×
Ad

ಇರಾಕ್: ಎರಡು ಮಸೀದಿಗಳಿಗೆ ಬಾಂಬ್ ದಾಳಿ

Update: 2016-01-05 00:20 IST

ಸೌದಿ ಅರೇಬಿಯ ವಿರುದ್ಧ ಸೇಡು
ಹಿಲ್ಲಾ(ಇರಾಕ್), ಜ.4: ಇರಾಕ್‌ನ ಹಿಲಾದಲ್ಲಿರುವ ಎರಡು ಸುನ್ನಿ ಮಸೀದಿಗಳ ಮೇಲೆ ಸೋಮವಾರ ಬಾಂಬ್ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ.

ಶಿಯಾ ಧರ್ಮಗುರು ಶೇಖ್ ನಿಮ್ರ್ ಅಲ್ ನಿಮ್ರ್‌ರನ್ನು ಮರಣದಂಡನೆಗೊಳಪಡಿಸಿರುವ ಸೌದಿ ಅರೇಬಿಯದ ಕ್ರಮವು ಜನಾಂಗೀಯ ಬಿಕ್ಕಟ್ಟನ್ನು ಸೃಷ್ಟಿಸುವ ಭೀತಿಯ ನಡುವೆಯೇ ಈ ದಾಳಿ ನಡೆದಿದೆ.

ಸೇನಾ ಸಮವಸ್ತ್ರಗಳನ್ನು ಧರಿಸಿದ್ದ ಕೆಲವು ಗುಂಪುಗಳು ಬಗ್ದಾದ್‌ನ ದಕ್ಷಿಣಕ್ಕಿರುವ ಹಿಲ್ಲಾ ಪ್ರದೇಶದಲ್ಲಿರುವ ಎರಡು ಸುನ್ನಿ ಮಸೀದಿಗಳನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆಸಿವೆ ಎಂದು ವರದಿಗಳು ತಿಳಿಸಿವೆ.

ದಾಳಿಯ ವೇಳೆ ಮಸೀದಿಯ ಉದ್ಘೋಷಕನೋರ್ವನನ್ನು ಇಸ್ಕಾಂದರಿಯಾದಲ್ಲಿರುವ ಆತನ ನಿವಾಸದ ಬಳಿ ಗುಂಡಿಟ್ಟು ಹತ್ಯೆಗೈದಿರುವುದಾಗಿ ಮೂಲಗಳು ತಿಳಿಸಿವೆ.

ಬಗ್ದಾದ್‌ನಿಂದ ಸುಮಾರು 80 ಕಿ.ಮೀ. ದೂರದಲ್ಲಿರುವ ಹಿಲ್ಲಾದಲ್ಲಿರುವ ಅಮ್ಮಾರ್ ಬಿನ್ ಯಾಸೀರ್ ಮಸೀದಿಯ ಮೇಲೆ ರವಿವಾರ ಮಧ್ಯರಾತ್ರಿಯ ಬಳಿಕ ಬಾಂಬ್ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘‘ಸ್ಫೋಟದ ಸದ್ದನ್ನು ಅನುಸರಿಸಿ ನಾವು ಘಟನಾ ಸ್ಥಳಕ್ಕೆ ತೆರಳಿದಾಗ ಅಲ್ಲಿ ಸುಧಾರಿತ ಸ್ಫೋಟಕ ಸಾಧನಗಳು ಪತ್ತೆಯಾದವು’’ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಫೋಟದ ಪರಿಣಾಮ 10 ಮನೆಗಳು ಕೂಡಾ ಜಖಂಗೊಂಡಿವೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News