ಲಕ್ಷಾಂತರ ಭಾರತೀಯರು ಪೌರತ್ವ ತೊರೆಯುತ್ತಿರುವುದೇಕೆ?
ಸಾಂದರ್ಭಿಕ ಚಿತ್ರ | Photo Credit : freepik
2011ರಿಂದ 2024ರ ನಡುವೆ ಸರಿಸುಮಾರು 20 ಲಕ್ಷ ಭಾರತೀಯರು ಭಾರತೀಯ ಪೌರತ್ವ ತೊರೆದಿದ್ದಾರೆ. ಆದರೆ ಪೌರತ್ವ ತೊರೆಯುವುದು ಸರಳವಾದ ವಿಷಯವಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೋವು ತೋಡಿಕೊಳ್ಳುತ್ತಿದ್ದಾರೆ.
ಪೌರತ್ವ ತೊರೆಯುವುದು ಸರಳ ಕೆಲಸವಲ್ಲ, ಪ್ರತಿಯೊಬ್ಬರು ಉತ್ತಮ ಜೀವನಕ್ಕಾಗಿ ವಿದೇಶಕ್ಕೆ ಹೋಗುತ್ತಾರೆ. ಆದರೆ ವರ್ಷಂಪ್ರತಿ ಭಾರತೀಯ ಪೌರತ್ವವನ್ನು ತೊರೆಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. “2022ರಿಂದೀಚೆಗೆ ಸುಮಾರು 2 ಲಕ್ಷ ಭಾರತೀಯರು ಪ್ರತಿ ವರ್ಷ ತಮ್ಮ ಭಾರತೀಯ ಪೌರತ್ವವನ್ನು ತೊರೆದು ವಿದೇಶಿ ಪ್ರಜೆಗಳಾಗುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಸುಮಾರು ಒಂಭತ್ತು ಲಕ್ಷ ಭಾರತೀಯರು ಪೌರತ್ವ ತೊರೆದಿದಿದ್ದಾರೆ” ಎಂದು ವಿದೇಶಾಂಗ ಸಚಿವಾಲಯ ಸಂಸತ್ತಿಗೆ ವಿವರ ನೀಡಿದೆ. ಇಷ್ಟೊಂದು ದಾಖಲೆ ಪ್ರಮಾಣದಲ್ಲಿ ಭಾರತೀಯರು ಪೌರತ್ವ ತೊರೆಯುತ್ತಿರುವುದೇಕೆ?
ವಿದೇಶಿ ಪ್ರಜೆಗಳಾದ ಲಕ್ಷಾಂತರ ಭಾರತೀಯರು:
ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನ ಮುಂದೆ ಇಡಲಾಗಿರುವ ಮಾಹಿತಿಯಲ್ಲಿ 2011ರಿಂದ 2024ರ ನಡುವೆ 2.06 ದಶಲಕ್ಷ (ಸುಮಾರು 20 ಲಕ್ಷ) ಭಾರತೀಯರು ಪೌರತ್ವವನ್ನು ತೊರೆದಿದ್ದಾರೆ. ಇದರಲ್ಲಿ ಅರ್ಧದಷ್ಟು ಮಂದಿ ಕೋವಿಡ್- 19 ಸಾಂಕ್ರಾಮಿಕ ರೋಗ ಹರಡಿದ ನಂತರ ವಿದೇಶಿ ಪ್ರಜೆಗಳಾಗಿದ್ದಾರೆ.
ಹಿಂದಿನ 14 ವರ್ಷಗಳಲ್ಲಿ ಪ್ರತಿ ವರ್ಷ 1.2 ಲಕ್ಷದಿಂದ 1.45 ಲಕ್ಷ ಭಾರತೀಯರು ಪ್ರತಿ ವರ್ಷ ಭಾರತದ ಪೌರತ್ವ ತೊರೆಯುತ್ತಿದ್ದರು. 2022ರ ನಂತರ ಇದು ಪ್ರತಿ ವರ್ಷ 2 ಲಕ್ಷ ಮಂದಿ ಪೌರತ್ವ ತೊರೆಯುವ ಟ್ರೆಂಡ್ ಗೆ ತಿರುಗಿದೆ. ಈ ಕುರಿತ ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಿದ ವಿದೇಶಾಂಗ ಸಚಿವಾಲಯ, “ಕಾರಣಗಳು ವೈಯಕ್ತಿಕ ಮತ್ತು ವ್ಯಕ್ತಿಗತವಾಗಿ ಅರ್ಥಮಾಡಿಕೊಳ್ಳಬೇಕು. ಅವರಲ್ಲಿ ಬಹುತೇಕರು ವೈಯಕ್ತಿಕ ಅನುಕೂಲಕ್ಕಾಗಿ ವಿದೇಶಿ ಪೌರತ್ವ ಸ್ವೀಕರಿಸಿದ್ದಾರೆ. ಜ್ಞಾನ ಕೇಂದ್ರಿತ ಅರ್ಥವ್ಯವಸ್ಥೆಯ ಶಖೆಯಲ್ಲಿ ಜಾಗತಿಕ ಕಾರ್ಯಸ್ಥಳದ ಸಾಮರ್ಥ್ಯವನ್ನು ಭಾರತ ಗುರುತಿಸುತ್ತದೆ” ಎಂದು ಹೇಳಿದೆ.
