×
Ad

‘ವಿಜಯಪುರ ಜಿಲ್ಲಾ ಕೈಗಾರಿಕಾ ನಕಾಶೆಯಲ್ಲಿ ಮಿಂಚಲಿದೆ’ : ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್

Update: 2025-12-20 11:55 IST

ಎಂ.ಬಿ.ಪಾಟೀಲ್

ವಿಜಯಪುರ ಜಿಲ್ಲೆ ಮೂಲತಃ ಶುಷ್ಕ ಪ್ರದೇಶ. ಮಳೆ ಕಡಿಮೆ. ಕೆಲ ವರ್ಷಗಳ ಹಿಂದೆ ನಮ್ಮಲ್ಲಿ ಕೇವಲ ಶೇ. 0.17ರಷ್ಟು ಅರಣ್ಯ ಮಾತ್ರವಿದೆ ಅಂತ ಗೊತ್ತಾದಾಗ ನನಗೆ ದಿಗ್ಭ್ರಮೆಯಾಯಿತು. ಆಗ ಹುಟ್ಟಿದ ಆಲೋಚನೆಯೇ ವೃಕ್ಷಥಾನ್ ಉಪಕ್ರಮದ ಪರಿಕಲ್ಪನೆ. ಇದರಿಂದಾಗಿ ಈತನಕ ಒಂದೂವರೆ ಕೋಟಿ ಸಸಿ ನೆಟ್ಟು, ಪೋಷಿಸಿದ್ದೇವೆ. ಇದರಿಂದ ಜಿಲ್ಲೆಯಲ್ಲಿ ಅರಣ್ಯಪ್ರದೇಶ ಶೇ. 2ಕ್ಕೇರಿದೆ. ಈ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಕೂಡ ವಿಸ್ತೃತವಾಗಿ ಬರೆದು, ಗಮನ ಸೆಳೆದಿದೆ.

ವಾ.ಭಾ.ವಿಶೇಷ ಪ್ರತಿನಿಧಿ

ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್, ತಮ್ಮ ಜಿಲ್ಲೆಗೆ ನೀಡಿರುವ ಕೈಗಾರಿಕಾ ಕೊಡುಗೆ, ಕರೆತಂದಿರುವ ಉದ್ಯಮಗಳು, ಬಂಡವಾಳ ಹೂಡಿಕೆ, ಜಿಲ್ಲೆಯ ಅಭಿವೃದ್ಧಿಗೆ ಕಟ್ಟಿಕೊಂಡಿರುವ ಕನಸುಗಳ ಕುರಿತು ‘ವಾರ್ತಾಭಾರತಿ’ ಪತ್ರಿಕೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

► ವಿಜಯಪುರ ಜಿಲ್ಲೆಯ ಅಭಿವೃದ್ಧಿಗೆ ನಿಮ್ಮ ಕನಸುಗಳೇನು?

ಎಂ.ಬಿ.ಪಾಟೀಲ್: ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದಂತೆ ‘ವಿಜಯಪುರ ಮಾಡೆಲ್’ ಅಂತ ಒಂದು ಬ್ರ್ಯಾಂಡನ್ನು ಸೃಷ್ಟಿಸಬೇಕು ಎನ್ನುವುದು ನನ್ನ ಹೆಬ್ಬಯಕೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಖಾತೆಗಳ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವನಾಗಿ ಈ ಬಗ್ಗೆ ನನಗೊಂದು ಸ್ಪಷ್ಟ ಕಲ್ಪನೆ ಇದೆ. ವಿಜಯಪುರ ಜಿಲ್ಲೆಯು ಶುಷ್ಕವಾದ ಬರಡು ಪ್ರದೇಶ ಎನ್ನುವುದೆಲ್ಲ ಈಗ ಹಳೆಯ ಮಾತು. ನಮ್ಮಲ್ಲಿರುವಷ್ಟು ನೀರಾವರಿ ಸಮೃದ್ಧಿ ಬೇರೆಲ್ಲೂ ಇಲ್ಲ. ಹಾಗೆಯೇ ಕೈಗಾರಿಕೆಗಳಿಗೆ ಬೇಕಾದ ಭೂಮಿಯೂ ಇದೆ. ನೀರು ಮತ್ತು ಭೂಮಿ ಎರಡೂ ಕೈಗಾರಿಕೆಗಳ ಬೆಳವಣಿಗೆಗೆ ಅತ್ಯಗತ್ಯ. ಇವೆರಡನ್ನೂ ನಾವು ಕೃಷಿಯ ಜೊತೆಯಲ್ಲೇ ಔದ್ಯಮಿಕ ಪ್ರಗತಿಗೂ ಬಳಸಿಕೊಳ್ಳಬೇಕು. ಇಂತಹ ವಿವೇಚನೆಯ ದಾರಿ ನನ್ನದು. ಈ ಮೂಲಕ ವಿಜಯಪುರ ಜಿಲ್ಲೆಯನ್ನು ಉತ್ತರ ಕರ್ನಾಟಕದ 14 ಜಿಲ್ಲೆಗಳ ಪೈಕಿ ಕೈಗಾರಿಕಾ ನಕಾಶೆಯಲ್ಲಿ ಮೇಲ್ಪಂಕ್ತಿಯಾಗಿ ಬೆಳೆಸಲಾಗುವುದು.

