್ನನುಸರಿಸಿ ಹೆಸರಿಟ್ಟರು. ಇದರಿಂದ ಎರಡು ಸಂಗತಿಗಳನ್ನು ತಿಳಿಯಬಹುದು. ಒಂದು, ಭೂವೈಶಿಷ್ಟದ ಮೂಲಕ ನಿರ್ದಿಷ್ಟ ಸ್ಥಳವನ್ನು ಗುರುತಿಸುವುದು ಸುಲಭ; ಎರಡು, ಪ್ರಾಚೀನ ಕಾಲದ ಮಾನವನ ಪ್ರಕೃತಿನಿಷ್ಠತೆ ಕೂಡ ಇಲ್ಲಿ ವ್ಯಕ್ತವಾಗುತ್ತದೆ. ಕುಕ್ಕೆ, ಕಾರ್ಕಳ, ಮಂಗಳೂರು ಮುಂತಾದ ಸ್ಥಳನಾಮಗಳು ಬಾಸ್ಕ್ (ದ್ರಾವಿಡ ಭಾಷೆ)ನಲ್ಲೂ (ಫ್ರಾನ್ಸ್-ಸ್ಪೆಯಿನ್ ನಡುವಣ ಭೂಪ್ರದೇಶ) ತುಳುವಿನಲ್ಲೂ ಸಮಾನಾರ್ಥಕವಾಗಿರುವುದು ಸತ್ಯ ಸಂಗತಿ. ಡಾ.ಎಸ್. ಲೆಹೊವರಿ ಎಂಬ ವಿದ್ವಾಂಸ ಮೂಲತಃ ಫ್ರೆಂಚ್ ಭಾಷೆಯಲ್ಲಿ ಬರೆದ ‘ಛಿ ಈ್ಟಜಿಜಿಚ್ಞ ಣ್ಟಜಿಜಜ್ಞಿ ಅ್ಞ ಛಿ ಛಿಠಿ’ ಎಂಬ ಉದ್ಘಕೃತಿಯಲ್ಲಿ ಈ ಸಾಮ್ಯ ಆಕಸ್ಮಿಕವಲ್ಲ; ಸ್ವಾಭಾವಿಕವಾದುದೆಂಬುದನ್ನು ನಿರೂಪಿಸಿದ್ದಾರೆ.

‘ಉಡುಪಿ’ಯ ನೈಜನಾಮ ‘ಒಡಿಪು’(ಒಡಿ+ಪು) ರಥಬೀದಿಯಿಂದ ಪೂರ್ವಕ್ಕೆ ಕೆಲವು ಎಕ್ರೆ ಜಾಗ ಸಪೂರಾಗಿರುವ ಪ್ರದೇಶ. ಕೊಂಕಣರ ದೇವಸ್ಥಾನದಿಂದ ದಕ್ಷಿಣೋತ್ತರವಾಗಿ ಹರಿಯುವ ತೋಡು ‘ಮಡ್ಯಾಳಸಾರ್’ ಎಂದು ಕರೆಯಲಾಗುವ ಕಲ್ಸಂಕ ತೋಡಿಗೆ (1637ರ ಶಾಸನದಲ್ಲಿ ಈ ಸಂಕದ ಉಲ್ಲೇಖವಿದೆ) ಸೇರುವ ಜಾಗ ಇದು. ಮಧ್ಯವಿಜಯದಲ್ಲಿ ‘ರಜತಪೀಠ’ ಎಂದು ಕರೆಯಲಾದ ಈ ಸ್ಥಳಕ್ಕೆ ‘ಒಡಿಪು ಇತಿ ಅಪಭ್ರಷ್ಟ ಭಾಷಾ’ ಎಂಬ ವ್ಯಾಖ್ಯಾನವನ್ನು ‘ಭಾವಪ್ರಕಾಶಿಕಾ’ ದಲ್ಲಿ ನೀಡಬೇಕಾದ ಅಗತ್ಯವಿತ್ತು. ‘ಅಪಭ್ರಷ್ಟ ಭಾಷೆ’ ಎಂದರೆ ತುಳು.

