×
Ad

ಭಾರತದ ಕಬಡ್ಡಿ ತಂಡದಲ್ಲಿ ಆಡಿದ ಪಾಕಿಸ್ತಾನದ ಆಟಗಾರ!

ಶಿಸ್ತು ಕ್ರಮಕ್ಕೆ ಮುಂದಾದ ಪಾಕ್ ಕಬಡ್ಡಿ ಫೆಡರೇಶನ್

Update: 2025-12-18 18:43 IST

Photo Credit: Ubaidullah Rajput \ instagram.com

ಇಸ್ಲಾಮಾಬಾದ್, ಡಿ. 18: ಬಹ್ರೇನ್‌ ನಲ್ಲಿ ನಡೆದ ಖಾಸಗಿ ಕಬಡ್ಡಿ ಪಂದ್ಯಾವಳಿಯಲ್ಲಿ ಭಾರತೀಯ ತಂಡವನ್ನು ಪ್ರತಿನಿಧಿಸಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಉಬೈದುಲ್ಲಾ ರಜಪೂತ್ ವಿರುದ್ಧ ಪಾಕಿಸ್ತಾನ ಕಬಡ್ಡಿ ಫೆಡರೇಶನ್ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಡಿಸೆಂಬರ್ 16ರಂದು ಬಹ್ರೇನ್‌ ನಲ್ಲಿ ನಡೆದ GCC Cup ಖಾಸಗಿ ಟೂರ್ನಿಯಲ್ಲಿ ಉಬೈದುಲ್ಲಾ ಭಾರತೀಯ ಶರ್ಟ್ ಧರಿಸಿ ಭಾರತದ ಧ್ವಜ ಬೀಸುತ್ತಿರುವ ವೀಡಿಯೊಗಳು ಹಾಗೂ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಈ ವಿಚಾರ ಫೆಡರೇಶನ್ ಗಮನಕ್ಕೆ ಬಂದಿದೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಡಿ. 27ರಂದು ಪಾಕಿಸ್ತಾನ ಕಬಡ್ಡಿ ಫೆಡರೇಶನ್ ತುರ್ತು ಸಭೆ ಕರೆದಿದ್ದು, ಉಬೈದುಲ್ಲಾ ಸೇರಿದಂತೆ ಕೆಲ ಆಟಗಾರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಫೆಡರೇಶನ್ ಕಾರ್ಯದರ್ಶಿ ರಾಣಾ ಸರ್ವರ್ ತಿಳಿಸಿದ್ದಾರೆ.

ಜಿಸಿಸಿ ಕಪ್ ಟೂರ್ನಿಯನ್ನು ಭಾರತ, ಪಾಕಿಸ್ತಾನ, ಕೆನಡಾ, ಇರಾನ್ ಸೇರಿದಂತೆ ವಿವಿಧ ದೇಶಗಳ ಹೆಸರಿನಲ್ಲಿ ಖಾಸಗಿ ತಂಡಗಳನ್ನು ರಚಿಸಿ ಆಯೋಜಿಸಲಾಗಿತ್ತು. ಆದರೆ ಪ್ರತಿಯೊಂದು ತಂಡವು ತನ್ನದೇ ಮೂಲದ ಆಟಗಾರರನ್ನು ಹೊಂದಿರಬೇಕಾಗಿದ್ದು, ಭಾರತೀಯ ತಂಡದ ಹೆಸರಿನಲ್ಲಿ ಪಾಕಿಸ್ತಾನಿ ಆಟಗಾರನೊಬ್ಬ ಆಡಿರುವುದು ಸ್ವೀಕಾರಾರ್ಹವಲ್ಲ ಎಂದು ರಾಣಾ ಸರ್ವರ್ ಹೇಳಿದ್ದಾರೆ.

ಫೆಡರೇಶನ್ ಅಥವಾ ಪಾಕಿಸ್ತಾನ ಕ್ರೀಡಾ ಮಂಡಳಿಯಿಂದ ಯಾವುದೇ ಅನುಮತಿ ಪಡೆಯದೆ 16 ಪಾಕಿಸ್ತಾನಿ ಆಟಗಾರರು ವೈಯಕ್ತಿಕವಾಗಿ ಬಹ್ರೇನ್‌ ಗೆ ತೆರಳಿದ್ದರು ಎಂದು ಅವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಬಂಧಿತ ಆಟಗಾರರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಉಬೈದುಲ್ಲಾ ರಜಪೂತ್, ತಾನು ಆಹ್ವಾನದ ಮೇರೆಗೆ ಖಾಸಗಿ ತಂಡದ ಪರವಾಗಿ ಆಡಿದ್ದು, ತಂಡವನ್ನು ‘ಭಾರತೀಯ ತಂಡ’ ಎಂದು ಹೆಸರಿಸಿರುವ ವಿಷಯ ತನಗೆ ನಂತರ ತಿಳಿದುಬಂದಿದೆ ಎಂದು ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ಹೆಸರನ್ನು ಬಳಸಬಾರದೆಂದು ಸಂಘಟಕರಿಗೆ ಸೂಚಿಸಿದ್ದಾಗಿ ಹಾಗೂ ಈ ಘಟನೆಯ ಬಗ್ಗೆ ಕ್ಷಮೆಯಾಚಿಸಿರುವುದಾಗಿ ಅವರು ತಿಳಿಸಿದ್ದಾರೆ.

ಹಿಂದೆಯೂ ಖಾಸಗಿ ಟೂರ್ನಿಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ಆಟಗಾರರು ಖಾಸಗಿ ತಂಡಗಳ ಪರವಾಗಿ ಒಟ್ಟಿಗೆ ಆಡಿರುವ ಉದಾಹರಣೆಗಳಿವೆ. ಆದರೆ ಯಾವತ್ತೂ ರಾಷ್ಟ್ರದ ಹೆಸರಿನಲ್ಲಿ ಆಡಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News