ಇವರ ಮಾತುಗಳು ನಮಗೇಕೆ ಅಪಥ್ಯ?
ಸಮಷ್ಟಿನಡಿಗೆಯೊಂದಿಗೆ ಆರಂಭವಾದ ಚಳವಳಿ ಸಮಷ್ಟಿ ಬದಲಿಗೆ ವ್ಯಕ್ತಿವರ್ಚಸ್ಸಿನ ಹೊಸ ಶೈಲಿಯೊಂದು ಹುಟ್ಟಿದ ಕ್ರಮ ಎಂತಹ ಹೇಯವಾದದ್ದು, ವ್ಯಕ್ತಿನಿಷ್ಠೆ ಪ್ರಜಾಪ್ರಭುತ್ವಕ್ಕೆ ಮಾರಕವೆಂಬುದು ಚಳವಳಿಕಾರರು ಗ್ರಹಿಸಲಿಲ್ಲವೇ ?
'ವಾರ್ತಾ ಭಾರತಿ'ಯ ಈ ಸಲದ ವಿಶೇಷಾಂಕದಲ್ಲಿ ಕೋಟಿಗಾನಹಳ್ಳಿ ರಾಮಣ್ಣರವರ ''ಭಾರತದ ಪಾದ ತೋರಬಹುದಾದ ದೀಪ- ಬಾಬಾ ಸಾಹೇಬ ಅಂಬೇಡ್ಕರ್'' ಎಂಬ ಲೇಖನ ಔಚಿತ್ಯಪೂರ್ಣವಾದದ್ದು, ರಾಮಣ್ಣನವರ ಒಟ್ಟಾರೆ ಬರಹಗಳನ್ನು ಅವಲೋಕಿಸಿದರೆ ಸಂವೇದನಾಶೀಲ ಒಳನೋಟ ಅಂತರಾಳದ ಬೇಗುದಿ ಈ ಲೇಖನದಲ್ಲಿ ಪ್ರತಿಫಲಿತಗೊಂಡಿದೆ. ರಾಮಣ್ಣನವರ ಬರಹಗಳ ಬಗ್ಗೆ ಸಂವಾದಿಸುವ ಬೌದ್ಧ್ದಿಕ ಸಾಮರ್ಥ್ಯವಿಲ್ಲದಿದ್ದರೂ ಅವರನ್ನು ಬಹಳ ಹತ್ತಿರದಿಂದ ಬಲ್ಲವನಾಗಿ, ಕೋಲಾರದ ಆದಿಮ ಕಟ್ಟುವ ಸಂದರ್ಭದಲ್ಲಿ ಅದೆಷ್ಟೋ ರಾತ್ರಿಗಳ ಅವರ ಚಿಂತನೆಯ ಚಡಪಡಿಕೆ ಬಲ್ಲವನಾಗಿ ದಲಿತ ಚಳವಳಿಯ ಭಾಗೀದಾರನಾಗಿ ನನ್ನ ಮೊಂಡು ಧೈರ್ಯವನ್ನು ಪಣಕ್ಕಿಟ್ಟು ಅವರ ಲೇಖನಕ್ಕೆ ಪೂರಕ ಪ್ರತಿಕ್ರಿಯೆ. ರಾಮಣ್ಣನವರಲ್ಲಿರುವ ತೀಕ್ಷ್ಣ ಮತಿ, ಅಗಾಧವಾದ ನೆನಪಿನ ಶಕ್ತಿಯೇ ಇವರಿಗೆ ಮುಳುವಾಯಿತೇ? ಒಡಹುಟ್ಟು ಚಳವಳಿಗಾರರು ರಾಮಣ್ಣನವರನ್ನು ಅರಗಿಸಿಕೊಳ್ಳದೆ ನೇಪಥ್ಯಕ್ಕೆ ಸರಿಸಿದ್ದಾರೆಯೇ? ದಲಿತ ಚಳವಳಿಯ ನಾಯಕರು, ಕಾರ್ಯಕರ್ತರು ಸೇರಿ ರಾಮಣ್ಣನವರ ಮಾತುಗಳು ನಮಗೇಕೆ ಪಥ್ಯವೆನಿಸುವುದಿಲ್ಲ? ಈ ಅಪಥ್ಯಕ್ಕೆ ರಾಮಣ್ಣನವರ ನಿಷ್ಠುರ ಮಾತುಗಳು ಕಾರಣವೇ ?
ಚಿಂತನೆಯಲ್ಲಿ ಭಾರತದ ಪಾದ ತೋರಬಹುದಾದ ದೀಪ ಬಾಬಾ ಸಾಹೇಬರು ಒಬ್ಬರೆ. ಈ ದೀಪವನ್ನು ಬುಡ್ಡಿ ದೀಪವನ್ನಷ್ಟೇ ಆಶ್ರಯಿಸಿ ಬದುಕುತ್ತಿರುವ ನಿರ್ಗತಿಕರ ನೆಲೆಗೆ ಒಯ್ಯುವುದೇ ನಿಜವಾದ ಅಂಬೇಡ್ಕರ್ ಚಿಂತನೆಯ ಮುಂದುವರಿಕೆ ಎಂಬುವುದನ್ನು ರಾಮಣ್ಣ ತಮ್ಮ ಲೇಖನದಲ್ಲಿ ವಿಶ್ಲೇಷಿಸುತ್ತಾರೆ. ಅಂಬೇಡ್ಕರ್ ವಾದಿಗಳೆಂದು ಸ್ವಯಂ ಘೋಷಿಸಿಕೊಂಡಿರುವ ಅದೆಷ್ಟು ನಾಯಕರು ಈ ಯಾನದಲ್ಲಿ ಕ್ರಮಿಸಿದ್ದಾರೆ.? ಸಮಷ್ಟಿನಡಿಗೆಯೊಂದಿಗೆ ಆರಂಭವಾದ ಚಳವಳಿ ಸಮಷ್ಟಿ ಬದಲಿಗೆ ವ್ಯಕ್ತಿವರ್ಚಸ್ಸಿನ ಹೊಸ ಶೈಲಿಯೊಂದು ಹುಟ್ಟಿದ ಕ್ರಮ ಎಂತಹ ಹೇಯವಾದದ್ದು, ವ್ಯಕ್ತಿನಿಷ್ಠೆ ಪ್ರಜಾಪ್ರಭುತ್ವಕ್ಕೆ ಮಾರಕವೆಂಬುದು ಚಳವಳಿಕಾರರು ಗ್ರಹಿಸಲಿಲ್ಲವೇ ? ಕಾಲು ಶತಮಾನದಷ್ಟು ಆಯಸ್ಸು ಅಷ್ಟೇನು ಹೆಚ್ಚಲ್ಲ. ಕಾಲು ಶತಮಾನಕ್ಕೇ ಛಿದ್ರಛಿದ್ರವಾಗಿರುವುದು ಏನನ್ನು ಸೂಚಿಸುತ್ತದೆ? ಈ ವಿಘಟನೆಯ ಸುತ್ತ ಕಣ್ಣಾಡಿಸಿದರೆ ಯಾವ ತಾತ್ವಿಕ ತಳಹದಿ ಪೇರಿಸಲು ಹೋಗಿ ಚೂರು ಚೂರು ಆಗಿದ್ದೇವೆ ? ತಳಸಮುದಾಯದವರನ್ನು ಸುಸ್ಥಿತಿಗೆ ತಂದಾಯಿತು ಎಂಬ ಭ್ರಮೆಯೇ? ರಾಜಕೀಯ ಇಚ್ಛಾಶಕ್ತಿಯಿಂದ ಗೂಟದಕಾರಿನ ವ್ಯಾಮೋಹಕ್ಕೆ ಒಳಗಾಗಿ ಇನ್ನೇನು ಆಕಾಶಕ್ಕೆ ಮೂರೇ ಗೇಣು, ಅಧಿಕಾರ ದಾಹದ ಕುರ್ಚಿಗೆ ಮೂರೇ ಹೆಜ್ಜೆಯೆಂಬ ಭ್ರಮೆಯಲ್ಲಿ ದಲಿತ ಚಳವಳಿಯನ್ನು ಅವಸಾನಕ್ಕೆ ದೂಡಿರುವುದು ಪಾಪಕೃತ್ಯವಲ್ಲವೇ? ಡಿ.ಆರ್. ನಾಗರಾಜ್ ಹೇಳಿದಂತೆ ''ಸ್ಮತಿನಾಶದ ಸ್ಥಿತಿ ಹೊಸ ಸಂಸ್ಕೃತಿಯನ್ನು ಕಟ್ಟುವ ಸಂಭ್ರಮ, ನೋವಿನ ಪ್ರಯತ್ನವನ್ನು ನಿರುತ್ಸಾಹಗೊಳಿಸುವ ಜಡತ್ವದ ಜೊತೆಗೆ ಹಳೆಯದನ್ನು ನಿರಾಕರಿಸುವ ನೋವನ್ನುಂಟುಮಾಡುತ್ತದೆ.'' (ಡಿ.