ಪ್ರತಿಭಾ ಪಲಾಯನವಲ್ಲ, ಶ್ರೀಮಂತರ ಪಲಾಯನ:
1970ರಿಂದ ಪ್ರತಿಭಾ ಪಲಾಯನ ಭಾರತದ ಅರ್ಥವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ. ವರ್ಷಂಪ್ರತಿ ಈ ಪಲಾಯನ ಹೆಚ್ಚುತ್ತಲೇ ಬಂದಿದ್ದು, 2020ರಲ್ಲಿ ಅತ್ಯುಚ್ಛಮಟ್ಟಕ್ಕೆ ತಲುಪಿದೆ. “ಈ ಮೊದಲು ಬ್ರಿಟಿಷ್ ಕಾಲದಲ್ಲಿ ಒಪ್ಪಂದ ಮಾಡಿಕೊಂಡ ಕಾರ್ಮಿಕರು, ನಂತರದಲ್ಲಿ ವೈದ್ಯರು ಮತ್ತು ಇಂಜಿನಿಯರ್ ಗಳು ಉತ್ತಮ ಉದ್ಯೋಗದ ಹುಡುಕಾಟದಲ್ಲಿ ವಿದೇಶಕ್ಕೆ ಹೋಗಿ ನೆಲೆಸಿ ಅಲ್ಲಿನ ಪೌರತ್ವ ಪಡೆಯುತ್ತಿದ್ದರು. ಆದರೆ ಇತ್ತೀಚೆಗೆ ಅಗರ್ಭ ಶ್ರೀಮಂತರು ದೇಶ ತೊರೆದು ವಿದೇಶಿ ಪ್ರಜೆಗಳಾಗುತ್ತಿದ್ದಾರೆ” ಎಂದು ಪ್ರಧಾನಮಂತ್ರಿ ಕಚೇರಿಯ ವಕ್ತಾರರಾಗಿದ್ದ ಸಂಜಯ್ ಬರು ತಮ್ಮ “ಸಕ್ಸೆಶನ್ ಆಫ್ ದ ಸಕ್ಸೆಸ್ಫುಲ್: ದಿ ಫ್ಲೈಟ್ ಔಟ್ ಆಫ್ ನ್ಯೂ ಇಂಡಿಯ’ ಎನ್ನುವ ಪುಸ್ತಕದಲ್ಲಿ ಬರೆದಿದ್ದಾರೆ.
ಸಂಜಯ್ ಅವರು ಮುಂದಿಟ್ಟಿರುವ ಮೋರ್ಗನ್ ಸ್ಟೇನ್ಲಿ ದಾಖಲೆಗಳ ಪ್ರಕಾರ 2014ರಿಂದ 23,000 ಭಾರತೀಯ ಕೋಟ್ಯಾಧಿಪತಿಗಳು ದೇಶವನ್ನು ತೊರೆದಿದ್ದಾರೆ.
ದ್ವಿಪೌರತ್ವ ನೀಡದಿರುವುದು ಕಾರಣ:
ಭಾರತೀಯರು ಅಮೆರಿಕ, ಯುಕೆ ಅಥವಾ ಕೆನಡಾದ ಪಾಸ್ಪೋರ್ಟ್ ಪಡೆಯಲು ತಮ್ಮ ಭಾರತೀಯ ಪೌರತ್ವ ತೊರೆಯಲು ಮುಖ್ಯ ಕಾರಣ. ಭಾರತದಲ್ಲಿ ದ್ವಿಪೌರತ್ವಕ್ಕೆ ಅವಕಾಶ ಇಲ್ಲದಿರುವುದು. ಸಾಮಾಜಿಕ ಮಾಧ್ಯಮಗಳು, ಲಿಂಕ್ಡ್ಇನ್ನಿಂದ ರೆಡಿಟ್ ವರೆಗೆ ಭಾರತೀಯ ಸಂಜಾತ ವ್ಯಕ್ತಿಗಳು ತಮ್ಮ ನೋವನ್ನು ತೋಡಿಕೊಳ್ಳುತ್ತಿದ್ದಾರೆ. ತಮ್ಮ ಅನನ್ಯತೆಯನ್ನು ಕಳೆದುಕೊಳ್ಳುವುದು ಮತ್ತು ಭಾರತೀಯ ಪ್ರಜೆಯೆನ್ನುವ ತಮ್ಮ ದಾಖಲೆಯನ್ನು ತೊರೆಯುವುದು ಬಹಳ ಕಷ್ಟದ ಕೆಲಸ ಎಂದು ಜನರು ನೋವು ತೋಡಿಕೊಳ್ಳುತ್ತಿದ್ದಾರೆ. ಆದರೆ ವಿದೇಶದಲ್ಲಿ ಸಿಗುವ ಅವಕಾಶ ದೊಡ್ಡದಾಗಿರುವ ಕಾರಣದಿಂದ ತಮ್ಮ ಪೌರತ್ವ ಕಳೆದುಕೊಳ್ಳಲು ಸಿದ್ಧರಾಗುತ್ತಾರೆ.
ಭಾರತದ ಕಾನೂನು ಏನು ಹೇಳುತ್ತದೆ?
1955ರ ಪೌರತ್ವ ಕಾಯ್ದೆಯ ಸೆಕ್ಷನ್ 9ರಲ್ಲಿ ಹೇಳಲಾಗಿರುವ ಪ್ರಕಾರ, “1950 ಜನವರಿ 26ರಿಂದ ಈ ಕಾಯ್ದೆ ಜಾರಿಗೆ ಬಂದ ಮೇಲೆ ಯಾವುದೇ ಭಾರತೀಯ ಪ್ರಜೆಯು ಸಹಜವಾಗಿ, ನೋಂದಣಿ ಮಾಡಿಕೊಂಡು ಅಥವಾ ಇತರ ರೀತಿಯಲ್ಲಿ ಸ್ವಯಂಪ್ರೇರಣೆಯಿಂದ ಪಡೆದ ಅಥವಾ ಯಾವುದೇ ಸಮಯದಲ್ಲಿ ಸ್ವಯಂಪ್ರೇರಣೆಯಿಂದ ಮತ್ತೊಂದು ದೇಶದ ಪೌರತ್ವವನ್ನು ಪಡೆದರೆ, ಅಂತಹ ಸ್ವಾಧೀನದ ನಂತರ ಅವರನ್ನು ಭಾರತದ ನಾಗರಿಕ ಎಂದು ಘೋಷಿಸಲಾಗುವುದಿಲ್ಲ.”
ಸಾಮಾಜಿಕ ಭದ್ರತೆಯ ಕನಸು
ಅಮೆರಿಕ, ಯುಕೆ ಮತ್ತು ಕೆನಡಾದಂತಹ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮತದಾನ, ಸಾಮಾಜಿಕ ಭದ್ರತಾ ಸೌಲಭ್ಯಗಳು, ಅನಿಯಂತ್ರಿತ ನಿವಾಸ, ಸಾರ್ವಜನಿಕ ವಲಯದ ಉದ್ಯೋಗ ಮತ್ತು ದೀರ್ಘಾವಧಿಯ ಸ್ಥಿರತೆ ಪಡೆಯಬೇಕಾದರೆ ಅಲ್ಲಿನ ಪೌರತ್ವ ಪಡೆದಿರಬೇಕು. ಅನಿವಾಸಿ ಭಾರತೀಯ ಎನ್ನುವ ಗೌರವದಿಂದ ಭಾರತಕ್ಕೆ ವೀಸಾ ರಹಿತ ಪ್ರಯಾಣದ ಅವಕಾಶ ಒದಗಿಸಿಕೊಡುತ್ತದೆ.
ಆದರೆ ಯಾವುದೇ ಆರ್ಥಿಕ ಹಕ್ಕುಗಳು, ರಾಜಕೀಯ ಹಕ್ಕುಗಳು ಇರುವುದಿಲ್ಲ. ಮತದಾನದ ಹಕ್ಕು ಇರುವುದಿಲ್ಲ. ಚುನಾವಣೆಗಳಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ಇತರ ರಾಷ್ಟ್ರಗಳಲ್ಲಿ ಸಂವಿಧಾನಾತ್ಮಕ ಹುದ್ದೆಗಳನ್ನು ಪಡೆಯಲಾಗದು. ಹೀಗಾಗಿ ವಿದೇಶದಲ್ಲಿ ನೆಲೆಸಿರುವ ಕುಟುಂಬಗಳಿಗೆ ಅಲ್ಲಿನ ಪೌರತ್ವ ಅಗತ್ಯವಾಗಿರುತ್ತದೆ. ದ್ವಿಪೌರತ್ವ ಇಲ್ಲದ ಕಾರಣದಿಂದ ಭಾರತೀಯ ಪೌರತ್ವ ತೊರೆಯುವುದೊಂದೇ ಹಾದಿಯಾಗಿರುತ್ತದೆ.
ಕೃಪೆ: indiatoday.in