ತುಳು ಸ್ಥಳನಾಮಗಳಲ್ಲಿ ಜಲಾರ್ಥಕ ಮತ್ತು ಜಲಸಂಬಂಧ ವಾಚಕಗಳು ಹೇರಳವಾಗಿವೆ. ಬೆಳ್ ಮಾತ್ರವಲ್ಲ; ಇಲ್, ನೀರ್; ಆರ್, ಆಲ್ ಮುಂತಾದುವು ಹೊಳೆ, ತೋಡು ಅಥವಾ ಜಲಾಧಿಕ್ಯವನ್ನು ಸೂಚಿಸುವ ಮೂಲದ್ರಾವಿಡ ಪದಗಳು. ಉಡುಪಿ-ಮಣಿಪಾಲ ಮಾರ್ಗದಲ್ಲಿ ‘ಇಂದ್ರಾಳಿ’ ಎಂಬ ಊರಿದೆ. ಇದು ಇರ್+ದ+ ಹಳ್ಳಿ ಎಂಬಂತೆ ನಿಷ್ಟನ್ನವಾದುದು. ಅನುನಾಸಿಕ ಪ್ರಕ್ಷೇಪವಾಗಿದ್ದು ಉಚ್ಚಾರ ಸೌಲಭ್ಯಕ್ಕಾಗಿ. ಈ ಜಾಗದಲ್ಲಿ ನೀರಿನ ಸೆಲೆಯಿದ್ದು ಒಂದು ತೋಡು ಪೂರ್ವ-ಪಶ್ಚಿಮವಾಗಿ ಹರಿಯುತ್ತದೆ. ನನ್ನ ಹುಟ್ಟೂರು ‘ಕೆಮ್ತೂರು’ ‘ಕೊರಂಗ್ರಪಾಡಿ’ ಗ್ರಾಮದಲ್ಲಿ ಸೇರಿದೆ. ಇಲ್ಲಿ ಕೂಡ ಅನುನಾಸಿಕ ಉಚ್ಚಾರ ಸೌಲಭ್ಯಕ್ಕಾಗಿ ಪ್ರಕ್ಷೇಪಗೊಂಡಿದೆ.

ಇರಾ, ಇಂಬ, ಇರಿಗೆ, ಇರ್ವತ್ತೂರು, ಇರಂದಾಡಿ, ಇರ್ಪೆ; ಬೆಳ್ಳೆ, ಬೆಳ್ವಾ, ಬೆಳ್ಳಾರೆ, ಬಿಳಿಯೂರು ಮುಂತಾದ ಸ್ಥಳನಾಮಗಳು ಜಲಾಧಿಕ್ಯವನ್ನು ಸೂಚಿಸುತ್ತವೆ. ಹೆಚ್ಚು ಕಮ್ಮಿ ಸಮತಟ್ಟಾದ ಜಾಗದಲ್ಲಿ ತೋಡು-ಹೊಳೆ ಹರಿಯುವುದಾದರೆ ಪರಪ್ಪು, ಪರ್ಪುಂಜ, ಪರಪ್ಪಾಡಿ, ಪರ್ಕಳ ಮುಂತಾದ ಹೆಸರುಗಳು ಅನ್ವಿತವಾಗುತ್ತವೆ. ಬೀಜ ಬಿತ್ತಲು ಹಸನಾದ ಜಾಗ ‘ಮಂಗಲ’ ‘ಮಂಗಿಲ’ ಎಂದು ಕರೆಸಿಕೊಳ್ಳಲಾಗುತ್ತದೆ. ಮಂಗಳೂರು, ಮಂಗಿಲಾರು, ಮಂಗಿಲಬಾಕ್ಯಾರ್, ಮಂಗಲ್ಪಾದೆ ಮುಂತಾದುವು ತುಳುನಾಡಿನಲ್ಲಂತೂ ಪ್ರಾಕೃತದ ‘ಬೀಜವಾಪ ಕ್ಷೇತ್ರ’ (ಠಿಛಿ ್ಝಚ್ಞ ್ಟಛಿ ್ಛಟ್ಟ ಟಡಿಜ್ಞಿಜ ಛಿಛಿ: ಹೇಮಚಂದ್ರನ್ ‘ದೇಶೀನಾಮಮಾಲಾ’) ವನ್ನು ಸೂಚಿಸುತ್ತವೆ: ಆಪೆ’ ಅಂಜೆ, ಇಂಜೆ, ಉಂಜಗಳು ನೀರು ಹರಿಯುವ ದಾರಿಯಲ್ಲಿರುವ ಬಯಲುಪ್ರದೇಶ.