► ನೀವು ಈ ಖಾತೆ ವಹಿಸಿಕೊಂಡು ಎರಡೂವರೆ ವರ್ಷ ಗಳಾದವು. ಈ ನಿಟ್ಟಿನಲ್ಲಿ ನೀವು ಇಟ್ಟಿರುವ ಹೆಜ್ಜೆಗಳೇನು?

ಎಂ.ಬಿ.ಪಾಟೀಲ್: ಜಿಲ್ಲೆಯನ್ನು ಇಂಧನ ಕ್ಷೇತ್ರದ ಸಾಧನಗಳು, ಮಶಿನರೀಸ್ ಮತ್ತು ಎಕ್ವಿಪ್‌ಮೆಂಟ್, ನಾನ್-ಮೆಟಾಲಿಕ್ ಖನಿಜೋತ್ಪನ್ನಗಳು, ಕೃಷಿ ಮತ್ತು ಕೃಷಿ ಆಧರಿತ ಉತ್ಪನ್ನಗಳು, ನ್ಯೂಟ್ರಾಸುಟಿಕಲ್ ಮೆಡಿಸಿನಲ್ ಮತ್ತು ಬೊಟಾನಿಕಲ್ ಉತ್ಪನ್ನಗಳು, ವಿಶೇಷ ಅಲಾಯ್ ಮತ್ತು ಲೋಹೋತ್ಪನ್ನ ಈ ಆರೂ ವಲಯಗಳ ಕೈಗಾರಿಕಾ ಅಭಿವೃದ್ಧಿ ತಯಾರಿಕಾ ಕ್ಲಸ್ಟರ್ ಆಗಿ ಬೆಳೆಸಲಾಗುವುದು. ಇದನ್ನು ಬಜೆಟ್ಟಿನಲ್ಲಿಯೆ ಘೋಷಿಸಲಾಗಿದೆ. ಇದು ದೀರ್ಘಾವಧಿಯಲ್ಲಿ ಫಲ ತಂದುಕೊಡುವಂತಹ ರಚನಾತ್ಮಕ ಕ್ರಮ ಎನ್ನುವುದರಲ್ಲಿ ಎರಡು ಮಾತಿಲ್ಲ, ಇದಕ್ಕಾಗಿ ಮುಳವಾಡದಲ್ಲಿ ಕೆಐಎಡಿಬಿಗೆ ಸೇರಿದ 300 ಎಕರೆ ಜಾಗದಲ್ಲಿ ಉತ್ಪಾದನಾ ಕ್ಲಸ್ಟರ್ ಸ್ಥಾಪಿಸಲಾಗುವುದು.

