‘ಕೊಪ್ಪಳಕ್ಕೆ ಕುಡಿಯುವ ನೀರು ಒದಗಿಸುವುದು ನನ್ನ ಕನಸು’ : ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ
ಶಿವರಾಜ್ ತಂಗಡಗಿ
‘ಉದ್ಯೋಗಾವಕಾಶ ಸೃಷ್ಟಿಸಲು ಕ್ರಮ’
ಉದ್ಯೋಗಾವಕಾಶಗಳನ್ನು ಜಿಲ್ಲಾ ಹಂತದಲ್ಲಿ ಸೃಷ್ಟಿಸಲು ಆಗುವುದಿಲ್ಲ. ರಾಜ್ಯ ಸರಕಾರ ಇಡೀ ರಾಜ್ಯಕ್ಕೆ ಅನ್ವಯಿಸು ವಂತೆ ಕಾರ್ಯಕ್ರಮಗಳು,ಯೋಜನೆಗಳನ್ನು ರೂಪಿಸ ಬೇಕಾಗುತ್ತದೆ. ನಮ್ಮ ಭಾಗದಲ್ಲಿ ಕೈಗಾರಿಕೆಗಳು ಬರಬೇಕು. ಆದರೆ, ಕೈಗಾರಿಕೆಗಳ ಪರ ಹಾಗೂ ವಿರೋಧ ಅಭಿಪ್ರಾಯಗಳು ಇವೆ. ಊರುಗಳ ಸಮೀಪದಲ್ಲಿ ಕೈಗಾರಿಕೆಗಳು ಬೇಡ ಎಂದು ನಾನು ವೈಯಕ್ತಿಕ ಅಭಿಪ್ರಾಯವನ್ನು ತಿಳಿಸಿದ್ದೇನೆ. ಒಳ ಮೀಸಲಾತಿಯ ವಿಚಾರ ವಿಚಾರ ಅಡ್ಡ ಬಂದಿರುವುದರಿಂದ ನೇಮಕಾತಿ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ. ಒಳ ಮೀಸಲಾತಿ ವಿಚಾರ ಪ್ರಶ್ನಿಸಿ ಕೆಲವರು ನ್ಯಾಯಾಲಯಕ್ಕೂ ಹೋಗಿದ್ದಾರೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಈ ಸಮಸ್ಯೆಯನ್ನು ಬಗೆಹರಿಸುವ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ಯುವಕರಿಗೆ ಉದ್ಯೋಗಾವಕಾಶಗಳು ಲಭ್ಯವಾಗಲಿವೆ.
ಶಿವರಾಜ ತಂಗಡಗಿಯವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಇವರು ಎರಡೂವರೆ ವರ್ಷಗಳಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಭವಿಷ್ಯದ ಯೋಜನೆಗಳ ಕುರಿತು ‘ವಾರ್ತಾಭಾರತಿ’ ಪತ್ರಿಕೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
► ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಕೊಪ್ಪಳ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಯಾವುವು?
ಶಿವರಾಜ್ ತಂಗಡಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರಕಾರದ ಅವಧಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ವಿದ್ಯಾರ್ಥಿನಿಲಯ ಸ್ಥಾಪನೆ ಮಾಡಲಾಯಿತು. ನನ್ನ ಮತ ಕ್ಷೇತ್ರದಲ್ಲಿ ತೋಟಗಾರಿಕಾ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಕೆಆರ್‌ಡಿಬಿ) ಅನುದಾನವನ್ನು ಅತೀ ಹೆಚ್ಚು ಬಳಕೆ ಮಾಡಿಕೊಂಡು, ನಮ್ಮ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವಿಶೇಷ ಒತ್ತು ನೀಡಿದ್ದೇವೆ. ರೈತರ ಅನುಕೂಲಕ್ಕಾಗಿ ಕೆರೆ ತುಂಬಿಸುವ ಯೋಜನೆ ಹಮ್ಮಿಕೊಂಡು, ಕುಷ್ಟಗಿ, ಯಲಬುರ್ಗಾ ಮತ್ತು ಕನಕಗಿರಿ ತಾಲೂಕುಗಳಲ್ಲಿ ಕೆರೆ ತುಂಬಿಸುವ ಕೆಲಸ ಮಾಡಿದ್ದೇವೆ.
► ಕನಕಗಿರಿ ತಾಲೂಕಿನಲ್ಲಿ ಕ್ರೀಡಾಂಗಣ ನಿರ್ಮಾಣಕ್ಕಾಗಿ ಕೈಗೊಂಡಿರುವ ಕ್ರಮಗಳೇನು?
