Qatar ನ ಡಗಾಂಗ್ ಸ್ಮಶಾನದಲ್ಲಿ 21 ದಶಲಕ್ಷ ವರ್ಷಗಳ ಹಿಂದಿನ ಕಡಲ್ ಕುದುರೆ ಪತ್ತೆ!
Photo Credit : indianexpress.com
ಡುಗಾಂಗ್ ಸ್ಮಶಾನ ಎಂದೇ ಕರೆಯಲಾಗುವ ಖತರ್‌ನ ನೈರುತ್ಯ ಮರುಭೂಮಿಯಲ್ಲಿ 21 ದಶಲಕ್ಷ ವರ್ಷಗಳ ಹಿಂದಿನ ಕಡಲ್‌ಕುದುರೆಯ ಪಳೆಯುಳಿಕೆ ಪತ್ತೆಯಾಗಿದೆ.
ಮರಳಿನ ರಾಶಿಯಲ್ಲಿ ನಡೆದು ಸಾಗುತ್ತಿದ್ದಾಗ ದೂರ ದೂರಕ್ಕೂ ಮರಳೇ ಮರಳು. ಆಕಸ್ಮಿಕವಾಗಿ ಮೂಳೆಗಳ ರಾಶಿ ನಿಮ್ಮನ್ನು ಸ್ವಾಗತಿಸುತ್ತದೆ. ಕೆಲವು 50 ವರ್ಷಗಳ ಹಿಂದೆ ಖತರ್ ನ ನೈರುತ್ಯ ಮರುಭೂಮಿಯಲ್ಲಿ ನಡೆದು ಸಾಗುತ್ತಿದ್ದ ಭೂವಿಜ್ಞಾನಿಗಳಿಗೆ ಇಂತಹುದೇ ಅನುಭವವಾಗಿತ್ತು. ಅಲ್ ಮಝಾಬಿಯ ಪ್ರದೇಶದಲ್ಲಿ ಅವರು ಆಗ ಅನ್ವೇಷಿಸಿದ್ದ ಸರೀಸೃಪವನ್ನು ಪುರಾತನ ಸರೀಸೃಪಗಳ ಮತ್ತೊಂದು ಪಳೆಯುಳಿಕೆ ಎಂದುಕೊಂಡಿದ್ದರು.
► ಡುಗಾಂಗ್ ಸ್ಮಶಾನದಲ್ಲಿ ಪಳೆಯುಳಿಕೆಗಳು
ವರ್ಷಗಳ ನಂತರ, 2000ರಲ್ಲಿ ಖತರ್ ವಸ್ತುಸಂಗ್ರಹಾಲಯ ಮತ್ತು ಸ್ಮಿಥ್ ಸೊನಿಯನ್ ಸಂಸ್ಥೆಯ ವಿಜ್ಞಾನಿಗಳ ತಂಡವೊಂದು ಮತ್ತೊಮ್ಮೆ ಅದನ್ನು ಅಧ್ಯಯನ ಮಾಡಲು ನಿರ್ಧರಿಸಿತು. ಪ್ರದೇಶವನ್ನು ಪುನಃ ಪರಿಶೀಲಿಸಿ ಪಳೆಯುಳಿಕೆಯ ನಿಗೂಢತೆಯನ್ನು ಬಗೆಹರಿಸುವ ಉತ್ಸಾಹ ಅವರಲ್ಲಿತ್ತು. ಈ ಪ್ರದೇಶವನ್ನು ಈಗ ‘ಡುಗಾಂಗ್ ಸ್ಮಶಾನ’ ಎಂದು ಕರೆಯಲಾಗುತ್ತಿದೆ.
ಹೊಸ ಪರೀಕ್ಷೆಯಲ್ಲಿ ಈ ವಿಶಾಲ ಪ್ರದೇಶವು 21 ದಶಲಕ್ಷ ವರ್ಷಗಳಷ್ಟು ಹಳೆಯದಾದ ಮೂಳೆಗಳ ರಾಶಿಯೆಂದು ತಿಳಿದುಬಂತು. ಕಡಲ್ ಕುದುರೆಗಳು, ಶಾರ್ಕ್ ಗಳು, ಬಾರಾಕುಡಾ ತರಹದ ಮೀನುಗಳು, ಇತಿಹಾಸಪೂರ್ವದ ಡಾಲ್ಫಿನ್‌ಗಳು ಹಾಗೂ ಕಡಲಾಮೆಗಳು ಇಲ್ಲಿ ಪತ್ತೆಯಾಗಿವೆ. 170ಕ್ಕೂ ಅಧಿಕ ಪಳೆಯುಳಿಕೆಗಳಿಂದ ಸಮೃದ್ಧವಾಗಿರುವ ಈ ಸ್ಥಳ ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಸಾಗರ ಜೀವಿಗಳ ಪಳೆಯುಳಿಕೆ ಪ್ರದೇಶವೆಂದು ಖ್ಯಾತಿ ಗಳಿಸಿದೆ. ಕೆಲವರು ಇದನ್ನು ಚಿಲಿಯ ಪ್ರಸಿದ್ಧ ‘ತಿಮಿಂಗಿಲ ಗುಡ್ಡೆ’ಯೊಂದಿಗೆ ಹೋಲಿಸಿದ್ದಾರೆ. ಅಲ್ಲಿ ಡಜನ್‌ಗಟ್ಟಲೆ ತಿಮಿಂಗಿಲಗಳ ಅಸ್ಥಿಪಂಜರಗಳು ದೊರೆತಿದ್ದವು.