‘ಕುಂ-’ ‘ಅಮ್ಮೆ’, ‘ಕಾರ್’ ‘ಪೆರ್, ‘ಅಡೆ’, ‘ಕೋಡು/ಗೋಡು’ ಗುಡ್ಡವನ್ನು ಸೂಚಿಸುತ್ತವೆ. ಸುವರ್ಣಾ ನದಿಯ ಉತ್ತರ ದಡದಲ್ಲಿರುವ ‘ಕುಂಪ್ಳಿ’, ಕಾಸರಗೋಡು ತಾಲೂಕಿನ ‘ಕುಂಬ್ಳೆ’ ‘ಕುಂಪಳ’ ಮುಂತಾದವು ಕುಂ+ಆಲ್: ಗುಡ್ಡ ಮತ್ತು ಹೊಳೆ ಎಂಬಂತೆ ನಿಷ್ಪನ್ನವಾಗಿವೆ. ಕುಂ+ಆಲ್ ಸಂಧಿಸ್ಥಾನದಲ್ಲಿ ‘ಬ್’ ಸೇರಿಕೊಂಡಿದೆ. ಇದಕ್ಕೆ ಭಾಷಾ ವಿಜ್ಞಾನದಲ್ಲಿ ‘ಧ್ವನಿಜಾರು’ (ಜ್ಝಜಿಜ್ಞಿಜ) ಎನ್ನಲಾಗುತ್ತದೆ. ಇಂದು ‘ಪೆರ್’ ಹಿರಿದಾದುದನ್ನು ಸಮಾಂತರದ ಅರ್ಥದಲ್ಲಿ ಬಳಕೆಯಾದರೂ, ‘ಅಮ್ಮೆ’, ‘ಕಾರ್’ ನಂತೆ ಮೂಲತಃ ಲಂಬಾರ್ಥಕವಾದುದು. ‘ಪೆರಡೆ, ಪೆರಡೇಲು, ಪೆರ್ಡೂರು, ಪೆರಾಜೆ, ಪೆರ್ವಾಯಿ, ಪೆರ್ಣೆ, ಪೆರ್ವಾಜೆ’: ‘ಅಮ್ಬಾಡಿ, ಅಮ್ಮೆ, ಅಂಬಾಡಿ, ಅಂಪಾರು, ಅಂಬಾರು, ಅಮ್ಮೆಂಬಳ’ ಮುಂತಾದುವು ಉನ್ನತ ಭೂವಾಚಕಗಳು. ಗುಡ್ಡದಲ್ಲಿ ಕವಲು(ಸೀಳು ಸೀಳು) ಇದ್ದಲ್ಲಿ ‘ಕಬೆ, ಕುಬೆ, ತೋಕೆ’ ಮುಂತಾಗಿ ಸ್ಥಳನಾಮಗಳು ಹುಟ್ಟುತ್ತವೆ. ಗುಡ್ಡದ ಇಳಿಜಾರಿಗೆ ಸೂರ್, ಚಾರ, ಜೇರ, ಮಾಡ, ಮಾಳ (ಜಾನುವಾರು ಮೇಯುವ ಗುಡ್ಡ) ಮುಂತಾದ ನಿರ್ದಿಷ್ಟ-ವಾರ್ಗಿಕಗಳು ಸ್ಥಳನಾಮಗಳಲ್ಲಿ ಸೇರಿಕೊಳ್ಳುತ್ತವೆ. ಎತ್ತರವೂ ವಿಶಾಲವೂ ಆದ ಗುಡ್ಡ ‘ಮಾಣೆ’. ಉದಾ: ಮಾಣಿ, ಮಣ್ಕಿ, ಮಂಚಿ, ಮಂಕಿ, ಮಣಿಹಳ್ಳ, ಮಣಿಪಾಲ(ಮಣ್ಣ್‌ದ ಪಳ್ಳ ಸರಿಯಾದ ನಿಷ್ಪತ್ತಿಯಲ್ಲ). ಕಾಡು ತೋಪುಗಳು ಕಾನ, ಕಾವು, ಕಾಪು ಮುಂತಾಗಿ ಗುರುತಿಸಲ್ಪಡುತ್ತವೆ (ಶಾಸ್ತಕಾನ ಶಾಸ್ತಾನ, ಶಾಸ್ತ+ಕಾವು = ಶಾಸ್ತಾವು; ಮುಂಡ+ಕಾವ್ಯ = ಮುಂಡಾವು; ಕಾವೂರು). ಕಡಿದಾದ ಗುಡ್ಡ ‘ಏಣಿ’ ಉದಾ: ವೇಣೂರು (ಏಣಿ+ಊರು), ಏಣ್ಯರ್ಪು, ಏಣಿಂಜೆ). ಗುಡ್ಡದ ನೆತ್ತಿ ‘ಕುಕ್ಕ್’ ಆಗುತ್ತದೆ. ಕುಕ್ಕುಂದೂರು, ಕುಕ್ಕಜೆ, ಕುಕ್ಕುಜಡ್ಕ, ಕುಕ್ಕೆ(ಸುಬ್ರಹ್ಮಣ್ಯ: 5667 ಅಡಿ ಎತ್ತರ: ‘ಶೇಷಾಜಲ’, ಕುಕ್ಯಾರ್, ಕುಕ್ಕಾರ್ ಇತ್ಯಾದಿ.