ಶಿವರಾಜ್ ತಂಗಡಗಿ: ಕನಕಗಿರಿ ತಾಲೂಕಿನಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಬೇಕು ಎಂಬುದು ನನ್ನ ಕನಸಾಗಿದೆ. ಕ್ರೀಡಾಂಗಣ ನಿರ್ಮಿಸಲು ಮುಂದಿನ ಸಾಲಿನ ಬಜೆಟ್‌ನಲ್ಲಿ ವಿಶೇಷ ಅನುದಾನ ಪಡೆಯಲು ಪ್ರಯತ್ನಿಸಲಾಗುವುದು. ಈ ಕ್ರೀಡಾಂಗಣ ನಿರ್ಮಾಣದಿಂದಾಗಿ ಜಿಲ್ಲೆಯಲ್ಲಿರುವ ಯುವ ಕ್ರೀಡಾ ಪಟುಗಳಿಗೆ ತರಬೇತಿ ಪಡೆಯಲು, ಅಭ್ಯಾಸ ಮಾಡಲು ಅನುಕೂಲವಾಗುತ್ತದೆ. ಕ್ರೀಡಾ ಚಟುವಟಿಕೆಗಳಿಗೆ ನೀಡುವ ಪ್ರೋತ್ಸಾಹವು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಬುನಾದಿಯಾಗಲಿದೆ.
► ನವಲಿ ಸಮಾನಾಂತರ ಜಲಾಶಯ ನಿರ್ಮಾಣದ ಯೋಜನೆ ಯಾವ ಹಂತದಲ್ಲಿದೆ?
ಶಿವರಾಜ್ ತಂಗಡಗಿ: ನವಲಿ ಸಮಾನಾಂತರ ಜಲಾಶಯ ನಿರ್ಮಾಣ ಕುರಿತು ಕೇವಲ ಕರ್ನಾಟಕ ತೀರ್ಮಾನ ಮಾಡುವಂತಹದ್ದು ಅಲ್ಲ.ಇದರಲ್ಲಿ ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ರಾಜ್ಯದ ಸರಕಾರಗಳು ಕೂತು ಪರಸ್ಪರ ಚರ್ಚೆ ಮಾಡಿ ಈ ಯೋಜನೆ ಕುರಿತು ನಿರ್ಧಾರ ಕೈಗೊಳ್ಳಬೇಕಿದೆ. ಆದರೆ, ಆಂಧ್ರ ಹಾಗೂ ತೆಲಂಗಾಣದಿಂದ ನಮಗೆ ಸಮರ್ಪಕ ಸಹಕಾರ ಸಿಗುತ್ತಿಲ್ಲ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಈ ಯೋಜನೆ ಕುರಿತು ಗಂಭೀರವಾಗಿದ್ದಾರೆ.
ಈ ಜಲಾಶಯದ ನಿರ್ಮಾಣದಿಂದ ಜಿಲ್ಲೆಯ ಕೊನೆಯ ಭಾಗದಲ್ಲಿರುವ ಹಾಗೂ ರಾಯಚೂರು ಭಾಗದ ರೈತರಿಗೆ ಸರಾಗವಾಗಿ ನೀರು ಕೊಡಬಹುದು. ಜತೆಗೆ,ಒಣ ಬೇಸಾಯ ಮಾಡುವಂತಹ ಕನಕಗಿರಿ, ಮಸ್ಕಿ, ತುರುವಿಹಾಳ ಸೇರಿದಂತೆ ಇತರಕಡೆ ನೀರಾವರಿ ಸೌಲಭ್ಯ ಕಲ್ಪಿಸಲು ಸಹಕಾರಿಯಾಗಲಿದೆ.
► ಅಂಜನಾದ್ರಿ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳೇನು?
ಶಿವರಾಜ್ ತಂಗಡಗಿ: ನಮ್ಮ ಸರಕಾರ ಅಧಿಕಾರಕ್ಕೆ ಬಂದನಂತರ 100ಕೋಟಿ ರೂ.ಗಳನ್ನು ಅಂಜನಾದ್ರಿ ಅಭಿವೃದ್ಧಿಗೆ ನೀಡಲಾಗಿದೆ. ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಘೋಷಿಸಿದ್ದ ಹಣ ಬಂದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ 100 ಕೋಟಿ ರೂ.ಗಳನ್ನು ಒದಗಿಸಿ, ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಜತೆಗೆ, ನಮಗೆ ಕಾನೂನಿನ ತೊಡಕು ಎದುರಾಗಿದೆ. ಆ ಭಾಗದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶ ಇರುವುದರಿಂದ ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು. ಅಲ್ಲಿ ಭೇಟಿ ನೀಡುವ ಪ್ರವಾಸಿಗರು, ಭಕ್ತಾದ್ಧಿಗಳಿಗಾಗಿ ಡಾರ್ಮಿಟರಿ, ವಸತಿ, ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
► ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್‌ಗಳನ್ನು ಬದಲಾಯಿಸುವ ಕಾರ್ಯ ಯಾವ ಹಂತದಲ್ಲಿದೆ?