ಈ ವರ್ಗದ ಫೆಬ್ರವರಿಯಲ್ಲಿ ನಡೆಸಿದ ‘ಜಾಗತಿಕ ಹೂಡಿಕೆದಾರರ ಸಮಾವೇಶ’ ಹಾಗೂ ಇತರ ಪ್ರಯತ್ನಗಳ ಮೂಲಕ ನಮ್ಮ ಜಿಲ್ಲೆಗೆ 42 ಸಾವಿರ ಕೋಟಿ ರೂ. ಮೊತ್ತದ ಕೈಗಾರಿಕಾ ಯೋಜನೆಗಳನ್ನು ತರುವ ಸಂಬಂಧ ಮಾತುಕತೆ ನಡೆದಿದೆ. ಜೊತೆಗೆ ತಿಡಗುಂದಿ ಯಲ್ಲಿ 1,200 ಎಕರೆ ವ್ಯಾಪ್ತಿಯಲ್ಲಿ ಕೈಗಾರಿಕೆ ಮತ್ತು ಲಾಜಿಸ್ಟಿಕ್ಸ್ ಪಾರ್ಕ್ ಸ್ಥಾಪಿಸುತ್ತಿದ್ದು, ಇದಕ್ಕೆ 25 ಸಾವಿರ ಕೋಟಿ ರೂ. ಹೂಡಿಕೆ ಆಗುತ್ತಿದೆ. ಇದರಿಂದ 20 ಸಾವಿರಕ್ಕೂ ಹೆಚ್ಚು ನೇರ ಉದ್ಯೋಗ ಸೃಷ್ಟಿ ಆಗಲಿದೆ. ಜಿಲ್ಲೆಯು ಆರ್ಥಿಕ ವಹಿವಾಟಿನ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದೆ. ಪರಿಣಾಮವಾಗಿ ಪ್ರಾದೇಶಿಕ ತಾರತಮ್ಯ ನಿವಾರಣೆ ಮತ್ತು ವಲಸೆಗೆ ಅಂಕುಶ ಎರಡೂ ಸಾಧ್ಯವಾಗಲಿವೆ.

ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆಎಸ್‌ಡಿಎಲ್) ಈಗ ಒಳ್ಳೆಯ ಲಾಭದಲ್ಲಿದೆ. ಜೊತೆಗೆ ಇದರ ಉತ್ಪನ್ನಗಳಿಗೆ ಒಳ್ಳೆಯ ಮಾರುಕಟ್ಟೆ ಇದೆ. ಇದನ್ನು ಗಮನಿಸಿ, ವಿಜಯಪುರದಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಕೆಎಸ್‌ಡಿಎಲ್ ಘಟಕವನ್ನು ಶುರು ಮಾಡುತ್ತಿದ್ದೇವೆ. ಇದಕ್ಕೆ ಈಗಾಗಲೇ 50 ಎಕರೆ ಜಮೀನನ್ನೂ ಕೊಡಲಾಗಿದೆ. ಸೋಲಾರ್-ವೇಫರ್, ಬಣ್ಣ ಮತ್ತು ರಾಸಾಯನಿಕಗಳು ಹಾಗೂ ಮರುಬಳಕೆ ಇಂಧನ ತಯಾರಿಕೆ ವಲಯದಲ್ಲಿ ಬೇರೆ ಬೇರೆ ಉದ್ಯಮ ಸಮೂಹಗಳು ವಿಜಯಪುರ ಜಿಲ್ಲೆಯಲ್ಲಿ ಒಟ್ಟು 17 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಬಂಡವಾಳ ತೊಡಗಿಸಲು ಮುಂದೆ ಬಂದಿವೆ.

► ವಿಜಯಪುರ ಜಿಲ್ಲೆಯಲ್ಲಿ ಯಾವ್ಯಾವ ಕಂಪೆನಿಗಳು ಬಂದು ಬಂಡವಾಳ ಹೂಡುತ್ತಿವೆ ಅಂತ ಹೇಳಬಹುದೇ?