ಆರ್. ನಾಗರಾಜ್, ಉರಿಚಮ್ಮಾಳಿಗೆ) ಅಂಬೇಡ್ಕರ್ ಎಂದಿಗೂ ಈ ಸಾಂಸ್ಕೃತಿಕ ಜಡತ್ವವನ್ನು ಸಹಿಸುತ್ತಿರಲಿಲ್ಲ. ರಾಮಣ್ಣನವರ ನಿಷ್ಠುರ ಮಾತುಗಳು ನಮ್ಮ ಸಾಂಸ್ಕೃತಿಕ ಜಡತ್ವದ ಬಗ್ಗೆಯೇ. ''ಯಾವ ಚಳವಳಿ ಸಾಂಸ್ಕೃತಿಕ ನಡೆಯಾಗಬೇಕಾಗಿತ್ತೋ ಆ ಚಳವಳಿಯ ಬೇರು ಮರೆತು ಮರದ ಕಾಯಿಗಳನ್ನಷ್ಟೇ ಕಣ್ಣಿಗೆ ತುಂಬಿಕೊಂಡವರು, ಹಣ್ಣು ಕಾಯಿ ಮಾರಿಕೊಳ್ಳುವ ದಲ್ಲಾಳಿಗಳಾಗಬಹುದಷ್ಟೇ ಹೊರತು ಈ ನೆಲೆಯ ತುರ್ತಿನ ಬೇಡಿಕೆಯಾಗಿರುವ ಪ್ರಜಾತಾಂತ್ರಿಕ, ಸಾಂಸ್ಕೃತಿಕ ನೊಗ ಹೊರುವ ಬೇಸಾಯಗಾರರಾಗುವುದು ಕಷ್ಟ.'' (ರಾಮಣ್ಣನವರ ಬರಹಗಳು) ಆ ನೊಗಹೊರುವವರು ತುಂಬಾ ವಿರಳ. ಲೋಹಿಯರವರು ತಮ್ಮ ಕಡೆಗಾಲದಲ್ಲಿ ''ಪರಿಮಾಣ ಭೇದ ಅತ್ಯಗತ್ಯವೆಂದು ಅನೇಕ ಸಲ ಇದನ್ನು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಪರಿಮಾಣ ಭೇದವೆಂದರೆ ದೊಡ್ಡ ಕಾರ್ಯ ಸಾಧನೆಯಲ್ಲಿ ಸಣ್ಣ ಪುಟ್ಟ ಲೋಪ ದೋಷಗಳನ್ನು ಗಮನಿಸದಿರುವುದು ಸೂಕ್ತ. ಪರಿಮಾಣ ಭೇದ ಗುಣವಿಲ್ಲದಿದ್ದಕ್ಕೆ ಅನೇಕ ಸಂಬಂಧಗಳನ್ನು ಕಡೆದುಕೊಳ್ಳುವ ಸಂದರ್ಭ ಒದಗಿ ಬಂತು. ರಾಜಕಾರಣದಲ್ಲಿರುವವರು ಹೀಗೆಲ್ಲಾ ಮಾಡಬಾರದಿತ್ತು'' ಎಂದು ಆತ್ಮವಾಲೋಕನ ಮಾಡಿಕೊಳ್ಳುತ್ತಾರೆ. ರಾಮಣ್ಣನವರ ಆಳವಾದ ಚಿಂತನೆಗಳು ಸಾಕಾರಗೊಳ್ಳಬೇಕಾದರೆ ಈ ಪರಿಮಾಣ ಭೇದಕ್ಕೆ ತಮ್ಮನ್ನು ಒಗ್ಗಿಸಿ ಕೊಳ್ಳಬೇಕೆಂದು ಭಿನ್ನಹ. ದೇವನೂರರ ವಿವೇಕದ ಕಣ್ಣು, ರಾಮಣ್ಣನವರ ಸೂಕ್ಷ್ಮ ಸಂವೇದನೆಯ ಕಣ್ಣು ದಲಿತ ಚಳವಳಿಗೆ ಅಗತ್ಯ.