ಶಿವರಾಜ್ ತಂಗಡಗಿ: ಸೋಮವಾರದಿಂದ ಜಲಾಶಯದ ಎಲ್ಲ 33 ಕ್ರಸ್ಟ್ ಗೇಟ್‌ಗಳನ್ನು ಬದಲಾಯಿಸುವ ಕೆಲಸ ಆರಂಭಿಸಲಾಗಿದೆ. ಮೇ ಅಂತ್ಯದ ವೇಳೆಗೆ ಎಲ್ಲ ಕ್ರಸ್ಟ್ ಗೇಟ್‌ಗಳನ್ನು ಬದಲಾಯಿಸಲು ಯೋಜನೆ ರೂಪಿಸಿದ್ದೇವೆ. ಟೆಂಡರ್‌ನಲ್ಲಿ ಅರ್ಹತೆ ಪಡೆದಿರುವ ಗುಜರಾತ್ ಮೂಲದ ಕಂಪೆನಿಗೆ ಕಾಮಗಾರಿ ನಡೆಸಲು ಕಾರ್ಯಾದೇಶ ನೀಡಲಾಗಿದೆ. ಇದರ ಜತೆಗೆ ಕೆಲ ಕಾಲುವೆಗಳ ದುರಸ್ತಿ ಹಾಗೂ ಅಣೆಕಟ್ಟೆಯ ಇನ್ನಿತರ ಸಣ್ಣಪುಟ್ಟ ದುರಸ್ತಿಗಳನ್ನು ಇದೇ ಸಂದರ್ಭದಲ್ಲಿ ಪೂರ್ಣಗೊಳಿಸಲಾಗುವುದು.
► ರೈತರು ಎರಡನೆ ಬೆಳೆಗೆ ನೀರು ಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಕ್ರಸ್ಟ್ ಗೇಟ್‌ಗಳನ್ನು ಬದಲಾಯಿಸುತ್ತಿರುವುದರಿಂದ ನೀರು ನೀಡಲು ಸಾಧ್ಯವೇ?
ಶಿವರಾಜ್ ತಂಗಡಗಿ: ಎರಡನೆ ಬೆಳೆಗೆ ನೀರು ಬೇಕು ಎಂದು ನಮ್ಮ ಭಾಗದ ರೈತರು ಬೇಡಿಕೆ ಇಟ್ಟಿಲ್ಲ. ಬಿಜೆಪಿಯವರು ಇಟ್ಟಿರುವ ಬೇಡಿಕೆ ಇದ್ದಾಗಿದೆ. ರೈತರು ಮೊದಲು ಕ್ರಸ್ಟ್ ಗೇಟ್‌ಗಳನ್ನು ಬದಲಾಯಿಸಿ, ನಮಗೆ ಜಲಾಶಯ ಮುಖ್ಯ, ಎರಡನೆ ಬೆಳೆ ಇಲ್ಲದಿದ್ದರೂ ಪರವಾಗಿಲ್ಲ ನಮಗೆ ಕ್ರಸ್ಟ್ ಗೇಟ್ ಮುಖ್ಯ ಎಂದು ಹೇಳಿದ್ದಾರೆ. ಆದರೆ, ಬಿಜೆಪಿಯವರು ಈ ವಿಚಾರದಲ್ಲಿ ಅನಗತ್ಯವಾಗಿ ರಾಜಕೀಯ ಮಾಡುತ್ತಿದ್ದಾರೆ.
