×
Ad

ಬಳ್ಳಾರಿಯಲ್ಲಿ ಜೀನ್ಸ್ ತಯಾರಿಕಾ ಕೈಗಾರಿಕಾ ಪಾರ್ಕ್ ಸ್ಥಾಪನೆ : ಬಳ್ಳಾರಿ-ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಝಮೀರ್ ಅಹ್ಮದ್ ಖಾನ್

Update: 2025-12-20 11:45 IST

 ಝಮೀರ್ ಅಹ್ಮದ್ ಖಾನ್ | Photo Credit: PTI 

ರಾಜ್ಯ ಸರಕಾರವು ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಬಜೆಟ್‌ನಲ್ಲಿ 5 ಸಾವಿರ ಕೋಟಿ ರೂ.ಗಳನ್ನು ಒದಗಿಸಿದೆ. ಕೆಕೆಆರ್‌ಡಿಬಿ, ಡಿಎಂಎಫ್, ಕೆಎಂಇಆರ್‌ಸಿಯ ಸಾವಿರಾರು ಕೋಟಿ ರೂ.ಗಳ ಅನುದಾನ ಎರಡು ಜಿಲ್ಲೆಗಳ ಆರೋಗ್ಯ, ಶಿಕ್ಷಣ, ಕೃಷಿ, ನೀರಾವರಿ ವಲಯಕ್ಕೆ ವೆಚ್ಚ ಮಾಡಲಾಗಿದೆ. ಶಾಲಾ-ಕಾಲೇಜು ಕಟ್ಟಡ ನಿರ್ಮಾಣ, ಕುಡಿಯುವ ನೀರಿನ ಸೌಲಭ್ಯ, ಕೌಶಲ್ಯ ತರಬೇತಿಗೆ ಹೆಚ್ಚು ಒತ್ತು ನೀಡಲಾಗಿದೆ.

ವಾ.ಭಾ.ವಿಶೇಷ ಪ್ರತಿನಿಧಿ

ಕಾಂಗ್ರೆಸ್ ಸರಕಾರ ಗಡಿನಾಡು ಬಳ್ಳಾರಿ ಹಾಗೂ ವಿಜಯ ನಗರ ಜಿಲ್ಲೆಯಲ್ಲಿ ಕಳೆದ ಎರಡೂವರೆ ವರ್ಷಗಳಿಂದ ಕೈಗೊಂಡಿರುವ ಅಭಿವೃದ್ಧಿ ಹಾಗೂ ಭವಿಷ್ಯದ ಯೋಜನೆಗಳಿಗೆ ಸಂಬಂಧಿಸಿದಂತೆ ಉಭಯ ಜಿಲ್ಲೆಗಳ ಉಸ್ತುವಾರಿ ಸಚಿವ ಬಿ.ಝಡ್.ಝಮೀರ್ ಅಹ್ಮದ್ ಖಾನ್ ‘ವಾರ್ತಾಭಾರತಿ’ ಪತ್ರಿಕೆಗೆ ವಿಶೇಷ ಸಂದರ್ಶನ ನೀಡಿದ್ದಾರೆ.

► ಬಳ್ಳಾರಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಜೀನ್ಸ್ ತಯಾರಿಕೆಯ ಬೃಹತ್ ಕೈಗಾರಿಕಾ ಪಾರ್ಕ್ ಸ್ಥಾಪನೆಯ ಕನಸು ಏನಾಯಿತು?