► ಹೊಸ ಕಡಲ್ ಕುದುರೆ ಪತ್ತೆ
ಇತ್ತೀಚೆಗೆ ಇದೇ ಪ್ರದೇಶದಲ್ಲಿ ಮತ್ತೊಂದು ಮಹತ್ವದ ಅನ್ವೇಷಣೆ ನಡೆದಿದೆ. ಪೀರ್‌ಜೆ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ‘ಸಾಲ್ವಾಸಿರೆನ್ ಕತಾರೆನ್ಸಿಸ್’ ಎಂಬ ಹೊಸ ಪ್ರಭೇದದ ಕಡಲ್ ಕುದುರೆ ಪತ್ತೆಯಾಗಿದೆ. ಈ ಪ್ರಾಣಿ ಡಗಾಂಗ್ ಗಳಂತೆ ಕಾಣಿಸಿಕೊಂಡರೂ ಕೆಲವು ಮಹತ್ವದ ವ್ಯತ್ಯಾಸಗಳನ್ನು ಹೊಂದಿದೆ.
ಡಗಾಂಗ್‌ಗಳು ಇಂದಿಗೂ ಈ ಪ್ರದೇಶದಿಂದ ಸುಮಾರು 10 ಮೈಲು ದೂರದ ಸಮುದ್ರ ಪ್ರದೇಶದಲ್ಲಿ ವಾಸಿಸುತ್ತಿವೆ. ಆದರೆ ಪತ್ತೆಯಾದ ಸಾಲ್ವಾಸಿರೆನ್ ಗಾತ್ರದಲ್ಲಿ ಸಣ್ಣದು, ನೇರವಾದ ಮೂತಿ, ಸಣ್ಣ ದಂತಗಳು ಹಾಗೂ ಹಿಂಗಾಲು ಮೂಳೆಗಳನ್ನು ಹೊಂದಿತ್ತು. ಆಧುನಿಕ ಕಡಲ್‌ಕುದುರೆಗಳು ಲಕ್ಷಾಂತರ ವರ್ಷಗಳ ಹಿಂದೆ ಈ ಲಕ್ಷಣಗಳನ್ನು ಕಳೆದುಕೊಂಡಿವೆ.
► ಪರಿಸರ ಬದಲಾವಣೆಯ ಇತಿಹಾಸ
ಅಲ್ ಮಝಾಬಿಯ ಪ್ರದೇಶದಲ್ಲಿ ಕಂಡುಬಂದ ಪಳೆಯುಳಿಕೆಗಳ ಮಿಶ್ರಣವನ್ನು ಪರಿಶೀಲಿಸಿದಾಗ, ಇಂದಿನ ಮರುಭೂಮಿ ಒಂದು ಕಾಲದಲ್ಲಿ ಸಮುದ್ರವಾಗಿದ್ದು, ಜೀವಜಗತ್ತು ಸಮೃದ್ಧವಾಗಿದ್ದುದನ್ನು ಖಚಿತಪಡಿಸುತ್ತದೆ. ಲಕ್ಷಾಂತರ ವರ್ಷಗಳ ಪರಿಸರ ಬದಲಾವಣೆಯ ದೀರ್ಘ ಇತಿಹಾಸವನ್ನು ಈ ಬಂಡೆಗಳು ತಮ್ಮೊಳಗೆ ಸಂಗ್ರಹಿಸಿಕೊಂಡಿವೆ.
ಸಮುದ್ರದ ತಾಪಮಾನ ಏರಿಕೆ, ಲವಣಾಂಶದ ಹೆಚ್ಚಳ ಹಾಗೂ ಮಾಲಿನ್ಯಗಳಿಗೆ ಇಂದಿನ ಸಾಗರ ಪರಿಸರ ವ್ಯವಸ್ಥೆಗಳು ಹೇಗೆ ಪ್ರತಿಕ್ರಿಯಿಸಬಹುದು ಎಂಬುದನ್ನು ಊಹಿಸಲು ಈ ಪಳೆಯುಳಿಕೆಗಳು ನೆರವಾಗಲಿವೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
► ಡಗಾಂಗ್ ಗಳ ಅನಿಶ್ಚಿತ ಭವಿಷ್ಯ
ಇಂದು ಅರೆಬಿಯನ್ ಕೊಲ್ಲಿಯಲ್ಲಿ ವಿಶ್ವದಲ್ಲೇ ಅತಿಹೆಚ್ಚು ಡಗಾಂಗ್‌ಗಳ ಸಮೂಹಗಳು ಕಂಡುಬರುತ್ತವೆ. ಆದರೆ ಅವುಗಳ ಭವಿಷ್ಯ ಅನಿಶ್ಚಿತವಾಗಿದೆ. ಸಮುದ್ರ ಹುಲ್ಲಿನ ಆವಾಸಸ್ಥಾನಗಳು ವೇಗವಾಗಿ ನಾಶವಾಗುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.
ಇಂದಿನ ಡಗಾಂಗ್ ಗಳು ಪರಿಸರ ವ್ಯವಸ್ಥೆಯಲ್ಲಿ ನಿರ್ವಹಿಸುತ್ತಿರುವ ಪಾತ್ರವನ್ನು ಹಿಂದೆ ಸಾಲ್ವಾಸಿರೆನ್ ಗಳು ನಿರ್ವಹಿಸುತ್ತಿದ್ದವು ಎಂದು ವಿಜ್ಞಾನಿಗಳು ನಂಬಿದ್ದಾರೆ. ಅಂದರೆ, ಸಮುದ್ರ ಹುಲ್ಲನ್ನು ತಿನ್ನುವ ಮೂಲಕ ಸಮುದ್ರ ಪರಿಸರವನ್ನು ಆರೋಗ್ಯಕರವಾಗಿಡುವುದು!