×
Ad

ಭಾರತೀಯ ಕಾನ್ಸುಲೇಟ್ ಕಚೇರಿ ಬಳಿ ಸ್ಫೋಟ

Update: 2016-01-06 00:26 IST

ಕಾಬೂಲ್, ಜ.5: ಪೂರ್ವ ಅಫ್ಘಾನಿಸ್ತಾನದ ಜಲಾಲಾಬಾದ್‌ನಲ್ಲಿರುವ ಭಾರತ ಸೇರಿದಂತೆ ವಿದೇಶಿ ಕಾನ್ಸುಲೇಟ್ ಕಚೇರಿಗಳ ಕಟ್ಟಡಗಳ ಬಳಿ ಮಂಗಳವಾರ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿರುವುದಾಗಿ ಪ್ರಾಂತೀಯ ಗವರ್ನರರ ವಕ್ತಾರ ತಿಳಿಸಿದ್ದಾರೆ.

ಸ್ಫೋಟ ಸಂಭವಿಸಿರುವ ಪ್ರದೇಶದ ಸಮೀಪದ ಕಟ್ಟಡಗಳಲ್ಲಿ ಭಾರತ, ಪಾಕಿಸ್ತಾನ ಹಾಗೂ ಇರಾನ್ ಸೇರಿದಂತೆ ವಿದೇಶಿ ಕಾನ್ಸುಲೇಟ್ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ.
ಭಾರತೀಯ ಕಾನ್ಸುಲೇಟ್‌ನ ಸುಮಾರು 400 ಮೀಟರ್ ದೂರದಲ್ಲಿ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾವುದೇ ಸಾವು ನೋವಿನ ಬಗ್ಗೆ ಮಾಹಿತಿ ತಕ್ಷಣಕ್ಕೆ ಲಭ್ಯವಾಗಿಲ್ಲ ಹಾಗೂ ಘಟನೆಯ ಹೊಣೆಯನ್ನು ಇದುವರೆಗೆ ಯಾರೂ ವಹಿಸಿಕೊಂಡಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
 
ನಂಗರ್ಹಾರ್‌ನ ಜಲಾಲಾಬಾದ್‌ನಲ್ಲಿ ಭಾರತೀಯ ಕಾನ್ಸುಲೇಟ್ ಕಚೇರಿಯಿದ್ದು, ಎರಡು ದಿನಗಳ ಹಿಂದೆಯಷ್ಟೇ ಇಲ್ಲಿಗೆ ಸಮೀಪದ ಮಝರ್-ಇ-ಶರೀಫ್ ಪಟ್ಟಣದಲ್ಲಿರುವ ಭಾರತೀಯ ಕಾನ್ಸುಲೇಟ್ ಕಚೇರಿಯನ್ನು ಗುರಿಯಾಗಿಸಿ ಭಯೋತ್ಪಾದಕ ದಾಳಿ ನಡೆದಿತ್ತು. ಮಝರ್-ಇ-ಶರೀಫ್ ಪಟ್ಟಣದಲ್ಲಿರುವ ಭಾರತೀಯ ದೂತಾವಾಸ ಕಚೇರಿಯ ಮೇಲಿನ ದಾಳಿಯ ಬಳಿಕ ಭದ್ರತಾ ಪಡೆಗಳು ಹಾಗೂ ದಾಳಿಕಾರರ ನಡುವೆ ಎರಡು ದಿನಗಳ ಗುಂಡಿನ ಕಾಳಗ ನಡೆದಿತ್ತು. ಭದ್ರತಾ ಪಡೆಗಳು ಇಲ್ಲಿ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಿದ ಬೆನ್ನಲ್ಲೇ ಜಲಾಲಾಬಾದ್‌ನಿಂದ ಈ ಘಟನೆ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News