ಮಳೆನೀರಿನ ಉಬ್ಬರವಾಗುವಲ್ಲಿ ಉಬಾರ್, ಉಪ್ಪರ್, ಉಪ್ಪಳ, ಉಪ್ಪಳಿಗೆ ಮುಂತಾದ ಸ್ಥಳನಾಮಗಳು ಹುಟ್ಟುತ್ತವೆ. ಉಪ್ಪಿನಂಗಡಿ, ಉಪ್ಲಾಡಿ, ಉಪ್ಪಳ, ಮುಂ. ನಡುಗಡ್ಡೆ(ದ್ವೀಪ) ಕುದುರು (ಉ.ಕ.ದಲ್ಲಿ ‘ಕುರ್ವೆ’); ಹೊಯ್ಗೆ ದಂಡೆ ಮೊಗರು; ಕೆಸರ್ಗದ್ದೆ ಕಂಡ, ಕಂಪಳ; ಬಂಜರು ಭೂಮಿ ಬಜೆ(ಬಜ್ಪೆ, ಬಜಾಲ್, ಬಜ್ಜಾರ್ ಇತ್ಯಾದಿ). ಹಾಳುಬಿದ್ದ ನಿರ್ಜನ ಪ್ರದೇಶ ಅಡ್ಕ (ಮಲೆಯಾಳದಲ್ಲಿ ಅಟುಕ); ದಾರಿಯಿರುವ ಸ್ಥಳ ಪಲ್ಕೆ(ಪರಿಕೆ), ತಗ್ಗಾದ ಸ್ಥಳ ‘ಸಿರ್’ (ಸಿರ್ವ, ಸಿರ್ತಾಡಿ, ಸಿರಿಯ ಇತ್ಯಾದಿ) ದಾರಿ ಸಾಗುವ ಸ್ಥಳ ‘ಇಡೆ’ (ಎಡೆ; ಇಡ್ಯ, ಇಡ್ಕಿದು: ಇಡೆ-ಕಿದು; ಇಟ್ಟೆಲ್) ಇಡೆ+ಟ್, ಆಲ್: ಹೊಳೆ) ಹೊಸತಾಗಿ ಜನವಸತಿ ಏರ್ಪಟ್ಟ ಸ್ಥಳ ಪುತ್ತಿಗೆ, ಪುತ್ತೂರು; ಕಾಡಾಡು ಇದ್ದ ಸ್ಥಳ ಕೆಮ್ತೂರು (ಕೆಮ್ಮ+ತ+ಊರು), ಕೆಮ್ಮಿಂಜ, ಕೇಮಾರು, ಕೆಮ್ಮುಂಡೇಲ್ ಇತ್ಯಾದಿ. ಇಂಥ ಕಡೆ ಸ್ಥಳನಾಮಗಳು ಊರಿನಲ್ಲಿ ಪ್ರಾಚೀನ ಕಾಲದಲ್ಲಿ ಅರಣ್ಯ ಸಂಪತ್ತು ಎಷ್ಟಿತ್ತೆಂಬುದನ್ನು ಸೂಚಿಸುತ್ತವೆ. ಆದ್ದರಿಂದ, ಸ್ಥಳನಾಮಗಳನ್ನು ಚರಿತ್ರಶಾಸ್ತ್ರದ ರಚನೆಯಲ್ಲಿ ಮೂಲಾಕರಗಳನ್ನಾಗಿ ಪರಿಗಣಿಸಬೇಕೆಂಬುದು ಸಾಧಿತವಾಗುತ್ತದೆ.