ಝಮೀರ್ ಅಹ್ಮದ್: ರಾಹುಲ್ ಗಾಂಧಿಯವರು ಭಾರತ್ ಜೋಡೋ ಯಾತ್ರೆಯ ವೇಳೆ ಬಳ್ಳಾರಿ ಜಿಲ್ಲೆಯ ಕನಸಿನ ಯೋಜನೆಯಾದ ಜೀನ್ಸ್ ತಯಾರಿಕೆಯ ಅಂತರ್ ರಾಷ್ಟ್ರೀಯ ಮಟ್ಟದ ಬೃಹತ್ ಕೈಗಾರಿಕಾ ಪಾರ್ಕ್ ಸ್ಥಾಪನೆಯ ಬಗ್ಗೆ ಭರವಸೆ ನೀಡಿದ್ದರು. ಅವರ ಆಶಯದಂತೆ ಬೃಹತ್ ಕೈಗಾರಿಕಾ ಪಾರ್ಕ್ ಸ್ಥಾಪನೆಯ ಪೂರ್ವ ತಯಾರಿ ಹಾಗೂ ಮಂಜೂರಾಗಬೇಕಾದ ಅನುದಾನದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಸಭೆ ನಡೆಸಲಾಗಿದೆ. ಆದಷ್ಟು ಬೇಗ ಈ ಯೋಜನೆಗೆ ರೂಪ ಸಿಗುವ ಸಾಧ್ಯತೆಯಿದೆ.

► ಬಳ್ಳಾರಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಶಾಲೆ ಹಾಗೂ ಹಾಸ್ಟೆಲ್‌ಗಳ ನಿರ್ಮಾಣಕ್ಕೆ ಒದಗಿಸಿರುವ ಅನುದಾನ ಎಷ್ಟು?

ಝಮೀರ್ ಅಹ್ಮದ್: ಬಳ್ಳಾರಿ ಜಿಲ್ಲೆಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಶಾಲೆ ಹಾಗೂ ಹಾಸ್ಟೆಲ್ ನಿರ್ಮಾಣಕ್ಕೆ 52.50 ಕೋಟಿ ರೂ., ಅಲ್ಪಸಂಖ್ಯಾತರ ಕಾಲನಿ ಅಭಿವೃದ್ಧಿಗೆ 25 ಕೋಟಿ ರೂ., ಸಮುದಾಯ ಭವನ ನಿರ್ಮಾಣಕ್ಕೆ 12 ಕೋಟಿ ರೂ. ಅನುದಾನ ಒದಗಿಸಲಾಗಿದೆ.

► ವಸತಿ ಇಲಾಖೆಯಿಂದ ಬಳ್ಳಾರಿಯಲ್ಲಿ ಎಷ್ಟು ಬಡ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿಕೊಡಲಾಗಿದೆ?

ಝಮೀರ್ ಅಹ್ಮದ್: ವಸತಿ ಇಲಾಖೆಯ ರಾಜೀವ್ ಗಾಂಧಿ ವಸತಿ ನಿಗಮದಿಂದ ಬಳ್ಳಾರಿಯಲ್ಲಿ 371.14 ಕೋಟಿ ರೂ. ವೆಚ್ಚದಲ್ಲಿ 5,616 ಮನೆ, ಸಂಡೂರಿನಲ್ಲಿ 135.74 ಕೋಟಿ ರೂ. ವೆಚ್ಚದಲ್ಲಿ 2,172 ಮನೆ, ಬಸವ, ಅಂಬೇಡ್ಕರ್ ವಸತಿ ಯೋಜನೆಯಡಿಯಲ್ಲಿ 6,653 ಮನೆ ಹಾಗೂ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ 5,978 ಮನೆ ನಿರ್ಮಿಸಿ ಕೊಡಲಾಗಿದೆ.

► ಉಭಯ ಜಿಲ್ಲೆಯ ಉಸ್ತುವಾರಿ ಹೊತ್ತಿರುವ ತಾವು ಅಲ್ಲಿನ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳೇನು?

ಝಮೀರ್ ಅಹ್ಮದ್: ವಿಜಯನಗರ ಜಿಲ್ಲೆಗೆಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 19ಶಾಲೆ, ಹಾಸ್ಟೆಲ್ ನಿರ್ಮಾಣಕ್ಕೆ

65.92 ಕೋಟಿ ರೂ., ಅಲ್ಪಸಂಖ್ಯಾತರ ಕಾಲನಿ ಅಭಿವೃದ್ಧಿಗೆ 20 ಕೋಟಿ ರೂ. ಒದಗಿಸಲಾಗಿದೆ. ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ 5,607 ಮನೆ, ರಾಜೀವ್ ಗಾಂಧಿ ವಸತಿ ನಿಗಮದಿಂದ 6,232 ಮನೆ ಮಂಜೂರು ಮಾಡಲಾಗಿದೆ.

