ಮತ್ತೆ ಯಡಿಯೂರಪ್ಪ ಕೈಗೆ ಬಿಜೆಪಿ?
ಜಮೀನು ಡಿ-ನೋಟಿಫಿಕೇಶನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಿ. ಎಸ್. ಯಡಿಯೂರಪ್ಪರಿಗೆ ಮತ್ತೊಂದು ದೊಡ್ಡ ಗೆಲುವು ದೊರೆತಿದೆ. ಸಿಎಜಿ ವರದಿ ಆಧರಿಸಿ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ 15 ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಹೈಕೋರ್ಟ್ ಆದೇಶಿಸಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಗರದ ವಿವಿಧೆಡೆ ಬಿಡಿಎ ವಶ ಪಡಿಸಿಕೊಂಡಿದ್ದ ಭೂಮಿಯ ಡಿನೋಟಿಫಿಕೇಶನ್ ಕುರಿತಂತೆ ಈ ಪ್ರಕರಣಗಳನ್ನು ದಾಖಲಿಸಲಾಗಿತ್ತು. 2011ರಲ್ಲಿ ಅಂದಿನ ರಾಜ್ಯಪಾಲರು ನೀಡಿದ್ದ ಪೂರ್ವಾನುಮತಿಯನ್ನು ಹೈಕೋರ್ಟ್ ರದ್ದು ಪಡಿಸಿದ್ದಾಗಲೇ ಅದು ಯಡಿಯೂರಪ್ಪ ಪಾಲಿಗೆ ಭಾರೀ ದೊಡ್ಡ ಗೆಲುವಾಗಿತ್ತು. ಇದೀಗ ಒಂದೊಂದೇ ಪ್ರಕರಣಗಳಿಂದ ಯಡಿಯೂರಪ್ಪ ಅವರು ಬಿಡುಗಡೆಗೊಳ್ಳುತ್ತಿರುವುದು, ಬಿಜೆಪಿಯಲ್ಲಿ ಮತ್ತೆ ಯಡಿಯೂರಪ್ಪ ಬೇರೂರುತ್ತಿರುವುದರ ಸಂಕೇತವಾಗಿದೆ. ಒಂದು ಕಾಲದಲ್ಲಿ, ಯಡಿಯೂರಪ್ಪ ವಿರುದ್ಧ ಬೇರೆ ಬೇರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲಿಸುವಲ್ಲಿ, ಬಿಜೆಪಿಯ ಹಿರಿಯ ನಾಯಕರ ಕೈವಾಡವಿತ್ತು ಎನ್ನುವುದರಲ್ಲಿ ಗುಟ್ಟೇನೂ ಇಲ್ಲ. ಲೋಕಾಯುಕ್ತ ಸಂತೋಷ್ ಹೆಗ್ಡೆಯವರನ್ನು ಮುಂದಿಟ್ಟು ಬಿಜೆಪಿಯ ಹಿರಿಯ ನಾಯಕ ಎಲ್. ಕೆ. ಅಡ್ವಾಣಿಯವರೇ, ಯಡಿಯೂರಪ್ಪ ಮತ್ತು ಗಣಿರೆಡ್ಡಿಯಾದಿಗಳನ್ನು ಬಗ್ಗು ಬಡಿದರು ಎನ್ನುವುದು ಬಿಜೆಪಿಯೊಳಗಿನ ಜನರ ಆರೋಪ. ಅದರಲ್ಲಿ ಬಹಳಷ್ಟು ಸತ್ಯಗಳೂ ಇವೆ. ಅದೇನೇ ಇರಲಿ, ಲೋಕಾಯುಕ್ತರು ಆ ಸಂದರ್ಭದಲ್ಲಿ ನಿರ್ಣಾಯಕ ಪಾತ್ರ ವಹಿಸದೇ ಇದ್ದಿದ್ದರೆ ರಾಜ್ಯದ ಸ್ಥಿತಿ ದಯನೀಯವಾಗುತ್ತಿತ್ತು. ಈ ಸಂದರ್ಭವನ್ನು ಬಳಸಿಕೊಂಡು ಅನಂತಕುಮಾರ್ ಮುನ್ನೆಲೆಗೆ ಬರಲು ಯತ್ನಿಸಿದರಾದರೂ ಅದರಲ್ಲಿ ಸಂಪೂರ್ಣ ವಿಫಲರಾದರು. ಆದರೆ ಮೇಲಿನ ಎಲ್ಲ ಬೆಳವಣಿಗೆಗಳಿಂದ ಲಿಂಗಾಯತ ಸಮುದಾಯ ಬಿಜೆಪಿಯಿಂದ ತುಸು ದೂರವಾದದ್ದಂತೂ ಸತ್ಯ. ಯಡಿಯೂರಪ್ಪ ವಿರುದ್ಧ ಒಳಗೊಳಗೆ ಸಂಚು ನಡೆಸುತ್ತಿದ್ದ ಈಶ್ವರಪ್ಪ, ಅಶೋಕ್ ಸೇರಿದಂತೆ ಹಲವು ನಾಯಕರಿಗೆ ಈ ಪ್ರಕರಣಗಳು ಹೊಸ ಆಯುಧವಾಗಿ ಪರಿಣಮಿಸಿತು. ಆದುದರಿಂದಲೇ ಪ್ರಕರಣ ದಾಖಲಾದಾಗ ಕಾಂಗ್ರೆಸ್ ನಾಯಕರಿಗಿಂತಲೂ ಬಿಜೆಪಿಯೊಳಗಿನ ಜನರೇ ಹೆಚ್ಚು ಸಂತೋಷ ಪಟ್ಟಿದ್ದರು. ಮತ್ತು ಪ್ರಯೋಜನ ಪಡೆದುಕೊಂಡಿದ್ದರು. ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದು ಶೆಟ್ಟರ್, ಸದಾನಂದಗೌಡ, ಈಶ್ವರಪ್ಪ, ಅಶೋಕ್ ಮೊದಲಾದವರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಾಗುವ ಸೌಭಾಗ್ಯವನ್ನು ಪಡೆದರು.
ಇದಾದ ಬಳಿಕ ಯಡಿಯೂರಪ್ಪ ರಾಜಕೀಯವಾಗಿ ಸಂಪೂರ್ಣ ನೆಲಕಚ್ಚಿದರೋ ಎನ್ನುವಷ್ಟರಲ್ಲಿ ಚಿಗುರಿಕೊಂಡರು. ಅವರು ಕಟ್ಟಿದ ಹೊಸ ಪಕ್ಷ ಬಿಜೆಪಿಯನ್ನು ನುಚ್ಚು ನೂರಾಗಿಸಲು ಬಹುದೊಡ್ಡ ಕೊಡುಗೆ ನೀಡಿತು. ಯಡಿಯೂರಪ್ಪನವರನ್ನು ಪಕ್ಷಕ್ಕೆ ವಾಪಸ್ ಕರೆಸದೇ ಇದ್ದರೆ ಬಿಜೆಪಿಗೆ ಭವಿಷ್ಯವಿಲ್ಲ ಎನ್ನುವುದನ್ನು ನಾಯಕರು ಬಹುಬೇಗ ಕಂಡುಕೊಂಡರು. ಕೊನೆಗೂ ಯಡಿಯೂರಪ್ಪ ಅವರು ಬಿಜೆಪಿಯೊಳಗೆ ಹೊಸ ಅಧ್ಯಾಯವನ್ನು ಆರಂಭಿಸಿದರು. ಇದೀಗ ಅವರ ಮೇಲಿನ ಒಂದೊಂದೇ ಪ್ರಕರಣಗಳು ರದ್ದುಗೊಳ್ಳುತ್ತಿರುವುದು ಮತ್ತೆ ಬಿಜೆಪಿಯೊಳಗೆ ಅವರು ಪ್ರಭಾವವನ್ನು ಬೆಳೆಸಿಕೊಳ್ಳುತ್ತಿರುವುದರ ಸಂಕೇತವಾಗಿದೆ.
ಸರಿಯಾದ ನಾಯಕನೊಬ್ಬನ ಮಾರ್ಗದರ್ಶನವಿಲ್ಲದೆ ರಾಜ್ಯದಲ್ಲಿ ಬಿಜೆಪಿ ದಿಕ್ಕು ದೆಸೆ ಕಳೆದುಕೊಂಡಿದೆ. ಸಿದ್ದರಾಮಯ್ಯ ಅವರನ್ನು ಎದುರಿಸುವ ಪರ್ಯಾಯ ನಾಯಕನೊಬ್ಬ ಇನ್ನೂ ಬಿಜೆಪಿಯೊಳಗೆ ಹುಟ್ಟಿಲ್ಲ. ಇದೇ ಸಂದರ್ಭದಲ್ಲಿ ಈಶ್ವರಪ್ಪ ಅವರಿಂದ ಪಕ್ಷಕ್ಕೆ ಪ್ರಯೋಜನಗಳಿಗಿಂತ ಹಾನಿಯೇ ಉಂಟಾಗುತ್ತಿದೆ. ಅವರು ನೀಡುತ್ತಿರುವ ಹೇಳಿಕೆಗಳು ಅವರನ್ನು ವಿವಾದಿತ ನಾಯಕನನ್ನಾಗಿಸಿದೆ. ಯಾವ ಸಂದರ್ಭದಲ್ಲಿ ಯಾವ ರೀತಿ ಮಾತನಾಡಬೇಕು ಎನ್ನುವ ಪ್ರಜ್ಞೆಯನ್ನೇ ಕಳೆದುಕೊಂಡಿರುವ ಈಶ್ವರಪ್ಪ ಅವರು ಬಿಜೆಪಿಗೆ ಬಹುದೊಡ್ಡ ತಲೆನೋವಾಗಿ ಕಾಡುತ್ತಿದ್ದಾರೆ. ಅನಂತಕುಮಾರ್ ಅವರು ಅಡ್ವಾಣಿಯವರ ಜೊತೆಗೆ ಗುರುತಿಸಿಕೊಂಡಿರುವ ವ್ಯಕ್ತಿಯಾಗಿರುವುದರಿಂದ, ಅವರು ಸದ್ಯಕ್ಕೆ ಮುನ್ನೆಲೆಗೆ ಬರುವುದು ಸಾಧ್ಯವಿಲ್ಲದ ಮಾತು. ಜೊತೆಗೆ, ಬ್ರಾಹ್ಮಣ ಮತ್ತು ಲಿಂಗಾಯತರ ನಡುವೆ ಬಿಜೆಪಿಯೊಳಗೆ ಶೀತಲ ಸಮರ ನಡೆಯುತ್ತಿರುವುದರಿಂದ, ಯಾವುದೇ ಬ್ರಾಹ್ಮಣ ನಾಯಕನ ಕೈಗೆ ಬಿಜೆಪಿಯ ಚುಕ್ಕಾಣಿಯನ್ನು ನೀಡುವುದು ಅಸಾಧ್ಯದ ಮಾತಾಗಿದೆ. ಇತ್ತೀಚಿನ ಬಿಬಿಎಂಪಿ ವೈಫಲ್ಯದಲ್ಲಿ ಅಶೋಕ್ ಪಾತ್ರ ಎದ್ದು ಕಂಡಿರುವುದರಿಂದ, ಅವರೂ ಹೈಕಮಾಂಡ್‌ನ ಸಿಟ್ಟಿಗೆ ಪಾತ್ರರಾಗಿದ್ದಾರೆ. ಶೆಟ್ಟರ್‌ಗೆ ಪಕ್ಷದ ಕಾರ್ಯಕರ್ತರನ್ನು ತಲುಪುವ ಶಕ್ತಿಯಿಲ್ಲ. ಸಂಘಟನೆಯ ವಿಷಯದಲ್ಲಿ ಅವರು ಸದಾ ಹಿಂದೆ. ಸಜ್ಜನ ಎನ್ನುವುದೊಂದೇ ಅವರ ಹೆಚ್ಚುಗಾರಿಕೆ. ಈ ಎಲ್ಲ ಕಾರಣಗಳಿಂದ ರಾಜ್ಯ ಬಿಜೆಪಿಗೆ ಹಳೆ ಹೆಂಡತಿಯ ಪಾದವೇ ಗತಿ ಎಂಬ ಸ್ಥಿತಿ ಒದಗಿ ಬಂದಿದೆ. ಅಂದರೆ ಮತ್ತೆ ಯಡಿಯೂರಪ್ಪ ಅವರನ್ನೇ ಮುಂದಿಟ್ಟು ಪಕ್ಷವನ್ನು ಬೆಳೆಸಬೇಕಾದಂತಹ ಸ್ಥಿತಿ ಬಿಜೆಪಿಯೊಳಗೆ ನಿರ್ಮಾಣವಾಗಿದೆ.
ಮತ್ತೆ ಯಡಿಯೂರಪ್ಪ ಕೈಗೆ ಬಿಜೆಪಿಯ ಚುಕ್ಕಾಣಿಯನ್ನು ಕೊಡಲು ರಾಜ್ಯ ಬಿಜೆಪಿಯ ಹಲವು ನಾಯಕರು ಆಸಕ್ತರಾಗಿದ್ದಾರೆ. ರಾಜ್ಯಾದ್ಯಂತ ಓಡಾಡಿ ಪಕ್ಷವನ್ನು ಕಟ್ಟುವುದಕ್ಕೆ ಯಡಿಯೂರಪ್ಪ ಕೂಡ ಉತ್ಸುಕರಾಗಿದ್ದಾರೆ. ಆದರೆ ಇತಿಹಾಸದಿಂದ ಭಾರೀ ಪಾಠವನ್ನು ಯಡಿಯೂರಪ್ಪ ಕಲಿತ್ತಿದ್ದಾರೆ. ಬಿಜೆಪಿಯೊಳಗಿರುವವರೇ ಅವರಿಗೆ ಎಸಗಿದ ದ್ರೋಹ, ಅವರನ್ನು ಇಂದಿಗೂ ಬೆಂಬಿಡದೇ ಕಾಡುತ್ತಿದೆ. ಪಕ್ಷವನ್ನೇನೋ ಕಟ್ಟಬಹುದು. ಆದರೆ ಮುಖ್ಯಮಂತ್ರಿಯಾಗುವ ಸಂದರ್ಭದಲ್ಲಿ ಅನಂತಕುಮಾರ್, ಸುರೇಶ್ ಕುಮಾರ್‌ರಂತಹವರನ್ನು ಮುಂದೆ ಇಟ್ಟು ಆರೆಸ್ಸೆಸ್ ಆಡುವ ಆಟಗಳು ಅವರಿಗೆ ಈಗಾಗಲೇ ಮನವರಿಕೆಯಾಗಿದೆ. ಪಕ್ಷದ ಚುಕ್ಕಾಣಿಯೇನೋ ಸಿಗಬಹುದು. ಆದರೆ ಅಷ್ಟೇ ಸುಲಭದಲ್ಲಿ ಮುಂದೆ ಮುಖ್ಯಮಂತ್ರಿಯ ಸ್ಥಾನವೂ ಸಿಗಬಹುದೆನ್ನುವ ಧೈರ್ಯ ಯಡಿಯೂರಪ್ಪರಿಗಿಲ್ಲ. ಆದುದರಿಂದಲೇ, ಅವರೂ ಅಳೆದು, ತೂಗಿ ಹೆಜ್ಜೆ ಮುಂದಿಡುತ್ತಿದ್ದಾರೆ. ಒಟ್ಟಿನಲ್ಲಿ ಬಿಜೆಪಿಯೊಳಗೆ ಯಡಿಯೂರಪ್ಪ ಹೇಗೆ ತನ್ನ ಪ್ರಭಾವವನ್ನು ವಿಸ್ತರಿಸುತ್ತಾರೆ ಎನ್ನುವುದನ್ನು ರಾಜ್ಯ ರಾಜಕೀಯ ಕುತೂಹಲದಿಂದ ನೋಡುತ್ತಿದೆ.