ಎಂ.ಬಿ.ಪಾಟೀಲ್: ರಿಲಯನ್ಸ್ ಸಮೂಹದ ಕ್ಯಾಂಪಾಕೋಲಾ ನಮ್ಮಲ್ಲಿ ತಂಪು ಪಾನೀಯ ಮತ್ತು ಬಾಟ್ಲಿಂಗ್ ಘಟಕ (1,622 ಕೋಟಿ ರೂ.), ಧಾನ್ಯ ಸಂಸ್ಕರಣೆ ಕ್ಷೇತ್ರದಲ್ಲಿ ವಿಂಗ್ಸ್ ವಿಟಾರಾ ಕಂಪೆನಿ (350 ಕೋಟಿ ರೂ.), ಪವನ ವಿದ್ಯುತ್ ಕ್ಷೇತ್ರದಲ್ಲಿ ಸುಜ್ಲಾನ್ (360 ಕೋಟಿ ರೂ.), ಸೌರಫಲಕಗಳು ಮತ್ತು ಎಲೆಕ್ಟ್ರಾನಿಕ್ ಬಿಡಿಭಾಗಗಳ ತಯಾರಿಕೆಗೆ ರೆನೈಸಾನ್ಸ್ ಕಂಪೆನಿ (6,000 ಕೋಟಿ ರೂ) ಹೀಗೆ ಹತ್ತಾರು ಕಂಪೆನಿಗಳು ಬರುತ್ತಿವೆ. ಮೈಸೂರಿನ ಕೇನ್ಸ್ ಟೆಕ್ನಾಲಜೀಸ್ ಕಂಪೆನಿ ಕೂಡ ನಮ್ಮಲ್ಲಿಗೆ ಬಂದು ಪಿಸಿಬಿ ತಯಾರಿಕಾ ಘಟಕ ಮಾಡಬೇಕೆಂದು ಕೇಳಿಕೊಂಡಿದ್ದೀವಿ. ಕ್ಯಾಂಪಾಕೋಲಾ ಹೆಚ್ಚುವರಿಯಾಗಿ 450 ಕೋಟಿ ರೂ. ಹೂಡಿಕೆ ಮಾಡಲು ತೀರ್ಮಾನಿಸಿದೆ.

ಒಟ್ಟಾರೆಯಾಗಿ ನಮ್ಮ ಜಿಲ್ಲೆಯಲ್ಲಿ ಹೂಡಿಕೆ ಮಾಡಲು ಎಫ್‌ಎಂಸಿಜಿ ವಲಯದಲ್ಲಿ 30, ಸೋಲಾರ್ ವಲಯದಲ್ಲಿ 25 ಮತ್ತು ಜವಳಿ ವಲಯದಲ್ಲಿ 15ಕ್ಕೂ ಹೆಚ್ಚು ಕಂಪೆನಿಗಳು ಮುಂದಾಗಿವೆ. ಆಹಾರ ಸಂಸ್ಕರಣೆ ವಲಯದಲ್ಲಿ ಕಬ್ಬನ್ನು ಆಧರಿಸಿ ಎಥೆನಾಲ್, ಚಾಕೊಲೇಟ್ ಮತ್ತು ತಂಪು ಪಾನೀಯ ತಯಾರಿಕೆ ಘಟಕಗಳಿಗೆ ಹೆಚ್ಚು ಅವಕಾಶವಿದ್ದು, 20ಕ್ಕೂ ಹೆಚ್ಚು ಕಂಪೆನಿಗಳು ಬಂಡವಾಳ ಹೂಡಿಕೆಗೆ ಆಸಕ್ತವಾಗಿವೆ. ಇವುಗಳೊಂದಿಗೆ ಮಾತುಕತೆ ಪ್ರಗತಿಯಲ್ಲಿದೆ. ಸುಜ್ಲಾನ್ ಕಂಪೆನಿಯು 5,000 ಮೆಗಾವ್ಯಾಟ್ ಪವನ ವಿದ್ಯುತ್ ಉತ್ಪಾದನಾ ಸ್ಥಾವರವನ್ನು ಜಿಲ್ಲೆಯಲ್ಲಿ ಸ್ಥಾಪಿಸಲಿದ್ದು, ಇದಕೆ 30 ಸಾವಿರ ಕೋಟಿ ರೂ. ಬಂಡವಾಳ ಹೂಡುತ್ತಿದೆ. ಇದಕ್ಕೆ ಪೂರಕವಾಗಿ ಬೆಳಗಾವಿ-ವಿಜಯಪುರ-ಧಾರವಾಡ ಜಿಲ್ಲೆಯನ್ನು ಒಳಗೊಂಡಂತೆ ರಕ್ಷಣಾ ಉದ್ಯಮವನ್ನು ಬೆಳೆಸಬೇಕು ಎನ್ನುವುದು ನನ್ನ ದೂರದೃಷ್ಟಿ. ಈ ಸಂಬಂಧ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ, ಮನವಿ ಮಾಡಲಾಗಿದೆ.

► ಬಹುನಿರೀಕ್ಷಿತ ವಿಜಯಪುರ ವಿಮಾನ ನಿಲ್ದಾಣ ಯಾವಾಗ ಕಾರ್ಯಾರಂಭ ಮಾಡಬಹುದು? ಇದರಿಂದ ಜಿಲ್ಲೆಗೆ ಏನು ಲಾಭ?