ಕೂಡ್ಲಿಗಿ ಕ್ಷೇತ್ರಕ್ಕೆ 10 ಎಕರೆ ಜಾಗದಲ್ಲಿ 626 ಬಡ ಕುಟುಂಬಗಳಿಗೆ ಮನೆ ನಿರ್ಮಾಣ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ 383 ಬಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲು ಒಪ್ಪಿಗೆ ನೀಡಲಾಗಿದೆ.

► ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ದುರಸ್ತಿ ಕಾಮಗಾರಿ ಆರಂಭವಾಗಲಿದ್ದು, ರೈತರಿಗೆ ಎರಡನೇ ಬೆಳೆಗೆ ನೀರು ಸಿಗುವುದೆ?

ಝಮೀರ್ ಅಹ್ಮದ್: ಈಗಿರುವ ಬೆಳೆಗೆ ನೀರು ಕೊಡಲು ಯಾವುದೇ ತೊಂದರೆ ಇಲ್ಲ. ಆದರೆ, ತುಂಗಭದ್ರಾ ಅಣೆಕಟ್ಟೆಯ ಎಲ್ಲ 33 ಕ್ರಸ್ಟ್ ಗೇಟುಗಳನ್ನು ಹೊಸದಾಗಿ ಅಳವಡಿಸಬೇಕಿರುವುದರಿಂದ ಪೂರ್ಣ ಪ್ರಮಾಣದಲ್ಲಿ ನೀರು ಸಂಗ್ರಹ ಕಷ್ಟ. ಸರಕಾರಕ್ಕೆ ರೈತರ ಹಿತ ಮುಖ್ಯ. ಜೊತೆಗೆ ಅಣೆಕಟ್ಟೆಯ ರಕ್ಷಣೆಯೂ ನಮ್ಮ ಕರ್ತವ್ಯ. ಹೊಸ ಗೇಟುಗಳ ಅಳವಡಿಕೆ ಜೂನ್ ಅಂತ್ಯಕ್ಕೆ ಪೂರ್ಣ

ಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ಎಲ್ಲಾ ಪಕ್ಷದ ಜನ ಪ್ರತಿನಿಧಿಗಳು ಹಾಗೂ ರೈತ ಮುಖಂಡರ ಜೊತೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗಿದೆ.

► ಮೌಲಾನಾ ಆಝಾದ್ ಮಾದರಿ ಶಾಲೆಗಳಲ್ಲಿ ಎಸೆಸೆಲ್ಸಿ ಫಲಿತಾಂಶ ವೃದ್ಧಿಗೆ ಕೈಗೊಂಡಿರುವ ಕ್ರಮಗಳೇನು?

ಝಮೀರ್‌ಅಹ್ಮದ್: ವಿಜಯನಗರ ಜಿಲ್ಲೆಯಲ್ಲಿ ನಾಲ್ಕು ಮೌಲಾನಾ ಆಝಾದ್ ಮಾದರಿ ಶಾಲೆಗಳಿದ್ದು, 2024-25ನೆ ಸಾಲಿನ ಎಸೆಸೆಲ್ಸಿ ಪರೀಕ್ಷೆಯನ್ನು 101 ಮಕ್ಕಳು ಕೈಗೊಂಡಿದ್ದು, ಶೇ.69.31ರಷ್ಟು ಫಲಿತಾಂಶ ಬಂದಿದೆ. ಬಳ್ಳಾರಿಯಲ್ಲಿ ಒಂದು ಮೌಲಾನಾ ಆಝಾದ್ ಶಾಲೆಯಿದ್ದು, 22 ಮಕ್ಕಳು ಎಸೆಸೆಲ್ಸಿಯಲ್ಲಿ ಶೇ. 90.91ರಷ್ಟು ಫಲಿತಾಂಶ ಪಡೆದಿದ್ದಾರೆ. ಮೌಲಾನಾ ಆಝಾದ್ ಮಾದರಿ ಶಾಲೆಗಳಲ್ಲಿ ಫಲಿತಾಂಶ ಸುಧಾರಣೆ ಹಾಗೂ ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕು ಎಂಬುದು ನಮ್ಮ ಬದ್ಧತೆಯಾಗಿದೆ.

► ಅಲ್ಪಸಂಖ್ಯಾತ ಸಮುದಾಯದ ಶೈಕ್ಷಣಿಕ ಪ್ರಗತಿಗೆ ಕೈಗೊಂಡಿರುವ ಕ್ರಮಗಳೇನು?

ಝಮೀರ್ ಅಹ್ಮದ್: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. 2025-26ನೆ ಸಾಲಿನ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ 4,500 ಕೊಟಿ ರೂ. ಅನುದಾನ ನಿಗದಿಪಡಿಸಲಾಗಿದೆ. ಇದರಲ್ಲಿ 2,900 ಕೋಟಿ ರೂ.ಗಳನ್ನು ಅಲ್ಪಸಂಖ್ಯಾತ ಸಮುದಾಯಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಮೀಸಲಿಡಲಾಗಿದೆ.

ಬೆಂಗಳೂರಿನ ಹಜ್ ಭವನದಲ್ಲಿ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಐಎಎಸ್, ಐಪಿಎಸ್, ಕೆಎಎಸ್ ನಂತರ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಭಾವಿ ತರಬೇತಿಯನ್ನು ನೀಡಲಾಗುತ್ತಿದೆ. ಇದೇ ಮೊದಲ ಬಾರಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 400 ಅಭ್ಯರ್ಥಿಗಳಿಗೆ ಪೂರ್ವ ನೇಮಕಾತಿ ಸಬ್‌ಇನ್ಸ್‌ಪೆಕ್ಟರ್ ತರಬೇತಿಯನ್ನು ನೀಡಲಾಗಿದೆ.

ವಿದೇಶದಲ್ಲಿನ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮಾಡಲು ಹೋಗುವಂತಹ ವಿದ್ಯಾರ್ಥಿಗಳ ವೇತನವನ್ನು 2025-26ನೆ ಸಾಲಿನಿಂದ 30 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಬಿಎಸ್ಸಿ ನರ್ಸಿಂಗ್ ಓದುತ್ತಿರುವವರಿಗೆ ಈ ವರ್ಷದಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಎಂಬಿಬಿಎಸ್ ಓದುವ ವಿದ್ಯಾರ್ಥಿಗಳಿಗೆ 5 ಲಕ್ಷ ರೂ. ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಕರ್ನಾಟಕ ಪಬ್ಲಿಕ್ ಶಾಲೆಗಳ ಮಾದರಿಯಲ್ಲಿ ಎಲ್‌ಕೆಜಿಯಿಂದ ಪಿಯುಸಿವರೆಗೆ ಉಚಿತ ಶಿಕ್ಷಣ ನೀಡುವ 100 ಮೌಲಾನಾ ಆಝಾದ್ ಶಾಲೆಗಳನ್ನು ಆರಂಭಿಸಲಾಗುತ್ತಿದೆ.

► ನೂತನ ವಿಜಯನಗರ ಜಿಲ್ಲೆಯ ಅಭಿವೃದ್ಧಿ ಬಗ್ಗೆ ನಿಮ್ಮ ಮುಂದಿನ ನಡೆ ಏನು?

ಝಮೀರ್ ಅಹ್ಮದ್: ಬಳ್ಳಾರಿಯಿಂದ ವಿಭಜಿಸಲ್ಪಟ್ಟು ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆಯು ಐತಿಹಾಸಿಕ, ಪಾರಂಪರಿಕ, ಪ್ರೇಕ್ಷಣೀಯ ಸ್ಥಳಗಳ ತಾಣವಾಗಿದೆ. ಇಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ವಿಸ್ತರಿಸಲು ಹೆಚ್ಚಿನ ಅವಕಾಶಗಳಿವೆ. ಆ ಮೂಲಕ ಯುವ ಸಮುದಾಯಕ್ಕೆ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಸಾಧ್ಯವಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News