ಸ್ಥಳನಾಮಗಳಲ್ಲಿ ಕಿಂಚಿತ್ತೂ ಜಾತಿ ವೈಷಮ್ಯವಾಗಲಿ ಜಾತಿದ್ವೇಷವಾಗಲಿ ಇಲ್ಲವೇ ಇಲ್ಲ. ಮೊತ್ತಮೊದಲು ನಿರ್ವಸಿತ ಜಾಗದಲ್ಲಿ ನೆಲೆನಿಂತ ಸಮುದಾಯಗಳ ಹೆಸರನ್ನು ಸ್ಥಳನಾಮಗಳು ದಾಖಲಿಸಿವೆ. ಉದಾ: ಅಗಸರಬೆಟ್ಟು, ತಂತ್ರಾಡಿ, ಸಾಲಿಕೇರಿ(ಸಾಲಿಗರು, ನೇಕಾರರು), ಕನ್ನಡಿಬೆಟ್ಟು, ಕುಂಬಾರಬೆಟ್ಟು, ಭಟ್ರಕೋಡಿ, ಸಿದ್ಧಾಪುರ, ಸಿದ್ಧಕಟ್ಟೆ, ಮಯ್ಯರ ಕೊಮ್ಮೆ, ತುಳುವೆರೆ ಗುಡ್ಡೆ, ಚಿತ್ರಪಾಡಿ, ಚಿತ್ರಾಪುರ( ಭೂತದ ವೇಷ ಸಿದ್ಧಪಡಿಸುವ ಕಲಾವಿದರಿಂದ) ಮುಂತಾದವು.

ಸ್ವರ್ಗ, ನರ(ಲ)ಕ, ಮರ್ತ್ಯ, ಪಾತಾಳ, ಗಾಳಿಮುಖ, ನಿಶಾನಿ ಮುಂತಾದ ಸುಂದರ ಹೆಸರುಗಳೂ ಇವೆ. ಹವ್ಯಕರ ಕೇರಿಯಲ್ಲಿ ಕಮ್ಮು’ (ಕ್ರಮುಕ= ಅಡಿಕೆ) ಎಂಬ ಸಂಸ್ಕೃತಜನ್ಯ ಸ್ಥಳನಾಮಗಳೂ ಇವೆ. ಉದಾ: ಕಮಿಲ

ಸ್ಥಳನಾಮ ವಿಜ್ಞಾನಿಯ ದೃಷ್ಟಿಯಲ್ಲಿ ಎಲ್ಲ ಊರ ಹೆಸರುಗಳೂ ಮಹತ್ವದ ಸ್ಥಾನ ಪಡೆಯುತ್ತವೆ. ಪುತ್ತೂರಿನಿಂದ ಸುಬ್ರಹ್ಮಣ್ಯಕ್ಕೆ ಹೋಗುವ ದಾರಿಯಲ್ಲಿ ಸುಮಾರಾಗಿ ಮಧ್ಯಭಾಗದಲ್ಲಿ ‘ಸಮಾದಿ’ ಎಂಬ ಊರಿದೆ. ಇಂದು ‘ಕಮಲ ಶಿಲೆ’ ಎಂದು ಕರೆಯಲಾಗುವ ‘ಕಮ್ಮಾರಸಾಲೆ’ ಇದೆ. ಆದರೆ ‘ಕಮ್ಮಾರಸಾಲೆ’ ನೀಡುವ ಸ್ಥಳದ ನೈಜ ಚಿತ್ರ ಶಿಷ್ಟೀಕರಣ ರೂಪ ನೀಡಲಾರದು.

Writer - ಆರ್ ಕೆ ಮಣಿಪಾಲ್

contributor

Editor - ಆರ್ ಕೆ ಮಣಿಪಾಲ್

contributor

Similar News