ಎಂ.ಬಿ.ಪಾಟೀಲ್: ನಿಜ, ಇದರ ಬಗ್ಗೆ ನಾನು ಮೊದಲ ದಿನದಿಂದಲೂ ಉತ್ಸಾಹದಿಂದ ಮಾತನಾಡುತ್ತಿದ್ದೇನೆ. ಆದರೆ, ಇದಕ್ಕೆ ಅನಿರೀಕ್ಷಿತ ಸಮಸ್ಯೆಗಳು ಎದುರಾಗಿ ಬಿಟ್ಟವು. ಕೆಲವು ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಕೈಕಟ್ಟಿ ಹಾಕಿದಂತಾಯಿತು. ಈಗ ಇವೆಲ್ಲವೂ ಬಹುತೇಕ ಮುಗಿಯುವ ಹಂತಕ್ಕೆ ಬಂದಿದ್ದು, ಪರಿಸರ ಇಲಾಖೆಯ ಅನುಮತಿ ಮಾತ್ರ ಬಾಕಿ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, 2026ರ ಯುಗಾದಿ ಹೊತ್ತಿಗೆ ವಿಜಯಪುರ ವಿಮಾನ ನಿಲ್ದಾಣದಿಂದ ನಾಗರಿಕ ವಿಮಾನ ಸೇವೆ ಆರಂಭವಾಗಲಿದೆ. ಏತನ್ಮಧ್ಯೆ ನಾನು, ಕೇಂದ್ರ ವಿಮಾನಯಾನ ಸಚಿವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದೇನೆ. ಇಲ್ಲಿ ವಿಮಾನ ನಿಲ್ದಾಣ ಆರಂಭವಾದರೆ ಕೃಷಿ ಉತ್ಪನ್ನಗಳ ಸಾಗಾಟ, ರಫ್ತು, ಶಿಕ್ಷಣ, ಪ್ರವಾಸೋದ್ಯಮ, ಕೈಗಾರಿಕೆ ಎಲ್ಲವೂ ಬೆಳೆಯಲಿವೆ. ಈಗ ಕಿತ್ತೂರು ಕರ್ನಾಟಕದಲ್ಲಿ ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಮಾತ್ರ ವಿಮಾನ ನಿಲ್ದಾಣಗಳಿವೆ. ವಿಜಯಪುರದಲ್ಲೂ ಶುರುವಾದರೆ ಮಹಾರಾಷ್ಟ್ರ ಗುಜರಾತ್, ದಿಲ್ಲಿ, ಹೈದರಾಬಾದ್ ಮುಂತಾದ ಕಡೆಗಳಿಗೆ ಪ್ರಯಾಣ ಸುಲಭವಾಗಲಿದೆ. ಇದು ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಆರ್ಥಿಕ ಬೆಳವಣಿಗೆಗೆ ಕಾರಣವಾಗಲಿದೆ. ಇದನ್ನು ಗಮನಿಸಿ ಮೆಲ್‌ಸ್ಟಾರ್ ಕಂಪೆನಿಯು ವಿಜಯಪುರದಲ್ಲಿ ವಿಮಾನ ಹಾರಾಟ ತರಬೇತಿ ಶಾಲೆ ಪ್ರಾರಂಭಿಸಲು ಮುಂದೆ ಬಂದಿದೆ.

► ನೀವು ಮೂಲಸೌಕರ್ಯ ಅಭಿವೃದ್ಧಿ ಖಾತೆಯನ್ನೂ ನಿಭಾಯಿಸುತ್ತಿದ್ದೀರಿ. ವಿಜಯಪುರ ಜಿಲ್ಲೆಗೆ ಏನಾದರೂ ಪ್ರಯೋಜನವಿದೆಯೇ?

ಎಂ.ಬಿ.ಪಾಟೀಲ್: ಖಂಡಿತವಾಗಿಯೂ ಇದೆ. ಈಗ ನಮ್ಮ ಜಿಲ್ಲಾಕೇಂದ್ರದಿಂದ ರಾಜಧಾನಿ ಬೆಂಗಳೂರಿಗೆ ರೈಲಿನಲ್ಲಿ ಹೋಗಬೇಕೆಂದರೆ15-16 ಗಂಟೆಗಳು ಹಿಡಿಯುತ್ತಿದೆ. ಇದನ್ನು 10 ಗಂಟೆಗಳಿಗೆ ಇಳಿಸ ಬೇಕು ಅಂತ ನಾನು ನಿರಂತರವಾಗಿ ನೈಋತ್ಯ ರೈಲ್ವೆ ಜೊತೆ ಮಾತುಕತೆ ನಡೆಸುತ್ತಿದ್ದೇನೆ. ಜೊತೆಗೆ ಕೇಂದ್ರ ರೈಲ್ವೆ ಸಹಾಯಕ ಸಚಿವ ವಿ.ಸೋಮಣ್ಣ ಅವರ ಜೊತೆಯೂ ಸಭೆಗಳನ್ನು ನಡೆಸಿದ್ದೇನೆ. ಹೀಗೆ ಒತ್ತಡ ಹೇರಿದ್ದರಿಂದ ನೈಋತ್ಯ ರೈಲ್ವೆಯವರು ಈಗ

ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮಾರ್ಗಗಳ ಮೂಲಕ ವಿಜಯಪುರಕ್ಕೆ ರೈಲು ಓಡಿಸಲು ಒಪ್ಪಿಕೊಂಡಿದ್ದಾರೆ. ಇದು ಸಾಧ್ಯವಾಗಬೇಕೆಂದರೆ ಹೊಸ ರೈಲುಗಳ ಮಂಜೂರಾತಿ ಬೇಕು. ಇದಕ್ಕೆ ಕೇಂದ್ರ ಸರಕಾರಕ್ಕೆ ಪತ್ರ ಬರೆದು, ವ್ಯವಹರಿಸಲಾಗುವುದು.

► ಕೃಷ್ಣಾ ಮೇಲ್ದಂಡೆ ಯೋಜನೆಯ ತೀರ್ಪಿನ ಬಗ್ಗೆ ಕೇಂದ್ರ ಸರಕಾರದ ಗೆಜೆಟ್ಟಿನಲ್ಲಿ ಪ್ರಕಟವಾಗಿಲ್ಲ. ಈ ಸಂಬಂಧ ಕೇಂದ್ರದ ಮೇಲೆ ಒತ್ತಡ ಹೇರಲು ಏನು ಕ್ರಮಗಳನ್ನು ಕೈಗೊಳ್ಳಲಾಗಿದೆ?

ಎಂ.ಬಿ.ಪಾಟೀಲ್: ಈ ವಿಳಂಬಕ್ಕೆ ಕೇಂದ್ರ ಸರಕಾರವೇ ಕಾರಣ. ತೀರ್ಪು 2010ರಲ್ಲೇ ಬಂದಿದೆ. ಅದಾದಮೇಲೆ 15 ವರ್ಷಗಳು ಉರುಳಿವೆ. ಆದರೂ ಕೇಂದ್ರ ಸರಕಾರ ಮಾತ್ರ ಉದಾಸೀನ ಮಾಡುತ್ತಿದೆ. ಈ ಮಧ್ಯೆ ಮಹಾರಾಷ್ಟ್ರ ,ಆಂಧ್ರಪ್ರದೇಶ ರಾಜ್ಯಗಳು ಪರಿಸ್ಥಿತಿಯ ದುರ್ಲಾಭ ಪಡೆಯುತ್ತಿವೆ. ಇದರಿಂದಾಗಿ ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 519 ಮೀಟರಿನಿಂದ 524 ಮೀಟರಿಗೆ ಹೆಚ್ಚಿಸಲು ತಡವಾಗುತ್ತಿದೆ. ರಾಜ್ಯದ ಬಿಜೆಪಿ ಸಂಸದರು ಇದರ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಈ ನಡುವೆ ಯೋಜನೆಗೆ ಎಷ್ಟು ಭೂಮಿ ಬೇಕು, ಸಂತ್ರಸ್ತರಿಗೆ ಎಷ್ಟು ಪರಿಹಾರ ಕೊಡಬೇಕು ಎಂಬ ಬಗ್ಗೆ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಆದ್ಯತೆಯ ಮೇರೆಗೆ ಇತ್ಯರ್ಥ ಮಾಡುತ್ತಿದ್ದೇವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News