ಹಿಝ್ಬುಲ್ಲಾ ನಿಶ್ಯಸ್ತ್ರೀಕರಣಕ್ಕೆ ನೀಡಿದ್ದ ಗಡುವು ಅಂತ್ಯ: ಲೆಬನಾನ್ ಮೇಲೆ ಇಸ್ರೇಲ್ ನಿಂದ ಭಾರಿ ಪ್ರಮಾಣದ airstrike!
Photo Credit : AP \ PTI
ಟೆಲ್ ಅವೀವ್: ಹಿಝ್ಬುಲ್ಲಾದ ನಿಶ್ಯಸ್ತ್ರೀಕರಣಕ್ಕೆ ನೀಡಲಾಗಿದ್ದ ಗಡುವು ಅಂತ್ಯಗೊಂಡ ಬೆನ್ನಿಗೇ, ಗುರುವಾರ ಲೆಬನಾನ್ ಮೇಲೆ ಇಸ್ರೇಲ್ ಭಾರಿ ಪ್ರಮಾಣದ ಸರಣಿ ವಾಯು ದಾಳಿ ನಡೆಸಿದೆ.
ಅಮೆರಿಕ ಮಧ್ಯಸ್ಥಿಕೆಯಲ್ಲಿ ಒಂದು ವರ್ಷದ ಹಿಂದೆ ಇಸ್ರೇಲ್ ಹಾಗೂ ಹಿಝ್ಬುಲ್ಲಾ ನಡುವೆ ಏರ್ಪಟ್ಟಿದ್ದ ಕದನ ವಿರಾಮ ಜಾರಿಯ ಮೇಲ್ವಿಚಾರಣೆ ನಡೆಸುತ್ತಿರುವ ಸಮಿತಿಯ ಸಭೆ ನಡೆಯಲು ಇನ್ನು ಒಂದು ದಿನ ಬಾಕಿ ಇರುವಾಗ ಇಸ್ರೇಲ್ ನಿಂದ ಈ ವಾಯು ದಾಳಿ ನಡೆದಿದೆ.
ಈ ಹಿಂದಿನ ಸೇನಾಪಡೆ ಸದಸ್ಯರನ್ನು ಹೊಂದಿದ್ದ ಸಮಿತಿ ಮಾತ್ರವಾಗಿದ್ದ ಸಮಿತಿಗೆ ಇಸ್ರೇಲ್ ಹಾಗೂ ಲೆಬನಾನ್ ದೇಶಗಳು ನಾಗರಿಕ ಸದಸ್ಯರನ್ನು ನೇಮಕ ಮಾಡಿದ ನಂತರ ನಡೆಯುತ್ತಿರುವ ಎರಡನೆಯ ಸಭೆ ಇದಾಗಿದೆ. ಈ ಸಮಿತಿಯು ಗಡಿಯಾದ್ಯಂತ ನಿಯೋಜನೆಗೊಂಡಿರುವ ಅಮೆರಿಕ, ಫ್ರಾನ್ಸ್ ಮತ್ತು ವಿಶ್ವ ಸಂಸ್ಥೆಯ ಶಾಂತಿಪಾಲನಾ ಪಡೆಯನ್ನೂ ಹೊಂದಿದೆ.
ಗಡಿಯಲ್ಲಿ ತನ್ನ ಸೇನೆಯ ಉಪಸ್ಥಿತಿಯನ್ನು ಹೆಚ್ಚಿಸುವ ಕುರಿತು ಅಮೆರಿಕ, ಫ್ರಾನ್ಸ್ ಮತ್ತು ಸೌದಿ ಅರೇಬಿಯಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲು ಗುರುವಾರ ಲೆಬನಾನ್ ನ ಸೇನಾ ಕಮಾಂಡರ್ ಜನರಲ್ ರೊಡಾಲ್ಫ್ ಹೈಕಲ್ ಪ್ಯಾರಿಸ್ ಗೆ ಆಗಮಿಸಿದ್ದಾರೆ.
ದಕ್ಷಿಣ ಲಿಟಾನಿ ನದಿಯ ಗಡಿ ಪ್ರದೇಶದಲ್ಲಿರುವ ಎಲ್ಲ ಹಿಝ್ಬುಲ್ಲಾ ಸಶಸ್ತ್ರ ಪಡೆಗಳ ಉಪಸ್ಥಿತಿಯನ್ನು ಈ ವರ್ಷದ ಅಂತ್ಯದೊಳಗಾಗಿ ಸೇನೆ ತೆರವುಗೊಳಿಸಬೇಕಿತ್ತು ಎಂದು ಲೆಬನಾನ್ ಸರಕಾರ ಹೇಳಿದೆ.
ಈ ನಡುವೆ, ಹಿಝ್ಬುಲ್ಲಾ ಸೇನಾ ನೆಲೆಗಳ ಮೇಲೆ ಇಸ್ರೇಲ್ ಸೇನೆ ವೈಮಾನಿಕ ದಾಳಿ ನಡೆಸಿದ್ದು, ಹಿಝ್ಭುಲ್ಲಾ ತನ್ನ ಯೋಧರಿಗೆ ತರಬೇತಿ ನೀಡುತ್ತಿದ್ದ ಸೇನಾ ಪ್ರದೇಶಗಳ ಮೇಲೂ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಇತ್ತೀಚೆಗೆ ಹಿಝ್ಬುಲ್ಲಾ ಸದಸ್ಯರು ಕಾರ್ಯಾಚರಣೆ ನಡೆಸಲು ಬಳಸಿದ್ದ ಶಸ್ತ್ರಾಸ್ತ್ರ ಸಂಗ್ರಹಾಗಾರಗಳ ಮೇಲೂ ದಾಳಿ ನಡೆಸಲಾಗಿದೆ ಎಂದು ಅದು ಹೇಳಿದೆ.