ಜಲಾಶಯದಲ್ಲಿ ಪ್ರಸ್ತುತ 75 ಟಿಎಂಸಿ ನೀರು ಲಭ್ಯವಿದೆ. ನಿಂತ ಬೆಳೆಗಳಿಗೆ ಯಾವುದೇ ತೊಂದರೆಯಾಗದಂತೆ ಜ.10ರವರೆಗೆ ನೀರು ಹರಿಸಲಾಗುವುದು. ಅಲ್ಲದೆ, ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿಗಾಗಿ ಕೆರೆಕಟ್ಟೆ ತುಂಬಿಸುವುದು ಹಾಗೂ ಇತರ ಉಪಯೋಗಕ್ಕಾಗಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಲಾಗುವುದು. ಸರಕಾರಕ್ಕೆ ರೈತರ ಹಿತ ಕಾಪಾಡುವುದರ ಜೊತೆಗೆ ಅಣೆಕಟ್ಟೆಯನ್ನು ರಕ್ಷಣೆ ಮಾಡುವುದು ಅಷ್ಟೇ ಮುಖ್ಯ.
► ಆನೆಗುಂದಿ ಮತ್ತು ಕನಕಗಿರಿ ಉತ್ಸವಗಳು ಈ ಬಾರಿ ಹೇಗೆ ಆಚರಣೆ ಮಾಡಲಾಗುವುದು?
ಶಿವರಾಜ್ ತಂಗಡಗಿ:ಆನೆಗುಂದಿ ಮತ್ತು ಕನಕಗಿರಿ ಉತ್ಸವ ಗಳನ್ನು ಕಳೆದ ವರ್ಷವೆ ಮಾಡಬೇಕಿತ್ತು. ವಿರೋಧ ವ್ಯಕ್ತವಾಗಿದ್ದರಿಂದ ಆಚರಣೆ ಮಾಡಲು ಆಗಿರಲಿಲ್ಲ. ಈ ಬಾರಿ ಎಲ್ಲರೊಂದಿಗೆ ಚರ್ಚಿಸಿ ಆನೆಗುಂದಿ ಹಾಗೂ ಕನಕಗಿರಿ ಉತ್ಸವ ಗಳನ್ನು ಆಚರಿಸುವ ಸಂಬಂಧ ತೀರ್ಮಾನ ಕೈಗೊಳ್ಳುತ್ತೇವೆ.
► ಕೊಪ್ಪಳ ಜಿಲ್ಲೆಯಲ್ಲಿ ರಾಜ್ಯ ಸರಕಾರದ ಪಂಚ ಗ್ಯಾರಂಟಿಗಳಿಂದ ಆಗಿರುವ ಬದಲಾವಣೆಗಳು ಏನು?
ಶಿವರಾಜ್ ತಂಗಡಗಿ: ರಾಜ್ಯ ಸರಕಾರದ ಪಂಚ ಗ್ಯಾರಂಟಿಗಳಿಂದ ಕೇವಲ ಕೊಪ್ಪಳ ಜಿಲ್ಲೆಯಷ್ಟೇ ಅಲ್ಲ, ಇಡೀ ರಾಜ್ಯದಲ್ಲಿ ಬದಲಾವಣೆಗಳನ್ನು ಕಾಣಬಹುದು. ಬಡವರು ನೆಮ್ಮದಿಯಿಂದ ಬದುಕುತ್ತಿದ್ದಾರೆ. ಮೂರು ಹೊತ್ತು ಊಟ ಮಾಡುತ್ತಿದ್ದಾರೆ. ಬಡವರು ಜೀವನದಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣವಾಗಿರುವುದರನ್ನು ನಾವು ಕಾಣಬಹದು. ಮಹಿಳೆಯರಲ್ಲಿ ಆರ್ಥಿಕ ಸ್ವಾವಲಂಬನೆ ಬಂದಿದೆ.
► ಕೊಪ್ಪಳ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಿಮ್ಮ ಕನಸಿನ ಯೋಜನೆಗಳು ಏನು?
ಶಿವರಾಜ್ ತಂಗಡಗಿ: ಜಿಲ್ಲೆಯಲ್ಲಿರುವ ಕೆರೆಗಳನ್ನು ತುಂಬಿಸುವುದು ನನ್ನ ಕನಸು. ಸಮರ್ಪಕವಾಗಿ ಕುಡಿಯುವ ನೀರು ಒದಗಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಶೇ.80ರಷ್ಟು ನಾವು ತಲುಪಿದ್ದೇವೆ. ನಗರ ಪ್ರದೇಶಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು. ನೇರವಾಗಿ ಜಲಾಶಯದಿಂದ ನೀರು ತಂದು ಭಾಗ್ಯ ನಗರ, ಯಲಬುರ್ಗಾ, ಕನಕಗಿರಿ, ಕಾರಟಗಿ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸಬೇಕೆಂಬುದು ನನ್ನ ಕನಸು. ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇನೆ.