×
Ad

ಪ್ರಜಾಪ್ರಭುತ್ವ ವಿರೋಧಿ ಕ್ರಮ

Update: 2016-01-07 23:19 IST


ಪ್ರಧಾನಿ ನರೇಂದ್ರ ಮೋದಿಯವರ ವೌನ ಸಮ್ಮತಿಯೊಂದಿಗೆ ಆರೆಸ್ಸೆಸ್ ತನ್ನ ಸಾಂಸ್ಕೃತಿಕ ಕಾರ್ಯಸೂಚಿಯನ್ನು ಜಾರಿಗೆ ತರುತ್ತಿದೆ. ದಿಲ್ಲಿಯ ಹೆಸರಾಂತ ಜವಾಹರಲಾಲ್ ವಿಶ್ವವಿದ್ಯಾನಿಲಯದಲ್ಲಿ ಅಲ್ಲಿಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಆಕ್ಷೇಪವನ್ನು ಕಡೆಗಣಿಸಿ ಬಾಬಾ ರಾಮದೇವ್‌ರನ್ನು ಕರೆಸಿ ಅಂತಾರಾಷ್ಟ್ರೀಯ ಯೋಗ ಸಮ್ಮೇಳನವನ್ನು ನಡೆಸುವ ಸಿದ್ಧತೆ ನಡೆದಿದೆ. ಇವೆಲ್ಲ ಪ್ರಜಾಪ್ರಭುತ್ವದ ದೃಷ್ಟಿಯಿಂದ ಒಳ್ಳೆಯದಲ್ಲ.

ರೇಂದ್ರ ಮೋದಿಯವರ ಆಡಳಿತದಲ್ಲಿ ಈ ದೇಶ ಎತ್ತ ಹೊರಟಿದೆ ಎಂಬುದು ಅಲ್ಲಲ್ಲಿ ನಡೆಯುತ್ತಿರುವ ಘಟನೆಗಳಿಂದ ಸ್ಪಷ್ಟವಾಗುತ್ತದೆ. ಬಿಜೆಪಿಯ ಒಳಗೂ ಮೋದಿ ಮತ್ತು ಅಮಿತ್ ಶಾ ನಾಯಕತ್ವದ ಬಗ್ಗೆ ಅಸಮಾಧಾನವಿದೆ. ಎಲ್.ಕೆ. ಅಡ್ವಾಣಿ ಮತ್ತು ಮುರಳಿಮನೋಹರ್ ಜೋಶಿ ಗುಂಪು ಮೋದಿ ವಿರುದ್ಧ ಕಿಡಿಕಾರುತ್ತಿದೆ. ಇನ್ನೊಂದೆಡೆ ಇತ್ತೀಚೆಗೆ ನಡೆದ ಪಠಾಣ್‌ಕೋಟ್ ದಾಳಿ ನಿಜವೇ ಎಂಬ ಬಗ್ಗೆ ಉಹಾಪೋಹಗಳು ಹರಡಿವೆ. ಇದರಲ್ಲಿ ಅಲ್ಲಿನ ಹಿರಿಯ ಪೊಲೀಸ್ ಅಧಿಕಾರಿ ಬಲ್ವಿಂದರ್ ಸಿಂಗ್‌ರ ಪಾತ್ರವಿದೆಯೇ ಎಂಬ ಬಗ್ಗೆ ಜನ ಮಾತನಾಡುತ್ತಿದ್ದಾರೆ. ಈ ಎಲ್ಲದರ ನಡುವೆ ಪ್ರಧಾನಿ ಮೋದಿಯವರ ವೌನ ಸಮ್ಮತಿಯೊಂದಿಗೆ ಆರೆಸ್ಸೆಸ್ ತನ್ನ ಕಾರ್ಯಸೂಚಿಯನ್ನು ಅತ್ಯಂತ ವೇಗವಾಗಿ ಜಾರಿಗೆ ತರುತ್ತಿದೆ. ಮುಖ್ಯವಾಗಿ ಶೈಕ್ಷಣಿಕ ಕ್ಷೇತ್ರವನ್ನು ಗುರಿಯಾಗಿಸಿಕೊಂಡಿರುವ ಸಂಘಪರಿವಾರ ಅಲ್ಲಿ ಎಷ್ಟು ಸಾಧ್ಯವೋ ಅಷ್ಟು ಅನಾಹುತ ಮಾಡುತ್ತಿದೆ. ಶಿಕ್ಷಣ ಕ್ಷೇತ್ರದ ಉದಾರವಾದಿ ಪ್ರತಿಭಾವಂತ ವ್ಯಕ್ತಿಗಳನ್ನು ಮೂಲೆಗುಂಪು ಮಾಡುತ್ತಿದೆ. ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಹೆಸರಾಂತ ಚಿಂತಕ ಮತ್ತು ಮಾಗ್ಸೆಸ್ಸೆ ಪ್ರಶಸ್ತಿ ವಿಜೇತ ಸಂದೀಪ್ ಪಾಂಡೆ ಅವರನ್ನು ವಜಾ ಮಾಡಲಾಗಿದೆ.

ಸಂದೀಪ್ ಪಾಂಡೆ ನಕ್ಸಲೀಯ ಸಂಘಟನೆಗಳೊಂದಿಗೆ ಸಂಬಂಧ ಇರಿಸಿಕೊಂಡಿದ್ದಾರೆ ಎಂಬ ಆರೋಪ ಹೊರಿಸಲಾಗಿದೆ. ಈ ಎಲ್ಲ ಆರೋಪಗಳನ್ನು ನಿರಾಧಾರ ಎಂದು ತಳ್ಳಿ ಹಾಕಿರುವ ಸಂದೀಪ್ ಪಾಂಡೆ ತಾನು ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರೆ ಎಫ್‌ಐಆರ್ ದಾಖಲಿಸಿ ಬಂಧಿಸಿ ಜೈಲಿಗೆ ಕಳುಹಿಸಲಿಲ್ಲವೇಕೇ? ಎಂದು ಸವಾಲು ಹಾಕಿದ್ದಾರೆ. ವಿಶ್ವವಿದ್ಯಾನಿಲಯದ ಕಾಂಟ್ರಾಕ್ಟ್ ಕಾರ್ಮಿಕರ ಪರವಾಗಿ ಹೋರಾಡಿದ್ದು ಮತ್ತು ಸಂಘಪರಿವಾರದ ಕೋಮುವಾದಿ ಕಾರ್ಯಸೂಚಿಯನ್ನು ವಿರೋಧಿಸಿದ್ದು ಪಾಂಡೆಯವರ ವಜಾಕ್ಕೆ ಕಾರಣ ಎಂಬುದು ಎಲ್ಲರಿಗೂ ಗೊತ್ತಾಗಿದೆ. ಸಂದೀಪ್ ಪಾಂಡೆಯವರು ವೈಚಾರಿಕವಾಗಿ ಗಾಂಧಿ ವಾದಿಯಾಗಿದ್ದಾರೆ. ಗುಜರಾತ್ ಹತ್ಯಾಕಾಂಡ ಸಂದರ್ಭದಲ್ಲಿ ಕೋಮುಸೌಹಾರ್ದಕ್ಕಾಗಿ ಪರಿಶ್ರಮಿಸಿದ್ದಾರೆ. ಹೀಗಾಗಿ ಅವರ ಮೇಲೆ ಸೇಡು ತೀರಿಸಿಕೊಳ್ಳಲು ವಜಾ ಕ್ರಮ ಕೈಗೊಳ್ಳಲಾಗಿದೆ. ಒಂದೆಡೆ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಿಂದ ಸಂದೀಪ್ ಪಾಂಡೆಯವರನ್ನು ವಜಾ ಮಾಡಿದ್ದರೆ, ಇನ್ನೊಂದೆಡೆ ಪುಣೆಯ ರಾಷ್ಟ್ರೀಯ ಚಲನಚಿತ್ರ ತರಬೇತಿ ಸಂಸ್ಥೆಯ ಮೇಲೆ ಗಜೇಂದ್ರ ಚೌಹಾಣ್ ಎಂಬ ಸಂಘಪರಿವಾರದ ವ್ಯಕ್ತಿಯನ್ನು ಬಲವಂತವಾಗಿ ಹೇರಲಾಗಿದೆ. ಟಿವಿ ಧಾರಾವಾಹಿಗಳ ಕಳಪೆ ನಟನಾದ ಗಜೇಂದ್ರ ಚೌಹಾಣ್‌ರ ನೇಮಕವನ್ನು ವಿರೋಧಿಸಿ ಅಲ್ಲಿನ ವಿದ್ಯಾರ್ಥಿಗಳು ಕಳೆದ ಮೂರು ತಿಂಗಳಿಂದ ಹೋರಾಟ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ಈ ಹೋರಾಟಕ್ಕೆ ರಿಷಿ ಕಪೂರ್, ಓಂಪುರಿ, ಶ್ಯಾಂ ಬೆನಗಲ್‌ರಂತಹ ಚಲನಚಿತ್ರರಂಗದ ದಿಗ್ಗಜರು ಬೆಂಬಲ ನೀಡಿದ್ದಾರೆ. ಇಷ್ಟು ಮಾತ್ರವಲ್ಲದೆ ಬಿಜೆಪಿಯ ಬೆಂಬಲಿಗ ಅನುಪಮ್ ಖೇರ್ ಕೂಡಾ ಈ ನೇಮಕವನ್ನು ವಿರೋಧಿಸಿದ್ದರು. ಇಷ್ಟೇಲ್ಲ ವಿರೋಧ ವಿದ್ದರೂ ಕೇಂದ್ರ ಸರಕಾರ ತನ್ನ ನಿಲುವನ್ನು ಬದಲಿಸಲಿಲ್ಲ. ಪೊಲೀಸ್ ಬಲವನ್ನು ಬಳಸಿಕೊಂಡು ಗಜೇಂದ್ರ ಚೌಹಾಣ್ ಜನವರಿ 7ನೆ ತಾರೀಕು ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ. ಈ ಅಧಿಕಾರ ಸ್ವೀಕಾರ ಕಾರ್ಯಕ್ರಮದ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದ ವಿದ್ಯಾರ್ಥಿಗಳನ್ನು ಹತ್ತಿಕ್ಕಲು ಪೊಲೀಸರನ್ನು ಕರೆಸಿ ಲಾಠಿ ಪ್ರಹಾರ ಮಾಡಿಸಲಾಗಿದೆ. ಶೈಕ್ಷಣಿಕ ಸಂಸ್ಥೆಯ ಆವರಣವೊಂದರಲ್ಲಿ ಈ ರೀತಿ ಪೊಲೀಸರನ್ನು ಕರೆಸಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಮಾಡಿಸುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ. ಇದನ್ನು ಎಲ್ಲ ಹೆಸರಾಂತ ಚಿಂತಕರು ಖಂಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಮೈಸೂರಿನಲ್ಲಿ ನಡೆದ ವಿಜ್ಞಾನ ಕಾಂಗ್ರೆಸ್‌ನಲ್ಲಿ ಕೂಡಾ ವಿವಾದದ ಅಲೆಯೆದ್ದಿದೆ. ವಿಶ್ವದ ದೊಡ್ಡ ಪರಿಸರ ತಜ್ಞ ಎಂಬ ವಿಷಯದ ಬಗ್ಗೆ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ಆದರೆ, ಈ ಉಪನ್ಯಾಸ ನೀಡಬೇಕಾಗಿದ್ದ ಮಧ್ಯಪ್ರದೇಶದ ಅಖಿಲೇಶ್ ಪಾಂಡೆ ಗೈರುಹಾಜರಾಗಿದ್ದರು. ಹೀಗಾಗಿ ಕಾರ್ಯಕ್ರಮ ರದ್ದಾಯಿತು. ಕಳೆದ ಬಾರಿ ಮುಂಬೈಯಲ್ಲಿ ವಿಜ್ಞಾನ ಕಾಂಗ್ರೆಸ್ ನಡೆದಾಗ ಅದನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಆಡಿದ ಮಾತುಗಳು ಕೂಡಾ ವಿವಾದದ ಅಲೆ ಎಬ್ಬಿಸಿದ್ದವು.

ಗಣೇಶನಿಗೆ ಆನೆಯ ತಲೆ ಜೋಡಿಸಿದುದು ಈ ದೇಶದ ಮೊದಲ ಸರ್ಜರಿ ಎಂದು ಪ್ರಧಾನಿ ಕೊಂಡಾಂಡಿದ್ದರು. ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ವೈದ್ಯ ವಿಜ್ಞಾನ ಸಾಕಷ್ಟು ಮುಂದುವರಿದಿತ್ತು ಎಂದು ಅವರು ಹೇಳಿದ್ದರು. ಪ್ರಧಾನಿಯ ಮಾತಿಗೆ ಆ ಸಮಾವೇಶದಲ್ಲಿ ಪಾಲ್ಗೊಂಡಿದ್ದ ವಿಜ್ಞಾನಿಗಳು ಲೇವಡಿ ಮಾಡಿದ್ದರು. ಈ ಬಾರಿ ಪ್ರಧಾನಿ ಆ ರೀತಿ ಮಾತನಾಡಲಿಲ್ಲವಾದರೂ ವಿಜ್ಞಾನ ಸಮಾವೇಶದಲ್ಲಿ ಕೆಲವರು ಆಡಿದ ಮಾತುಗಳು ವಿವಾದದ ಅಲೆ ಎಬ್ಬಿಸಿವೆ. ಒಟ್ಟಾರೆ ಪ್ರಧಾನಿ ನರೇಂದ್ರ ಮೋದಿಯವರ ವೌನ ಸಮ್ಮತಿಯೊಂದಿಗೆ ಆರೆಸ್ಸೆಸ್ ತನ್ನ ಸಾಂಸ್ಕೃತಿಕ ಕಾರ್ಯಸೂಚಿಯನ್ನು ಜಾರಿಗೆ ತರುತ್ತಿದೆ. ದಿಲ್ಲಿಯ ಹೆಸರಾಂತ ಜವಾಹರಲಾಲ್ ವಿಶ್ವವಿದ್ಯಾನಿಲಯದಲ್ಲಿ ಅಲ್ಲಿಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಆಕ್ಷೇಪವನ್ನು ಕಡೆಗಣಿಸಿ ಬಾಬಾ ರಾಮದೇವ್‌ರನ್ನು ಕರೆಸಿ ಅಂತಾರಾಷ್ಟ್ರೀಯ ಯೋಗ ಸಮ್ಮೇಳನವನ್ನು ನಡೆಸುವ ಸಿದ್ಧತೆ ನಡೆದಿದೆ. ಇವೆಲ್ಲ ಪ್ರಜಾಪ್ರಭುತ್ವದ ದೃಷ್ಟಿಯಿಂದ ಒಳ್ಳೆಯದಲ್ಲ. ಜನತೆಯಿಂದ ಚುನಾಯಿತರಾಗಿ ಅಧಿಕಾರ ವಹಿಸಿಕೊಂಡವರು ಸಂವಿಧಾನಕ್ಕೆ ಬದ್ಧವಾಗಿ ಅಧಿಕಾರ ನಿರ್ವಹಿಸುವುದಾಗಿ ಪ್ರಮಾಣವಚನ ಸ್ವೀಕರಿಸಿರುತ್ತಾರೆ. ಈ ಪ್ರಮಾಣವಚನಕ್ಕೆ ವ್ಯತಿರಿಕ್ತವಾಗಿ ಸಂವಿಧಾನ ಬಾಹಿರ ಸಿದ್ಧಾಂತಗಳ ಜಾರಿಗಾಗಿ ಸರಕಾರವನ್ನು ಮತ್ತು ತಮ್ಮ ಅಧಿಕಾರವನ್ನು ಅವರು ಬಳಸಿಕೊಳ್ಳುವುದು ಸರಿಯಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News