ಮೋದಿಯ ಪಾಕ್ ಭೇಟಿ ಸಾರ್ಥಕವಾಗಲಿ

Update: 2015-12-28 10:49 GMT

ಪ್ರಧಾನಿ ನರೇಂದ್ರ ಮೋದಿಯವರ ಅನಿರೀಕ್ಷಿತ ಪಾಕಿಸ್ತಾನ ಭೇಟಿಯನ್ನು ಹೇಗೆ ಸ್ವೀಕರಿಸಬೇಕು ಎನ್ನುವ ಗೊಂದಲದಲ್ಲಿದೆ ಭಾರತ. ಇದು ಕೇವಲ ಮೋದಿಯ ರಾಜಕೀಯ ವಿರೋಧಿಗಳ ಗೊಂದಲಗಳಷ್ಟೇ ಅಲ್ಲ. ಇತ್ತ ಬಿಜೆಪಿ ಮತ್ತು ಅದರ ಮಾತೃ ಸಂಘಟನೆಯಾದ ಆರೆಸ್ಸೆಸ್ ಕೂಡ ಆ ಭೇಟಿಯ ಕುರಿತಂತೆ ಈವರೆಗೆ ಗಂಭೀರ ಹೇಳಿಕೆಯನ್ನು ನೀಡಿಲ್ಲ. ಸರಿತಪ್ಪುಗಳನ್ನು ವಿಶ್ಲೇಷಿಸಿಲ್ಲ.

ಮೋದಿ ಅಭಿಮಾನಿಗಳು ಕೂಡ ಅದನ್ನು ಸ್ಪಷ್ಟವಾಗಿ ವಿಶ್ಲೇಷಿಸಲು ಸೋತಿದ್ದಾರೆ. ಇತ್ತ ಮೋದಿ ಪ್ರಾಯೋಜಿತ ಮಾಧ್ಯಮಗಳು ಮಾತ್ರ ಆ ಭೇಟಿಯಲ್ಲಿ ‘ಮುತ್ಸದ್ದಿತನ’ವನ್ನು ಹುಡುಕಾಡುತ್ತಿವೆ. ಅನಗತ್ಯವಾಗಿ ಆ ಭೇಟಿಯನ್ನು ವೈಭವೀಕರಿಸುತ್ತಿವೆ. ಆದರೆ ಪಾಕಿಸ್ತಾನದ ಜೊತೆಗಿನ ಮಾತುಕತೆಗಳನ್ನು ಈ ಎಲ್ಲ ಮಾಧ್ಯಮಗಳೂ ಒಂದು ಕಾಲದಲ್ಲಿ ಶತಾಯಗತಾಯ ಟೀಕಿಸಿದ್ದವು. ಆದುದರಿಂದ, ಆಳದಲ್ಲಿ ಇವುಗಳೂ ಸಂದಿಗ್ಧದಲ್ಲಿವೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್, ಸಿಪಿಎಂನಂತಹ ಪಕ್ಷಗಳೂ ಈ ಭೇಟಿಯ ಬಗ್ಗೆ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವ ಗೊಂದಲದಲ್ಲಿವೆ. ಪಾಕಿಸ್ತಾನ-ಭಾರತದ ನಡುವಿನ ಸಂಬಂಧ ಚಿಗುರಬೇಕು, ಮಾತುಕತೆ ನಡೆಯಬೇಕು ಎನ್ನುವ ಒಲವನ್ನು ಹೊಂದಿರುವ ಈ ಪಕ್ಷಗಳು, ಮೋದಿಯ ಈ ಆತ್ಮೀಯ ಪಾಕ್ ಭೇಟಿಯನ್ನು ಉಗುಳಲೂ ಆಗದೆ, ನುಂಗಲೂ ಆಗದಂತಹ ಸ್ಥಿತಿಯಲ್ಲಿವೆ. ಹೊಗಳಿದರೆ ಮೋದಿ ಅದರ ಫಲಾನುಭವಿಯಾಗುತ್ತಾರೆ.

ಪಾಕಿಸ್ತಾನ ಭೇಟಿಯನ್ನು ಟೀಕಿಸಿದರೆ, ಪಾಕ್-ಭಾರತ ಸಂಬಂಧವನ್ನು ತಿರಸ್ಕರಿಸಿದಂತಾಗುತ್ತದೆ. ಭಾರತ-ಪಾಕ್ ಸಂಬಂಧದ ಕುರಿತಂತೆ ಬಿಜೆಪಿಯ ನಿಲುವು ಏನು ಎನ್ನುವುದಕ್ಕಿಂತ ಒಂದು ಸರಕಾರದ ನಿಲುವೇನು ಎನ್ನುವುದು ಮುಖ್ಯವಾಗುತ್ತದೆ. ಒಂದು ಕಾಲದಲ್ಲಿ ಭಾರತ-ಪಾಕ್ ನಡುವಿನ ಸಂಬಂಧಕ್ಕೆ ಹುಳಿ ಹಿಂಡುತ್ತಾ, ಗಡಿಗೆ ಬೆಂಕಿ ಹಚ್ಚುತ್ತಲೇ ತಮ್ಮನ್ನು ದೇಶಪ್ರೇಮಿಗಳೆಂದು ಬಿಂಬಿಸಿಕೊಂಡವರು ನರೇಂದ್ರ ಮೋದಿ ಬಳಗ. ಯುಪಿಎ ಸರಕಾರವು ಪಾಕ್ ಜೊತೆಗೆ ಮಾತುಕತೆಗೆ ಅಡಿಯಿಟ್ಟಾಗಲೆಲ್ಲಾ, ಅದನ್ನು ಸರ್ವ ರೀತಿಯಲ್ಲಿ ವಿಫಲಗೊಳಿಸಿದ ಹೆಗ್ಗಳಿಕೆ ಬಿಜೆಪಿಯದ್ದಾಗಿದೆ.

ಯುಪಿಎ ಸರಕಾರ ಮಾತುಕತೆಗೆ ಮುಂದಾದಾಗ ಸುಷ್ಮಾ ಸ್ವರಾಜ್, ರಾಜ್‌ನಾಥ್ ಸಿಂಗ್, ನರೇಂದ್ರ ಮೋದಿಯವರು ಮಾಡಿರುವ ಟ್ವೀಟ್‌ಗಳು ಈಗಲೂ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ. ಪಾಕಿಸ್ತಾನದೊಂದಿಗೆ ಯುದ್ಧವೇ ಎಲ್ಲದಕ್ಕೂ ಪರಿಹಾರ ಎನ್ನುವ ಮೂಲಕ, ಈ ದೇಶದ ಜನರನ್ನು ಹಾದಿ ತಪ್ಪಿಸಿರುವುದು ಬಿಜೆಪಿ ನಾಯಕರು. ಪಾಕಿಸ್ತಾನವನ್ನು ಮುಂದಿಟ್ಟುಕೊಂಡು, ಭಾರತದ ಮುಸ್ಲಿಮರನ್ನು ದೇಶದ್ರೋಹಿಗಳು ಎಂಬಂತೆ ಬಿಂಬಿಸಿದವರೂ ಇವರೇ ಆಗಿದ್ದಾರೆ. ಗಡಿಯಲ್ಲಿ ಬರ್ಬರವಾಗಿ ಕೊಲೆಗೀಡಾಗಿರುವ ಸೈನಿಕರನ್ನು ಮುಂದಿಟ್ಟುಕೊಂಡು, ಯುಪಿಎ ಸರಕಾರವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿರುವುದು ಇದೇ ಬಿಜೆಪಿ. ಅಂತೆಯೇ, ಕೊಲೆಗೀಡಾದ ಸೈನಿಕರ ಪರವಾಗಿ ಸೇಡು ತೀರಿಸುವ ಮಾತನಾಡಿರುವುದು ಇದೇ ಬಿಜೆಪಿ ನಾಯಕರು. ಇಂತಹ ಭಾವನಾತ್ಮಕ ಹೇಳಿಕೆಗಳನ್ನು ನಂಬಿ ಬಿಜೆಪಿಗೆ ಮತ ಹಾಕಿದವರೂ ಇದ್ದಾರೆ. ಇದೀಗ ಅಧಿಕಾರಕ್ಕೇರಿದ ಒಂದೇ ವರ್ಷದಲ್ಲಿ ಅದು ತನ್ನ ನಿಲುವಿನಲ್ಲಿ ಭಾರೀ ಬದಲಾವಣೆಯನ್ನು ಮಾಡಿಕೊಂಡಿತು. ತನ್ನ ಪ್ರಮಾಣ ವಚನಕ್ಕೆ ನವಾಝ್ ಶರೀಫ್ ಅವರನ್ನು ಆಹ್ವಾನಿಸಿ ಸ್ವತಃ ಆರೆಸ್ಸೆಸ್ಸಿಗರನ್ನೇ ಮೋದಿ ಬೆಚ್ಚಿ ಬೀಳುವಂತೆ ಮಾಡಿದರು. ಈಗ ಇರುವ ಪ್ರಶ್ನೆ, ಪಾಕಿಸ್ತಾನದ ಜೊತೆಗೆ ಮಾತುಕತೆ ಎನ್‌ಡಿಎಯ ಆದ್ಯತೆಯೂ ಆಗಿದ್ದ ಮೇಲೆ, ಈ ಹಿಂದೆ ಮಾತುಕತೆ ನಡೆಯದಂತೆ ನೋಡಿಕೊಳ್ಳುತ್ತಾ ಬಂದುದು ಯಾಕೆ?


  ಅಂದರೆ, ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅದು ತನ್ನ ನೀತಿಯನ್ನು ಬದಲಿಸಿದ್ದು ಜಾಗತಿಕ ರಾಜಕೀಯ ಮತ್ತು ಆರ್ಥಿಕ ನೀತಿಗೆ ಪೂರಕವಾಗಿದೆ. ವಾಸ್ತವವನ್ನು ಅರಿತುಕೊಂಡು ಈ ಸರಕಾರ ಹೆಜ್ಜೆ ಇಡುತ್ತಿದೆ ಎನ್ನುವುದು ದೇಶಕ್ಕೆ ನೆಮ್ಮದಿ ತರುವ ಅಂಶವಾಗಿದೆ. ಸಂಘಪರಿವಾರದ ಅವಿವೇಕಿ ದ್ವೇಷ ನೀತಿಯನ್ನು ವಿದೇಶಾಂಗ ವ್ಯವಹಾರದಲ್ಲಿ ಜಾರಿಗೆ ತಂದಿದ್ದರೆ ಇಷ್ಟು ಹೊತ್ತಿಗೆ ದೇಶ ಸಂಪೂರ್ಣ ವಿಚ್ಛಿದ್ರವಾಗಿ ಬಿಡುತ್ತಿತ್ತು. ಒಂದು ರಾಜಕೀಯ ಪಕ್ಷ ಜನಬೆಂಬಲದಿಂದ ಅಧಿಕಾರ ಹಿಡಿದು, ಸರಕಾರ ನಡೆಸುವಾಗ ಅನುಸರಿಸಬೇಕಾದ ನೀತಿಯೇ ಬೇರೆಯಾಗಿರುತ್ತದೆ.

ಹಲವು ಆರ್ಥಿಕ ನೀತಿಗಳನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಆ ಸರಕಾರ ತೀರಾ ಅಸಹಾಯಕವಾಗಿರುತ್ತದೆ. ಯಾಕೆಂದರೆ, ನಮ್ಮೆಲ್ಲ ಹೆಚ್ಚಿನ ಆರ್ಥಿಕ ನೀತಿ ಜಾರಿಗೆ ಬರುವುದು ವಿಶ್ವಬ್ಯಾಂಕ್ ಮೂಗಿನ ನೇರಕ್ಕೆ. ಅಂತೆಯೇ ವಿದೇಶಾಂಗ ನೀತಿಯಲ್ಲೂ ನಾವು ಅಮೆರಿಕದಂತಹ ದೇಶಗಳ ಹೊರ ಒತ್ತಡಕ್ಕೆ ಬಲಿಯಾಗುತ್ತಾ ಹೆಜ್ಜೆ ಇಡಬೇಕಾಗುತ್ತದೆ. ನರೇಂದ್ರ ಮೋದಿ ಸರಕಾರವನ್ನಂತೂ ಸಂಪೂರ್ಣ ಕಾರ್ಪೊರೇಟ್ ಜಗತ್ತು ನಿಯಂತ್ರಿಸುತ್ತಿದೆ. ಕಾರ್ಪೊರೇಟ್ ವಲಯದ ಸುದೀರ್ಘ ಕಾರ್ಯಯೋಜನೆಯ ಫಲದಿಂದಾಗಿ ನರೇಂದ್ರ ಮೋದಿ ಎನ್ನುವ ಕೃತಕ ಸೂಪರ್‌ಮ್ಯಾನ್‌ನ ಸೃಷ್ಟಿಯಾಗಿದೆ. ಹೀಗಿರುವಾಗ, ಆ ಸೂಪರ್‌ಮ್ಯಾನ್ ಮೊತ್ತ ಮೊದಲು ತನ್ನನ್ನು ಸೃಷ್ಟಿಸಿದ ಎಂಜಿನಿಯರ್‌ಗಳಿಗೆ ಆಭಾರಿಯಾಗಬೇಕಾಗುತ್ತದೆ. ಈಗ ನಡೆಯುತ್ತಿರುವುದು ಅದೇ ಆಗಿದೆ.

  ಮೋದಿಯ ಪ್ರಮಾಣವಚನಕ್ಕೆ ನವಾಝ್ ಶರೀಫ್ ಆಗಮಿಸಿದಾಗ, ಭಾರತ-ಪಾಕ್ ನಡುವೆ ಸಂಬಂಧದ ಹೊಸ ಶಕೆ ಆರಂಭವಾಗಿ ಬಿಡುತ್ತದೆ ಎಂದೇ ನಂಬಲಾಗಿತ್ತು. ಆದರೆ ಅದೆಲ್ಲವೂ ಬುಡಮೇಲಾಗಿ, ಯುದ್ಧ ಸ್ಫೋಟಿಸುವಂತಹ ವಾತಾವರಣ ನಿರ್ಮಾಣವಾಗಿ ಬಿಟ್ಟಿತು. ಮಾತುಕತೆ ಇನ್ನು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿಗೆ ಬಂದು ನಿಂತಿತು. ಇಂತಹ ಸಂದರ್ಭದಲ್ಲೇ ಮೋದಿಯವರು, ನವಾಝ್ ಶರೀಫ್ ಅವರ ಮೊಮ್ಮಗಳ ಮದುವೆಗೆಂದು ಪಾಕ್‌ಗೆ ತೆರಳಿ ಎಲ್ಲರಿಗೂ ಆಘಾತ ನೀಡಿದರು. ಈ ಭೇಟಿ ಭಾರತ-ಪಾಕಿಸ್ತಾನ ಸಂಬಂಧಕ್ಕೆ ಪೂರಕವಾಗಿರಲಿ, ಇಲ್ಲದಿರಲಿ ನಾವೆಲ್ಲರೂ ಸ್ವಾಗತಿಸಲೇಬೇಕು. ಆದರೆ ಇದರಿಂದ ಭಾರತ-ಪಾಕ್ ಸಂಬಂಧ ಸುಧಾರಣೆಯಾಗಬಹುದೇ? ಎಂದು ಪ್ರಶ್ನಿಸಿದರೆ ಅದಕ್ಕೆ ಉತ್ತರ ನೀಡುವುದು ತೀರಾ ಕಷ್ಟ. ಯಾಕೆಂದರೆ ಮೋದಿಯದು ದೂರದೃಷ್ಟಿಯುಳ್ಳ ಭೇಟಿಯೇ ಎನ್ನುವುದು ಅನುಮಾನಾಸ್ಪದವಾಗಿದೆ. ಅವರು ಖ್ಯಾತ ಉದ್ಯಮಿಯೋರ್ವರ ಮಧ್ಯಸ್ಥಿಕೆಗೆ ಓಗೊಟ್ಟು ಪಾಕಿಸ್ತಾನಕ್ಕೆ ಆಕಸ್ಮಿಕ ಭೇಟಿ ನೀಡಿದ್ದಾರೆ. ಈ ಭೇಟಿ ತನ್ನ ಉದ್ದೇಶವನ್ನು ಸಾಧಿಸಿಕೊಳ್ಳಬೇಕಾದರೆ ಅದಕ್ಕೆ ಪಾಕಿಸ್ತಾನದ ಸೇನೆ ಹಾಗೆಯೇ ಭಾರತದ ಕೇಸರಿ ಉಗ್ರರು ಅನುವು ಮಾಡಿಕೊಡಬೇಕಾಗುತ್ತದೆ. ದಶಕಗಳ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಪಾಕಿಸ್ತಾನಕ್ಕೆ ಭೇಟಿ ನೀಡಿದರು. ಅವರ ಕಾಲದಲ್ಲೇ ಭಾರತ-ಪಾಕ್ ನಡುವೆ ‘ಸಂಜೋತಾ ಎಕ್ಸ್‌ಪ್ರೆಸ್’ ರೈಲನ್ನು ಓಡಿಸಲಾಯಿತು. ಇನ್ನೇನು ಎರಡು ದೇಶಗಳು ಬಂಧುಗಳಾಗಿ ಜೊತೆಯಾಗಲಿವೆ ಎನ್ನುವಾಗಲೇ ಕೇಸರಿ ಉಗ್ರರು ಆ ರೈಲಿಗೆ ಬಾಂಬಿಟ್ಟು ಉಡಾಯಿಸಿ ನೂರಾರು ಜನ ಅಮಾಯಕರನ್ನು ಕೊಂದು, ಸಂಬಂಧಗಳಿಗೆ ಇತಿಶ್ರೀ ಹಾಡಿದರು. ಉಭಯದೇಶಗಳ ಮಾತುಕತೆಗಳು ಒಂದಿಷ್ಟು ಚಿಗುರಿತು ಎನ್ನುವಾಗ, ಉಭಯ ದೇಶಗಳ ಉಗ್ರರು ಜಾಗೃತರಾಗಿ ಅದನ್ನು ನಾಶ ಮಾಡಲು ಯೋಜನೆ ರೂಪಿಸುತ್ತಾರೆ. ಹೀಗಿರುವಾಗ, ಮೋದಿಯ ಭೇಟಿ ಕನಿಷ್ಠ ಮಾತುಕತೆಗೆ ಸಹಾಯವಾಗದಿದ್ದರೂ, ಭಾರತದಲ್ಲಿರುವ ಮೋದಿಯ ಅಂಧಾಭಿಮಾನಿಗಳ ಕಣ್ಣು ತೆರೆಸಲಿ. ಉಭಯದೇಶಗಳ ಜನರ ನಡುವೆ ಇರುವ ಪೂರ್ವಗ್ರಹ ಪೀಡಿತವಾದ ದ್ವೇಷ ಅಳಿದು, ಪರಸ್ಪರರನ್ನು ನಂಬಿಕೆಯ ಕಣ್ಣುಗಳಿಂದ ನೋಡುವಂತಹ ವಾತಾವರಣ ಸೃಷ್ಟಿಯಾಗಲಿ. ಇಷ್ಟು ಆದರೂ ಸಾಕು, ಮೋದಿಯ ಪಾಕ್ ಭೇಟಿ ಸಾರ್ಥಕವಾದಂತೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News